ದಿನಕ್ಕೆ ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರವೇ ನಿದ್ದೆ – ಆನೆಗಳ ಜೀವನ ಶೈಲಿ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ
ಭೂಮಿ ಮೇಲೆ ವಾಸಿಸುವ ದೈತ್ಯ ಜೀವಿ ಎಂದರೆ ಆನೆ. ಪ್ರಕೃತಿ ನೀಡಿರುವ ಅಪರೂಪದ ಕೊಡುಗೆಗಳಲ್ಲಿ ಈ ಪ್ರಾಣಿಯೂ ಒಂದು. ಒಂದು ಆನೆ ಮೃತಪಟ್ಟರೂ ಅದು ದೊಡ್ಡ ನಷ್ಟವೇ ಸರಿ.
ಇದನ್ನೂ ಓದಿ : ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ? – ವಾಟರ್ ಬಾಟಲ್, ಕಾಫಿ, ಟೀ ಗ್ಲಾಸ್ ನಿಂದಲೂ ಬರುತ್ತೆ ಕ್ಯಾನ್ಸರ್!
ಭೂಮಿ ಮೇಲೆ ವಾಸಿಸುವ ಅತಿ ದೊಡ್ಡ ಪ್ರಾಣಿಗಳು ಅಂದ್ರೆ ಆನೆಗಳು. ಆನೆಗಳು ಸುಮಾರು 2 ಸಾವಿರ ಕೆಜಿಯಿಂದ 6 ಸಾವಿರ ಕೆಜಿಗಳಷ್ಟು ತೂಕ ಹೊಂದಿರುತ್ತವೆ. ಹುಟ್ಟಿದ ಮರಿಯಾನೆಯೇ 100 ಕೆಜಿಗಳಷ್ಟು ತೂಗುತ್ತದೆ. ಸುಮಾರು 60 ರಿಂದ 70 ವರ್ಷಗಳ ಕಾಲ ಬದುಕುವ ಆನೆಗಳು ಅವುಗಳ ದೇಹದ ತೂಕವನ್ನು ಉಳಿಸಿಕೊಳ್ಳಲು ಸಾಕಷ್ಟು ಆಹಾರವನ್ನು ತಿನ್ನುತ್ತವೆ. ಒಂದು ವಯಸ್ಕ ಆನೆಗೆ ದಿನಕ್ಕೆ 200 ರಿಂದ 600 ಪೌಂಡ್ಗಳಷ್ಟು ಅಂದ್ರೆ 90 ರಿಂದ 270 ಕೆಜಿವರೆಗೆ ಆಹಾರ ಬೇಕಾಗುತ್ತದೆ. ಹುಲ್ಲು, ಎಲೆಗಳು, ಹಣ್ಣುಗಳು ಮತ್ತು ತೊಗಟೆ ಸೇರಿದಂತೆ ವಿವಿಧ ಸಸ್ಯಗಳನ್ನು ಸೇವಿಸುತ್ತವೆ. ಆನೆಯು ತಿನ್ನುವ ನಿರ್ದಿಷ್ಟ ಪ್ರಮಾಣದ ಆಹಾರವು ಅವುಗಳ ವಯಸ್ಸು, ಗಾತ್ರ ಮತ್ತು ಅವುಗಳ ಪರಿಸರದಲ್ಲಿ ಆಹಾರದ ಲಭ್ಯತೆ ಮೇಲೆ ಅವಲಂಬಿತವಾಗಿರುತ್ತದೆ. ಬರ ಅಥವಾ ಆಹಾರ ಕೊರತೆಯ ಸಮಯದಲ್ಲಿ ಆನೆಗಳು ಆಹಾರವನ್ನು ಹುಡುಕಲು ಬಹಳ ದೂರ ಪ್ರಯಾಣಿಸಬೇಕಾಗುತ್ತದೆ. ಹಾಗೇ ಆನೆಗಳಿಗೆ ನೀರಿನಲ್ಲಿ ಆಡುವುದು ಎಂದರೆ ಅಚ್ಚುಮೆಚ್ಚು. ಇತರೆ ಪ್ರಾಣಿಗಳಂತೆ ಆನೆಗಳಿಗೂ ಈಜುವ ಅಭ್ಯಾಸ ಹುಟ್ಟಿನಿಂದಲೇ ಬಂದಿರುತ್ತದೆ. ಭಾರೀ ಗಾತ್ರದ ಮೈಯನ್ನು ಹೊಂದಿದ್ದರೂ ಲೀಲಾಜಾಲವಾಗಿ ನೀರಿನಲ್ಲಿ ಈಜುತ್ತವೆ. ಹಿಂಡು ಹಿಂಡಾಗಿ ವಾಸಿಸೋದ್ರಿಂದ ಅತೀ ಹೆಚ್ಚು ನೀರು ಬೇಕಾಗುತ್ತದೆ. ದಿನಕ್ಕೆ ಕೇವಲ ನಾಲ್ಕು ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡುವ ಆನೆಗಳು ಸಾಮಾನ್ಯವಾಗಿ ಪ್ರತಿ ಗಂಟೆಗೆ 4 ಮೈಲಿಗಳಷ್ಟು ದೂರ ನಡೆಯುತ್ತವೆ. ಇನ್ನೂ ಬಿರುಸಾಗಿ ನಡೆದರೆ 15 ಮೈಲಿಗಳಷ್ಟು ನಡೆಯಬಹುದು.