RCB Vs RR.. ಮಳೆ ಬಂದ್ರೆ? – ಪಂದ್ಯ ರದ್ದಾದ್ರೆ ಯಾರಿಗೆ ಪ್ಲಸ್?
ಪ್ಲೇ ಆಫ್ ಫೈಟ್ ನಲ್ಲಿ ಏನು ರೂಲ್ಸ್?

RCB Vs RR.. ಮಳೆ ಬಂದ್ರೆ? – ಪಂದ್ಯ ರದ್ದಾದ್ರೆ ಯಾರಿಗೆ ಪ್ಲಸ್?ಪ್ಲೇ ಆಫ್ ಫೈಟ್ ನಲ್ಲಿ ಏನು ರೂಲ್ಸ್?

ಫೈನಲಿ ಐಪಿಎಲ್ ಪ್ಲೇ ಆಫ್ ಪಂದ್ಯಗಳ ಜಟಾಪಟಿಗೆ ಕೌಂಟ್​ಡೌನ್ ಶುರುವಾಗಿದೆ. ಮಂಗಳವಾರ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಕ್ವಾಲಿಫೈಯರ್ 1ರಲ್ಲಿ ಕಣಕ್ಕಿಳಿಯಲಿವೆ. ಹಾಗೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮೇ 22ರ ಬುಧವಾರ ಎಲಿಮಿನೇಟರ್‌ ಪಂದ್ಯದಲ್ಲಿ ಸೆಣಸಾಡಲಿವೆ. ಈ ಎರಡೂ ಪ್ಲೇಆಫ್‌ ಪಂದ್ಯಗಳು ವಿಶ್ವದ ಅತಿ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಆಗಿರುವ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ. ಸಂಜೆ 7.30ರಿಂದ ಹೈವೋಲ್ಟೇಜ್ ಮ್ಯಾಚ್ ಸ್ಟಾರ್ಟ್ ಆಗುತ್ತೆ. ಆದ್ರೆ ಈ ಪಂದ್ಯಕ್ಕೂ ಮುನ್ನ ಇರೋ ದೊಡ್ಡ ಆತಂಕ ಅಂದ್ರೆ ಮಳೆ. ಲೀಗ್ ಹಂತದ ಕೊನೇ ಪಂದ್ಯಗಳ ವೇಳೆ ಮಳೆ ಬಂದು ಮೂರು ಪಂದ್ಯಗಳು ರದ್ದಾಗಿವೆ. ಬಳಿಕ ಎರಡೂ ತಂಡಗಳಿಗೆ ಒಂದೊಂದು ಅಂಕ ನೀಡಲಾಗಿದೆ. ಆದ್ರೀಗ ಪ್ಲೇ ಆಫ್​ ಪಂದ್ಯಗಳಿಗೂ ಮಳೆ ಬಂದ್ರೆ ಹೇಗೆ..? ಪಂದ್ಯ ರದ್ದಾದ್ರೆ ವಿಜೇತರನ್ನ ಹೇಗೆ ನಿರ್ಧಾರ ಮಾಡಲಾಗುತ್ತೆ? ಯಾರಿಗೆ ಟ್ರೋಫಿ ಒಲಿಯೋ ಸಾಧ್ಯತೆ ಇರುತ್ತೆ..? ಏನೆಲ್ಲಾ ರೂಲ್ಸ್ ಇದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ವಿಕ್ಟರಿ ಓಟಕ್ಕೆ ಮಣಿಯುತ್ತಾ RR? – ಎಲಿಮಿನೇಟರ್ ಆಟಕ್ಕೆ ಕೊಹ್ಲಿ ಅಸ್ತ್ರವೇನು?

ಐಪಿಎಲ್ ಸೀಸನ್ 17 ರೇಸ್ ಇನ್ನೇನು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಸದ್ಯ ಕಪ್ ಎತ್ತಿ ಹಿಡಿಯಲು ನಾಲ್ಕು ತಂಡಗಳ ನಡುವೆ ಬಿಗ್ ಫೈಟ್ ಶುರುವಾಗಿದೆ. ಐಪಿಎಲ್ ಟ್ರೋಫಿಗೆ ಯಾವ ತಂಡ ಮುತ್ತಿಕ್ಕಲಿದೆ ಅನ್ನೋದನ್ನ ನೋಡಲು ಇಡೀ ಕ್ರಿಕೆಟ್ ಲೋಕವೇ ಕಾದು ಕುಳಿತಿದೆ. ಆದ್ರೆ ಪಂದ್ಯಕ್ಕೂ ಮುನ್ನ ಇರೋ ಭೀತಿ ಅಂದ್ರೆ ಅದು ಮಳೆ. ಯಾಕಂದ್ರೆ ಕಳೆದ ಮೇ 13ರಂದು ಮೋದಿ ಮೈದಾನಲ್ಲಿ ನಡೆಯಬೇಕಿದ್ದ ಗುಜರಾತ್‌ ಟೈಟಾನ್ಸ್‌ ಹಾಗೂ ಕೆಕೆಆರ್‌ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಹಾಗೇ ರಾಜಸ್ಥಾನ್ ರಾಯಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯಗಳು ಒಂದೂ ಓವರ್‌ ಎಸೆಯದೆ ರದ್ದಾಗಿದ್ದವು. ಕನಿಷ್ಠ ಟಾಸ್‌ ಪ್ರಕ್ರಿಯೆಗೂ ಮಳೆ ಅವಕಾಶ ನೀಡಿರಲಿಲ್ಲ. ಹೀಗೆ ಮೂರು ಪಂದ್ಯಗಳು ಮಳೆ ಕಾರಣಕ್ಕೆ ಕ್ಯಾನ್ಸಲ್ ಆಗಿದ್ದವು. ಇದೀಗ ಲೀಗ್‌ ಹಂತ ಮುಕ್ತಾಯಗೊಂಡಿದ್ದು, ಪ್ಲೇಆಪ್‌ ವೇಳಾಪಟ್ಟಿ ಅಂತಿಮವಾಗಿದೆ. ಆದರೆ, ಪ್ಲೇಆಫ್‌ ಪಂದ್ಯಗಳಿಗೂ ಮಳೆ ಆತಂಕವಿದೆ. ನಾಲ್ಕು ಪಂದ್ಯಗಳಲ್ಲಿ ಮೊದಲ ಎರಡು ಪಂದ್ಯಗಳು ಅಹಮದಾಬಾದ್‌ನಲ್ಲಿ ನಡೆದರೆ, ಎರಡನೇ ಕ್ವಾಲಿಫೈಯರ್‌ ಹಾಗೂ ಫೈನಲ್‌ ಪಂದ್ಯವು ಚೆನ್ನೈನಲ್ಲಿ ನಡೆಯಲಿದೆ. ಒಂದು ವೇಳೆ, ಮಳೆಯಿಂದಾಗಿ ಪಂದ್ಯ ವಿಳಂಬವಾದರೆ, ಅಥವಾ ಸಂಪೂರ್ಣ ರದ್ದಾದರೆ ಐಪಿಎಲ್‌ ನಿಯಮಗಳು ಹೇಗಿರಲಿದೆ ಗೊತ್ತಾ?

ಐಪಿಎಲ್​ ಆಡಳಿತ ಮಂಡಳಿ ಮತ್ತು ಬಿಸಿಸಿಐ ಟೂರ್ನಿ ಆರಂಭಕ್ಕೂ ಮುನ್ನವೇ ಲೀಗ್​ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ ಎಂದು ಸ್ಪಷ್ಟಪಡಿಸಿತ್ತು. ಅದರಂತೆ ಮಳೆಯಿಂದ ಪಂದ್ಯ ರದ್ದುಗೊಂಡರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನಿಗದಿಪಡಿಸಿತ್ತು. ಆದರೆ, ನಾಕೌಟ್ ಹಂತಕ್ಕೆ ಮೀಸಲು ದಿನವನ್ನು ಇರಿಸಿದೆ. ಪ್ಲೇಆಫ್ ವೇಳಾಪಟ್ಟಿಯಲ್ಲಿ ಕ್ವಾಲಿಫೈಯರ್ 1, ಎಲಿಮಿನೇಟರ್, ಕ್ವಾಲಿಫೈಯರ್ 2 ಹಾಗೂ ಫೈನಲ್ ಪಂದ್ಯವಿದೆ. ಪ್ರತಿ ಪಂದ್ಯಕ್ಕೂ ಪ್ರತಿಕೂಲ ಹವಾಮಾನ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ಲೇಆಫ್​ನ ಎಲ್ಲಾ ಪಂದ್ಯಗಳಿಗೂ ಮೀಸಲು ದಿನದಾಟವಿದೆ. ಕ್ವಾಲಿಫೈಯರ್ ಅಥವಾ ಎಲಿಮಿನೇಟರ್‌ನಂಥ ಪಂದ್ಯಗಳ ವೇಳೆ ನಿರಂತರ ಮಳೆಯಿಂದಾಗಿ ಪಂದ್ಯವು ನಡೆಯದಿದ್ದರೆ, ಪಂದ್ಯದ ಅಧಿಕಾರಿಗಳು ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳುತ್ತಾರೆ. ಮೀಸಲು ದಿನದಂದು ಪಂದ್ಯ ಆರಂಭದಿಂದಲೇ ನಡೆಯುತ್ತದೆ. ಆ ಮೂಲಕ ಉಭಯ ತಂಡಗಳ ಗೆಲುವಿಗೆ ಸಮಾನ ಅವಕಾಶ ನೀಡಲಾಗುತ್ತದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಪ್ರಮುಖ ಪಂದ್ಯಗಳಲ್ಲಿ ಯಾವುದೇ ತಂಡಕ್ಕೂ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ಈ ನಿಯಮವಿದೆ. ಪೂರ್ಣ ಪಂದ್ಯ ನಡೆಸಲು ಹೆಚ್ಚುವರಿ 120 ನಿಮಿಷಗಳನ್ನು ನೀಡಲಾಗಿದೆ. ಅಂದ್ರೆ 2 ಗಂಟೆ ಎಕ್ಸ್​ಟೆಂಡ್ ಮಾಡಬಹುದು. ಅಂದರೆ ಐಪಿಎಲ್​ ಪಂದ್ಯದ ನಿಗದಿತ ಸಮಯ 3 ಗಂಟೆ 15 ನಿಮಿಷಗಳು. ಒಂದು ವೇಳೆ ಮಳೆ ಬಂದು ಅಥವಾ ಇನ್ನಿತರ ಕಾರಣಗಳಿಂದ ಪಂದ್ಯಕ್ಕೆ ಅಡಚಣೆಯಾದರೆ ಹೆಚ್ಚುವರಿ 2 ಗಂಟೆಯನ್ನು ಬಳಸಲಾಗುತ್ತದೆ. ಅಂದರೆ ಪ್ಲೇಆಫ್ ಪಂದ್ಯಗಳಿಗೆ 7.30 ರಿಂದ 1 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ. ಸಾಮಾನ್ಯವಾಗಿ ಪ್ಲೇ ಆಫ್ ಪಂದ್ಯಗಳು ಸಂಜೆ 7.30ಕ್ಕೆ ಸ್ಟಾರ್ಟ್ ಆಗಲಿವೆ. ಟಾಸ್ ಪ್ರಕ್ರಿಯೆಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದ್ರೂ ಓವರ್​ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಮಾಡೋದಿಲ್ಲ. ಅಂದ್ರೆ ಉಭಯ ತಂಡಗಳು ತಲಾ 20 ಓವರ್​ಗಳನ್ನು ಆಡಲಿದೆ. ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್​ಗಳನ್ನ ಕಡಿತ ಮಾಡಬಹುದು. ಅಕಸ್ಮಾತ್ ಮಳೆ ಬಿಡ್ತಾನೇ ಇಲ್ಲ ಸಮಯ ರಾತ್ರಿ 9.40 ಮೀರಿದೆ ಅಂದ್ರೆ ನಂತ್ರ ಓವರ್​ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ ಎಂಟು ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ. ಇದಾಗ್ಯೂ ಪಂದ್ಯ ನಡೆಯದಿದ್ದರೆ ಅಥವಾ ಪೂರ್ಣಗೊಳ್ಳದಿದ್ದರೆ ಮ್ಯಾಚ್ ಅನ್ನು ಮೀಸಲು ದಿನದಾಟದಂದು ನಡೆಸಲಾಗುತ್ತೆ. ಮೀಸಲು ದಿನದಾಟದಲ್ಲಿ ಆರಂಭದಿಂದಲೇ ಪಂದ್ಯವನ್ನು ಆಡಲಾಗುತ್ತದೆ. ಅಂದರೆ ನಿಗದಿತ ದಿನದಲ್ಲಿ ಅರ್ಧ ಪಂದ್ಯ ನಡೆದಿದ್ದರೆ ಮೀಸಲು