IPL ರೂಲ್ಸ್.. RCBಗೆ ಶಾಕ್ – 3+1 ಸೂತ್ರದಲ್ಲಿ ಉಳಿಯೋದ್ಯಾರು?
ಕೊಹ್ಲಿ ಸೇಫ್.. ಡೇಂಜರ್ ಝೋನ್ ಯಾರು?

IPL ರೂಲ್ಸ್.. RCBಗೆ ಶಾಕ್ – 3+1 ಸೂತ್ರದಲ್ಲಿ ಉಳಿಯೋದ್ಯಾರು?ಕೊಹ್ಲಿ ಸೇಫ್.. ಡೇಂಜರ್ ಝೋನ್ ಯಾರು?

2025ರ ಐಪಿಎಲ್​ಗೆ ಇನ್ನೂ ಸಾಕಷ್ಟು ಟೈಂ ಇದೆ. ಬಟ್ ಪ್ರಿಪರೇಷನ್ಸ್ ಮಾತ್ರ ಈಗಿನಿಂದಲೇ ಸ್ಟಾರ್ಟ್ ಆಗಿದೆ. ಕೆಲ ಫ್ರಾಂಚೈಸಿಗಳಂತೂ ಈಗಾಗ್ಲೇ ಕೋಚ್​, ಮೆಂಟರ್ಸ್ ಸೇರಿದಂತೆ ಹಳಬರಿಗೆ ಕೊಕ್ ಕೊಟ್ಟು ಹೊಸಬರನ್ನ ವೆಲ್ಕಂ ಮಾಡ್ತಿವೆ. 18ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ತಂಡಗಳಲ್ಲಿ ಯಾರನ್ನ ಉಳಿಸಿಕೊಳ್ಬೇಕು ಯಾರನ್ನ ಹರಾಜಿಗೆ ಬಿಡ್ಬೇಕು ಅನ್ನೋ ಲೆಕ್ಕಾಚಾರ ನಡೆಸ್ತಿವೆ. ಇನ್ನು ಇದುವರೆಗೂ ಒಮ್ಮೆಯೂ ಚಾಂಪಿಯನ್ ಪಟ್ಟಕ್ಕೇರದ ರಾಯಲ್ ಚಾಲೆಂಜರ್ಸ್  ಬೆಂಗಳೂರು ತಂಡ ಕೂಡ ನೆಕ್ಸ್​​ಟ್ ಸೀಸನ್​ಗೆ ಕಪ್ ಗೆಲ್ಲೋಕೆ ಈಗಿನಿಂದಲೇ ರಣತಂತ್ರ ಹೆಣೀತಿದೆ. ಅದ್ರಂತೆ ಮೆಗಾ ಆಕ್ಷನ್​ನಲ್ಲಿ ನಾಲ್ವರು ಆಟಗಾರರನ್ನಷ್ಟೇ ಉಳಿಸಿಕೊಂಡು ಉಳಿದ ಆಟಗಾರರನ್ನ ಕೈ ಬಿಡೋ ಚಿಂತನೆಯಲ್ಲಿದೆ. ಹಾಗಾದ್ರೆ ಆರ್​ಸಿಬಿ ಫ್ರಾಂಚೈಸಿ ಉಳಿಸಿಕೊಳ್ಬೇಕು ಅಂತಿರೋ ಆ ಆಟಗಾರರು ಯಾರು? ಯಾವ ಕಾರಣಕ್ಕೆ? ಯಾರ್ಯಾರಿಗೆ ಗೇಟ್ ಪಾಸ್ ಸಿಗುತ್ತೆ? 2025ರ ಟೂರ್ನಿಗೆ ಬೆಂಗಳೂರು ತಂಡ ಸೇರಿಕೊಳ್ಳೋ ಪ್ಲೇಯರ್ಸ್ ಯಾರು ಅನ್ನೋ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಲಂಕಾ ಬೇಟೆಗೆ ಬಂತು ಹೊಸ ಜೆರ್ಸಿ – ಡಬಲ್ ಸ್ಟಾರ್ ಜೆರ್ಸಿಯ ಸಂಕೇತವೇನು? 

