ಕಾಂಗ್ರೆಸ್‌ ಗ್ಯಾರಂಟಿ ಜಾರಿಗೂ ಮೊದಲೇ ಕರೆಂಟ್‌ ಬಿಲ್‌ ನಿರಾಕರಣೆ!

ಕಾಂಗ್ರೆಸ್‌ ಗ್ಯಾರಂಟಿ ಜಾರಿಗೂ ಮೊದಲೇ ಕರೆಂಟ್‌ ಬಿಲ್‌ ನಿರಾಕರಣೆ!

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ಕೊಡುವುದಾಗಿ ಮಾಡಿದ್ದ ಘೋಷಣೆಯನ್ನು ಜನರೇ ಈಗ ಜಾರಿಗೆ ತಂದಂತಿದೆ. ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಬಂದ ಬೆನ್ನಲ್ಲೇ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಬೆಸ್ಕಾಂ ಮೀಟರ್‌ ರೀಡರ್‌ಗೆ ಗ್ರಾಮಸ್ಥರು ಆವಾಜ್‌ ಹಾಕಿದ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆಯಲ್ಲಿ ನಡೆದಿದೆ.

ಇದನ್ನೂ ಓದಿ: ಸಿಎಂ ಆಯ್ಕೆ ಕಸರತ್ತಿನಲ್ಲಿರುವ ಖರ್ಗೆಗೆ ಬಿಗ್ ಶಾಕ್ – ಎಐಸಿಸಿ ಅಧ್ಯಕ್ಷರಿಗೆ ಕೋರ್ಟ್ ನಿಂದ ಸಮನ್ಸ್ 

ಗ್ರಾಮಕ್ಕೆ ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡ ವಿದ್ಯುತ್ ಬಿಲ್ ನೀಡಲು ಬೆಸ್ಕಾಂ ಮೀಟರ್ ರೀಡರ್‌ ಗ್ರಾಮಕ್ಕೆ ಧಾವಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಬಿಲ್‌ ಕಟ್ಟುವಂತಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ನಾವು ಕರೆಂಟ್‌ ಬಿಲ್‌ ಕಟ್ಟುವುದಿಲ್ಲ. ಹೀಗಾಗಿ ಮೀಟರ್ ರೀಡಿಂಗ್ ಬರೆಯಬೇಡ ಎಂದು ಗ್ರಾಮಸ್ಥರು ಅವಾಜ್‌ ಹಾಕಿದ್ದಾರೆ. ಈ ವೇಳೆ ಮೀಟರ್‌ ರೀಡರ್‌ ಮಾತನಾಡಿ, ಆದೇಶ ಬರುವವರೆಗೆ ಬಿಲ್‌ ಕಟ್ಟಬೇಕೆಂದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಾವು ಯಾವುದೇ ಕಾರಣಕ್ಕೂ ಬಿಲ್‌ ಪಾವತಿಸುವುದಿಲ್ಲ. ವಿದ್ಯುತ್‌ ಬಿಲ್‌ ಆದೇಶದ ಬಗ್ಗೆ ಕಾಂಗ್ರೆಸ್‌ನವರಿಗೆ ಕೇಳಿ ಎಂದು ಗ್ರಾಮಸ್ಥರು ಆವಾಜ್‌ ಹಾಕಿದ್ದಾರೆ. ಅಷ್ಟೇ ಅಲ್ಲದೇ ಬೆಸ್ಕಾಂ ಸಿಬ್ಬಂದಿ ಸಾಕಷ್ಟು ಮನವೊಲಿಸಿದರೂ ಸಹ ಪ್ರಯೋಜನವಾಗಿಲ್ಲ. ಹೀಗಾಗಿ ಬೆಸ್ಕಾಂ ಅಧಿಕಾರಿಗಳು ಬಂದ ದಾರಿಗೆ ಸುಂಕ ಇಲ್ಲ ಎಂದು ಸ್ಥಳದಿಂದ ವಾಪಸ್ ಆಗಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂಧಿರುವ ಕಾಂಗ್ರೆಸ್‌ ಉಚಿತ ವಿದ್ಯುತ್‌ ಯೋಜನೆಯನ್ನು ಇನ್ನಷ್ಟೇ ಜಾರಿಗೊಳಿಸಬೇಕಿದೆ. ಆದರೆ ಜನ ಹೀಗೆ ತಾವಾಗೇ ವಿದ್ಯುತ್‌ ಬಿಲ್‌ ಕಟ್ಟಲು ನಿರಾಕರಿಸುತ್ತಿರುವುದು ಬೆಸ್ಕಾಂ ಅಧಿಕಾರಿಗಳಿಗೆ ಇರಿಸುಮುರಿಸು ಉಂಟುಮಾಡಿದೆ.

suddiyaana