ರಸ್ತೆ ಮೇಲೆ ಹರಿಯಿತು 22 ಲಕ್ಷ ಲೀಟರ್ ರೆಡ್ ವೈನ್ – ದಿಢೀರ್ ‘ವೈನ್ ಪ್ರವಾಹ’ಕ್ಕೆ ಕಂಗೆಟ್ಟ ಜನ

ರಸ್ತೆ ಮೇಲೆ ಹರಿಯಿತು 22 ಲಕ್ಷ ಲೀಟರ್ ರೆಡ್ ವೈನ್ – ದಿಢೀರ್ ‘ವೈನ್ ಪ್ರವಾಹ’ಕ್ಕೆ ಕಂಗೆಟ್ಟ ಜನ

ಅದೊಂದು ಕರಾವಳಿ ಪಟ್ಟಣ. ಅದರ ಬಳಿಯೇ ನದಿಯೊಂದು ಹರಿಯುತ್ತದೆ. ಆದರೆ, ಬೆಳಗ್ಗೆ ಹೊತ್ತಿಗೆ ಮಳೆ ಹನಿ ಕೂಡಾ ಬಿದ್ದಿರಲಿಲ್ಲ. ನದಿ ಉಕ್ಕುವ ಪ್ರಮೇಯವೂ ಇರಲಿಲ್ಲ. ಆದರೆ, ದಿಢೀರ್ ಕೆಂಪು ಕೆಂಪಾದ ನೀರು ರಸ್ತೆ ತುಂಬೆಲ್ಲಾ ಹರಿಯುತ್ತಿತ್ತು. ರಕ್ತದ ಹೊಳೆಯೋ ಎಂಬಂತೆ ಜನ ಗಾಬರಿಯಾಗಿದ್ದರು. ಅದು ಕೂಡಾ ನೀರು ಪ್ರವಾಹದಂತೆ ಉಕ್ಕುಕ್ಕಿ ಬರುತ್ತಿತ್ತು. ಎಲ್ಲಿಂದ ನೀರು ಬಂತು ಅನ್ನೋದು ಯಾರಿಗೂ ಗೊತ್ತಾಗಿಲ್ಲ. ಜನ ಬೆಚ್ಚಿಬಿದ್ದಿದ್ದರು. ಅಲ್ಲಿ ನಡೆದಿದ್ದು ನಿಜಕ್ಕೂ ವಿಚಿತ್ರ ಜೊತೆಗೆ ಎಂದೂ ನಡೆಯದ ಯಾರ ಊಹೆಗೂ ನಿಲುಕದ ಸಂಗತಿ.

ಇದನ್ನೂ ಓದಿ: ಮಲೇಷ್ಯಾದಲ್ಲಿ ‘ತಲೈವಾ’ ಹವಾ – ‘ಶಿವಾಜಿ’ ಸಿನಿಮಾ ಸ್ಟೈಲ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸ್ವಾಗತಿಸಿದ ಪ್ರಧಾನಿ

ಪೋರ್ಚುಗಲ್‌ನ ಕರಾವಳಿ ಪಟ್ಟಣ ಅಂದರೆ ಸಾವೊ ಲೊರೆಂಕೊ ಡಿ ಬೈರೊ ಪಟ್ಟಣದ ರಸ್ತೆಯಲ್ಲಿ ದಿಢೀರ್ ಅಂತಾ ಪ್ರವಾಹದ ರೀತಿ ನೀರು ಹರಿಯಲು ಶುರುವಾಗಿದೆ. ಸ್ಥಳೀಯರಂತೂ ಈ ನೀರು ಎಲ್ಲಿಂದ ಬಂತು ಎಂಬ ಆತಂಕದಲ್ಲಿದ್ದರು. ಹತ್ತಿರದಲ್ಲೇ ಸೆರ್ಟಿಮಾ ನದಿ ಇತ್ತು. ಆದರೆ, ನದಿ ನೀರು ಇದಲ್ಲ ಅನ್ನೋ ಸತ್ಯ ಜನರಿಗೆ ಗೊತ್ತಾಗಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಯಾಕೆಂದರೆ, ನೀರು ಕೆಂಪು ಕೆಂಪಾಗಿತ್ತು. ಒಮ್ಮೆಲೆ ನೋಡಿದರೆ ರಕ್ತದ ಹೊಳೆಯೇ ಹರಿಯುವಂತೆ ಕಾಣುತ್ತಿತ್ತು. ಆಮೇಲೆ ಗೊತ್ತಾದ ವಿಚಾರ ಏನೆಂದರೆ, ರಸ್ತೆಯಲ್ಲಿ ಹರಿದಿದ್ದು ಲಕ್ಷಾಂತರ ಲೀಟರ್ ನಷ್ಟು ರೆಡ್ ವೈನ್. ಅದು ಕೂಡಾ 22 ಲಕ್ಷ ಲೀಟರ್ ನಷ್ಟು ರೆಡ್ ವೈನ್ ರಸ್ತೆಯಲ್ಲಿ ಹರಿದಿದೆ.

ವೈನ್ ಒಯ್ಯುವ ಎರಡು ಕಂಟೈನರ್ ವಾಹನಗಳು ಸ್ಫೋಟಗೊಂಡಿದ್ದವು. ಪರಿಣಾಮವಾಗಿ ವಾಹನಗಳಲ್ಲಿದ್ದ ಲಕ್ಷಾಂತರ ಲೀಟರ್‌ನಷ್ಟು ರೆಡ್ ವೈನ್ ರಸ್ತೆಯಲ್ಲಿ ನದಿಯಂತೆ ಉಕ್ಕಿ ಹರಿಯಿತು. ಇದರಿಂದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಸಹ ಉಂಟಾಯಿತು. ರೆಡ್ ವೈನ್ ಹರಿಯುತ್ತಿದ್ದ ಸ್ಥಳಕ್ಕೆ ಹತ್ತಿರದಲ್ಲೇ ಸೆರ್ಟಿಮಾ ನದಿ ಇತ್ತು. ವೈನ್ ನದಿ ಸೇರಿದರೆ, ನೀರು ಕಲುಷಿತಗೊಳ್ಳಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ವೈನ್ ಹರಿಯುತ್ತಿದ್ದ ದಿಕ್ಕನ್ನು ಬದಲಾಯಿಸುವ ಕಾರ್ಯಾಚರಣೆ ನಡೆಸಿದರು.

ಘಟನೆಗೆ ಸಂಬಂಧಿಸಿದಂತೆ ಲೆವಿರಾ ಡಿಸ್ಟಿಲರಿ ಕ್ಷಮೆಯಾಚಿಸಿದೆ. ಆಗಿರುವ ಹಾನಿಯನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ. ಸ್ವಚ್ಛಗೊಳಿಸುವುದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಲೆವಿರಾ ಡಿಸ್ಟಿಲರಿ ತಿಳಿಸಿದೆ.

Sulekha