ಸಂತೋಷದ ಕ್ಷಣ ದುರಂತವಾಯ್ತು! – ಆರ್‌ಸಿಬಿ ಫ್ಯಾನ್ಸ್‌ ಗೆ ಕೊಹ್ಲಿ ಭಾವುಕ ಸಂದೇಶ!

ಸಂತೋಷದ ಕ್ಷಣ ದುರಂತವಾಯ್ತು! – ಆರ್‌ಸಿಬಿ ಫ್ಯಾನ್ಸ್‌ ಗೆ ಕೊಹ್ಲಿ ಭಾವುಕ ಸಂದೇಶ!

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಕಂಡಿದೆ. ಆದ್ರೆ ಆ ಗೆಲುವಿನ ಖುಷಿ ಹೆಚ್ಚು ಸಮಯ ಇರ್ಲಿಲ್ಲ. ಬೆಂಗಳೂರಿನಲ್ಲಿ ನಡೆದ RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಅಸುನೀಗಿದ್ದರು. ಈ ದುರಂತದಿಂದಾಗಿ ಆರ್‌ಸಿಬಿ ತಂಡದಲ್ಲಿ ನೀರವ ಮೌನ ಆವರಿಸಿತ್ತು. ಇತ್ತೀಚೆಗೆ ಒಂದು ಪೋಸ್ಟ್‌ ಮಾಡಿದ ಆರ್‌ಸಿಬಿ ಫ್ರಾಂಚೈಸಿ, ಆರ್‌ಸಿಬಿ ಕೇರ್ಸ್  ಮೂಲಕ ಒಂದಷ್ಟು ಸಾಮಾಜಿಕ ಕಾರ್ಯಕ್ಕೆ ಕೈ ಹಾಕಲಿದೆ ಎಂದು ತಿಳಿಸಿತ್ತು. ಇದೀಗ ಕಾಲ್ತುಳಿತ ದುರಂತಕ್ಕೆ ವಿರಾಟ್ ಕೊಹ್ಲಿ ಕೂಡ ಖೇದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಚಿವ ಜಮೀರ್‌ಗೆ ದುಡ್ಡು ಕೊಟ್ಟವರಿಗೆ ಸಂಕಷ್ಟ – ಕೆಜಿಎಫ್ ಬಾಬುಗೆ ಲೋಕಾಯುಕ್ತ ನೋಟಿಸ್

ಜೂನ್ 3 ರಂದು ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಆರ್​ಸಿಬಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಗೆಲುವಿನ ಬೆನ್ನಲ್ಲೇ ಜೂನ್ 4ರಂದು ಬೆಂಗಳೂರಿನಲ್ಲಿ ಸಂಭ್ರಮಾಚರಣೆಯನ್ನು ಏರ್ಪಡಿಸಲಾಗಿತ್ತು. ಆದ್ರೆ ಜೂನ್ 4 ಎಂಬುದು ಆರ್‌ಸಿಬಿ ಪಾಲಿಗೆ ಕಪ್ಪುಚುಕ್ಕೆಯಾಗಿದೆ.  ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಈ ಸಂಭ್ರಮಾಚರಣೆಯ ವೇಳೆ ಉಂಟಾದ ಕಾಲ್ತುಳಿತದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 11 ಅಭಿಮಾನಿಗಳು ಮೃತಪಟ್ಟಿದ್ದರು. ಘಟನೆ ನಡೆದು ಮೂರು ತಿಂಗಳಾಗ್ತಾ ಬಂತು. ಇದೀಗ ವಿರಾಟ್‌ ಕೊಹ್ಲಿ ಆರ್‌ಸಿಬಿ ಅಭಿಮಾನಿಗಳಿಗೆ ಭಾವುಕ ಸಂದೇಶ ಕಳುಹಿಸಿದ್ದಾರೆ. ಇದನ್ನ ಆರ್‌ಸಿಬಿ ತಂಡ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್‌ ಮಾಡಿದೆ.

ಜೂನ್ 4 ರಂದು ನಡೆದ ಹೃದಯವಿದ್ರಾವಕ ಘಟನೆಯನ್ನು ನಾವು ಜೀವನದಲ್ಲೇ ನಿರೀಕ್ಷಿಸಿರಲಿಲ್ಲ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿತ್ತು.. ಆದರೆ ದುರಂತವಾಗಿ ಮಾರ್ಪಟ್ಟಿತು. ನಾವು ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ. ಒಟ್ಟಾಗಿ, ನಾವು ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯುತ್ತೇವೆ ,” ಎಂದು ವಿರಾಟ್ ಹೇಳಿದ್ದನ್ನು ಉಲ್ಲೇಖಿಸಿ ಆರ್​ಸಿಬಿ ಪೋಸ್ಟ್​ವೊಂದನ್ನು ಹಂಚಿಕೊಂಡಿದೆ.

Shwetha M