17 ವರ್ಷ.. 248 ಪಂದ್ಯ.. 7,805 ರನ್ – ಕಿಂಗ್ ಕೊಹ್ಲಿಗೆ RCBಯೇ ಉಸಿರು!
ಫ್ಯಾನ್ಸ್ ಜೊತೆ ವಿರಾಟ್ ನಿಷ್ಠೆ ಹೇಗಿದೆ?

17 ವರ್ಷ.. 248 ಪಂದ್ಯ.. 7,805 ರನ್ – ಕಿಂಗ್ ಕೊಹ್ಲಿಗೆ RCBಯೇ ಉಸಿರು!ಫ್ಯಾನ್ಸ್ ಜೊತೆ ವಿರಾಟ್ ನಿಷ್ಠೆ ಹೇಗಿದೆ?

ಭಾರತೀಯ ಕ್ರಿಕೆಟ್​​ನ ರನ್ ಮಷಿನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೂಪರ್ ಸ್ಟಾರ್, ಅಭಿಮಾನಿಗಳ ಪಾಲಿನ ರೋಲ್ ಮಾಡೆಲ್ ವಿರಾಟ್ ಕೊಹ್ಲಿ. ಕಿಂಗ್ ಅಂತಾನೇ ಕರೆಸಿಕೊಳ್ಳೋ ಈ ಕ್ರಿಕೆಟರ್ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಇನ್ಸ್​​ಟಾಗ್ರಾಂ ಫಾಲೋವರ್ಸ್​ ಅಂತೂ 268 ಮಿಲಿಯನ್ ಇದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಾಕಿದ್ರೂ ಕೋಟಿ ಕೋಟಿ ದುಡ್ಡು ಮಾಡ್ತಾರೆ. ಆದ್ರೆ ಆರ್​ಸಿಬಿ ಟೀಂ ಮತ್ತು ಕರ್ನಾಟಕ ಅಂತಾ ಬಂದ್ರೆ ಕೊಹ್ಲಿಗೆ ತುಂಬಾನೇ ಸ್ಪೆಷಲ್. ಬೆಂಗಳೂರನ್ನ ತಮ್ಮ ಸೆಕೆಂಡ್ ಹೋಂ ಅಂತಾನೇ ಕರೆಯೋ ಕೊಹ್ಲಿ ಇಲ್ಲಿನ ಅಭಿಮಾನಿಗಳ ಜೊತೆ ವಿಶೇಷ ಬಾಂಧವ್ಯವನ್ನ ಹೊಂದಿದ್ದಾರೆ. ಇದೇ ಕಾರಣಕ್ಕೆ ಆರ್​ಸಿಬಿಯನ್ನ ಬಿಟ್ಟು ಬೇರೆ ಫ್ರಾಂಚೈಸಿಗಳತ್ತ ತಿರುಗಿಯೂ ನೋಡಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಗೂ ವಿರಾಟ್ ಕೊಹ್ಲಿ ನಡುವಿನ ರೋಚಕ ಸಂಗತಿಗಳನ್ನ ನೀವು ತಿಳಿದುಕೊಳ್ಳಲೇಬೇಕು.

ಇದನ್ನೂ ಓದಿ:

RCBಯ ವಜ್ರ ವಿರಾಟ್!   

