ಸರ್ಕಾರಿ ಕಚೇರಿಗಳಲ್ಲಿ ಪ್ರಧಾನಿ ಮೋದಿ ಫೋಟೋ ತೆಗೆಯಿರಿ – ಆಪ್ ಮನವಿ

ಸರ್ಕಾರಿ ಕಚೇರಿಗಳಲ್ಲಿ ಪ್ರಧಾನಿ ಮೋದಿ ಫೋಟೋ ತೆಗೆಯಿರಿ – ಆಪ್ ಮನವಿ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದೆ. ಇದರ ನಡುವೆ ಗುಜರಾತ್ ನ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ಹಾಕಲಾಗಿದ್ದು, ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಹೀಗಾಗಿ ಮೋದಿ ಭಾವಚಿತ್ರಗಳನ್ನು ತೆಗೆದುಹಾಕಬೇಕು ಇಲ್ಲದಿದ್ದರೆ ಅದನ್ನು ಮುಚ್ಚಬೇಕು ಎಂದು ಆಮ್ ಆದ್ಮಿ ಪಕ್ಷ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಇದನ್ನೂ ಓದಿ: ಗುಜರಾತ್ ಚುನಾವಣೆ- ಪತ್ನಿ ರಿವಾಬಾ ಪರ ಜಡೇಜಾ ಬ್ಯಾಟಿಂಗ್

ಬಿಜೆಪಿಯ  ಸ್ಟಾರ್ ಪ್ರಚಾರಕರಾಗಿರುವ ಪ್ರಧಾನಿ ಮೋದಿ ಅವರ ಭಾವಚಿತ್ರಗಳು ಸರ್ಕಾರಿ ಕಚೇರಿಗಳಲ್ಲಿ ಹಾಕಲಾಗಿದೆ. ಇದು ನೀತಿ ಸಂಹಿತೆ ಉಲ್ಲಂಘನೆ. ಆದ್ದರಿಂದ ಪ್ರಧಾನಿ ಫೋಟೋಗಳನ್ನು ಸರ್ಕಾರಿ ಕಚೇರಿಗಳಲ್ಲಿ ತೆಗೆದುಹಾಕಬೇಕು ಎಂದು ಎಎಪಿಯ ಕಾನೂನು ಘಟಕದ ಗುಜರಾತ್ ಕಾರ್ಯದರ್ಶಿ ಪುನೀತ್ ಜುನೇಜಾ ಹೇಳಿದ್ದಾರೆ.

ಇನ್ನು ಚುನಾವಣಾ ಆಯೋಗಕ್ಕೆ ನೀಡಿದ ತನ್ನ ಪ್ರಾತಿನಿಧ್ಯದಲ್ಲಿ, ಸರ್ಕಾರಿ ಕಚೇರಿಗಳಲ್ಲಿ ರಾಜಕೀಯ ಪಕ್ಷದ ಸ್ಟಾರ್ ಪ್ರಚಾರಕರ ಫೋಟೋಗಳನ್ನು ಹಾಕಲಾಗಿದ್ದು, ಇದು ಚುನಾವಣೆಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳ ಹಿತದೃಷ್ಟಿಯಿಂದ, ರಾಜ್ಯದಾದ್ಯಂತ ಎಲ್ಲಾ ಕಚೇರಿಗಳಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರಗಳನ್ನು ತೆಗೆದುಹಾಕಬೇಕು ಅಥವಾ ಕಾಣದಂತೆ ಮುಚ್ಚಲು ನಿರ್ದೇಶನವನ್ನು ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಎಎಪಿ ಮನವಿ ಮಾಡಿದೆ.

suddiyaana