ಕಲ್ಲೇಟಿನಿಂದ ಚೇತರಿಸಿಕೊಂಡ ಪರಮೇಶ್ವರ್ – ‘ರಾಜಕಾರಣದಲ್ಲಿ ರಕ್ತಸಿಕ್ತ ಅಧ್ಯಾಯ’ ಎಂದು ಕೈ ನಾಯಕರ ಆಕ್ರೋಶ
ಪ್ರಚಾರದ ವೇಳೆ ದುಷ್ಕರ್ಮಿಯೊಬ್ಬ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಪ್ರಚಾರದ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿಯಿಂದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಡೆಸಿದ್ದ.
ಕಲ್ಲೇಟು ಸರಿಯಾಗಿ ಬಿದ್ದಿದ್ದರಿಂದ ಕೂಡಲೇ ಜಿ. ಪರಮೇಶ್ವರ್ ಅವರಿಗೆ ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ತುಮಕೂರಿನ ಸಿದ್ದಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಪರಮೇಶ್ವರ್ ತಲೆಗೆ ಒಂದೂವರೆ ಇಂಚಿನಷ್ಟು ಗಾಯವಾಗಿದೆ.
ಇದನ್ನೂ ಓದಿ: ಕಾರು ಹತ್ತುವ ವೇಳೆ ಕುಸಿದು ಬಿದ್ದ ಸಿದ್ಧರಾಮಯ್ಯ
ಕಲ್ಲೆಸೆತ ವಿಚಾರ ತಿಳಿಯುತ್ತಿದ್ದಂತೆ ಸಿದ್ದಾರ್ಥನಗರದ ಪರಮೇಶ್ವರ್ ನಿವಾಸಕ್ಕೆ ಕಾರ್ಯಕರ್ತರು, ಅಭಿಮಾನಿಗಳ ದಂಡೇ ಹರಿದುಬಂದಿದೆ. ಬೆಂಗಳೂರಿನಲ್ಲಿದ್ದ ಪರಮೇಶ್ವರ್ ಪತ್ನಿ ಕನ್ನಿಕಾ ತಕ್ಷಣವೇ ಹೊರಟು ಬಂದಿದ್ದಾರೆ. ತಂಗನಹಳ್ಳಿ ಮಠದ ಶ್ರೀಗಳು, ಖಾರದಮಠದ ಶ್ರೀಗಳು ದೌಡಾಯಿಸಿ ಪರಮೇಶ್ವರ್ ಅವರ ಆರೋಗ್ಯ ವಿಚಾರಿಸಿದರು. ಎಸ್ಪಿ ರಾಹುಲ್ ಕುಮಾರ್ ಶಹಾಪೂರ್ ವಾಡ್ ಆಗಮಿಸಿ ಘಟನೆ ಬಗ್ಗೆ ಮಾಹಿತಿ ಪಡೆದರು. ಇನ್ನು ಘಟನೆಯನ್ನ ಖಂಡಿಸಿದ ಪರಮೇಶ್ವರ್ ಬೆಂಬಲಿಗರು ಪೊಲೀಸರ ವಿರುದ್ದ ಧಿಕ್ಕಾರ ಕೂಗಿ, ತಪ್ಪಿತಸ್ಥರನ್ನ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಕೂಡಾ ಘಟನೆ ಖಂಡಿಸಿದ್ದು, ಚುನಾವಣೆಗಳಲ್ಲಿ ಕಲ್ಲು ಎಸೆಯುವುದು, ಹೆದರಿಸುವುದು ಸರಿಯಲ್ಲ. ಒಬ್ಬ ಅಭ್ಯರ್ಥಿಗೆ ಕಲ್ಲು ಎಸೆಯುವುದು ಭಾಷಣಕ್ಕೆ ಅಡ್ಡಿ ಪಡಿಸುವುದನ್ನ ನಾನು ಖಂಡಿಸುತ್ತೇನೆ. ಹೀಗೆ ನಡೆದುಕೊಂಡರೇ ಅವರಿಗೆ ಮತದಾರರು ಒಲಿಯುವುದಿಲ್ಲ. ಪರಮೇಶ್ವರ್ ಅವರನ್ನು ಈ ಬಾರಿ ಬಹುಮತದಿಂದ ಜನ ಗೆಲ್ಲಿಸುತ್ತಾರೆ ಎಂದಿದ್ದಾರೆ. ಈ ಘಟನೆ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ‘ನಮ್ಮ ಪಕ್ಷದ ಹಿರಿಯ ನಾಯಕರಾದ ಡಾ ಜಿ ಪರಮೇಶ್ವರ್ ಅವರ ಮೇಲೆ ನಡೆದ ಹಲ್ಲೆಯ ಮೂಲಕ ಕರ್ನಾಟಕದ ರಾಜಕಾರಣದಲ್ಲಿ ರಕ್ತಸಿಕ್ತ ಅಧ್ಯಾಯ ಬರೆಯಲು ಹೊರಟಂತಿದೆ ನಮ್ಮ ಎದುರಾಳಿಗಳು. ಸೋಲಿನ ಭೀತಿಯಲ್ಲಿರುವವರ ಹೇಡಿತನದ ರಾಜಕೀಯ ಇದು. ಗಲಭೆಯ ಬೆದರಿಕೆ ಹಾಕಿದ್ದ ಅಮಿತ್ ಶಾ ಅವರು ಹಾಗೂ ಸಿಎಂ ಬೊಮ್ಮಾಯಿಯವರು ಈ ಘಟನೆಗೆ ಉತ್ತರದಾಯಿಗಳಾಗಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ‘ಡಾ.ಜಿ ಪರಮೇಶ್ವರ್ ಮೇಲೆ ಕಲ್ಲು ತೂರಾಟ ಪ್ರಕರಣ ಖಂಡನೀಯ. ಈ ರೀತಿಯ ಘಟನೆ ಎಲ್ಲೂ ನಡೆಯಬಾರದು. ಘಟನೆಗೆ ಕಾರಣ ಏನು ಎಂಬುದನ್ನು ತನಿಖೆ ಮಾಡಿಸಿ ಯಾರು ಈ ರೀತಿ ಮಾಡಿದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ.