ಜಿಂಬಾಬ್ವೆ ಹೊಸ ಅವತಾರ – ಹೆಂಗಿದ್ದ ಟೀಂ ಹೆಂಗಾಯ್ತು?
ಸೂಪರ್ 8ನಲ್ಲೂ ಕಾಡ್ತಾರಾ?

ಟಿ-20 ವಿಶ್ವಕಪ್ನಲ್ಲಿ ಇನ್ನೇನು ಸೂಪರ್ 8 ಹಂತದ ಪಂದ್ಯಗಳು ಸ್ಟಾರ್ಟ್ ಆಗುತ್ತೆ. ಶನಿವಾರದಿಂದ ಸೆಮಿಫೈನಲ್ ಟಿಕೆಟ್ಗಾಗಿ 8 ತಂಡಗಳ ನಡುವೆ ಹೈವೋಲ್ಟೇಜ್ ಸಮರ ನಡೆಯಲಿದೆ. ಇಂಟ್ರೆಸ್ಟಿಂಗ್ ಅಂದ್ರೆ ಈ ಬಾರಿಯ ಸೂಪರ್ 8 ಸುತ್ತಿನಲ್ಲಿ ಜಿಂಬಾಬ್ವೆ ತಂಡದ ಬಗ್ಗೆಯೇ ಸಿಕ್ಕಾಪಟ್ಟೆ ಚರ್ಚೆಯಾಗ್ತಿದೆ. ಯಾರನ್ನ ಗ್ರೂಪ್ ಸ್ಟೇಜ್ನಲ್ಲೇ ಟೂರ್ನಿಯಿಂದ ಹೊರ ಬೀಳ್ತಾರೆ ಅನ್ಕೊಂಡಿದ್ರೋ ಅದೇ ಟೀಂ ಘಟಾನುಘಟಿಗಳನ್ನೆಲ್ಲಾ ಬಗ್ಗು ಬಡಿದು ಅಜೇಯವಾಗಿ ಸೂಪರ್ 8ಗೆ ಲಗ್ಗೆ ಇಟ್ಟಿದೆ.
ಇದನ್ನೂ ಓದಿ : ಶ್ರೀಲಂಕಾ ವಿರುದ್ಧ ಗೆದ್ದು ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್‌ನ ಫೈನಲ್‌ಗೆ ಪ್ರವೇಶಿಸಿದ ಟೀಂ IND
ಜಿಂಬಾಬ್ವೆ.. ಟಿ-20 ವಿಶ್ವಕಪ್ ಆರಂಭಕ್ಕೂ ಮುನ್ನ ವೀಕ್ ಟೀಂ ಅನ್ಕೊಂಡವ್ರೇ ಜಾಸ್ತಿ. ಆದ್ರೆ ಯಾವಾಗ ಆಸ್ಟ್ರೇಲಿಯಾಗೇ ಮಣ್ಣು ಮುಕ್ಕಿಸಿದ್ರೋ ಆಗ್ಲೇ ಕ್ರಿಕೆಟ್ ಪ್ರೇಮಿಗಳೆಲ್ಲಾ ಜಿಂಬಾಬ್ವೆಯತ್ತ ಕಣ್ಣರಳಿಸಿ ನೋಡಿದ್ರು. ಇನ್ನೊಂದಷ್ಟು ಜನ ಆಸೀಸ್ ತಂಡದಲ್ಲಿ ಈ ಸಲ ಸ್ಟಾರ್ಟ್ ಪ್ಲೇಯರ್ಗಳಿಲ್ಲ. ಹೀಗಾಗಿ ಜಿಂಬಾಬ್ವೆ ಗೆದ್ದಿದೆ ಅಷ್ಟೇ ಇದ್ರಲ್ಲೇನು ವಿಶೇಷತೆ ಇಲ್ಲ ಅಂತಾ ಕೊಂಕು ನುಡಿದಿದ್ರು. ಆದ್ರೆ ಯಾವಾಗ ಗುರುವಾರ ಲಂಕಾ ತಂಡವನ್ನ ಲಂಕಾ ನಾಡಿನಲ್ಲೇ ಬಗ್ಗು ಬಡಿದ್ರೋ ಅಲ್ಲಿಂದ ಜಿಂಬಾಬ್ವೆ ತಂಡದ ಪಿಕ್ಚರೇ ಚೇಂಜ್ ಆಗಿದೆ. 80, 90ರ ದಶಕದ ಜಿಂಬಾಬ್ವೆ ಟೀಂ ನೆನಪಿಸಿದೆ.