ದಿನದಾಟದಲ್ಲಿ ಮುಂದುವರೆಸಲಾಗುವುದಿಲ್ಲ. ಬದಲಾಗಿ ಹೊಸದಾಗಿ ಪಂದ್ಯವನ್ನು ಆರಂಭಿಸಲಾಗುತ್ತದೆ. ಹಾಗೇನಾದ್ರೂ  ಮೀಸಲು ದಿನದಾಟದಲ್ಲೂ ನಿಗದಿತ ಸಮಯದೊಳಗೆ ಪಂದ್ಯ ನಡೆಯದಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲಾಗುತ್ತದೆ. ಈ ಮೂಲಕ 5 ಓವರ್​ಗಳ ಪಂದ್ಯವನ್ನು ಆಯೋಜಿಸಬಹುದು. ಈ 5 ಓವರ್​ಗಳ ಪಂದ್ಯವು ರಾತ್ರಿ 11.56 ರಿಂದ ಶುರುವಾಗಬಹುದು. ಹಾಗೇ 12.56 ರೊಳಗೆ ಮುಗಿಸುವ ಪರಿಸ್ಥಿತಿ ಇದೆಯಾ ಎಂಬುದನ್ನು ರೆಫರಿ ಪರಿಶೀಲನೆ ಮಾಡ್ತಾರೆ. ಇನ್ನು 11.56 ರಿಂದ 12.56 ರೊಳಗೆ 5 ಓವರ್​ಗಳ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಸೂಪರ್ ಓವರ್ ಆಡಿಸಲಾಗುತ್ತದೆ. ಅಂದರೆ ಮೀಸಲು ದಿನದಾಟದಲ್ಲಿ ಪಂದ್ಯ ನಡೆಯದಿದ್ದರೆ ಸೂಪರ್ ಓವರ್ ಮ್ಯಾಚ್ ನಡೆಯಲಿದೆ. ಇಲ್ಲ ಮಳೆ ನಿಲ್ತಾನೇ ಇಲ್ಲ ಕನಿಷ್ಠ ಸೂಪರ್ ಓವರ್ ಪಂದ್ಯ ಕೂಡ ನಡೆಸೋಕೂ ಕೂಡ ಆಗಲ್ಲ ಅಂದ್ರೆ ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡವು ಮುಂದಿನ ಹಂತಕ್ಕೇರಲಿದೆ. ಸದ್ಯ ಮಂಗಳವಾರ ನಡೆಯುತ್ತಿರೋ ಕೆಕೆಆರ್ ಮತ್ತು ಎಸ್​ಆರ್​ಹೆಚ್​ ನಡುವಣ ಮೊದಲ ಕ್ವಾಲಿಫೈಯರ್ ಪಂದ್ಯವು ಮಳೆಯಿಂದ ರದ್ದಾಗಿ ಮೀಸಲು ದಿನವೂ ಆಟ ಮತ್ತೆ ರದ್ದಾದ್ರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್​ ರೈಡರ್ಸ್​ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಎಲಿಮಿನೇಟರ್ ಪಂದ್ಯವು ಇದೇ ಮಾದರಿಯಲ್ಲಿ ರದ್ದಾದರೆ ಪಾಯಿಂಟ್ಸ್​ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಲಿದೆ. ಹಾಗೇ ಎರಡನೇ ಕ್ವಾಲಿಫೈಯರ್ ಪಂದ್ಯ ಕೂಡ ಮಳೆಗೆ ಅಹುತಿಯಾದರೆ, ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಎಸ್​ಆರ್​ಹೆಚ್ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಆಯ್ತು ಆಗ್ಲೂ ಮಳೆ ಬಿಡ್ತಾನೇ ಇಲ್ಲ. ಫೈನಲ್ ಪಂದ್ಯ ಕೂಡ ಸಂಪೂರ್ಣ ಮಳೆಗೆ ಬಲಿಯಾಯ್ತು ಅಂದ್ರೆ ಆಗ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ. ಹೀಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಕ್ಕೆ ಅಡ್ವಾಂಟೇಜ್ ಸಿಗಲಿದೆ.

