ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೆ ರೆಡ್ ಅಲರ್ಟ್ – ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಎಂದು ಉಸ್ತುವಾರಿ ಸಚಿವರಿಗೆ ಸಿಎಂ ಸಿದ್ದು ಸೂಚನೆ

ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೆ ರೆಡ್ ಅಲರ್ಟ್ – ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಎಂದು ಉಸ್ತುವಾರಿ ಸಚಿವರಿಗೆ ಸಿಎಂ ಸಿದ್ದು ಸೂಚನೆ

ಕರ್ನಾಟಕದ ಕರಾವಳಿ ಭಾಗಗಳಲ್ಲಿ ಜುಲೈ 10ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ.  ಇನ್ನು ಮಂಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಶಾಲೆಯೊಂದರ ಮೇಲ್ಛಾವಣಿ ಕುಸಿದಿದೆ. ಶಾಲೆಗೆ ರಜೆ ಇರುವ ಕಾರಣ ಯಾವುದೇ ಅನಾಹುತ ನಡೆದಿಲ್ಲ.

ಇದನ್ನೂ ಓದಿ: ಮಹಾಮಳೆಗೆ ತತ್ತರಿಸಿದ ಕರಾವಳಿ ಜಿಲ್ಲೆ: ಉಡುಪಿಯಲ್ಲಿ ಅಪಾಯದಲ್ಲಿದ್ದ ಕುಟುಂಬಗಳ ರಕ್ಷಣೆ

ಮಂಗಳೂರು ಹೊರವಲಯದ ತಲಪಾಡಿಯ ಶಾರದಾ ಸ್ಕೂಲ್ ಮತ್ತು ಕಾಲೇಜಿನ ಶೀಟ್ ಮೇಲ್ಛಾವಣಿ ಕುಸಿದುಬಿದ್ದಿದೆ. ಇದರಿಂದ ಶಾಲಾ ವಾಹನಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಶಾಲಾ, ಕಾಲೇಜುಗಳಿಗೆ ರಜೆ ನೀಡಿದ್ದರಿಂದ ಭಾರೀ ಅನಾಹುತ ತಪ್ಪಿದೆ. ದೇವಿನಗರದ ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನ  ಆರು ಅಂತಸ್ತಿನ ಶಾಲಾ ಕಟ್ಟಡದ  ಮೇಲೆ ಇತ್ತೀಚೆಗೆ ಶೀಟ್ ಹಾಕಲಾಗಿತ್ತು. ಇದೀಗ ಭಾರಿ ಗಾಳಿ-ಮಳೆಯಿಂದಾಗಿ ಶೀಟ್ ಛಾವಣಿ ಕುಸಿದುಬಿದ್ದಿದೆ.

ಉಡುಪಿ ಜಿಲ್ಲೆಯ ವಿವಿದೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ರಹ್ಮಾವರದಲ್ಲಿ ನೂರಾರು ಎಕರೆ ಜಮೀನು ಪ್ರದೇಶಗಳು ನೀರಿನಿಂದ ಆವೃತವಾಗಿದೆ. ಇನ್ನು ಮಳೆಯ ಆರ್ಭಟ ಹೆಚ್ಚಾಗಿದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ  ಕರಾವಳಿ ಭಾಗದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಮಾಂಕಾಳ ವೈದ್ಯ ಅವರಿಗೆ ಸಿಎಂ ಸೂಚನೆ ನೀಡಿದ್ದಾರೆ.

suddiyaana