ಲಂಕೆಯನ್ನ ಸೋಲಿಸಿ ಮೆರೆದ ಜಿಂಬಾಬ್ವೆ ಬಾಯ್ಸ್!
ಬಿ ಗುಂಪಿನಲ್ಲಿದ್ದ ಜಿಂಬಾಬ್ವೆ ತಂಡ ಈಗ ಅನ್ಬೀಟನ್ ಌಂಡ್ ಟೇಬಲ್ ಟಾಪರ್ ಆಗಿ ಸೂಪರ್ 8ಗೆ ಕಾಲಿಟ್ಟಿದೆ. ಅದೂ ಕೂಡ ಗ್ರೂಪ್ ಸ್ಟೇಜ್ನ ಕೊನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಾಖಲೆಯ ಗೆಲುವಿನೊಂದಿಗೆ ಬಲಿಷ್ಠ ತಂಡಗಳನ್ನೂ ಬೆರಗುಗೊಳಿಸಿದೆ. ಟಿ-20 ವಿಶ್ವಕಪ್ನ 38ನೇ ಪಂದ್ಯದಲ್ಲಿ ಜಿಂಬಾಬ್ವೆ ಮತ್ತು ಶ್ರೀಲಂಕಾ ತಂಡಗಳು ಕೊಲೊಂಬೋದಲ್ಲಿ ಮುಖಾಮುಖಿಯಾಗಿದ್ವು. ಈ ಮ್ಯಾಚಲ್ಲಿ ಸಿಂಹಳೀಯರನ್ನು 6 ವಿಕೆಟ್‌ಗಳಿಗೆ ಸೋಲಿಸಿ ಜಿಂಬಾಬ್ವೆ ಗೆದ್ದು ಬೀಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಪವರ್ ಪ್ಲೇನಲ್ಲಿ ಚೆನ್ನಾಗಿ ಆಡಿದ್ರೂ ಕೂಡ ನಂತರ ಜಿಂಬಾಬ್ವೆಯ ಸ್ಪಿನ್ನರ್‌ಗಳಾದ ಸಿಕಂದರ್ ರಜಾ, ಕ್ರೆಮರ್, ರಯಾನ್ ಬರ್ಲ್ ಮತ್ತು ವೆಲ್ಲಿಂಗ್ಟನ್ ಮಸಕಡ್ಜಾ ಮಧ್ಯಮ ಓವರ್‌ಗಳಲ್ಲಿ ರನ್ಸ್ ಕಂಟ್ರೋಲ್ ಮಾಡಿದ್ದು ವಿಶೇಷವಾಗಿತ್ತು. ಹೀಗಾಗಿ 20 ಓವರ್‌ಗಳಲ್ಲಿ ಏಳು ವಿಕೆಟ್‌ಗಳಿಗೆ 178 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ಜಿಂಬಾಬ್ವೆ ಮೂರು ಎಸೆತಗಳು ಬಾಕಿ ಇರುವಾಗ 182 ರನ್ ಗಳಿಸಿ ಪಂದ್ಯವನ್ನ ಗೆದ್ದಿದೆ. ಸಿಕಂದರ್ ರಾಜಾ 26 ಎಸೆತಗಳಲ್ಲಿ 45 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ್ರು. 39 ವರ್ಷ ವಯಸ್ಸಿನ ರಾಜಾ ನಾಯಕನಾಗಿ ಐಸಿಸಿ ಟೂರ್ನಮೆಂಟ್‌ನಲ್ಲಿ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಗೆದ್ದ ವಿಶ್ವದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
ಜಿಂಬಾಬ್ವೆ ತಂಡದ ಏಳು-ಬೀಳಿನ ಜರ್ನಿ!
