ಕೆಕೆಆರ್ ವಿರುದ್ಧ ಗೆದ್ದ ಆರ್‌ಸಿಬಿ – ನಂಬರ್ ಒನ್ ಸ್ಥಾನಕ್ಕೇರಿದ ರಜತ್ ಪಡೆ

ಆರ್‌ಸಿಬಿ ಮತ್ತು ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ರಜತ್ ಪಡೆ ಗೆದ್ದು ಬೀಗಿದೆ. ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಬೆಂಗಳೂರು ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
ಇದನ್ನೂ ಓದಿ:MIಗೆ ಬೇಡವಾದ್ರಾ ಹಾರ್ದಿಕ್? – ಫಿಟ್ ಇದ್ರೂ ಇಂಜುರಿ ನೆಪ ಹೇಳಿದ್ರಾ?
ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಆರ್‌ಸಿಬಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮತ್ತೆ ನಂಬರ್ 1 ಸ್ಥಾನಕ್ಕೇರಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಕಳೆದ ಪಂದ್ಯದ ಹೀರೋ ಫಿನ್ ಅಲೆನ್ 8 ಎಸೆತಗಳಲ್ಲಿ 18 ರನ್‌ಗೆ ಔಟಾದರು. ಅಜಿಂಕ್ಯಾ ರಹಾನೆ 13 ಎಸೆತಗಳಲ್ಲಿ 19 ರನ್ಗಳಿಸಿ ಪವರ್ ಪ್ಲೇ ಒಳಗೆ ವಿಕೆಟ್ ಒಪ್ಪಿಸಿದರು. ಆ ನಂತರ ಕ್ಯಾಮರೂನ್ ಗ್ರೀನ್ 24 ಎಸೆತಗಳಲ್ಲಿ 32 ರನ್ಗಳಿಸಿದರು. ರಘುವಂಶಿ 46 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳ ಸಹಿತ 71 ರನ್ ಗಳಿಸಿದರು. ರಿಂಕು ಸಿಂಗ್ 29 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ ಅಜೇಯ 49 ರನ್ಗಳಿಸಿ ತಂಡದ ಮೊತ್ತವನ್ನ 192ಕ್ಕೆ ಕೊಂಡೊಯ್ದರು.
193 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್‌ಸಿಬಿ 19.1 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಆರ್‌ಸಿಬಿ ಫ್ಯಾನ್ಸ್ ಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಭವ ನೋಡುವ ಚಾನ್ಸ್ ಸಿಕ್ಕಿತು. ಅಜೇಯ 105 ರನ್ ಸಿಡಿಸುವ ಮೂಲಕ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕನ್ನಡಿಗ ದೇವದತ್ ಪಡಿಕ್ಕಲ್ 39 ರನ್ಗಳಿಸಿ ಕೊಹ್ಲಿಗೆ ಸಾಥ್ ನೀಡಿದರು. ಬೆಥೆಲ್ ಸತತ 6ನೇ ಪಂದ್ಯದಲ್ಲಿ 30ರ ಗಡಿ ದಾಟಲು ವಿಫಲರಾಗಿದ್ದಾರೆ. ಬೆಥೆಲ್ ಔಟಾದ ನಂತರ ಕೊಹ್ಲಿ ಜೊತೆ ಸೇರಿದ ಕನ್ನಡಿಗ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 2ನೇ ವಿಕೆಟ್ಗೆ 92 ರನ್ಗಳ ಜೊತೆಯಾಟ ನೀಡಿದರು. ಪಡಿಕ್ಕಲ್ 27 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 39 ರನ್ಗಳಿಸಿ 14ನೇ ಓವರ್ನಲ್ಲಿ ಕಾರ್ತಿಕ್ ತ್ಯಾಗಿಗೆ ವಿಕೆಟ್ ಒಪ್ಪಿಸಿದರು. ಈ ಜೋಡಿ ಬ್ರೇಕ್ ಆಗುತ್ತಿದ್ದಂತೆ ಆರ್‌ಸಿಬಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. 4ನೇ ಕ್ರಮಾಂಕದಲ್ಲಿ ಬಂದ ನಾಯಕ ರಜತ್ ಪಾಟೀದಾರ್ 8 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 11 ರನ್ಗಳಿಸಿ ಸುನಿಲ್ ನರೈನ್ಗೆ ವಿಕೆಟ್ ಒಪ್ಪಿಸಿದರು. ಸ್ಫೋಟಕ ಆಟಗಾರ ಟಿಮ್ ಡೇವಿಡ್ ಕೇವಲ 2 ರನ್ಗಳಿಸಿ ಕಾರ್ತಿಕ್ ತ್ಯಾಗಿ ಬೌಲಿಂಗ್ನಲ್ಲಿ ಕನ್ನಡಿಗ ಮನೀಶ್ ಪಾಂಡೆ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಆದರೆ ಕೊಹ್ಲಿ ಹಾಗೂ ಜಿತೇಶ್ ಶರ್ಮಾ 18 ರನ್ಗಳ ಜೊತೆಯಾಟ ನಡೆಸಿ ತಂಡವನ್ನ ಗೆಲುವಿನ ಗಡಿದಾಟಿಸಿದರು.
ಆರ್‌ಸಿಬಿ 8ನೇ ಗೆಲವು ಕಂಡಿದ್ದು, 12 ಪಂದ್ಯಗಳನ್ನಾಡಿರುವ ಆರ್‌ಸಿಬಿ 16 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಇದೀಗ ಆರ್‌ಸಿಬಿ ತನ್ನ ಪ್ಲೇ ಆಫ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ.

ನೋಡಿರಿ

