ಮೋಸದ ಜಾಲಕ್ಕೆ ಸಿಲುಕಿ ರಷ್ಯಾ ಸೇನೆ ಸೇರಿದ್ದ ಹಲವು ಭಾರತೀಯರ ಬಿಡುಗಡೆ
ಮಧ್ಯವರ್ತಿಗಳ ವಂಚನೆಯಿಂದಾಗಿ ರಷ್ಯಾಕ್ಕೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರನ್ನು ರಕ್ಷಿಸಲು ಭಾರತ ಸರ್ಕಾರ ಕ್ರಮಕೈಗೊಂಡಿದೆ. ಇದೀಗ ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ಭಾರತೀಯರನ್ನು ಬಿಡುಗಡೆ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯಸಭಾ ಚುನಾವಣೆ ಕ್ಲೈಮ್ಯಾಕ್ಸ್‌ನಲ್ಲಿ ಬಿಗ್ ಟ್ವಿಸ್ಟ್ – ಸೋಮಶೇಖರ್ ಮತ್ತು ಹೆಬ್ಬಾರ್ ಬಿಜೆಪಿಗೆ ಕೈ ಕೊಟ್ಟಿದ್ದೇಕೆ..?
ದುಬೈನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕನ್ನಡಿಗರು ಸೇರಿದಂತೆ 60 ಭಾರತೀಯರನ್ನ ಸಂಪರ್ಕಿಸಿದ್ದ ಮಹಾರಾಷ್ಟ್ರ ಮೂಲದ ಮಧ್ಯವರ್ತಿಯೊಬ್ಬ ಎಲ್ಲರಿಗೂ ರಷ್ಯಾ ಸೇನೆಯಲ್ಲಿ ನೌಕರಿಯ ಆಫರ್ ನೀಡಿದ್ದ. ಸೇನೆಯಲ್ಲಿ ಮಾಸಿಕ 1.50 ಲಕ್ಷ. ವೇತನ ಮತ್ತು 6 ತಿಂಗಳ ಬಳಿಕ ರಷ್ಯಾದ ಪೌರತ್ವದದ ಭರವಸೆಯನ್ನೂ ನೀಡಲಾಗಿತ್ತು. ಈ ಮಾತು ನಂಬಿ ರಷ್ಯಾಕ್ಕೆ ತೆರಳಿದ್ದ ಬಳಿಕ ಅವರೆಲ್ಲಾ ತಮಗೆ ಆಫರ್ ನೀಡಿದ್ದು ರಷ್ಯಾ ಸೇನೆಯಲ್ಲ, ಬದಲಾಗಿ ರಷ್ಯಾ ಸೇನೆಗೆ ನೆರವು ನೀಡುವ ವ್ಯಾಗ್ನರ್ ಎಂಬ ಖಾಸಗಿ ಸೇನೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಜೊತೆಗೆ ಇವರನ್ನು ಉಕ್ರೇನ್ ವಿರುದ್ಧದ ಯುದ್ದಕ್ಕೆ ಕಳುಹಿಸಲಾಗಿತ್ತು. ಹೀಗಾಗಿ ಅವರೆಲ್ಲಾ ತಮ್ಮನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು. ಇದೀಗ ಉಕ್ರೇನ್ ವಿರುದ್ಧದ ಯುದ್ಧಕ್ಕೆ ದೂಡಲ್ಪಟ್ಟಿದ್ದ ಹಲವು ಭಾರತೀಯರನ್ನು ರಷ್ಯಾ ಸರ್ಕಾರ ಬಿಡುಗಡೆ ಮಾಡಿದೆ ಎಂದು ಭಾರತ ಸರ್ಕಾರ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆ, ‘ಕೆಲ ಭಾರತೀಯರು ರಷ್ಯಾ ಸೇನೆಯಿಂದ ಮುಕ್ತಿಗೊಳಿಸುವಂತೆ ಬೇಡಿಕೆ ಇಟ್ಟಿರುವ ಪ್ರಕರಣಗಳ ಕುರಿತು ಮಾಧ್ಯಮಗಳಲ್ಲಿ ನಾವು ನಿರ್ದಿಷ್ಟವಲ್ಲದ ವರದಿಗಳನ್ನು ಗಮನಿಸಿದ್ದೇವೆ. ಇಂಥ ಪ್ರತಿ ಪ್ರಕರಣಗಳನ್ನೂ ನಾವು ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಗಮನಕ್ಕೆ ಮತ್ತು ಭಾರತದಲ್ಲಿನ ರಷ್ಯಾ ದೂತಾವಾಸ ಕಚೇರಿಗೆ ಗಮನಕ್ಕೆ ತಂದಿದ್ದೇವೆ. ಈ ಪೈಕಿ ಈಗಾಗಲೇ ಹಲವು ಭಾರತೀಯರನ್ನು ಭಾರತೀಯ ಸರ್ಕಾರದ ಕೋರಿಕೆಗೆ ಮೇರೆಗೆ ರಷ್ಯಾ ಬಿಡುಗಡೆ ಮಾಡಿದೆ. ರಷ್ಯಾದಲ್ಲಿ ಸಿಕ್ಕಿಬಿದ್ದಿರುವ ಪ್ರತಿ ಭಾರತೀಯರ ಬಿಡುಗಡೆ ನಮ್ಮ ಆದ್ಯತೆಯಾಗಿರಲಿದೆ. ಇದೇ ವೇಳೆ ಉಕ್ರೇನ್‌ನ ಸಂಘರ್ಷಮಯ ಪ್ರದೇಶದಿಂದ ದೂರ ಇರುವಂತೆ ನಾವು ಇದೇ ವೇಳೆ ಎಲ್ಲಾ ಭಾರತೀಯರಿಗೂ ಕೋರಿಕೆ ಸಲ್ಲಿಸುತ್ತೇವೆ ಎಂದು ಹೇಳಿದೆ.