ಐಸಿಸಿ ಪಂದ್ಯಾವಳಿಗಳು ಅಂತಾ ಬಂದಾಗ ಜಿಂಬಾಬ್ವೆಯ ಇತಿಹಾಸವು ರೋಲರ್ ಕೋಸ್ಟರ್ ಥರ ಆಗಿದೆ. 1983 ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್ ಆಡಿದ್ರು.ಹಾಗೇ ಮೊದಲ ODI ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 13 ರನ್‌ಗಳಿಂದ ಸೋಲಿಸುವ ಮೂಲಕ ಸದ್ದು ಮಾಡಿದ್ರು. ಹಾಗೇ ಇದೇ ವಿಶ್ವಕಪ್ನಲ್ಲೇ ಭಾರತ ಜಿಂಬಾಬ್ವೆಯನ್ನ ಸೋಲಿಸಿತ್ತು. ಕಪಿಲ್ ದೇವ್ ಕ್ಯಾಪ್ಟನ್ಸಿಯಲ್ಲಿ ನಡೆದ ಪಂದ್ಯದಲ್ಲಿ ಜಿಂಬಾಬ್ವೆಗೆ ಡಂಕನ್ ಫ್ಲೆಚರ್ ಕ್ಯಾಪ್ಟನ್ ಆಗಿದ್ರು. ಭಾರತದ ಪರ ಗವಾಸ್ಕರ್ ಮತ್ತು ಶ್ರೀಕಾಂತ್ ಡಕ್ ಔಟ್ ಆದ್ರೂ ಕಪಿಲ್ ದೇವ್ ಅಜೇಯ 175 ರನ್ ಗಳಿಸಿದ್ರು. ಏಕದಿನ ಮಾದರಿಯಲ್ಲಿ ಇದು ಅವ್ರ ಬೆಸ್ಟ್ ಸ್ಕೋರ್ ಆಗಿದೆ. ಌಂಡ್ ಅದೇ ವರ್ಷ ಭಾರತ ಚೊಚ್ಚಲ ಐಸಿಸಿ ಟ್ರೋಫಿಯನ್ನೂ ಗೆದ್ದಿತ್ತು. ಇನ್ನು 1999 ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಜಿಂಬಾಬ್ವೆ ಸೋಲಿಸಿತ್ತು. ಈ ಮೂಲಕ 80 ಮತ್ತು 90 ರ ದಶಕದಲ್ಲಿ ಜಿಂಬಾಬ್ವೆ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿದ್ದ ಮತ್ತು ಎದುರಾಳಿಗಳಿಗೆ ಡೇಂಜರಸ್ ಟೀಂ ಆಗೇ ಸದ್ದು ಮಾಡಿತ್ತು. 1992 ರಲ್ಲಿ ಟೆಸ್ಟ್ ಸ್ಥಾನಮಾನವನ್ನು ಪಡೆದು ಐಸಿಸಿ ಟೂರ್ನಮೆಂಟ್‌ಗಳಲ್ಲಿ ಮತ್ತು ದ್ವಿಪಕ್ಷೀಯ ಸರಣಿಗಳಲ್ಲಿಯೂ ದೊಡ್ಡ ತಂಡಗಳನ್ನು ಸೋಲಿಸಿದ್ರು. ಜಿಂಬಾಬ್ವೆ ಪರ ಅತಿ ಹೆಚ್ಚು ವೈಯಕ್ತಿಕ ಟೆಸ್ಟ್ ಸ್ಕೋರ್ (266) ಹೊಂದಿರುವ ಡೇವ್ ಹೌಟನ್, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಜಿಂಬಾಬ್ವೆಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಹೀತ್ ಸ್ಟ್ರೀಕ್, ಎಲ್ಲಾ ಸ್ವರೂಪಗಳಲ್ಲಿ ಹೆಚ್ಚನ ಸ್ಕೋರ್ ಮಾಡಿರೋ ಬ್ರೆಂಡನ್ ಟೇಲರ್, ಹೆನ್ರಿ ಒಲೊಂಗಾ, ಅಲಿಸ್ಟೈರ್ ಕ್ಯಾಂಪ್ಬೆಲ್, ಆಂಡಿ ಫ್ಲವರ್ ಮತ್ತು ಅವರ ಸಹೋದರ ಗ್ರಾಂಟ್ ಫ್ಲವರ್ ವಿಶ್ವ ಕ್ರಿಕೆಟ್ನಲ್ಲಿ ಜಿಂಬಾಬ್ವೆಯ ದಂತಕಥೆಗಳು ಎನಿಸಿಕೊಂಡಿದ್ದಾರೆ. ನಮ್ಮ ಆರ್ಸಿಬಿ ಕೋಚ್ ಆಗಿರೋ ಌಂಡಿ ಫ್ಲವರ್ ಕೂಡ ಇದೇ ಜಿಂಬಾಬ್ವೆಯ ಲೆಜೆಂಡರಿ ಆಟಗಾರ. ವಾಸ್ತವವಾಗಿ, ಜಿಂಬಾಬ್ವೆ ಒಂದು ಕಾಲದಲ್ಲಿ ಐಸಿಸಿ ಸ್ವರೂಪಗಳಲ್ಲಿ ನಂ. 1 ಶ್ರೇಯಾಂಕದ ಅನೇಕ ಆಟಗಾರರನ್ನು ಹೊಂದಿತ್ತು. ದಕ್ಷಿಣ ಆಫ್ರಿಕಾವನ್ನು ಹೊರತುಪಡಿಸಿ ಅಗ್ರ ತಂಡಗಳ ವಿರುದ್ಧ ನಿಯಮಿತವಾಗಿ ಸ್ಪರ್ಧಿಸುತ್ತಿದ್ದ ಏಕೈಕ ಪೂರ್ಣ ಸದಸ್ಯ ಆಫ್ರಿಕನ್ ರಾಷ್ಟ್ರ ಜಿಂಬಾಬ್ವೆ ಆಗಿತ್ತು. ಆದ್ರೆ ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ಅಧ್ಯಕ್ಷ ರಾಬರ್ಟ್ ಮುಗಾಬೆ ಅವರ ಆಡಳಿತದಲ್ಲಿ (1980-2017) ನಡೆದ ಕೆಲ ಬೆಳವಣಿಗೆಗಳಿಂದ ಅನೇಕ ಹಿರಿಯ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಿಂದ ಹೊರಬಂದಿದ್ರು. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಮತ್ತೆ ಕಂ ಬ್ಯಾಕ್ ಮಾಡ್ತಿದ್ದಾರೆ. ಜಿಂಬಾಬ್ವೆಯ ಗತಕಾಲದ ಕ್ರಿಕೆಟ್ ವೈಭವಕ್ಕಾಗಿ ಅಭಿಮಾನಿಗಳೂ ದೊಡ್ಡ ತ್ಯಾಗವನ್ನೇ ಮಾಡಿದ್ದಾರೆ.
ಸಿಂಹಳೀಯರ ಗರ್ಜನೆಯಲ್ಲೂ ಮಿಂಚಿದ ಜಿಂಬಾಬ್ವೆಯ ಫ್ಯಾನ್ಸ್!
