ರಿಯಲ್ HERO ರಾಹುಲ್ – KL ಮೇಲಿನ ಪ್ರಯೋಗ ನಿಲ್ಲುತ್ತಾ?

ಕೆಎಲ್ ರಾಹುಲ್. ನಮ್ಮ ಕನ್ನಡದ ಹುಡ್ಗ. ನಮ್ಮನೆ ಆಟಗಾರ ಅಂತಾ ನಾವೇನು ಅವ್ರನ್ನ ಅಟ್ಟಕ್ಕೇರಿಸಿ ಮಾತ್ನಾಡ್ತಿಲ್ಲ. ಅವ್ರಲ್ಲಿರೋ ಟ್ಯಾಲೆಂಟ್ಗೆ ಇಡೀ ಭಾರತವೇ ತಲೆಬಾಗಿದೆ. ಅವ್ರ ಗುಣಕ್ಕೆ ಬಿಸಿಸಿಐ ಕೂಡ ಕ್ಲೀನ್ ಬೌಲ್ಡ್ ಆಗಿದೆ. ಅದಕ್ಕೇ ಅನ್ಸುತ್ತೆ ಕೆಎಲ್ ಅಂದ್ರೆ ಸಾಕು ಎಕ್ಸ್ಪೆರಿಮೆಂಟ್ಗೆ ಇಳಿದು ಬಿಡ್ತಾರೆ. ಆಸ್ಟ್ರೇಲಿಯಾ ವಿರುದ್ಧದ ಮ್ಯಾಚ್ನಲ್ಲಿ ಆ ಪ್ರಯೋಗ ಮತ್ತೊಮ್ಮೆ ಅಪ್ಲೈ ಮಾಡಿದ್ರು. ಬಟ್ ರಾಹುಲ್ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಬ್ಯಾಟ್ ಮೂಲಕವೇ ಉತ್ತರ ಕೊಟ್ರು. ನೀವು ನನ್ನ ಟಾಪ್ ಟು ಬಾಟಮ್ ಎಲ್ಲೇ ನಿಲ್ಸಿದ್ರೂ ನಾನು ಬೌನ್ಸ್ಬ್ಯಾಕ್ ಮಾಡ್ತೀನಿ. ನನ್ನಲ್ಲಿನ್ನೂ ಆ ಸ್ಟಾಮಿನಾ ಇದೆ ಅಂತಾ ಎಲ್ರಿಗೂ ತೋರಿಸಿದ್ರು.
ಇದನ್ನೂ ಓದಿ : ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು! – ಚಾಂಪಿಯನ್ಸ್ ಟ್ರೋಫಿ ಫೈನಲ್ಗೆ ಟೀಮ್ ಇಂಡಿಯಾ
ಟೀಂ ಇಂಡಿಯಾದ ವಿಕೆಟ್ ಕೀಪರ್ ಕಮ್ ಸ್ಟಾರ್ ಬ್ಯಾಟ್ಸ್ ಮನ್ ಆಗಿರೋ ಕೆಎಲ್ ರಾಹುಲ್ ಟೀಂ ಇಂಡಿಯಾದ ಮಿಡಲ್ ಆರ್ಡರ್ ನ ಮೇನ್ ಸ್ಟ್ರೆಂಥ್. ಅದ್ರಲ್ಲೂ ಒನ್ ಡೇನಲ್ಲಿ ನಂಬರ್ 5ನಲ್ಲಿ ಮೋಸ್ಟ್ ಎಫೆಕ್ಟೀವ್ ಪ್ಲೇಯರ್. ಅಂಕಿ ಅಂಶಗಳನ್ನ ತೆಗೆದು ನೋಡಿದ್ರೂ ಕೂಡ ನಮಗೆ ಗೊತ್ತಾಗುತ್ತೆ. ಭಾರತದ ಪರ 5ನೇ ಸ್ಲಾಟ್ನಲ್ಲಿ ಕೆಎಲ್ಗಿಂತ ಬೆಟರ್ ಆಗಿ ಬ್ಯಾಟ್ ಬೀಸಿರೋ ಮತ್ತೊಬ್ಬ ಪ್ಲೇಯರ್ ನಮ್ಗೆ ಸಿಗಲ್ಲ. ಬಟ್ ಈಗ ನಂಬರ್ 5 ಬ್ಯಾಟರ್ ಅಂದ್ರೆ ಇನ್ಮುಂದೆ ಕೆಎಲ್ ರಾಹುಲ್ ಇರಲ್ಲ ಅನ್ಸುತ್ತೆ. ಇತ್ತೀಚಿನ ಪಂದ್ಯಗಳಲ್ಲಿ ಕೆಎಲ್ ಸ್ಥಾನವನ್ನ ಅಕ್ಷರ್ ಪಟೇಲ್ ಆವರಿಸಿಕೊಂಡಿದ್ದಾರೆ. ಒಂದು, ಎರಡು ಅಂತಾ ಲೆಕ್ಕ ಹಾಕಿದ್ರೂ ಎಲ್ಲಾ ಪಂದ್ಯಗಳಲ್ಲೂ ಅಕ್ಷರ್ ಒನ್ ಡೌನ್ ಬ್ಯಾಟ್ಸ್ಮನ್ ಆಗಿ ಕ್ರೀಸ್ಗೆ ಬರ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ ಕಂಟಿನ್ಯೂ ಆಗ್ತಿದೆ.