ಸದ್ಯ ಕ್ರಿಕೆಟ್ ಜಗತ್ತಿನ ಕಲರ್​ಫುಲ್ ಟೂರ್ನಿಯಾಗಿರುವ ಐಪಿಎಲ್​ನಲ್ಲಿ ಇನ್ನೇನಿದ್ರೂ ಉಳಿದಿರೋದು ನಾಲ್ಕೇ ಮ್ಯಾಚ್. ಈ ನಾಲ್ಕು ಪಂದ್ಯಗಳಲ್ಲಿ ಮೊದಲ ಕ್ವಾಲಿಫೈಯರ್​ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್​ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಗೆಲ್ಲುವ ತಂಡ ನೇರವಾಗಿ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಇನ್ನು ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದೆ. ಇದರಲ್ಲಿ ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಮತ್ತು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ. ಆದ್ರೀಗ ಕ್ರಿಕೆಟ್ ಲೋಕದಲ್ಲಿ ಮಂಗಳವಾರದ ಮ್ಯಾಚ್​ಗಿಂತ ಬುಧವಾರದ ಪಂದ್ಯದತ್ತಲೇ ಎಲ್ಲರ ಚಿತ್ತ ನೆಟ್ಟಿದೆ. ಯಾಕಂದ್ರೆ ಪಾಯಿಂಟ್ಸ್ ಟೇಬಲ್​ನಲ್ಲಿ ಟಾಪ್ 10 ಸ್ಥಾನದಿಂದ ಟಾಪ್ 4ಗೆ ಜಿಗಿದಿರೋ ಆರ್​ಸಿಬಿಯ ಕಮ್​ ಬ್ಯಾಕ್ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಎಲಿಮಿನೇಟರ್​ ಪಂದ್ಯದಲ್ಲಿ ಆರ್​​ಸಿಬಿಯನ್ನು ಎದುರಿಸಲು ಮುಂದಾಗಿರೋ ರಾಜಸ್ಥಾನ್​ ರಾಯಲ್ಸ್​ಗೂ ಬಿಗ್​ ಶಾಕ್​ ಇದೆ. ಬುಧವಾರದ ಪಂದ್ಯಕ್ಕೆ ಸ್ಟಾರ್​ ಪ್ಲೇಯರ್​​ ಜೋಸ್​ ಬಟ್ಲರ್​​ ಅಲಭ್ಯರಾಗಿದ್ದು, ಇವರ ಅನುಪಸ್ಥಿತಿ ಎದ್ದು ಕಾಡಲಿದೆ. ಯಾಕಂದ್ರೆ ಕಳೆದ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ರಾಜಸ್ಥಾನ​ ಗೆಲ್ಲಲು ಜೋಸ್​ ಬಟ್ಲರ್ ಪ್ರಮುಖ​ ಕಾರಣ. ಏಪ್ರಿಲ್​​ 6ನೇ ತಾರೀಕು ಜೈಪುರ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್​​​ಸಿಬಿ ವಿರುದ್ಧ ರಾಜಸ್ಥಾನ್​ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ಕೊಹ್ಲಿ ಅಜೇಯ 113 ರನ್ ಬಾರಿಸಿದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಮೊದಲ ಓವರ್​ನಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತು. ಆರಂಭದಲ್ಲೇ ರಾಜಸ್ಥಾನ್​​ ವಿಕೆಟ್ ಕಳೆದುಕೊಂಡ ಕಾರಣ ಪಂದ್ಯ ಆರ್​ಸಿಬಿ ಪರ ವಾಲುತ್ತೆ ಎಂದು ಎಲ್ಲರೂ ಅನ್ಕೊಂಡಿದ್ರು. ಆದ್ರೆ ಜೋಸ್​ ಬಟ್ಲರ್​ ಆರ್​ಸಿಬಿ ವೇಗಿಗಳ ಬೆವರಿಳಿಸಿದರು. ಆರ್​ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ಕಣಕ್ಕಿಳಿದು ಕೊನೆಯವರೆಗೂ ಅಜೇಯರಾಗಿ ಉಳಿದ ಬಟ್ಲರ್ 20ನೇ ಓವರ್​ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಸೆಂಚುರಿ ಬಾರಿಸಿದ್ರು. 58 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 100 ರನ್ ಕಲೆ ಹಾಕಿದ್ದರು. ಈ ಮೂಲಕ ರಾಜಸ್ಥಾನ ಆರ್​ಸಿಬಿ ವಿರುದ್ಧ ಗೆದ್ದು ಬೀಗಿತ್ತು. ಒಟ್ನಲ್ಲಿ ಪ್ಲೇ ಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದ್ದು, ಮಂಗಳವಾರದ ಪಂದ್ಯದಲ್ಲಿ ಯಾರು ಗೆಲ್ಲುವ ಅವಕಾಶ ಜಾಸ್ತಿ ಇದೆ.

Shwetha M