ಸೋಲಿನ ಆಘಾತದಿಂದ ಹೊರ ಬಾರದ ರೇಣುಕಾಚಾರ್ಯ – ತಾವು ಆರಂಭಿಸಿದ್ದ ಕಾಮಗಾರಿ ಸ್ಥಳಗಳಲ್ಲಿ ಸುತ್ತಾಟ!

ಸೋಲಿನ ಆಘಾತದಿಂದ ಹೊರ ಬಾರದ ರೇಣುಕಾಚಾರ್ಯ – ತಾವು ಆರಂಭಿಸಿದ್ದ ಕಾಮಗಾರಿ ಸ್ಥಳಗಳಲ್ಲಿ ಸುತ್ತಾಟ!

ಹಾಲಿ ಸಚಿವರೂ ಸೋತಿದ್ದಾರೆ. ಹಿರಿಯ ಶಾಸಕರಿಗೂ ಆಘಾತವಾಗಿದೆ. ಕ್ಷೇತ್ರದಲ್ಲಿ ತಮ್ಮದೇ ಪಾರುಪತ್ಯ ಎಂದು ಮೆರೆಯುತ್ತಿದ್ದವರು ಸದ್ದಿಲ್ಲದೇ ಮಕಾಡೆ ಮಲಗಿದ್ದಾರೆ. ಹಣಬಲ, ಜನಬಲದ ನಡುವೆಯೂ ಅಂಬೆಗಾಲಿಡುತ್ತಾ ರಾಜಕೀಯಕ್ಕೆ ಕಾಲಿಟ್ಟ ಹೊಸ ಮುಖಗಳು ಆಶ್ಚರ್ಯಕರ ರೀತಿಯಲ್ಲಿ ಗೆಲುವಿನ ಗುರಿ ಮುಟ್ಟಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುವ ನಾಯಕ ಎಂದುಕೊಂಡವರು ಕೂಡ ಮತದಾರರ ತೀರ್ಪಿಗೆ ಮಂಡಿಯೂರಿದ್ದಾರೆ. ಹೊನ್ನಾಳಿ ಕ್ಷೇತ್ರದ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಕೂಡ ಇದಕ್ಕೆ ಹೊರತಾಗಿಲ್ಲ.

ಹೊನ್ನಾಳಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಂ.ಪಿ ರೇಣುಕಾಚಾರ್ಯ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ ಶಾಂತನಗೌಡ ವಿರುದ್ಧ ಹೀನಾಯವಾಗಿ ಸೋಲನುಭವಿಸಿದ್ದಾರೆ. ಆದರೆ ಈ ಸೋಲಿನ ಆಘಾತ ರೇಣುಕಾಚಾರ್ಯಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದೇ ಕಾರಣಕ್ಕೆ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಸಿದ್ದು-ಡಿಕೆಶಿ ಸಿಎಂ ಗದ್ದುಗೆ ಗುದ್ದಾಟ – ರಾಜಸ್ಥಾನದಂತೆಯೇ ಆಗುತ್ತಾ ಕರ್ನಾಟಕದ ಪರಿಸ್ಥಿತಿ..?

ಸೋಲಿನ ಬಳಿಕ ದಿನ ಬೆಳಗಾದ್ರೆ ಕ್ಷೇತ್ರದಲ್ಲಿ ತಾವು ಆರಂಭಿಸಿದ ಕಾಮಗಾರಿಗಳನ್ನ ವೀಕ್ಷಣೆ ಮಾಡುತ್ತಿದ್ದಾರಂತೆ.  ತಾವು ಆರಂಭಿಸಿದ 14 ಕೋಟಿ ವೆಚ್ಚದ ಹಿರೇಕಲ್ಮಠ ಕೆರೆಯ ಪುಟ್ ಪಾತ್, ಸರ್ಕಾರಿ ಪದವಿ ಕಾಲೇಜ್ ಗೇಟ್, ತುಂಗಭದ್ರ ಶುದ್ಧ ಕುಡಿಯುವ ನೀರಿನ ‌ಘಟಕ, ಪ್ರವಾಸಿ ಮಂದಿರ ಹೀಗೆ ಹತ್ತು ಹಲವು ಕಾಮಗಾರಿಗಳನ್ನ ತಮ್ಮ ಬೆಂಬಲಿಗರಿಗೆ ತೋರಿಸುತ್ತಾ ರೇಣುಕಾಚಾರ್ಯ ಸುತ್ತಾಡುತ್ತಿದ್ದಾರೆ. ಈ ಕಾಮಗಾರಿ ನಾನೇ ಮಾಡಿದ್ದು ಎಂದು ಕಾಮಗಾರಿ ಸ್ಥಳಕ್ಕೆ ಸುತ್ತುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಚುನಾವಣೆಯ ಸೋಲಿನ ಆಘಾತದಿಂದ ರೇಣುಕಾಚಾರ್ಯ ಇನ್ನೂ ಹೊರ ಬಂದಿಲ್ಲ. ಜೊತೆಗೆ ಸೋತ ದಿನವೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಎಂದು ಘೋಷಣೆ ಮಾಡಿದ್ದರು. ಇವೆಲ್ಲವನ್ನ ನೋಡುತ್ತಿದ್ದರೆ ರೇಣುಕಾಚಾರ್ಯರವರಿಗೆ ವಿಶ್ರಾಂತಿಯ ಅವಶ್ಯಕತೆಯಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ.

