7 ವರ್ಷಗಳ ಕಾಲ ಆರ್ ಸಿಬಿ ಪರ ಆಡಿರುವ ಸಿರಾಜ್ – ಅಣ್ಣನಂತಿರೋ ಕೊಹ್ಲಿ ವಿಕೆಟ್ ಬೇಟೆಯಾಡ್ತಾರಾ?

ಐಪಿಎಲ್ ಇರ್ಲಿ.. ಅಂತಾರಾಷ್ಟ್ರೀಯ ಪಂದ್ಯವೇ ಆಗಿರ್ಲಿ. ಒಂದೇ ಟೀಂ ಪರ ಕಣಕ್ಕಿಳಿಯುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಒಂದೊಳ್ಳೆ ಬಾಂಧವ್ಯ ಇದೆ. ಸಹೋದರರಂತೆ ಒಬ್ಬರ ಬೆನ್ನಿಗೆ ಒಬ್ರು ನಿಲ್ತಾರೆ. ಅದ್ರಲ್ಲೂ ಸಿರಾಜ್ ರನ್ನ ಆನ್ ದಿ ಫೀಲ್ಡ್ನಲ್ಲಿ ಯಾರಾದ್ರೂ ಕೆಣಕಿದ್ರೆ ಫಸ್ಟ್ ಬರೋದೇ ಕಿಂಗ್ ಕೊಹ್ಲಿ. ಗ್ರೌಂಡ್ ನಲ್ಲಿ ಕೊಹ್ಲಿ ಇದ್ದಾರೆ ಅಂದ್ರೆ ಸಿರಾಜ್ ಕೂಡ ಅಗ್ರೆಸ್ಸಿವ್ ಌಟಿಟ್ಯೂಡ್ನಲ್ಲೇ ಇರ್ತಾರೆ. ಬಟ್ ಈಗ ಅದೇ ಕೊಹ್ಲಿ ಮತ್ತು ಸಿರಾಜ್ ಎದುದು ಬದುರಾಗ್ತಿದ್ದಾರೆ. ಬುಧವಾರ ಆರ್ ಸಿಬಿ ಪರ ಕಿಂಗ್ ಕೊಹ್ಲಿ ಕಣಕ್ಕಿಳಿದ್ರೆ ಜಿಟಿ ಪರ ಸಿರಾಜ್ ಆಡಲಿದ್ದಾರೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಅಬ್ಬರಿಸಲಿದೆ ಮಳೆ – ಕರ್ನಾಟಕದ ಹಲವೆಡೆ ಮಳೆ ಪೂರ್ವ ಮುಂಗಾರು ಆರ್ಭಟ ಶುರು
ಮೊಹಮ್ಮದ್ ಸಿರಾಜ್ ಸತತ 7 ವರ್ಷಗಳ ಕಾಲ ಆರ್ ಸಿಬಿ ತಂಡದ ಪರ ಕಣಕ್ಕಿಳಿದಿದ್ರು. 2018 ರಿಂದ 2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 87 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ ಒಟ್ಟು 303.2 ಓವರ್ಗಳನ್ನು ಎಸೆದಿದ್ದರು. ಈ ವೇಳೆ 83 ವಿಕೆಟ್ ಕಬಳಿಸಿ ಆರ್ಸಿಬಿ ಪರ ಅತ್ಯಧಿಕ ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ. ಆದ್ರೂ ಆರ್ ಸಿಬಿ ಮೆಗಾ ಹರಾಜಿಗೂ ಮುನ್ನ ಸಿರಾಜ್ ರನ್ನ ತಂಡದಿಂದ ಕೈ ಬಿಟ್ಟಿತ್ತು. ಹಾಗೇ ಆರ್ ಟಿಎಂ ಕಾರ್ಡ್ ಬಳಸೋಕೆ ಅವಕಾಶ ಇದ್ರೂ ಬಳಸಿರಲಿಲ್ಲ. ಹೀಗಾಗಿ ಜಿಟಿ ತಂಡ 12.25 ಕೋಟಿ ರೂಪಾಯಿಗೆ ಸಿರಾಜ್ ರನ್ನ ಖರೀದಿ ಮಾಡಿತ್ತು.