17 ವರ್ಷ.. ಬರೋಬ್ಬರಿ 17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೂರು ತಂಡಗಳು ಈವರೆಗೂ ಒಮ್ಮೆಯೂ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಕ್ಯಾಪಿಟಲ್ಸ್ ಹಾಗೇ ಪಂಜಾಬ್ ಕಿಂಗ್ಸ್​ಗೆ ಚಾಂಪಿಯನ್ ಪಟ್ಟಕ್ಕೇರೋ ಕನಸು ನನಸಾಗಿಲ್ಲ. ಅದ್ರಲ್ಲೂ ವಿರಾಟ್ ಕೊಹ್ಲಿಯಂಥ ದಿಗ್ಗಜ ಆಟಗಾರನನ್ನ ಹೊಂದಿರೋ ನಮ್ಮ ಬೆಂಗಳೂರು ತಂಡ ಒಮ್ಮೆಯಾದ್ರೂ ಟ್ರೋಫಿ ಗೆಲ್ಬೇಕು ಅನ್ನೋದು ಕೋಟಿ ಕೋಟಿ ಕನ್ನಡಿಗರ ಮಹಾಕನಸು. ಬ್ಯಾಡ್​ಲಕ್ ಅಂದ್ರೆ 17 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ಪ್ರವೇಶಿಸಿದ್ರೂ ಬೆಂಗಳೂರು ತಂಡಕ್ಕೆ ಒಮ್ಮೆಯೂ ಟೈಟಲ್ ಎತ್ತಿ ಹಿಡಿಯೋಕೆ ಆಗಿಲ್ಲ. 2024ರ ಐಪಿಎಲ್ ಟೂರ್ನಿಯಲ್ಲಂತೂ ಆರ್​ಸಿಬಿಯೇ ಕಪ್ ಗೆಲ್ಲುತ್ತೆ ಅಂತಾ ಫ್ಯಾನ್ಸ್ ಫುಲ್ ಜೋಶ್​ನಲ್ಲಿದ್ರು. ಸೆಕೆಂಡ್ ಆಫ್​ನಲ್ಲಿ ಫಿನಿಕ್ಸ್​ನಂತೆ ಕಮ್ ಬ್ಯಾಕ್ ಮಾಡಿದ್ದ ಪ್ಲೇಯರ್ಸ್​ ಮಿರಾಕಲ್ ಎನ್ನುವಂತೆ ಪ್ಲೇ ಆಫ್​ಗೂ ಎಂಟ್ರಿ ಕೊಟ್ಟಿದ್ರು. ಆದ್ರೆ ರಾಜಸ್ಥಾನ ವಿರುದ್ಧ ಸೋಲುವ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ತಂಡವಾಗಿ  ಟೂರ್ನಿಯಿಂದ ಹೊರ ಬಿದ್ದಿತ್ತು. ಬಟ್ ನೆಕ್ಸ್​ಟ್ ಸೀಸನ್​ಗೆ ಈ ರೀತಿ ಆಗ್ಬಾರದ್ದು ಅಂತಾ ಬೆಂಗಳೂರು ಫ್ರಾಂಚೈಸಿ ಭರ್ಜರಿ ಪ್ಲ್ಯಾನ್ ಮಾಡಿದೆ. ಮುಂಬರುವ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸಲು ಹಾಗೂ ಹರಾಜಿಗೂ ಮುನ್ನ ಅತ್ಯುತ್ತಮ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮ್ಯಾನೇಜ್​ಮೆಂಟ್ ರೂಪರೇಷೆಗಳನ್ನ ಸಿದ್ಧಗೊಳಿಸ್ತಿದೆ.

