ಮದುವೆಗೆ ಮನೆಯಲ್ಲಿ ನಿರಾಕರಣೆ – ಸ್ಲೀಪರ್ ಕೋಚ್ ಬಸ್‍ನಲ್ಲೇ ವಿಷ ಕುಡಿದು ಮಲಗಿದ ಪ್ರೇಮಿಗಳು, ಯುವತಿ ಸಾವು
ಹಾವೇರಿ: ಪ್ರೇಮಿಗಳಿಬ್ಬರು ಸ್ಲೀಪರ್ ಕೋಚ್ ಬಸ್ಸಿನಲ್ಲಿ ವಿಷ ಕುಡಿದು ಮಲಗಿದ್ದು, ಯುವತಿ ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರು ನಗರದ ಚಳಗೇರಿ ಟೋಲ್ ಬಳಿ ಇರುವ ಗ್ರೀನ್ ಪ್ಯಾಲೇಸ್ ಹೋಟೆಲ್ ಬಳಿ ನಡೆದಿದೆ.
ಬಿ.ಕಾಂ ಫೈನಲ್ ಇಯರ್ ವಿದ್ಯಾರ್ಥಿನಿಯಾಗಿದ್ದ ಬೆಂಗಳೂರು ಮೂಲದ ಹೇಮಾ ರಾಮಕೃಷ್ಣಪ್ಪ ಎಂಬಾಕೆಗೆ ಬಾಗಲಕೋಟೆ ಮೂಲದ ಅಖಿಲ್ ಜೊತೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಪೋಷಕರು ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ.
ಇದನ್ನೂ ಓದಿ: ಊರಿಗೆ ತೆರಳಲು ಬಸ್ ಇಲ್ಲವೆಂದು ತಾನೇ ಸರ್ಕಾರಿ ಬಸ್ ಚಲಾಯಿಸಿಕೊಂಡು ಹೋದ ಭೂಪ!
ಮದುವೆ ಕುಟುಂಬಸ್ಥರಿಗೆ ಒಪ್ಪಿಗೆ ನೀಡದ ಹಿನ್ನೆಲೆ ತಾನು ಬಾಂಬೆಗೆ ಹೋಗ್ತಾ ಇದ್ದೇನೆ ಎಂದು ಯುವತಿ ಮನೆಯವರಿಗೆ ಫೋನ್ ಮಾಡಿ ಹೇಳಿದ್ದಳು. ಬಳಿಕ ಹೇಮಾ ಹಾಗೂ ಅಖಿಲ್ ಸ್ಲೀಪರ್ ಕೋಚ್ ಬಸ್ ನಲ್ಲೇ ವಿಷ ಕುಡಿದು ಮಲಗಿದ್ದಾರೆ.
ಈ ನಡುವೆ ಊಟಕ್ಕೆ ಬಸ್ ನಿಲ್ಲಿಸಿದಾಗ ಬಸ್ ನಲ್ಲಿದ್ದವರಿಗೆ ಅನುಮಾನ ಬಂದಿದೆ. ವಿಷದ ವಾಸನೆ ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದರು. ಆದರೆ ಆ ವೇಳೆಗಾಗಲೇ ಯುವತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಯುವಕ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಈ ಸಂಬಂಧ ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.