ಭಾರತದ ಪ್ರಮುಖ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಮೊಹಮ್ಮದ್ ಸಿರಾಜ್, ಪವರ್‌ಪ್ಲೇನ ಆರಂಭದಲ್ಲಿ ಹೊಸ ಚೆಂಡನ್ನು ಸ್ವಿಂಗ್ ಮಾಡೋ ಮೂಲಕ ಎದುರಾಳಿಗಳನ್ನ ಕಾಡಬಲ್ಲರು. ಹೈದರಾಬಾದ್‌ನಲ್ಲಿ ಜನಿಸಿದ ಈ ವೇಗಿ 2017 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ರು. ಸಿರಾಜ್ ತಮ್ಮ ಮೊದಲ ಓವರ್‌ನಲ್ಲೇ ತಮ್ಮ ಮೊದಲ ವಿಕೆಟ್ ಪಡೆಯುವ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಿರಾಜ್ ತಮ್ಮ ಚೊಚ್ಚಲ ಸೀಸನ್ ವಿನಲ್ಲಿ ಆರು ಪಂದ್ಯಗಳಲ್ಲಿ ಕಾಣಿಸಿಕೊಂಡರು ಮತ್ತು ಹತ್ತು ವಿಕೆಟ್‌ಗಳನ್ನು ಪಡೆದರು. ಆದ್ರೆ ಮರುವರ್ಷವೇ ಅಂದ್ರೆ 2018 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿಕೊಂಡಿದ್ರು.
ಈ ಸೀಸನ್ ಗುಜರಾತ್ ಪರ ಆಡ್ತಿರುವ ಸಿರಾಜ್ ಫಸ್ಟ್ ಮ್ಯಾಚ್ ನಲ್ಲೇ ಚಚ್ಚಿಸಿಕೊಂಡಿದ್ರು. ಗುಜರಾತ್ ಟೈಟಾನ್ಸ್ ಪರ ಚೊಚ್ಚಲ ಪಂದ್ಯವಾಡಿದ ಮೊಹಮ್ಮದ್ ಸಿರಾಜ್ 4 ಓವರ್ಗಳಲ್ಲಿ ನೀಡಿದ್ದು ಬರೋಬ್ಬರಿ 54 ರನ್ಗಳು. ಈ ವೇಳೆ 3 ಸಿಕ್ಸ್ ಹಾಗೂ 8 ಫೋರ್ಗಳನ್ನು ಚಚ್ಚಿಸಿಕೊಂಡಿದ್ದಾರೆ. ಇದಾಗ್ಯೂ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಅದರಲ್ಲೂ ಮೊಹಮ್ಮದ್ ಸಿರಾಜ್ ಎಸೆದ 20ನೇ ಓವರ್ನಲ್ಲಿ ಪಂಜಾಬ್ ಕಿಂಗ್ಸ್ ಬ್ಯಾಟರ್ಗಳು ಬರೋಬ್ಬರಿ 23 ರನ್ ಚಚ್ಚಿದರು. ಈ ಮೂಲಕ ಪಂಜಾಬ್ ಪಡೆ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು. ಈ ದುಬಾರಿ ಓವರ್ ಗುಜರಾತ್ ಸೋಲಿಗೆ ಕಾರಣವಾಯಿತು. ಗುಜರಾತ್ ಟೈಟಾನ್ಸ್ ತಂಡವು ಅಂತಿಮವಾಗಿ 232 ರನ್ಗಳಿಸಿತು. ಅಲ್ಲದೆ ಕೇವಲ 11 ರನ್ಗಳಿಂದ ಸೋಲೊಪ್ಪಿಕೊಂಡಿತು. ಅಂದರೆ ಕೊನೆಯ ಓವರ್ನಲ್ಲಿ ಸಿರಾಜ್ ನೀಡಿದ 22 ರನ್ಗಳೇ ಗುಜರಾತ್ ಟೈಟಾನ್ಸ್ ತಂಡದ ಸೋಲಿಗೆ ಕಾರಣವಾಯ್ತು ಎನ್ನುವ ಚರ್ಚೆಗಳು ನಡೆದಿವೆ. ಇನ್ನು ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 4 ಓವರ್ಗಳಲ್ಲಿ 32 ರನ್ ಬಿಟ್ಟುಕೊಟ್ಟಿದ್ದ ಸಿರಾಜ್ 2 ವಿಕೆಟ್ ಪಡೆದಿದ್ರು.