ಒಂದೂವರೆ ತಿಂಗಳಿಂದ ಭಾರತದಲ್ಲಿ ಐಪಿಎಲ್ ಹಬ್ಬ ನಡೀತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡ್ತಿದೆ. ಸೀಸನ್ 17 ಟೂರ್ನಿ ಹತ್ತು ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ಐಪಿಎಲ್​ನಲ್ಲಿ ಆಡುತ್ತಿರೋ ಹತ್ತು ತಂಡಗಳಿಂದ ನೂರಾರು ಆಟಗಾರರಿದ್ರೂ ಯಾರೊಬ್ಬರೂ ಒಂದೇ ತಂಡಕ್ಕಾಗಿ ಆಡಿಲ್ಲ. ಆದ್ರೆ ಹದಿನೇಳು ವರ್ಷಗಳಿಂದ ಒಂದೇ ಫ್ರಾಂಚೈಸಿಗಾಗಿ ಆಡ್ತಿರೋ ಏಕೈಕ ಪ್ಲೇಯರ್ ಅಂದ್ರೆ ಅದು ನಮ್ಮ ಕಿಂಗ್ ವಿರಾಟ್ ಕೊಹ್ಲಿ ಮಾತ್ರ. 2008ರ ಮಾರ್ಚ್ 11ರಂದು 12 ಲಕ್ಷ ರೂಪಾಯಿಗೆ ವಿರಾಟ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದರು. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾಕ್ ಕಾಲಿಸ್ ಅವರಂತಹ ಸ್ಟಾರ್​​ ಆಟಗಾರರ ತಂಡದಲ್ಲಿ ಕಾಣಿಸಿಕೊಂಡರೂ ಕೊಹ್ಲಿ ಆರ್​ಸಿಬಿ ತಂಡಕ್ಕಾಗಿ ವಿಶೇಷ ಚಾಪು ಮೂಡಿಸಿದ್ದರು. 2013ರಲ್ಲಿ  ಆರ್​ಸಿಬಿ ನಾಯಕತ್ವ ವಹಿಸಿಕೊಂಡ ಕಿಂಗ್, 2016ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಆ ಆವೃತ್ತಿಯಲ್ಲಿ 4 ಶತಕ ಸೇರಿ 973 ರನ್‌ಗಳ ದಾಖಲೆಯ ಮೊತ್ತವನ್ನು ಗಳಿಸಿದ್ದರು. ಆದರೆ, ಕೊಹ್ಲಿ ಪಡೆ ಫೈನಲ್‌ನಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿತ್ತು. ನಾಯಕನಾಗಿ ವಿರಾಟ್​ ಕೊಹ್ಲಿ 143 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. 66ರಲ್ಲಿ ಗೆಲುವು, 70ರಲ್ಲಿ ಸೋಲು ಕಂಡಿದ್ದಾರೆ. ಆರ್​ಸಿಬಿ ಪರ ಒಟ್ಟಾರೆಯಾಗಿ ಈವರೆಗೂ 248 ಮ್ಯಾಚ್​ಗಳನ್ನ ಆಡಿದ್ದಾರೆ. 7,805 ರನ್ ಗಳಿಸಿದ್ದಾರೆ. 8 ಬಾರಿ ಶತಕ ಸಿಡಿಸಿದ್ದು, 54 ಬಾರಿ ಆಫ್ ಸೆಂಚುರಿ ಬಾರಿಸಿದ್ದಾರೆ. ಐಪಿಎಲ್ 2021ರ ಆವೃತ್ತಿಯಲ್ಲಿ ತನ್ನ ನಾಯಕತ್ವದಿಂದ ಕೆಳಗಿಳಿಯುವ ಮುನ್ನ ಕೊಹ್ಲಿ, 8 ವರ್ಷಗಳ ಕಾಲ ಆರ್‌ಸಿಬಿಯನ್ನು ಮುನ್ನಡೆಸಿದ್ದರು. 2022, 2023, 2024ರ ಋತುಗಳಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕೊಹ್ಲಿ ಆಡುತ್ತಿದ್ದಾರೆ.

17 ವರ್ಷಗಳಿಂದ ಆರ್​ಸಿಬಿ ಪರ ಆಡ್ತಿರುವ ಕೊಹ್ಲಿಗೆ ಬೇರೆ ಫ್ರಾಂಚೈಸಿಗಳಿಂದಲೂ ಆಫರ್​ ಬಂದಿತ್ತು. ಹರಾಜಿಗೆ ಬರುವಂತೆ ಸಾಕಷ್ಟು ಫ್ರಾಂಚೈಸಿಗಳು ಕೇಳಿದ್ದವು. ಆದರೂ ಆರ್​ಸಿಬಿ ಜೊತೆಗೆ ಉಳಿಯಲು ಕೊಹ್ಲಿ ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಕಿಂಗ್ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ನನ್ನನ್ನು ಹೇಗಾದರೂ ಹರಾಜಿಗೆ ಬರಲು ಸಾಕಷ್ಟು ಫ್ರಾಂಚೈಸಿಗಳು ಪ್ರಯತ್ನಿಸಿದವು. ಹಲವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ಆರ್​ಸಿಬಿ ಜೊತೆಗಿನ ನಿಷ್ಠೆ ನನ್ನನ್ನು ಇಲ್ಲೇ ಉಳಿಸಿಕೊಂಡಿದೆ. ಹಾಗಾಗಿ ಆರ್​ಸಿಬಿ ಹೊರತುಪಡಿಸಿ ಬೇರೊಂದು ತಂಡಕ್ಕೆ ಹೋಗಲ್ಲ. ಆರ್​ಸಿಬಿಯೊಂದಿಗೆ ನನ್ನ ಕೊನೆಯ ಐಪಿಎಲ್ ಆಗಿರಲಿದೆ ಎಂದಿದ್ದಾರೆ. ಅದೇ ನಿಷ್ಠೆಯಿಂದಲೇ ಪ್ರತೀ ವರ್ಷವೂ ತಂಡಕ್ಕಾಗಿ ಡಬಲ್ ಎಫರ್ಟ್ ಹಾಕಿ ಆಡ್ತಿದ್ದಾರೆ. ಈ ವರ್ಷವೂ ಅತ್ಯುತ್ತಮ ಪರ್ಫಾಮೆನ್ಸ್ ನೀಡ್ತಿದ್ದಾರೆ.