ನೀವು ಜಿಂಬಾಬ್ವೆಯ ಮ್ಯಾಚ್ಗಳು ಇದ್ದಾಗ ವಿಶೇಷ ರೀತಿಯಲ್ಲಿ ಡ್ರೆಸ್ಸಿಂಗ್ ಮಾಡಿಕೊಂಡು ಸ್ಟ್ಯಾಂಡ್ಗಳಲ್ಲಿ ಹಾಡುತ್ತಾ ಕುಣಿಯುತ್ತಾ ಸಪೋರ್ಟ್ ಮಾಡೋರನ್ನ ನೋಡಿರ್ತೀರಿ. ಇವ್ರು ಜಿಂಬಾಬ್ವೆಯ ಅಭಿಮಾನಿಗಳು. ಗುರುವಾರ ಲಂಕಾದಲ್ಲಿ ಮ್ಯಾಚ್ ನಡೀತಿದ್ದರಿಂದ 30,000 ಶ್ರೀಲಂಕಾ ಫ್ಯಾನ್ಸ್ ಇದ್ದರು. ಆದ್ರೆ ಜಿಂಬಾಬ್ವೆ ಪರ ಬೆರಳೆಣಿಕೆಯಷ್ಟೇ ಜನ ಇದ್ರು. ಆದ್ರೂ ಶ್ರೀಲಂಕಾದ ವಿಕೆಟ್ ಬಿದ್ದಾಗ ಅಥವಾ ಸಿಕಂದರ್ ರಾಜಾ ಸ್ಟ್ಯಾಂಡ್‌ಗಳಿಗೆ ಸಿಕ್ಸರ್ ಸಿಡಿಸಿದಾಗ ಜಿಂಬಾಬ್ವೆಯ ಅಭಿಮಾನಿಗಳು ಚಪ್ಪಾಳೆ ತಟ್ಟುತ್ತಾ, ಕೂಗುತ್ತಾ, ಡ್ಯಾನ್ಸ್ ಮಾಡುತ್ತಾ ಸೆಲೆಬ್ರೇಟ್ ಮಾಡಿದ್ರು. ಅಷ್ಟಕ್ಕೂ ಈ ಅಭಿಮಾನಿಗಳು ತಮ್ಮ ತಂಡಕ್ಕಾಗಿ ದೊಡ್ಡ ತ್ಯಾಗವನ್ನೇ ಮಾಡಿದ್ದಾರೆ. ಯಾಕಂದ್ರೆ ಜಿಂಬಾಬ್ವೆ ಹೇಳಿ ಕೇಳಿ ಮೊದ್ಲೇ ಬಡ ದೇಶ. ಪಂದ್ಯಗಳಿಗಾಗಿ ಅಲ್ಲಿನ ಆಟಗಾರರೇ ಟ್ರಾವೆಲ್ ಮಾಡೋದು ಕಷ್ಟ. ಅವ್ರಿಗೆ ಫೈನಾನ್ಶಿಯಲ್ ಸಪೋರ್ಟ್ ಸಿಗ್ತಿಲ್ಲ. ಇನ್ನು ಅಭಿಮಾನಿಗಳಿಗಳು ಬರೋದಾದ್ರೂ ಹೇಗೆ. ಹೀಗಿದ್ರೂ ಜಿಂಬಾಬ್ವೆ ಕ್ರಿಕೆಟ್ ತಂಡದ ಸಪೋರ್ಟ್ಗಾಗಿಯೇ ಒಂದು ಅಧಿಕೃತ ಟೀಂ ಹುಟ್ಟಿಕೊಂಡಿದೆ. ಕ್ಯಾಸಲ್ ಕಾರ್ನರ್ ಹೆಸರಿನ ಈ ಅಭಿಮಾನಿಗಳ ಗುಂಪಿನಲ್ಲಿ 200 ಅಭಿಮಾನಿಗಳು ಸದಸ್ಯತ್ವ ಪಡೆದಿದ್ದಾರೆ. ಈ ಗುಂಪನ್ನು ಜಿಂಬಾಬ್ವೆ ತಂಡದ 12ನೇ ಆಟಗಾರ ಅಂತಾನೇ ಕರೆಯಲಾಗುತ್ತೆ. ಅಚ್ಚರಿ ಏನಂದ್ರೆ ಈ ಗುಂಪಿನಿಂದ ವಿಶ್ವಕಪ್ನಲ್ಲಿ ತಂಡವನ್ನ ಸಪೋರ್ಟ್ ಮಾಡೋಕೆ ಬಂದಿರೋದೇ 6 ಅಭಿಮಾನಿಗಳು. ಯಾಕಂದ್ರೆ ಅಷ್ಟೊಂದು ಹಣ ಖರ್ಚು ಮಾಡಿಕೊಂಡು