ಮೋದಿ ನನ್ನನ್ನು ಶೂರ್ಪನಕಿ ಎಂದಿದ್ದಾರೆ – ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆಂದ ‘ಕೈ’ ನಾಯಕಿ

ಮೋದಿ ನನ್ನನ್ನು ಶೂರ್ಪನಕಿ ಎಂದಿದ್ದಾರೆ – ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆಂದ ‘ಕೈ’ ನಾಯಕಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ರಾಹುಲ್ ಗಾಂಧಿಗೆ  ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಕಿಡಿಕಾರುತ್ತಿದ್ದಾರೆ. ಇದೀಗ ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ರೇಣುಕಾ ಚೌದರಿ ಮೋದಿ ವಿರುದ್ದ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ಹಾಕುವುದಾಗಿ ಹೇಳಿದ್ದಾರೆ.

ರಾಜ್ಯಸಭಾ ಕಲಾಪದ ವೇಳೆ ಪ್ರಧಾನಿ ಮೋದಿ ನನ್ನನ್ನು ಶೂರ್ಪನಕಿ ಎಂದು ಕರೆದಿದ್ದಾರೆ.  ಹೀಗಾಗಿ ನಾನು ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ನ್ಯಾಯಾಲಯಗಳು ಎಷ್ಟು ವೇಗವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡೋಣ ಎಂದು ರೇಣುಕಾ ಚೌಧರಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸದ ಸ್ಥಾನದಿಂದ ಅನರ್ಹ

2018ರ ರಾಜ್ಯಸಭಾ  ಕಲಾಪದ ಹಳೆಯ ವಿಡಿಯೋದಲ್ಲಿ ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆಗೆ ಸಂಸದೆ ರೇಣುಕಾ ಚೌಧರಿ ಜೋರಾಗಿ ನಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಸಭಾಧ್ಯಕ್ಷ ವೆಂಕಯ್ಯ ನಾಯ್ಡು  “ನಿಮ್ಮ ಸಮಸ್ಯೆ ಏನು? ನಿಮಗೇನಾದರೂ ಸಮಸ್ಯೆ ಆಗಿದ್ದರೆ ವೈದ್ಯರ ಬಳಿ ಹೋಗಿ, ದಯವಿಟ್ಟು ಸುಮ್ಮನೇ ಕುಳಿತುಕೊಳ್ಳಿ” ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ವೆಂಕಯ್ಯ ನಾಯ್ಡು ಸೂಚನೆಯನ್ನೂ ಧಿಕ್ಕರಿಸಿ ರೇಣುಕಾ ನಗುವುದನ್ನು ಮುಂದುವರಿಸುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, “ಸಭಾಪತಿಜೀ ರೇಣುಕಾಜೀ ಅವರಿಗೆ ನೀವು ನಗಲು ಬಿಡಿ. ರಾಮಾಯಣ ಧಾರಾವಾಹಿಯ ನಂತರ ಈ ರೀತಿಯ ನಗುವನ್ನು ಕೇಳುವ ಸೌಭಾಗ್ಯ ಇಂದು ನಮಗೆ ಒದಗಿ ಬಂದಿದೆ” ಎಂದು ವ್ಯಂಗ್ಯವಾಡಿದ್ದಾರೆ. ಮೋದಿ ರಾಮಾಯಣದ ಉದಾಹರಣೆ ನೀಡಿ ರೇಣುಕಾ ಚೌಧರಿ ಅವರ ಕಾಲೆಳೆಯುತ್ತಿದ್ದಂತೆ ಬಿಜೆಪಿ ಸಂಸದರು ಬೆಂಚನ್ನು ಕುಟ್ಟಿ ಜೋರಾಗಿ ಬಿದ್ದು ಬಿದ್ದು ನಗಲು ಶುರು ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ರೇಣುಕಾ ಚೌಧರಿ ಈ ದೃಶ್ಯವನ್ನು ಟ್ವೀಟ್ ಮಾಡುತ್ತಿದ್ದಂತೆ ಅನೇಕರು ಈ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಈ ಹೇಳಿಕೆ ವಿರುದ್ಧ ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಲು ಬರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೊದಲನೆಯದಾಗಿ ಮೋದಿ ಎಲ್ಲಿಯೂ ನೇರವಾಗಿ ರೇಣುಕಾ ಚೌಧರಿ ಅವರನ್ನು ‘ಶೂರ್ಪನಕಿʼ ಎಂದು ಸಂಬೋಧನೆ ಮಾಡಿಲ್ಲ. ಎರಡನೇಯದಾಗಿ ಮೋದಿ ರಾಜ್ಯಸಭಾ ಕಲಾಪದಲ್ಲಿ ಮಾತನಾಡಿದ್ದಾರೆ. ಸಂಸತ್ತು ಅಥವಾ ರಾಜ್ಯದ ಶಾಸನ ಸಭೆಯಲ್ಲಿ ಸದಸ್ಯರ ವಿರುದ್ಧ ಏನೇ ಮಾತನಾಡಿದರೂ ಆ ಹೇಳಿಕೆಯನ್ನು ಪ್ರಶ್ನಿಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ. ಸದನದಲ್ಲಿ ಮಾತನಾಡಿ ಹಕ್ಕು ಚ್ಯುತಿಯಾಗಿದ್ದರೆ ಅದನ್ನು ಸದನದಲ್ಲೇ ಪ್ರಶ್ನೆ ಮಾಡಬೇಕು. ಈ ವಿಚಾರದಲ್ಲಿ ಅಂತಿಮ ನಿರ್ಧಾರ ಸ್ಪೀಕರ್‌ ತೆಗೆದುಕೊಳ್ಳಬಹುದೇ ವಿನಃ ನ್ಯಾಯಾಧೀಶರಿಗೆ ತೆಗೆದುಕೊಳ್ಳಲು ಬರುವುದಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

suddiyaana