ಸರ್ಕಾರಿ ಹಣದಲ್ಲಿ ಆಪ್ ಜಾಹಿರಾತು: 97 ಕೋಟಿ ರೂ ವಸೂಲಿಗೆ ಎಲ್ ಜಿ ಆದೇಶ
ಇದೊಂದು ಹೊಸ ಪ್ರೇಮಪತ್ರ ಎಂದು ಬಣ್ಣಿಸಿದ ಆಪ್
ನವದೆಹಲಿ: ಸರ್ಕಾರಿ ಜಾಹೀರಾತು ಹೆಸರಿನಲ್ಲಿ ಆಮ್ ಆದ್ಮಿ ಪಕ್ಷ, ರಾಜಕೀಯ ಜಾಹೀರಾತುಗಳಿಗೆ ಬಳಸಿರುವ 97 ಕೋಟಿ ರೂ. ಹಣವನ್ನು ವಸೂಲಿ ಮಾಡುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಮುಖ್ಯ ಕಾರ್ಯದರ್ಶಿಗಳಿಗೆ ಮಂಗಳವಾರ ಆದೇಶ ನೀಡಿದ್ದಾರೆ.
ದೆಹಲಿಯ ಆಡಳಿತಾರೂಢ ಆಪ್ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು, 2016ರ ದೆಹಲಿ ಹೈಕೋಟ್ ಆದೇಶವನ್ನು ಹಾಗೂ 2016ರ ಸರ್ಕಾರಿ ಜಾಹೀರಾತುಗಳಲ್ಲಿ ವಿಷಯ ನಿಯಂತ್ರಣ ಸಮಿತಿ ಆದೇಶಗಳನ್ನು ಉಲ್ಲಂಘಿಸಿದೆ ಎಂದು ಸಕ್ಸೇನಾ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪ್ರೇಮ ಸೌಧಕ್ಕೂ ತಟ್ಟಿದ ತೆರಿಗೆ ಬಿಸಿ –ತಾಜ್ ಮಹಲ್ ಗೆ ತೆರಿಗೆ ಪಾವತಿಸಲು 15 ದಿನಗಳ ಗಡವು!
ಎಫ್ಟಿನೆಂಟ್ ಗವರ್ನರ್ ಸರ್ಕಾರ ಪ್ರಕಟಿಸಿರುವ ಕೆಲವು ನಿರ್ದಿಷ್ಟ ಜಾಹೀರಾತುಗಳನ್ನು ಗುರುತಿಸಿ, ಇದು ಮಾರ್ಗಸೂಚಿಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಅಂತಹ ಜಾಹೀರಾತುಗಳಿಗೆ ಖರ್ಚು ಮಾಡಿರುವ ಮೊತ್ತವನ್ನು ಲೆಕ್ಕ ಹಾಕಲು ಹಾಗೂ ಆಪ್ ನಿಂದ ವಸೂಲಿ ಮಾಡುವಂತೆ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಆಪ್ ಮುಖ್ಯ ವಕ್ತಾರ ಸೌರವ್ ಭಾರದ್ವಾಜ್ ಈ ಬಗ್ಗೆ ಮಾತನಾಡಿದ್ದು, ಇದೊಂದು ಹೊಸ ಪ್ರೇಮಪತ್ರ ಎಂದು ಬಣ್ಣಿಸಿದ್ದಾರೆ. ನಮ್ಮ ಪಕ್ಷ ಇದೀಗ ರಾಷ್ಟ್ರೀಯ ಪಕ್ಷ. ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿದ್ದೇವೆ. ಇದು ಬಿಜೆಪಿ ನಾಯಕರನ್ನು ಗಲಿಬಿಲಿಗೊಳಿಸಿದೆ. ಲೆಫ್ಟಿನೆಂಟ್ ಗವರ್ನರ್ ಸಾಹಬ್ ಅವರು ಬಿಜೆಪಿಯ ನಿರ್ದೇಶನಗಳಿಗೆ ಅನುಗುಣವಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ. ಇದು ದೆಹಲಿ ಜನತೆಗೆ ಸಮಸ್ಯೆಯನ್ನು ತಂದೊಡ್ಡುತ್ತಿದೆ. ದೆಹಲಿಯ ಜನರು ಹೆಚ್ಚು ಚಿಂತಿತರಾಗಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ನಿರ್ದೇಶನ ಕಾನೂನಿನ ಪರವಾಗಿ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಇಂತಹ ಆದೇಶ ನೀಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್’ಗೆ ಇಲ್ಲ. ಅಂತಹ ನಿರ್ದೇಶನಗಳನ್ನು ನೀಡಲು ಅವರಿಗೆ ಸಾಧ್ಯವಿಲ್ಲ. ಈ ನಿರ್ದೇಶನಗಳು ಕಾನೂನಿನ ರೀತಿ ಇಲ್ಲ. ಇತರ ರಾಜ್ಯ ಸರ್ಕಾರಗಳು ಕೂಡ ಜಾಹೀರಾತುಗಳನ್ನು ನೀಡುತ್ತವೆ. ಬಿಜೆಪಿ ಆಡಳಿತ ನಡೆಸುತ್ತಿರುವ ವಿವಿಧ ರಾಜ್ಯ ಸರ್ಕಾರಗಳು ನಮ್ಮಂತೆಯೇ ಜಾಹೀರಾತುಗಳನ್ನು ನೀಡಿವೆ. ಜಾಹೀರಾತಿಗಾಗಿ ಅವರು ವ್ಯಯಿಸಿರುವ 22,000 ಕೋಟಿ ರೂ.ಗಳನ್ನು ವಸೂಲಿ ಮಾಡುವುದು ಯಾವಾಗ? ಅವರಿಂದ ಹಣ ವಸೂಲಿ ಮಾಡಿದ ದಿನ ನಾವೂ 97 ಕೋಟಿ ರೂ.ಗಳನ್ನು ಪಾವತಿ ಮಾಡುತ್ತೇವೆಂದು ತಿಳಿಸಿದ್ದಾರೆ.