ಫ್ರಾಂಚೈಸಿಗಳಿಗೆ 3+1 ಸೂತ್ರದ ಪ್ರಕಾರ ರೀಟೈನ್‌ ಗೆ ಅವಕಾಶ

2025ರ ಐಪಿಎಲ್ ಟೂರ್ನಿಗೂ ಮುನ್ನ ನಡೆಯಲಿರುವ ಮೆಗಾ ಹರಾಜಿನಲ್ಲಿ 8 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಕೆಲ ಐಪಿಎಲ್‌ ಫ್ರಾಂಚೈಸಿಗಳು ಎಂದು ಮನವಿ ಮಾಡಿಕೊಂಡಿವೆ. ಆದರೆ ಐಪಿಎಲ್ ಆಡಳಿತ ಕಮಿಟಿಯು 3+1 ಸೂತ್ರದ ಪ್ರಕಾರ ರೀಟೈನ್‌ಗೆ ಅವಕಾಶ ನೀಡಿದೆ ಎನ್ನಲಾಗುತ್ತಿದೆ. ಅಂದರೆ ಮೂವರು ಆಟಗಾರರು ಹರಾಜಿಗೂ ಮುನ್ನ ನೇರ ರೀಟೈನ್ ಹಾಗೂ ಒಂದು ರೈಟ್‌ ಟು ಮ್ಯಾಚ್ ಕಾರ್ಡ್‌ ಬಳಕೆಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವ ಮೂರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಹಾಗೂ ಯಾರನ್ನು ಆರ್‌ಟಿಎಂ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ ಎನ್ನುವ ಚರ್ಚೆ ಜೋರಾಗಿದೆ. ಈಗಿರೋ ಮಾಹಿತಿ ಪ್ರಕಾರ ಈಗಾಗ್ಲೇ ಬೆಂಗಳೂರು ಫ್ರಾಂಚೈಸಿ ನಾಲ್ವರನ್ನ ಉಳಿಸಿಕೊಳ್ಳೋಕೆ ಪ್ಲ್ಯಾನ್ ಮಾಡಿದೆ. ಆ ನಾಲ್ವರು ಆಟಗಾರರು ಯಾರು ಅನ್ನೋದನ್ನ ಹೇಳ್ತಾ ಹೋಗ್ತೇನೆ ನೋಡಿ.

RCB ಉಳಿಸಿಕೊಳ್ಳೋ ಮೊದಲ ಆಟಗಾರ ಕಿಂಗ್ ವಿರಾಟ್ ಕೊಹ್ಲಿ

ಯೆಸ್. ಆರ್​ಸಿಬಿ ಅಂತಾ ಬಂದ್ರೆ ಫಸ್ಟ್ ನೆನಪಾಗೋದೇ ಕಿಂಗ್ ವಿರಾಟ್ ಕೊಹ್ಲಿ. ಸೋ ಅವ್ರಿಲ್ಲದ ಬೆಂಗಳೂರು ತಂಡವನ್ನ ಕನ್ನಡಿಗರು ಊಹಿಸಿಕೊಳ್ಳೋಕೂ ಸಾಧ್ಯ ಇಲ್ಲ. ಡೇ ಒನ್​ ನಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಯನ್ನು ಮೊದಲ ಆಯ್ಕೆಯ ಆಟಗಾರನಾಗಿ ಬೆಂಗಳೂರು ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳಲಿದೆ. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿಯೇ ಅತೀ ಹೆಚ್ಚು ರನ್ ಸ್ಕೋರ್ ಮಾಡಿ ಆರೆಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ರು. ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ, ಆರ್‌ಸಿಬಿ ಪರವಾಗಿ ಐಪಿಎಲ್ ಟ್ರೋಫಿ ಗೆಲ್ಲುವ ಮಹದಾಸೆ ಹೊಂದಿದ್ದಾರೆ. ಆರ್‌ಸಿಬಿ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿರುವ ಕೊಹ್ಲಿಯನ್ನು ಬೆಂಗಳೂರು ಫ್ರಾಂಚೈಸಿಯು ಯಾವುದೇ ಕಾರಣಕ್ಕೂ ಬಿಟ್ಟು ಕೊಡೋ ಮಾತೇ ಇಲ್ಲ. ಸೋ ಹೀಗಾಗಿ ಫಸ್ಟ್ ಚಾಯ್ಸ್​​ನಲ್ಲಿ ಕೊಹ್ಲಿಯನ್ನ ರೀಟೈನ್ ಮಾಡಿಕೊಳ್ಳಲಿದೆ.

