ಧರ್ಮವೆಂದರೆ ನ್ಯಾಯ.. ನ್ಯಾಯ ಕೇಳುವುದು ಕೂಡ ಧರ್ಮವೇ.. ಸೌಜನ್ಯ ಕುಟುಂಬದ ರಕ್ಷಣೆಗೆ ಸರ್ಕಾರ ಬದ್ದ – ಕಾಂಗ್ರೆಸ್

ಬೆಂಗಳೂರು: ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 11 ವರ್ಷಗಳ ಹಿಂದಿನ ಪ್ರಕರಣಕ್ಕೆ ನ್ಯಾಯ ಸಿಗಬೇಕು. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಅಂತಾ ಸೌಜನ್ಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಶುಕ್ರವಾರ ಬೃಹತ್ ಜನತಾ ಸಮಾವೇಶ ನಡೆಸಲಾಗಿತ್ತು. ಈ ವೇಳೆ ಸೌಜನ್ಯ ತಮ್ಮನ ಮೇಲೆ ಹಲ್ಲೆ ಯತ್ನವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ ಕಿಡಿಕಾರಿದೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಧರ್ಮವೆಂದರೆ ನ್ಯಾಯ. ನ್ಯಾಯವನ್ನು ಕೇಳುವುದು ಕೂಡ ಧರ್ಮವೇ.. ಸೌಜನ್ಯ ಕುಟುಂಬದ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ. ಸಂತ್ರಸ್ತ ಕುಟುಂಬದ ಮೇಲಿನ ಹಲ್ಲೆ, ಬೆದರಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನೊಂದ ಕುಟುಂಬದ ಮೇಲೆ ದಬ್ಬಾಳಿಕೆ ನಡೆಸುವುದನ್ನು ಧರ್ಮ ಎನ್ನಲಾಗದು. ಪೊಲೀಸರು ಸೌಜನ್ಯ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಲಿದ್ದಾರೆ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ದೇವೀರಮ್ಮನ ದೇಗುಲಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ – ಪ್ರೀ ವೆಡ್ಡಿಂಗ್ ಶೂಟ್, ರೀಲ್ಸ್‌ಗೂ ನಿಷೇಧ
2012ರಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಾ ಪ್ರಕರಣದಲ್ಲಿ ಧರ್ಮಸ್ಥಳ ಕ್ಷೇತ್ರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಕೆಲವರು ಅವಹೇಳನಕಾರಿ ಹೇಳಿಕ ನೀಡುತ್ತಿದ್ದಾರೆ ಎಂದು ಆರೋಪಿಸಿ ಹಾಗೂ ಇದನ್ನು ಖಂಡಿಸಿ ಶುಕ್ರವಾರ ಉಜಿರೆಯಲ್ಲಿ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ನೇತೃತ್ವದಲ್ಲಿ ಸಮಾವೇಶ, ಜಾಥಾ ಮತ್ತು ಹಕ್ಕೊತ್ತಾಯ ಕಾರ್ಯಕ್ರಮ ನಡೆದಿತ್ತು. ಎಸ್‌ಡಿಎಂ ಕಾಲೇಜು ಬಳಿ ಶುಕ್ರವಾರ ನಡೆದ ಹಕ್ಕೊತ್ತಾಯ ಮಂಡನೆ ಸಭೆಯ ಸಂದರ್ಭದಲ್ಲಿ ಅಪರಿಚಿತರು ತಮ್ಮ ಮಾನಭಂಗಕ್ಕೆ ಯತ್ನಿಸಿದ್ದು ಮಗನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ಸೌಜನ್ಯಾ ಅವರ ತಾಯಿ ಕುಸುಮಾವತಿ ದೂರಿದ್ದಾರೆ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ ಸಭೆ ಮುಕ್ತಾಯಗೊಳ್ಳುತ್ತಿದ್ದಂತೆ ಸೌಜನ್ಯಾ ತಾಯಿ ಕುಸುಮಾವತಿ, ಸಹೋದರಿಯರಾದ ಸೌಂದರ್ಯ, ಸೌಹಾರ್ದ ಸಹೋದರ ಜಯರಾಮ ಮತ್ತು ಇಬ್ಬರು ಸಂಬಂಧಿಕರು ವೇದಿಕೆಯ ಬಳಿ ಕಂಡುಬಂದ್ದಾರೆ. ‘ನನ್ನ ಮಗಳ ಪರವಾಗಿ ನಡೆಯುತ್ತಿರುವ ಪ್ರತಿಭಟನೆ ಇದು. ಹೀಗಾಗಿ ವೇದಿಕೆ ಮೇಲೇರಲು ಅವಕಾಶ ನೀಡಬೇಕು’ ಎಂದು ತಾಯಿ ಮನವಿ ಮಾಡಿದ್ದರು. ಆದರೆ ಆಯೋಜಕರು ಮತ್ತು ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ. ಕೆಲವರು ಘೋಷಣೆ ಕೂಗುತ್ತ ಅವರತ್ತ ಧಾವಿಸಿದರು. ಪೊಲೀಸರು ರಕ್ಷಣಾ ಕೋಟೆ ನಿರ್ಮಿಸಿದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ‘ಯಾರೋ ಕೆಲವರು ನನ್ನ ಕೊರಳಪಟ್ಟಿ ಹಿಡಿದು ಎಳೆದಿದ್ದಾರೆ’ ಎಂದು ಜಯರಾಮ್ ದೂರಿದರು.
ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದು ಅಲ್ಲಿಗೆ ಕುಟುಂಬ ಸಮೇತ ಹೋಗಿದ್ದೆ. ವೇದಿಕೆಯತ್ತ ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಇತರರ ಜೊತೆ ಸೇರಿಕೊಂಡು ಮೈ ಮುಟ್ಟಿ ಚೂಡಿದಾರದ ವೇಲ್ ಎಳೆದಿದ್ದಾನೆ. ಮಗ ಜಯರಾಮನ ಮೇಲೆಯೂ ಹಲ್ಲೆ ಮಾಡಿದ್ದಾನೆ ಎಂದು ಕುಸುಮಾವತಿ ದೂರಿದ್ದಾರೆ.