ಸ್ವಪ್ನಿಲ್ ಸಿಂಗ್ ಗೆ ಯಾಕಿಲ್ಲ ಚಾನ್ಸ್? – RCB ಲಕ್ಕಿ ಸ್ಟಾರ್ ಬೆಂಚ್ ಗಷ್ಟೇನಾ?

2025ರ ಐಪಿಎಲ್ ಸ್ಟಾರ್ಟ್ ಆಗಿ 2 ವಾರ ಕೂಡ ಕಳ್ದಿಲ್ಲ. ಅಷ್ಟ್ರಲ್ಲಾಗ್ಲೇ ಸಾಕಷ್ಟು ಯುವ ಆಟಗಾರರು ಹಲ್ಚಲ್ ಎಬ್ಬಿಸಿದ್ದಾರೆ. ಡೆಬ್ಯೂ ಮ್ಯಾಚ್ಗಳಲ್ಲೇ ದಾಖಲೆಗಳನ್ನ ಬರೆದಿದ್ದಾರೆ. ಅದ್ರಲ್ಲೂ ಮುಂಬೈ ತಂಡದಲ್ಲಿ ವಿಗ್ನೇಶ್ ಪುತ್ತೂರ್ ಮತ್ತು ಅಶ್ವನಿ ಕುಮಾರ್ ಬೌಲಿಂಗ್ ಸ್ಪೆಲ್ ಅಂತೂ ಅಲ್ಟಿಮೇಟ್. ಈ ಯಂಗ್ಸ್ಟರ್ಸ್ ಬಳಿ ಇಂಥಾ ಟ್ಯಾಲೆಂಟ್ ಇದೆ ಅಂತಾ ಗೊತ್ತಾಗಿದ್ದೇ ಅವ್ರಿಗೆ ಚಾನ್ಸ್ ಕೊಟ್ಟಿದ್ದಕ್ಕಾಗಿ. ಬಟ್ ನಮ್ಮ ಆರ್ಸಿಬಿಯಲ್ಲಿ ಈ ಕೆಲ್ಸ ಆಗ್ತಾ ಇಲ್ಲ. ಅಪ್ಪ ಹಾಕಿದ ಆಲದ ಮರ ಅಂತಾ ಸ್ಟಾರ್ ಆಟಗಾರರನ್ನಷ್ಟೇ ಕಣಕ್ಕಿಳಿಸ್ತಾರೆ. ಬ್ಯಾಕ್ ಟು ಬ್ಯಾಕ್ ಫ್ಲ್ಯಾಪ್ ಶೋ ತೋರಿಸಿದ್ರೂ ಅವ್ರನ್ನಂತೂ ಕೈಬಿಡಲ್ಲ. ಹೊಸಬರು ಬೆಂಚ್ ಕಾಯೋದು ತಪ್ಪಲ್ಲ. ಸದ್ಯ ಸ್ವಪ್ನಿಂಗ್ ಸಿಂಗ್ ವಿಚಾರದಲ್ಲೂ ಇದೇ ಆಗ್ತಿದೆ.
ಇದನ್ನೂ ಓದಿ : ತವರಿನಲ್ಲೇ ಥಂಡಾ ಹೊಡೆದ RCB – ಬೆಂಗಳೂರು ಸೋಲಿಗೆ ಇಲ್ಲಿವೆ ಕಾರಣ!
ಕಳೆದ ನವೆಂಬರ್ ನಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಅನ್ಕ್ಯಾಪ್ಟ್ ಆಲ್ರೌಂಡರ್ ಸ್ವಪ್ನಿಲ್ ಸಿಂಗ್ ಅವರನ್ನು ಆರ್ ಸಿಬಿ ಫ್ರಾಂಚೈಸಿ ಖರೀದಿ ಮಾಡಿತ್ತು. ಆರ್ಟಿಎಂ ಕಾರ್ಡ್ ಬಳಸುವ ಮೂಲಕ 50 ಲಕ್ಷಕ್ಕೆ ಖರೀದಿ ಮಾಡಿತ್ತು. ಆರ್ ಸಿಬಿ ಪಾಲಿಗೆ ಸ್ವಪ್ನಿಲ್ ನಿಜಕ್ಕೂ ಅದೃಷ್ಟವಂತ. ಈತ ತಂಡಕ್ಕೆ ಎಂಟ್ರಿಕೊಟ್ಟಿದ್ದೇ, ಕೊಟ್ಟಿದ್ದು ಆರ್ಸಿಬಿ ಸೋಲು ಅನ್ನೋದನ್ನೇ ನೋಡಿರಲಿಲ್ಲ. ಕಳೆದ ಸೀಸನ್ನಲ್ಲಿ ಸತತ 7 ಪಂದ್ಯಗಳ ದಿಗ್ವಿಜಯದ ಹಿಂದೆ ಈ ಲಕ್ಕಿಮ್ಯಾನ್ ಶ್ರಮ ಜಾಸ್ತಿ ಇತ್ತು. ಫಸ್ಟ್ ಆಫ್ ನಲ್ಲಿ ಆರ್ ಸಿಬಿ ಬ್ಯಾಕ್ ಟು ಬ್ಯಾಕ್ ಸೋಲನ್ನು ಅನುಭವಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಸೆಕೆಂಡ್ ಆಫ್ ನಲ್ಲೇ ಎಲ್ಲಾ ಪಂದ್ಯಗಳನ್ನ ಗೆದ್ರಷ್ಟೇ ಪ್ಲೇಆಫ್ಗೆ ಏರೋಕೆ ಅವಕಾಶ ಇತ್ತು. ಇಂಥಾ ಟೈಮಲ್ಲೇ ತಂಡಕ್ಕೆ ಎಂಟ್ರಿ ಕೊಟ್ಟಿದ್ದು ಸ್ವಪ್ನಿಲ್ ಸಿಂಗ್. ಸ್ವಪ್ನಿಲ್ ಟೀಂ ಸೇರಿದ ಮೇಲೆ ಒಂದೇ ಒಂದು ಮ್ಯಾಚ್ ಸೋತಿರಲಿಲ್ಲ. ಪ್ಲೇಆಫ್ನಲ್ಲಿ ಆರ್ಆರ್ ವಿರುದ್ಧದ ಸೋಲಿಗೂ ಮುನ್ನ ಸತತ 6 ಪಂದ್ಯಗಳನ್ನ ಗೆದ್ದು ಬೀಗಿದ್ರು. ಸೋ ಸ್ವಪ್ನಿಲ್ ಆರ್ ಸಿಬಿ ಪಾಲಿಗೆ ಲಕ್ಕಿ ಸ್ಟಾರ್ ಆಗಿದ್ರು. ಆರ್ ಸಿಬಿ ಪರ 7 ಮ್ಯಾಚ್ ಆಡಿದ್ದ ಸ್ವಪ್ನಿಲ್ 6 ವಿಕೆಟ್ ಪಡೆದಿದ್ರು. ಹಾಗೇ 37 ರನ್ ಕಲೆ ಹಾಕಿದ್ರು.
ಸ್ವಪ್ನಿಲ್ ಸಿಂಗ್ ನಿಜಕ್ಕೂ ಪ್ರತಿಭಾವಂತ ಆಟಗಾರ. 14 ವರ್ಷಕ್ಕೆ ಬರೋಡಾ ತಂಡಕ್ಕೆ ಆಡಿದ ಈತ ವಿರಾಟ್ ಕೊಹ್ಲಿ ಜೊತೆ ಡ್ರೆಸ್ಸಿಂಗ್ ರೂಮ್ ಕೂಡ ಹಂಚಿಕೊಂಡಿದ್ದರು. 2017-18ರ ರಣಜಿ ಪಂದ್ಯಾವಳಿಯಲ್ಲಿ ಸ್ವಪ್ನಿಲ್ ಸಿಂಗ್ ಆರು ಪಂದ್ಯಗಳಲ್ಲಿ 565 ರನ್ ಗಳಿಸಿದ್ದರು. 2014-15 ರ ಸೈಯದ್ ಮುಷ್ತಾಕ್ ಅಲಿ ಪಂದ್ಯಾವಳಿಯಲ್ಲಿ, ಸ್ವಪ್ನಿಲ್ ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಸೌರಾಷ್ಟ್ರ ತಂಡಕ್ಕೆ ಆಘಾತ ನೀಡಿದ್ದರು. ಐಪಿಎಲ್‌ನಲ್ಲಿ ಸ್ವಪ್ನಿಲ್ ಸಿಂಗ್ ಮೊದಲು ಮುಂಬೈ ಇಂಡಿಯನ್ಸ್ ತಂಡಕ್ಕೆ ಹರಾಜಾಗಿದ್ದರು, ಆದರೆ ಒಂದೂ ಪಂದ್ಯವನ್ನು ಆಡುವ ಅವಕಾಶ ಅವರಿಗೆ ಸಿಕ್ಕಲಿಲ್ಲ. 2016ರ ಐಪಿಎಲ್ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಈಗಿನ ಪಂಜಾಬ್ ಕಿಂಗ್ಸ್ ₹10 ಲಕ್ಷಕ್ಕೆ ಅವರನ್ನು ಖರೀದಿ ಮಾಡಿತು. ಒಂದೇ ಒಂದು ಪಂದ್ಯವನ್ನ ಆಡಿದ್ರು. ಆ ಪಂದ್ಯದಲ್ಲಿ ಎಂಎಸ್ ಧೋನಿ ಅವರ ವಿಕೆಟ್ ಪಡೆದಿದ್ರು. ಐಪಿಎಲ್‌ನಲ್ಲಿ ಇದೇ ಅವ್ರ ಫಸ್ಟ್ ವಿಕೆಟ್. 2023 ರ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾದರು. ಆದರೆ ರವಿ ಬಿಷ್ಣೋಯ್, ಕೃನಾಲ್ ಪಾಂಡ್ಯರಂತಹ ಸ್ಪಿನ್ನರ್ ಗಳು ತಂಡಲ್ಲಿದ್ದ ಕಾರಣ ಅವರಿಗೆ ಅವಕಾಶ ಸಿಗಲೇ ಇಲ್ಲ, ಆದರೆ ಆರ್ ಸಿಬಿ ಕೋಚ್ ಆಂಡಿ ಫ್ಲವರ್ ರಿಂದಾಗಿ 2024 ಐಪಿಎಲ್ ಹರಾಜಿಗೆ ಮುನ್ನ ಬೆಂಗಳೂರು ಟೀಂ ಸೇರಿಕೊಂಡಿದ್ರು.