RCB ಬ್ಯಾಟಿಂಗ್ ಶಕ್ತಿಯಾಗಿರುವ ರಜತ್ ಪಟೀದಾರ್

ಆರ್‌ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದವರಲ್ಲಿ ರಜತ್ ಪಟೀದಾರ್ ಕೂಡ ಒಬ್ಬರು. ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲ ಹೆಚ್ಚಿಸೋ ಆಟಗಾರ. ಆರ್‌ಸಿಬಿ ತಂಡದ ಪರ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಫಸ್ಟ್ ಇನ್ನಿಂಗ್ಸ್​ನಲ್ಲಿ ಫೇಲ್ಯೂರ್ ಅನುಭವಿಸಿದ್ದ ಪಟೀದಾಗ ಸೆಕೆಂಡ್ ಇನ್ನಿಂಗ್ಸ್ ವೇಳೆ  ಭರ್ಜರಿಯಾಗಿಯೇ ಫಾರ್ಮ್‌ಗೆ ಮರಳಿದ್ದರು. ಪದೇ ಪದೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹೊರತಾಗಿಯೂ ಪಾಟೀದಾರ್‌ಗೆ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಚಾನ್ಸ್ ನೀಡಿತ್ತು.  ಪರಿಣಾಮ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಬೆಂಗಳೂರು ತಂಡದ ಪರ 15 ಪಂದ್ಯಗಳನ್ನಾಡಿದ್ದ ಪಟೀದಾರ್ 177.13 ಸ್ಟ್ರೈಕ್ ರೇಟ್​ನಲ್ಲಿ 395 ರನ್ ಕಲೆ ಹಾಕಿದ್ರು. ಇವುಗಳಲ್ಲಿ 5 ಅರ್ಧಶತಕಗಳೂ ಸೇರಿವೆ. ಅಲ್ಲದೆ ಯುವ ಆಟಗಾರನಾಗಿರುವ ರಜತ್ ಪಾಟೀದಾರ್ ಅವರನ್ನು ಸೂಕ್ತರೀತಿಯಲ್ಲಿ ಬಳಸಿಕೊಂಡರೆ, ತಂಡಕ್ಕೆ ಆಸ್ತಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹೀಗಾಗಿಯೇ ಆರ್‌ಸಿಬಿ ಫ್ರಾಂಚೈಸಿಯು ಯುವ ಬ್ಯಾಟರ್‌ನನ್ನು ಉಳಿಸಿಕೊಳ್ಳಲು ಹೆಚ್ಚು ಆಸಕ್ತಿ ತೋರಿದೆ.

ಸೆಂಚುರಿ ಸ್ಟಾರ್ ವಿಲ್ ಜಾಕ್ಸ್ ಗೆ ಮತ್ತೊಮ್ಮೆ ಮಣೆ

ಇಂಗ್ಲೆಂಡ್ ಮೂಲದ ಸ್ಫೋಟಕ ಆಟಗಾರ ವಿಲ್ ಜಾಕ್ಸ್ ಬೆಂಗಳೂರು ತಂಡದಲ್ಲಿ ಈಗಾಗ್ಲೇ ಹೊಸ ಚಾಪು ಮೂಡಿಸಿದ್ದಾರೆ. 3.2 ಕೋಟಿ ರುಪಾಯಿ ನೀಡಿ ಖರೀದಿಸಿದ್ದ ವಿಲ್ ಜ್ಯಾಕ್ಸ್ ಭರ್ಜರಿ ಪ್ರದರ್ಶನ ನೀಡಿದ್ರು.  17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಳ್ಳುವಲ್ಲಿ ವಿಲ್ ಜ್ಯಾಕ್ಸ್‌ ಯಶಸ್ವಿಯಾಗಿದ್ದರು. 25 ವರ್ಷದ ಬ್ಯಾಟಿಂಗ್ ಆಲ್ರೌಂಡರ್ ವಿಲ್‌ ಜ್ಯಾಕ್ಸ್‌ ಆರ್‌ಸಿಬಿ ಪರ ಕೇವಲ 8 ಪಂದ್ಯಗಳನ್ನಾಡಿ 175ರ ಸ್ಟ್ರೈಕ್‌ರೇಟ್‌ನಲ್ಲಿ ಒಂದು ಶತಕ ಸಹಿತ 230 ರನ್ ಸಿಡಿಸಿದ್ದು, ಬೆಂಗಳೂರು ತಂಡವು ರೀಟೈನ್‌ ಮಾಡಿಕೊಂಡರೆ ಒಳ್ಳೆಯ ಆಯ್ಕೆ ಎನಿಸಿಕೊಳ್ಳಲಿದ್ದಾರೆ. ಅಗತ್ಯವಿದ್ದರೆ ಬೌಲಿಂಗ್‌ನಲ್ಲೂ ವಿಲ್ ಜ್ಯಾಕ್ಸ್ ಆಸರೆಯಾಗಬಲ್ಲರು. ಹೀಗಾಗೇ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ರೀಟೈನ್ ಮಾಡಿಕೊಳ್ಳುವುದಕ್ಕಿಂತ ವಿಲ್ ಜ್ಯಾಕ್ಸ್‌ ರೀಟೈನ್ ಭವಿಷ್ಯದ ದೃಷ್ಟಿಯಿಂದ ಆರ್‌ಸಿಬಿ ಲಾಭವಾಗುವ ಸಾಧ್ಯತೆಯೇ ಹೆಚ್ಚು.

