ಶ್ವಾನಗಳಿಂದ ಇಬ್ಬರು ಬಾಲಕಿಯರ ರಕ್ಷಣೆ – ರೋಮಿಯೋ, ಜೂಲಿ ಸಾಹಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಸಾವಿನ ಅಟ್ಟಹಾಸಕ್ಕೆ ಜಗತ್ತೇ ಬೆಚ್ಚಿಬಿದ್ದಿದೆ. ಇದುವರೆಗೂ37 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ಕೆಲವರು ಪವಾಡವೆಂಬಂತೆ ಬದುಕಿ ಬಂದಿದ್ದಾರೆ. ಅದರಲ್ಲೂ ಭೂಕಂಪ ಸಂಭವಿಸಿ ಬರೋಬ್ಬರಿ 80 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿ ನರಳುತ್ತಿದ್ದ 6 ವರ್ಷದ ಬಾಲಕಿ ಪವಾಡವೆಂಬಂತೆ ಬದುಕಿ ಬಂದಿದ್ದಾಳೆ. ಪುಟ್ಟ ಬಾಲಕಿಯನ್ನು ರಕ್ಷಿಸಿದ್ದು ಎರಡು ಶ್ವಾನಗಳು ಅಂದರೆ ನಂಬಲೇಬೇಕು.
ಇದನ್ನೂ ಓದಿ: ಭೀಕರ ಚಂಡಮಾರುತಕ್ಕೆ ನ್ಯೂಜಿಲೆಂಡ್ನಲ್ಲಿ ಅಲ್ಲೋಲ ಕಲ್ಲೋಲ – ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ..!
ರೋಮಿಯೋ ಹಾಗೂ ಜೂಲಿ ಎಂಬ ಶ್ವಾನಗಳು ಭಾರತೀಯ ಎನ್‌ಡಿಆರ್‌ಎಫ್ ನ ತಂಡದ ಭಾಗವಾಗಿದ್ದವು. ಟರ್ಕಿಗೆ ತೆರಳಿದ ಮೇಲೆ ವಿಪತ್ತು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ರೋಮಿಯೋ ಮತ್ತು ಜೂಲಿ ಕುಸಿದು ಬಿದ್ದಿದ್ದ ಆರು ಅಂತಸ್ತಿನ ಕಟ್ಟಡದ ಅವಶೇಷಗಳಡಿ ಹೋಗಿ ಬೊಗಳಲು ಶುರುಮಾಡಿದ್ದವು. ಮೊದಲು ಅವಶೇಷಗಳಡಿ ಹೋಗಿದ್ದ ಜೂಲಿ ಬೊಗಳಲು ಶುರುಮಾಡಿದಾಗ ದೃಢೀಕರಣಕ್ಕಾಗಿ ರೋಮಿಯೋ ಅನ್ನು ಕಳುಹಿಸಲಾಗಿತ್ತು. ಆಗ ಅವಶೇಷಗಳಡಿ ಯಾರೋ ಬದುಕಿದ್ದಾರೆ ಅನ್ನೋದು ರಕ್ಷಣಾ ಪಡೆಗೆ ಸ್ಪಷ್ಟವಾಗಿತ್ತು. ನಂತರ ಕಾರ್ಯಾಚರಣೆ ನಡೆಸಿದಾಗ 6 ವರ್ಷದ ಬಾಲಕಿ ಬೆರೆನ್ ಜೀವ ಕೈಯಲ್ಲಿ ಹಿಡಿದುಕೊಂಡು ಉಸಿರಾಡುತ್ತಿದ್ದಳು. ಮುದ್ದು ಕಂದಮ್ಮ ಬದುಕಿದ್ದು ನೋಡಿ ಪೋಷಕರ ಸಂತಸ ಹೇಳತೀರದಾಗಿದೆ. ಜೂಲಿ ಮತ್ತು ರೋಮಿಯೋಗೆ ಧನ್ಯಾವಾದಗಳ ಮಹಾಪೂರವೇ ಹರಿದುಬರುತ್ತಿದೆ. ಇದಾದ ಮರುದಿನವೇ ಅಂದರೆ ಫೆಬ್ರವರಿ 10ರಂದು ಮತ್ತೊಬ್ಬ ಬಾಲಕಿಯನ್ನು ಕೂಡಾ ಶ್ವಾನಗಳು ರಕ್ಷಿಸಿವೆ. 9 ವರ್ಷದ ಮಿರಾಯ್ ಕರಾಟಾಸ್ ಜೀವ ಉಳಿಸಲು ಕೂಡಾ ರೋಮಿಯೋ ಜ್ಯೂಲಿ ಸಹಾಯ ಮಾಡಿದ್ದಾರೆ.