ಆರೆಂಜ್ ಕ್ಯಾಪ್ ಸರದಾರ!  

ಸೀಸನ್ 17ನಲ್ಲಿ ಆರ್​ಸಿಬಿ ಆಡಿದ್ದ ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ 21 ರನ್, ಪಂಜಾಬ್ ವಿರುದ್ಧ 77 ರನ್, ಕೊಲ್ಕತ್ತಾ ವಿರುದ್ಧ 83, ಲಕ್ನೋ ವಿರುದ್ಧ 22, ರಾಜಸ್ತಾನ್ ರಾಯಲ್ಸ್ ವಿರುದ್ಧ 113, ಮುಂಬೈ ವಿರುದ್ಧ 3, ಹೈದ್ರಾಬಾದ್ ವಿರುದ್ಧ 42 ರನ್ ಬಾರಿಸಿದ್ದರು. ಹಾಗೇ ಕೊಲ್ಕತ್ತಾ ವಿರುದ್ಧದ 2ನೇ ಪಂದ್ಯದಲ್ಲಿ 18, ಹೈದ್ರಾಬಾದ್ ವಿರುದ್ಧ 51, ಗುಜರಾತ್ ವಿರುದ್ಧ 70 ರನ್ ಗಳಿಸಿದ್ದರು. ಕಳೆದ ಶನಿವಾರ ಗುಜರಾತ್ ವಿರುದ್ಧ ನಡೆದಿದ್ದ ಮತ್ತೊಂದು ಮ್ಯಾಚ್​ನಲ್ಲಿ 42 ರನ್ ಕಲೆ ಹಾಕಿದ್ದಾರೆ. ಈ ಮೂಲಕ ಈ ಸೀಸನ್​ಗಲ್ಲಿ ಆಡಿರುವ 11 ಪಂದ್ಯಗಳಿಂದ ಒಟ್ಟಾರೆ 542 ರನ್​​ ಸಿಡಿಸಿದ್ದಾರೆ. ಈ ಸೀಸನ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್​​ಗಳ ಪಟ್ಟಿಯಲ್ಲಿ ಟಾಪ್ ಪ್ಲೇಸ್​ನಲ್ಲಿದ್ದ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ.

ನಿಷ್ಠಾವಂತ ಅಭಿಮಾನಿಗಳನ್ನ ಹೊಂದಿರೋ ತಂಡ ಅಂತಾನೇ ಕರೆಸಿಕೊಳ್ಳೋ ಆರ್​ಸಿಬಿಯಲ್ಲಿ ಕಿಂಗ್ ವಿರಾಟ್ ಕೂಡ ಅಷ್ಟೇ ನಿಷ್ಠೆಯಿಂದ ತಂಡದಲ್ಲಿದ್ದಾರೆ. ಐಪಿಎಲ್ ಆರಂಭವಾದ ಡೇ ಒನ್ ನಿಂದಲೂ ಆರ್​ಸಿಬಿ ಜೆರ್ಸಿ ತೊಟ್ಟು ಆಡಿದ್ದಾರೆ. ಆರ್​ಸಿಬಿ ಒಮ್ಮೆಯೂ ಕಪ್ ಗೆಲ್ಲದಿದ್ರೂ, ಇತರೆ ಆಟಗಾರರು ಕಳಪೆ ಪ್ರದರ್ಶನ ತೋರಿದ್ರೂ ಕಿಂಗ್ ಮಾತ್ರ ತನ್ನ ಗತ್ತು ಮರೆತಿಲ್ಲ. ಕಿಂಗ್ ಈಸ್ ಆಲ್ವೇಸ್ ಕಿಂಗ್ ಅನ್ನೋ ಹಾಗೇ ಆರ್​ಸಿಬಿ ತಂಡ ಹಾಗೂ ಅಭಿಮಾನಿಗಳ ಪಾಲಿಗೆ ವಿರಾಟ್ ಕೊಹ್ಲಿಯೇ ಹೀರೋ.

Shwetha M