ಬೆಂಗಳೂರು ತಂಡದ ಬೌಲಿಂಗ್ ಸ್ಟ್ರೆಂಥ್ ಮೊಹಮ್ಮದ್ ಸಿರಾಜ್

ಆರ್​ಸಿಬಿ ಟೀಮ್​ನಲ್ಲಿ ಮೊದ್ಲಿಂದಲೂ ಇರೋ ಮೇನ್ ಕಂಪ್ಲೇಂಟ್ ಅಂದ್ರೆ ಒಳ್ಳೆ ಬೌಲರ್ಸ್ ಇಲ್ಲ ಅನ್ನೋದು. ಕ್ರಿಕೆಟ್ ಎಕ್ಸ್​ಪರ್ಟ್ಸ್ ಹಾಗೇ ಫ್ಯಾನ್ಸ್ ಗೂ ಕೂಡ ಇರೋ ಬೇಸರ ಇದೇ. ಇರೋದ್ರಲ್ಲಿ ಮೊಹಮ್ಮದ್ ಸಿರಾಜ್ ಬೆಟರ್. 2018ರಿಂದಲೂ ಆರ್‌ಸಿಬಿ ತಂಡದ ಬೌಲಿಂಗ್ ಬೆನ್ನೆಲುಬು ಎನಿಸಿಕೊಂಡಿರುವ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಬೆಂಗಳೂರು ಫ್ರಾಂಚೈಸಿ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿ ಹರಾಜಿನಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಸಿರಾಜ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಫಸ್ಟ್ ಆಫ್​ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡಿರಲಿಲ್ಲ. ಬಟ್ ಸೆಕೆಂಡ್ ಆಫ್​ನಲ್ಲಿ ಒಳ್ಳೆ ಪರ್ಫಾಮೆನ್ಸ್ ಕೊಟ್ಟಿದ್ರು. 14 ಮ್ಯಾಚ್​ಗಳನ್ನ ಆಡಿದ್ದ ಸಿರಾಜ್ 15 ವಿಕೆಟ್​ಗಳ ಬೇಟೆಯಾಡಿದ್ರು. ಟೀಂ ಇಂಡಿಯಾ ವೇಗಿಯಾಗಿ ಅಪಾರ ಅನುಭವ ಹೊಂದಿರುವ ಸಿರಾಜ್, ಯಾವುದೇ ಹಂತದಲ್ಲೂ ಎದುರಾಳಿ ಬ್ಯಾಟಿಂಗ್ ಪಡೆಗೆ ಅಪಾಯಕಾರಿಯಾಗಬಲ್ಲರು. ಹೀಗಾಗಿ ಸಿರಾಜ್ ಮತ್ತೊಮ್ಮೆ ಬೆಂಗಳೂರು ತಂಡವನ್ನೇ ಪ್ರತಿನಿಧಿಸಿದರೂ ಅಚ್ಚರಿಯೇನಿಲ್ಲ.

