ಹುಷಾರ್.. ಇದು ಹೃದಯಗಳ ವಿಷಯ – ಪ್ರತಿ ತಿಂಗಳು ಹೃದಯಾಘಾತಕ್ಕೆ 100 ರಿಂದ 120 ಜನ ಬಲಿ..!

ಹುಷಾರ್.. ಇದು ಹೃದಯಗಳ ವಿಷಯ – ಪ್ರತಿ ತಿಂಗಳು ಹೃದಯಾಘಾತಕ್ಕೆ 100 ರಿಂದ 120 ಜನ ಬಲಿ..!

ರಾಜ್ಯದಲ್ಲಿ ಈಗ ಬೆಚ್ಚಿಬೀಳಿಸುವ ವಿಚಾರ ಅಂದರೆ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು. ಮೈಸೂರಿನ ಜಯದೇವ ಆಸ್ಪತ್ರೆ ಕೂಡಾ ಇದೇ ವಿಚಾರವಾಗಿ ಕೆಲವೊಂದು ಮಾಹಿತಿ ನೀಡಿದೆ. ಇದರ ನಡುವೆ ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ಬೆಂಗಳೂರಿನ ಜಯದೇವ ಆಸ್ಪತ್ರೆಯ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಿದೆ.

ಇದನ್ನೂ ಓದಿ: ಹಾಸನದಲ್ಲಿ ಹೃದಯಾತದಿಂದ ಸರಣಿ ಸಾವು – ಆರೋಗ್ಯ ಇಲಾಖೆ ಸಮಿತಿ ರಚನೆ

ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಶಾಕಿಂಗ್ ವಿಚಾರ ಏನಂದರೆ, ಈ ಸಾವಿನ ಸರಣಿಯಲ್ಲಿ ಯುವಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆ ಈ ಬಗ್ಗೆ ವರದಿ ಕೂಡಾ ನೀಡಿದೆ. ಜಯದೇವ ಹೃದ್ರೋಗ ಆಸ್ಪತ್ರೆ ವರದಿ ಪ್ರಕಾರ ರಾಜ್ಯದಲ್ಲಿ ಪ್ರತಿದಿನ 3 ರಿಂದ 4 ಜನರು ಹೃದಯಾಘಾತದಿಂದ ಮೃತಪಡುತ್ತಿದ್ದಾರೆ. ಪ್ರತಿ ತಿಂಗಳು ಸರಾಸರಿ 100 ರಿಂದ 120 ಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಹಾಸನ ಜಿಲ್ಲೆಯಿಂದ ಮೈಸೂರಿಗೆ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ.

ಸತ್ಯಜಯದೇವ ಆಸ್ಪತ್ರೆಯ ವರದಿಯ ಪ್ರಕಾರ, ಏಪ್ರಿಲ್ 2025 ರಲ್ಲಿ 1690 ಒಳರೋಗಿಗಳು ಹೃದಯ ಸಂಬಂಧಿ ಕಾಯಿಲೆಗಳಿಗೆ ದಾಖಲಾಗಿದ್ದು, ಇವರಲ್ಲಿ 109 ಮಂದಿ ಮೃತಪಟ್ಟಿದ್ದಾರೆ. ಇದೇ ತಿಂಗಳಲ್ಲಿ 24 ಜನರು ಆಸ್ಪತ್ರೆಗೆ ತಲುಪುವ ಮೊದಲೇ ಮೃತರಾಗಿದ್ದರು. ತೀವ್ರ ಹೃದಯಾಘಾತದ ಪ್ರಕರಣಗಳ ಸಂಖ್ಯೆ 750 ದಾಖಲಾಗಿದ್ದು, ಇದರಲ್ಲಿ 70 ಮಂದಿ ಸಾವನ್ನಪ್ಪಿದ್ದಾರೆ. ಮೇ 2025 ರಲ್ಲಿ ಈ ಸಂಖ್ಯೆ ಇನ್ನಷ್ಟು ಏರಿಕೆಯಾಗಿದೆ. 1782 ಒಳರೋಗಿಗಳು ದಾಖಲಾಗಿದ್ದು, 106 ಮಂದಿ ಮೃತಪಟ್ಟಿದ್ದಾರೆ. 33 ಜನರು ಆಸ್ಪತ್ರೆಗೆ ತಲುಪುವ ಮೊದಲೇ ಕೊನೆಯುಸಿರೆಳೆದಿದ್ದಾರೆ. ತೀವ್ರ ಹೃದಯಾಘಾತದ ಪ್ರಕರಣಗಳ ಸಂಖ್ಯೆ 780 ಕ್ಕೆ ಏರಿಕೆಯಾಗಿದ್ದು, 82 ಮಂದಿ ಈ ಕಾಯಿಲೆಗೆ ಬಲಿಯಾಗಿದ್ದಾರೆ. ಹಾಸನದಿಂದ ಬರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗ್ತಿದ್ದು, ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ರೋಗಿಗಳಲ್ಲಿ ಗಮನಾರ್ಹ ಸಂಖ್ಯೆಯ ಜನರು ಹಾಸನದವರೇ ಆಗಿದ್ದಾರೆ.

ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಸದಾನಂದ್ ಅವರು ಈ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಯುವಕರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಾಗಿರುವುದಕ್ಕೆ ಬದಲಾದ ಜೀವನಶೈಲಿ, ಒತ್ತಡ, ಆಹಾರ ಪದ್ಧತಿ, ಮತ್ತು ವಾಯುಮಾಲಿನ್ಯವೇ ಮುಖ್ಯ ಕಾರಣಗಳೆಂದು ತಿಳಿಸಿದ್ದಾರೆ. ಕೊವಿಡ್-19 ನಂತರ ಈ ಪ್ರಕರಣಗಳು ಶೇ. 40 ರಷ್ಟು ಏರಿಕೆಯಾಗಿವೆ ಎಂದು ಜಯದೇವ ಆಸ್ಪತ್ರೆಯ ಅಧ್ಯಯನವೊಂದು ಬಹಿರಂಗಪಡಿಸಿದೆ. ಅನುವಂಶೀಯತೆ, ಧೂಮಪಾನ, ಮಧುಮೇಹ, ಮತ್ತು ರಕ್ತದೊತ್ತಡದಂತಹ ಅಂಶಗಳೂ ಈ ಸಮಸ್ಯೆಗೆ ಕಾರಣವಾಗಿವೆ.

ಹೃದಯಾಘಾತದ ಆರಂಭಿಕ ಲಕ್ಷಣಗಳಾದ ಎದೆನೋವು, ಉಸಿರಾಟದ ತೊಂದರೆ, ಅತಿಯಾದ ಬೆವರು ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮ, ಸಮತೋಲನ ಆಹಾರ, ಮತ್ತು ಒತ್ತಡ ನಿರ್ವಹಣೆ ಮೂಲಕ ಈ ಸಮಸ್ಯೆಯನ್ನು ತಡೆಯಬಹುದು. ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಜಯದೇವ ಆಸ್ಪತ್ರೆಯ ಡಾ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಿದೆ.

Sulekha