ಉದ್ಘಾಟನಾ ಪದ್ಯದಲ್ಲೇ RCBಗೆ ಭರ್ಜರಿ ಜಯ – ಸ್ಮೃತಿ ಸೈನ್ಯದ ಮುಂದೆ ಮಕಾಡೆ ಮಲಗಿದ MI

ಉದ್ಘಾಟನಾ ಪದ್ಯದಲ್ಲೇ RCBಗೆ ಭರ್ಜರಿ ಜಯ – ಸ್ಮೃತಿ ಸೈನ್ಯದ ಮುಂದೆ ಮಕಾಡೆ ಮಲಗಿದ  MI

ನಡಿನ್‌ ಡಿ ಕ್ಲರ್ಕ್‌ ಅವರ ಆಲ್‌ರೌಂಡರ್‌ ಆಟದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್‌  ಎದುರು ಉದ್ಘಾಟನಾ ಪಂದ್ಯದಲ್ಲಿ ಮೂರು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಮೂಲಕ ಸ್ಮೃತಿ ಮಂಧಾನ ನಾಯಕತ್ವದ ಆರ್‌ಸಿಬಿ, 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿತು. ಆರ್‌ಸಿಬಿ ತಂಡದ ಗೆಲುವಿನ ಶ್ರೇಯ ಡಿ ಕ್ಲರ್ಕ್‌ಗೆ ಸಲ್ಲಬೇಕು. ಏಕೆಂದರೆ ಬೌಲಿಂಗ್‌ನಲ್ಲಿ 4 ವಿಕೆಟ್‌ ಹಾಗೂ ಬ್ಯಾಟಿಂಗ್‌ ಮ್ಯಾಚ್‌ ವಿನ್ನಿಂಗ್‌ 63 ರನ್‌ಗಳನ್ನು ಬಾರಿಸಿದರು. ಅದರಲ್ಲಿಯೂ ಕೊನೆಯ ಓವರ್‌ನಲ್ಲಿ ಎರಡು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳೊಂದಿಗೆ ಆರ್‌ಸಿಬಿಯನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಬಾಜನರಾದರು.

ಇದನ್ನೂ ಓದಿ: ಬಾಂಗ್ಲಾ ಬೆನ್ನಿಗೆ ನಿಂತ ಪಾಕ್ – ಅಡಕತ್ತರಿಯಲ್ಲಿ ಸಿಲುಕಿತಾ BCCI?

ಇಲ್ಲಿನ ಡಿ ವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಮುಂಬೈ ನೀಡಿದ್ದ 155 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಆರ್‌ಸಿಬಿ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಗ್ರೇಸ್‌ ಹ್ಯಾರಿಸ್‌ ಅವರು 40 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಉತ್ತಮ ಆರಂಭ ತಂದುಕೊಟ್ಟಿದ್ದರು. ಆದರೆ, ಸ್ಮೃತಿ (18) ಹಾಗೂ ಹ್ಯಾರಿಸ್‌ (25) ಅವರು ಹಠಾತ್‌ ವಿಕೆಟ್‌ ಒಪ್ಪಿಸಿದ ಬಳಿಕ ಆರ್‌ಸಿಬಿ, ಡಯಲಾನ ಹೇಮಲತಾ, ರಿಚಾ ಘೋಷ್‌ ಹಾಗೂ ರಾಧ ಯಾದವ್‌ ಅವರ ವಿಕೆಟ್‌ಗಳನ್ನು ತ್ವರಿತವಾಗಿ ಕಳೆದುಕೊಂಡಿತು. ಆ ಮೂಲಕ ಆರ್‌ಸಿಬಿ 65 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ನಡಿನ್‌ ಡಿ ಕ್ಲರ್ಕ್‌ ಅಬ್ಬರ

ಬಹುಬೇಗ 5 ವಿಕೆಟ್‌ ಕಳೆದುಕೊಂಡು ಬಳಿಕ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಆರ್‌ಸಿಬಿ ಕಳೆದುಕೊಳ್ಳಲಿದೆ ಎಂದೇ ಭಾವಿಸಲಾಗಿತ್ತು. ಆದರೆ ನಡಿನ್‌ ಡಿ ಕ್ಲರ್ಕ್‌ ತಮ್ಮ ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಪಂದ್ಯದ ದಿಕ್ಕನ್ನು ಬದಲಿಸಿದರು. ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ನಡಿನ್‌, ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಆಡಿದ 44 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ ಅಜೇಯ 63 ರನ್‌ ಗಳಿಸಿದರು. ಅದರಲ್ಲಿಯೂ ವಿಶೇಷವಾಗಿ ಕೊನೆಯ ಎರಡು ಓವರ್‌ನಲ್ಲಿ ಆರ್‌ಸಿಬಿಗೆ 29 ರನ್‌ ಅಗತ್ಯವಿತ್ತು ಹಾಗೂ ಕೊನೆಯ ಓವರ್‌ನಲ್ಲಿ 18 ರನ್‌ ಅಗತ್ಯವಿತ್ತು. ಈ ವೇಳೆ ನಡಿನ್‌ ಡಿ ಕ್ಲರ್ಕ್‌ ಎರಡು ಸಿಕ್ಸರ್‌ ಹಾಗೂ ಎರಡು ಬೌಂಡರಿಗಳನ್ನು ಬಾರಿಸಿ ಆರ್‌ಸಿಬಿಗೆ ಕೊನೆಯ ಎಸೆತದಲ್ಲಿ ಗೆಲುವು ತಂದುಕೊಟ್ಟರು. ಕೊನೆಯ ಅರುಂಧತಿ ರೆಡ್ಡಿ 20 ರನ್‌ಗಳ ಕೊಡುಗೆಯನ್ನು ನೀಡಿದ್ದರು.

Kishor KV