ಕಿಂಗ್ ಕೊಹ್ಲಿಗೋಸ್ಕರನಾದ್ರೂ ಕಪ್ ಗೆಲ್ಲಿ ಎಂದ ಕನ್ನಡಿಗರು

ಐಪಿಎಲ್ ಫ್ರಾಂಚೈಸಿಗಳ ಪೈಕಿ ಅತೀ ಹೆಚ್ಚು ಫ್ಯಾನ್​ ಬೇಸ್ ಹಾಗೇ ಬ್ರ್ಯಾಂಡ್ ವ್ಯಾಲ್ಯೂ ಹೊಂದಿರೋ ತಂಡ ಅಂದ್ರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಬರೋಬ್ಬರಿ ಐದೈದು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ಗೂ ಸಿಗದಷ್ಟು ಅಭಿಮಾನ ಬೆಂಗಳೂರು ತಂಡಕ್ಕೆ ಸಿಕ್ಕಿದೆ. ಅದಕ್ಕೆ ಮೇನ್ ರೀಸನ್ ವಿರಾಟ್ ಕೊಹ್ಲಿ. ಬೆಂಗಳೂರು ತಂಡದ ಐಕಾನ್​ನಂತಿರೋ ವಿರಾಟ್ ಕೊಹ್ಲಿಗೆ ಇಡೀ ಜಗತ್ತಿನಾದ್ಯಂತ ಫ್ಯಾನ್ಸ್ ಇದ್ದಾರೆ. ಬೇರೆ ಬೇರೆ ತಂಡಗಳು ಕೊಹ್ಲಿ ತಮ್ಮ ಟೀಮ್​ಗೆ ಬಂದ್ರೆ ಕೋಟಿ ಕೋಟಿ ಹಣ ಕೊಡೋಕೂ ರೆಡಿ ಇದ್ದಾರೆ. ಬಟ್ ಕಿಂಗ್ ವಿರಾಟ್ ಮಾತ್ರ ಯಾವತ್ತೂ ತಮ್ಮ ನಿಷ್ಠೆಯನ್ನ ಬಿಟ್ಟಿಲ್ಲ. ಒಂದೇ ಒಂದು ಸಲ ಕಪ್ ಗೆಲ್ಲದೇ ಇದ್ರೂ ಇದೇ ಫ್ರಾಂಚೈಸಿಗಾಗೇ ಆಡ್ತಿದ್ದಾರೆ. ಎಲ್ಲಾ ಆಟಗಾರರಿಗಿಂತ ಬೆಸ್ಟ್ ಪರ್ಫಾಮೆನ್ಸ್ ನೀಡ್ತಿದ್ದಾರೆ. ಬಟ್ ಬ್ಯಾಡ್​ಲಕ್ ಐಪಿಎಲ್​ನಲ್ಲಿ ಈವರೆಗೂ ಕೊಹ್ಲಿ ಟ್ರೋಫಿ ಎತ್ತಿ ಹಿಡಿಯೋಕೆ ಆಗಿಲ್ಲ. ಇದೇ ಕಾರಣಕ್ಕೆ ಅಭಿಮಾನಿಗಳೂ ಕೂಡ ವಿರಾಟ್​ಗೋಸ್ಕರನಾದ್ರೂ ಒಂದು ಸಲ ಕಪ್ ಗೆಲ್ಲಿ ಅಂತಾ ಪ್ರತೀ ಸಲ ಪ್ರಾರ್ಥನೆ ಮಾಡ್ತಿದ್ದಾರೆ.