ಬರುವಷ್ಟು ಯಾರೂ ಸ್ಥಿತಿವಂತರಲ್ಲ. ಹೀಗಿದ್ರೂ ಪ್ರತಿಯೊಬ್ಬರೂ ಕೂಡ 2ಸಾವಿರ ಯುಎಸ್ ಡಾಲರ್ ಖರ್ಚು ಮಾಡಿಕೊಂಡು ಬಂದಿದ್ದಾರೆ. ಜಿಂಬಾಬ್ವೆ ಕರೆನ್ಸಿ ಪ್ರಕಾರ ಹೇಳೋದಾದರೆ 51,350 ಡಾಲರ್ಗಳು. ಅಲ್ಲಿನ ಅಭಿಮಾನಿಗಳು ತಮ್ಮೆಲ್ಲಾ ಉಳಿತಾಯವನ್ನ ಪಣಕ್ಕಿಟ್ಟು ಬಂದು ತಮ್ಮ ತಂಡಕ್ಕೆ ಸಪೋರ್ಟ್ ಮಾಡ್ತಿದ್ದಾರೆ.
ಇನ್ನು ಗುರುವಾರ ಲಂಕಾ ತಂಡವನ್ನ ಸೋಲಿಸಿದ ಬಳಿಕ ವಿಕೆಟ್ ಕೀಪರ್-ಬ್ಯಾಟರ್ ತಡಿವಾನಾಶೆ ಮರುಮಾನಿ ಹೇಳಿದ ಮಾತೇ ಎಲ್ಲರನ್ನ ಬೆರಗುಗೊಳಿಸಿದೆ. ಇಷ್ಟೊಂದು ದೊಡ್ಡ ಜನಸಮೂಹದ ಮುಂದೆ ಎಂದಿಗೂ ಆಡಿಲ್ಲ. ನನ್ನ ಮೊದಲ ಅನುಭವ. ಇದು ನಿಜವಾಗಿಯೂ ರೋಮಾಂಚಕಾರಿ ಎಂದಿದ್ದಾರೆ. 2019 ಮತ್ತು 2023 ರ ODI ವಿಶ್ವಕಪ್ ಹಾಗೂ 2021 ಮತ್ತು 2024 ರ T20 ವಿಶ್ವಕಪ್‌ಗಳಿಗೆ ಜಿಂಬಾಬ್ವೆ ಅರ್ಹತೆಯನ್ನೇ ಪಡೆದಿರಲಿಲ್ಲ. ಈ ಬಾರಿ ಸೂಪರ್ 8ಗೆ ಸೆಲೆಕ್ಟ್ ಆಗಿರೋ ಜಿಂಬಾಬ್ವೆ ಈಗ 2028 ವಿಶ್ವಕಪ್ಗೂ ಅರ್ಹತೆ ಗಿಟ್ಟಿಸಿಕೊಂಡಿದೆ. ಜಿಂಬಾಬ್ವೆ ತಂಡವು ಗ್ರೂಪ್ ಹಂತದಲ್ಲಿ ಈಗಾಗಲೇ ಹಿಂದಿನ ಎರಡು ಬಾರಿ ಚಾಂಪಿಯನ್‌ಗಳಾದ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾವನ್ನು ಸೋಲಿಸಿದೆ. ಸೂಪರ್ ಎಂಟರಲ್ಲಿ 2 ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಮತ್ತು ಭಾರತ ಹಾಗೂ ಹಾಗೇ ಹಿಂದಿನ ಆವೃತ್ತಿಯ ರನ್ನರ್ ಅಪ್ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದ್ದಾರೆ. ಹೊಸ ಅವತಾರ ಎತ್ತಿ ಬಂದಿರೋ ಜಿಂಬಾಬ್ವೆ ಮೇಲೆ ಎಲ್ಲರ ಕಣ್ಣಿದೆ.

ನೋಡಿರಿ