ಇನ್ನು ಆರ್ ಸಿಬಿಯನ್ನ ತಮ್ಮ ಸೆಕೆಂಡ್ ಹೋಂ ಎಂದುಕೊಂಡಿದ್ದ ಸಿರಾಜ್ಗೂ ಕೂಡ ಬೆಂಗಳೂರು ತಂಡವನ್ನ ಬಿಟ್ಟು ಹೋಗೋದು ಇಷ್ಟ ಇರಲಿಲ್ಲ. ಹಾಗಂತ ಬಿಟ್ಟು ಹೋಗದೆ ಬೇರೆ ದಾರಿನೂ ಇರಲಿಲ್ಲ. ಹೀಗಾಗಿ ಜಿಟಿ ಸೇರಿದ ಮೇಲೆ ಫ್ಯಾನ್ಸ್ಗೆ ಭಾವುಕ ಪತ್ರ ಬರೆದಿದ್ರು. ನಾವು ಸೋತಾಗ ನಿಮ್ಮ ಕಣ್ಣೀರನ್ನು ನೋಡಿದ್ದೇನೆ. ನಾವು ಗೆದ್ದಾಗ ನಿಮ್ಮ ಸಂಭ್ರಮಾಚರಣೆಗಳಿಗೆ ನಾನು ಸಾಕ್ಷಿಯಾಗಿದ್ದೇನೆ. ನಿಮ್ಮಂತಹ ಅಭಿಮಾನಿ ಬಳಗ ಜಗತ್ತಿನಲ್ಲಿ ಎಲ್ಲೂ ಇಲ್ಲ ಎಂದು ಬರೆದುಕೊಂಡಿದ್ರು. ಅದೆಲ್ಲಾ ಏನೇ ಇದ್ರೂ ಇತ್ತೀಚಿನ ವರ್ಷಗಳಲ್ಲಿ ಮೊಹಮ್ಮದ್ ಸಿರಾಜ್ ಎಕ್ಸ್ಪೆನ್ಸಿವ್ ಓವರ್ಗಳನ್ನ ಹಾಕ್ತಿದ್ದು ವಿಕೆಟ್ ಪಡೆಯುವಲ್ಲಿ ಹಿಂದೆ ಬೀಳ್ತಿದ್ದಾರೆ. ಹೀಗಾಗೇ ಆರ್ ಸಿಬಿ ಫ್ರಾಂಚೈಸಿ ತಂಡದಿಂದ ಕೈ ಬಿಟ್ಟಿತ್ತು. ಟೀಂ ಇಂಡಿಯಾದಲ್ಲೂ ಬಾರ್ಡರ್ ಗವಾಸ್ಕರ್ ಸರಣಿ ಬಳಿಕ ಸಿರಾಜ್ ರನ್ನ ಚಾಂಪಿಯನ್ಸ್ ಟ್ರೋಫಿಯಿಂದ ಕೈ ಬಿಡ್ಲಾಗಿತ್ತು. ಬಟ್ ಈಗ ಐಪಿಎಲ್ ನಲ್ಲಿ ಜಿಟಿ ಪರ ಆಡ್ತಿರೋ ಸಿರಾಜ್ ಆರ್ ಸಿಬಿ ವಿರುದ್ಧ ಆಡೋಕೆ ರೆಡಿಯಾಗಿದ್ದಾರೆ. ಅದ್ರಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮತ್ತು ಸಿರಾಜ್ ಬೌಲಿಂಗ್ ಹೇಗಿರುತ್ತೆ ಅಂತಾ ನೋಡೋಕೆ ಅಭಿಮಾನಿಗಳು ಕಾಯ್ತಿದ್ದಾರೆ.