17 ಸೀಸನ್ ಗಳಿಂದ ಒಂದೇ ತಂಡದಲ್ಲಿ ಆಡ್ತಿರೋ ಏಕೈಕ ಆಟಗಾರ

ಆರ್​ಸಿಬಿಯ ಯಂಗ್ ಌಂಡ್ ಎನರ್ಜಿಟಿಕ್, ಬ್ಯಾಕ್​ಬೋನ್, ಚಿರತೆಯಂತ ಫೀಲ್ಡರ್ ಕಿಂಗ್ ಕೊಹ್ಲಿ ಬೆಂಗಳೂರು ತಂಡದ ಮೇಲೆ ಇಟ್ಟಿರೋ ಅಭಿಮಾನ ಅಂತಿಂಥಾದ್ದಲ್ಲ. ಹೀಗಾಗೇ ಐಪಿಎಲ್ ಆರಂಭವಾದ ವರ್ಷ 2008ರಿಂದಲೂ ಆರ್​ಸಿಬಿಗಾಗೇ ಆಡ್ತಿರೋ ವಿರಾಟ್ ಅಭಿಮಾನಿಗಳ ಪಾಲಿನ ರಿಯಲ್ ಹೀರೋ. ಕಿಂಗ್ ಕಿಂಗ್ ಎನ್ನುತ್ತಲೇ ತಮ್ಮ ಹಾರ್ಟ್​ನಲ್ಲಿ ದೇವರ ಸ್ಥಾನ ಕೊಟ್ಟಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 2013 ರ ಆವೃತ್ತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ರು. ಆದರೆ 2021 ರ ಐಪಿಎಲ್​ಗೂ ಮುನ್ನ ವಿರಾಟ್ ಕೊಹ್ಲಿ ಸ್ವತಃ ತಾವೇ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಆರ್​ಸಿಬಿಯ ಕ್ಯಾಪ್ಟನ್ ಆಗಿ 140 ಪಂದ್ಯಗಳನ್ನು ಮುನ್ನಡೆಸಿರುವ ಕೊಹ್ಲಿ 66 ರಲ್ಲಿ ಗೆಲುವು ಕಂಡಿದ್ದಾರೆ. 70ಕ್ಕೂ ಹೆಚ್ಚು ಪಂದ್ಯಗಳನ್ನ ಸೋತಿದ್ದಾರೆ. ಸತತ 8 ಆವೃತ್ತಿಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ ಕೊಹ್ಲಿ ಒಮ್ಮೆಯೂ ಕಪ್ ಗೆಲ್ಲೋಕೆ ಸಾಧ್ಯವಾಗದ ಬೇಸರದಲ್ಲಿ 2022ರಲ್ಲಿ ಕ್ಯಾಪ್ಟನ್ಸಿಯನ್ನ ಬಿಟ್ಟುಕೊಟ್ಟಿದ್ರು. ಬಳಿಕ ಫಾಫ್ ಡುಪ್ಲೆಸಿಸ್ ಸಾರಥ್ಯ ವಹಿಸಿಕೊಂಟ್ರು. ಆದ್ರೆ ಕೊಹ್ಲಿಗೆ ಪ್ರಶಸ್ತಿ ಗೆಲ್ಲೋಕೆ ಸಾಧ್ಯವಾಗದಿದ್ದರೂ, ಅವ್ರ ನಾಯಕತ್ವದಲ್ಲಿ ತಂಡದ ಜನಪ್ರಿಯತೆ ಉತ್ತುಂಗಕ್ಕೇರಿದೆ. ಹೀಗಾಗಿ ಐಪಿಎಲ್ ಅಂದ್ರೆ ಆರ್​ಸಿಬಿ ಅನ್ನೋವಷ್ಟರ ಮಟ್ಟಿಗೆ ದೇಶಾದ್ಯಂತ ಕ್ರೇಜ್ ಇದೆ. ಭಾರತ ಬಿಡಿ ಹೊರ ದೇಶಗಳ ಜನ ಕೂಡ ಕನ್ನಡ ಭಾಷೆ ಬರದಿದ್ರೂ ಈ ಸಲ ಕಪ್ ನಮ್ದೇ ಅನ್ನೋ ಸಾಲನ್ನ ಹೇಳ್ತಾರೆ. ಆರ್​ಸಿಬಿಗೆ ಇಷ್ಟು ದೊಡ್ಡ ಫ್ಯಾನ್ಸ್ ಬೇಸ್ ಇರೋಕೆ ಮೇನ್ ರೀಸನ್​ಗಳಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ರು. ಹೀಗಾಗಿ ಐಪಿಎಲ್​ನಲ್ಲಿ ಆರ್​ಸಿಬಿ ಗೆದ್ದು ವಿರಾಟ್ ಐಪಿಎಲ್ ಟ್ರೋಫಿಯನ್ನ ಎತ್ತಿ ಹಿಡಿಯೋದನ್ನ ನೋಡ್ಬೇಕು ಆ ಕ್ಷಣವನ್ನ ಕಣ್ತುಂಬಿಕೊಳ್ಬೇಕು ಅಂತಾ ಫ್ಯಾನ್ಸ್ ಕಾಯ್ತಿದ್ದಾರೆ. ಅಲ್ಲದೇ 2025ಕ್ಕೆ 18ನೇ ಸೀಸನ್ ಆಗುತ್ತೆ. ವಿರಾಟ್ ಜೆರ್ಸಿ ನಂಬರ್ ಕೂಡ 18. ಸೋ ಕಪ್ ನಮ್ದೇ ಅಂತಾ ಈಗಿನಿಂದಲೇ ಫಿಕ್ಸ್ ಆಗ್ತಿದ್ದಾರೆ. ಮತ್ತೊಂದೆಡೆ ಮುಂದಿನ ಟೂರ್ನಿಗೆ ಫ್ರಾಂಚೈಸಿ ಕೂಡ ಒಳ್ಳೆ ಆಟಗಾರರನ್ನ ಉಳಿಸಿಕೊಳ್ಳೋಕೆ ಮುಂದಾಗಿದೆ.

Shwetha M

Leave a Reply

Your email address will not be published. Required fields are marked *