ಕೊರೊನಾ ವೇಳೆ ರಾಜ್ಯದಲ್ಲಿ ಅತೀ ಹೆಚ್ಚು ಸುದ್ದಿ ಮಾಡಿದ್ದ ನಾಯಕ ಎಂದರೆ ಅದು ಎಂ.ಪಿ ರೇಣುಕಾಚಾರ್ಯ. ಹೊನ್ನಾಳಿ ಕ್ಷೇತ್ರದಲ್ಲಿ ಶಾಸಕರಾಗಿದ್ದ ಅವರು ಜೀವದ ಹಂಗು ತೊರೆದು ಜನರ ಜೊತೆ ಬೆರೆತಿದ್ರು. ಆಹಾರದ ಕಿಟ್, ಊಟ, ತಿಂಡಿ ಸೇರಿದಂತೆ ಸಾಕಷ್ಟು ಕೆಲಸ ಮಾಡಿದ್ರು. ಹೀಗಾಗಿ ಈ ಬಾರಿಯೂ ರೇಣುಕಾಚಾರ್ಯ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಚುನಾವಣೆಯಲ್ಲಿ ಸೋಲುವ ಮೂಲಕ ದೊಡ್ಡ ಆಘಾತ ಅನುಭವಿಸಿದ್ದಾರೆ.

ಸೋಲಿನ ಬಗ್ಗೆ ಮಾತನಾಡಿರುವ ರೇಣುಕಾಚಾರ್ಯ, ನಾನು ಕ್ಷೇತ್ರದ ಜನರಿಗಾಗಿ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತು ಎಂದು ತಮ್ಮ ಕ್ಷೇತ್ರದ ಅಭಿಮಾನಿಗಳ ಎದುರು ಮಾತನಾಡಲು ಆಗದೆ ರೇಣುಕಾಚಾರ್ಯ ಕಣ್ಣೀರಿಟ್ಟಿದ್ದರು. ತಾಲೂಕಿನ ಎಲ್ಲಾ ನಾಯಕರು ನನ್ನ ಪರ ಕೆಲಸ ಮಾಡಿದ್ದರು. ನನಗೆ ಮತ ಕೊಟ್ಟವರಿಗೂ, ಕೊಡದವರಿಗೂ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಸೋಲಿನ ಬಳಿಕವೂ ನೀವು ನನ್ನ ಮನೆಗೆ ಬಂದಿದ್ದೀರಿ. ಕೊವಿಡ್​ನಲ್ಲಿ ಕೆಲಸ ಮಾಡಿದ್ದೆ, ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡಿದ್ದೆ. ಆದರೆ ಈಗ ಸೋತ ಬಳಿಕ ನಾನು ಯಾರ ಬಗ್ಗೆಯೂ ಆರೋಪ ಮಾಡಲ್ಲ, ನನ್ನ ಸೋಲಿಗೆ ನಾನೇ ಕಾರಣ ಅಂತ ಭಾವಿಸುತ್ತೇನೆ. ಮತದಾರರಿಗೆ ನನ್ನ ಮೇಲೆ ನಂಬಿಕೆ ಇರಲಿಲ್ಲ ಅನ್ಸುತ್ತೆ. ನಾನು ಗೆದ್ದರೂ ಧ್ವೇಷ ರಾಜಕಾರಣ ಮಾಡಿರಲಿಲ್ಲ ಎಂದು ರೇಣುಕಾಚಾರ್ಯ ನೋವು ತೋಡಿಕೊಂಡಿದ್ದರು.

 

suddiyaana