ಒಂದು ದಶಕಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿರುವ ರಾಹುಲ್ ಅವರನ್ನು ಎಲ್ಲಾ ಕ್ರಮಾಂಕಗಳಲ್ಲೂ ಕಣಕ್ಕಿಳಿಸಲಾಗಿದೆ. ಇನ್ನೂ ಒಂದು ನಿರ್ದಿಷ್ಟ ಸ್ಥಾನದಲ್ಲಿ ರಾಹುಲ್ ತಮ್ಮ ಸ್ಲಾಟ್ ಭದ್ರಪಡಿಸಿಕೊಂಡಿಲ್ಲ. ಬಟ್ ಅವ್ರ ಬೆಸ್ಟ್ ಪರ್ಫಾಮೆನ್ಸ್ ಬಂದಿರೋದು 5ನೇ ಸ್ಲಾಟ್ನಲ್ಲಿ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 111 ಪಂದ್ಯಗಳಲ್ಲಿ 5 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಸ್ಲಾಟ್ನಲ್ಲಿ ರಾಹುಲ್ 56.47 ಕ್ಕಿಂತ ಹೆಚ್ಚು ಸರಾಸರಿ ಮತ್ತು 96.36ರ ಸ್ಟ್ರೈಕ್ ರೇಟ್ ನಲ್ಲಿ ರನ್ ಗಳಿಸಿರೋ ಏಕೈಕ ಪ್ಲೇಯರ್. ಏಕದಿನ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್‌ಗಳಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಐದನೇ ಕ್ರಮಾಂಕದಲ್ಲಿ ರಾಹುಲ್ 31 ಇನ್ನಿಂಗ್ಸ್ ಆಡಿದ್ದು 1,299 ರನ್‌ಗಳನ್ನು ಗಳಿಸಿದ್ದಾರೆ. ಒಟ್ಟಾರೆಯಾಗಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ 3000 ರನ್ ಕಂಪ್ಲೀಟ್ ಮಾಡಿದ್ದಾರೆ.
ಭಾರತ ಚಾಂಪಿಯನ್ಸ್ ಟ್ರೋಫಿಯ ಫಿನಾಲೆಗೆ ತಲುಪಿದೆ ನಿಜ. ಬಟ್ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯನ್ನ ಸೋಲನ್ನ ಈವರೆಗೂ ಭಾರತೀಯರಿಗೆ ಮರೆಯೋಕೆ ಸಾಧ್ಯವಾಗಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ ಆ ಸೋಲಿನ ಹೊಣೆಯನ್ನ ಕೆಎಲ್ ರಾಹುಲ್ ಮೇಲೆ ಹೊರಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್ ಫೈನಲ್ ನಲ್ಲಿ ಕೆಎಲ್ ರಾಹುಲ್ ನಿಧಾನಗತಿಯ ಇನಿಂಗ್ಸ್ ಆಡಿದ್ದನ್ನೇ ಟಾರ್ಗೆಟ್ ಮಾಡಿ ಪದೇ ಪದೇ ಸ್ವಾರ್ಥಿ ಎನ್ನುತ್ತಲೇ ಇದ್ದರು. ಌಕ್ಚುಲಿ ಆವತ್ತಿನ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಸಾಲು ಸಾಲು ವಿಕೆಟ್ ಬಿದ್ದಾಗ ರಾಹುಲ್ ಜವಾಬ್ದಾರಿಯುತ ಆಟ ಆಡ್ಲೇಬೇಕಿತ್ತು. ಅದಕ್ಕಾಗಿಯೇ ಸ್ಲೋರನ್ಸ್ ಕಲೆ ಹಾಕಿದ್ರು. 107 ಬಾಲ್ಗಳಲ್ಲಿ 66 ರನ್ ಗಳಿಸಿದ್ರು. ಆವತ್ತಿನ ಮ್ಯಾಚಲ್ಲಿ ರಾಹುಲ್ರೇ ಹೈಯೆಸ್ಟ್ ಸ್ಕೋರರ್ ಆಗಿದ್ರು. ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ರವೀಂದ್ರ ಜಡೇಜಾ ಎಲ್ರೂ ಸಿಂಗಲ್ ಡಿಜಿಟ್ಗೆ ಔಟ್ ಆಗಿದ್ರು. ಹೀಗಿದ್ರೂ ರಾಹುಲ್ರನ್ನೇ ಸೋಲಿಗೆ ಹೊಣೆ ಮಾಡಿದ್ರು. ಈ ಚಾಂಪಿಯನ್ಸ್ ಟ್ರೋಫಿಯಲ್ಲೂ ಕೆಎಲ್ ರಾಹುಲ್ ಯಾಕೆ, ರಿಷಭ್ ಪಂತ್ ರನ್ನು ಆಯ್ಕೆ ಮಾಡಬೇಕಿತ್ತು, ರಾಹುಲ್ ಸ್ಲೋ ಆಡ್ತಾರೆ ಅಂತೆಲ್ಲಾ ತಗಾದೆ ತೆಗೆದಿದ್ರು. ಬಟ್ ರಾಹುಲ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಆಸಿಸ್ ವಿರುದ್ಧದ ಸೆಮೀಸ್ ಪಂದ್ಯದಲ್ಲಿ ರಾಹುಲ್ ಶ್ರೀಕೃಷ್ಣನಂತೆ ಸಾರಥಿಯಾಗಿ ನಿಂತಿದ್ರು. ಪಂದ್ಯ ಗೆಲ್ಲಿಸುವ ಹೊಣೆ ಹೊತ್ತಿದ್ರು. ಅದನ್ನ ಯಶಸ್ವಿಯಾಗಿಯೂ ನಿಭಾಯಿಸಿದರು.