ಮಳೆಯಲ್ಲಿ ಕರಗುತ್ತಾ RCB ಕಪ್? – 18ರ ಆಟ.. ಬೆಂಗಳೂರಿಗೆ ಅದೃಷ್ಟ?
ಕೊಹ್ಲಿ Vs ಧೋನಿ.. ಗೆಲ್ಲೋದ್ಯಾರು?
ಬಿಸಿಲ ಬೇಗೆಯಲ್ಲಿ ಬೇಯ್ತಿದ್ದ ಬೆಂಗಳೂರಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಬರ್ತಿದೆ. ಸೂರ್ಯನ ಪ್ರತಾಪಕ್ಕೆ ಬೇಸತ್ತು ಹೋಗಿದ್ದ ಜನ ನಿಟ್ಟುಸಿರು ಬಿಡ್ತಿದ್ದಾರೆ. ಆದ್ರೀಗ ಅದೇ ಜನ ಅಯ್ಯೋ ಮಳೆರಾಯ ಅದೊಂದು ದಿನ ಮಾತ್ರ ಬ್ರೇಕ್ ತಗೊಳಪ್ಪಾ ಅಂತಾ ಬೇಡಿಕೊಳ್ತಿದ್ದಾರೆ. ಶನಿವಾರ ಸಂಜೆ ಮೇಲೆ ಅಪ್ಪಿ ತಪ್ಪಿಯೂ ಬೆಂಗಳೂರು ಕಡೆ ಬರ್ಬೇಡಪ್ಪ ಅಂತಾ ಪ್ರಾರ್ಥಿಸುತ್ತಿದ್ದಾರೆ. ಯಾಕಂದ್ರೆ ಅದೇ ದಿನ ಸಿಲಿಕಾನ್ ಸಿಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ ಇದೆ. ಕಪ್ ಗೆದ್ದಿಲ್ಲ ಅನ್ನೋ ಬರ ನೀಗಿಸೋಕೆ ಒಂದೊಳ್ಳೆ ಅವಕಾಶ ಇದೆ. ಅಕಸ್ಮಾತ್ ಮಳೆ ಬಂದ್ರೆ ಆರ್ಸಿಬಿ ಟ್ರೋಫಿ ಕನಸು ಅದೇ ಮಳೆ ನೀರಲ್ಲಿ ಕೊಚ್ಚಿ ಹೋಗಲಿದೆ. ಮಳೆ ಬಂದ್ರೆ ಸಿಎಸ್ಕೆಗೆ ಹೇಗೆ ಲಾಭವಾಗುತ್ತೆ? ಬೆಂಗಳೂರು ಟೀಮ್ಗೆ ಆಗೋ ನಷ್ಟ ಎಂಥಾದ್ದು..? ಹಾಗೇ 18ರ ಆಟದ ಲೆಕ್ಕಾಚಾರ ಹೇಗಿದೆ..? ಕೊಹ್ಲಿ ಜೆರ್ಸಿ ನಂಬರ್ ಲಕ್ಕಿ ಆಗುತ್ತಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್ಗೆ ಸೋಲುಣಿಸಿದ ಪಂಜಾಬ್ ಕಿಂಗ್ಸ್! – ಆರ್ ಆರ್ ಪ್ಲೇ ಆಫ್ ಕನಸು ಭಗ್ನ?
ಬ್ಯಾಕ್ ಟು ಬ್ಯಾಕ್ ಐದು ಪಂದ್ಯಗಳಲ್ಲಿ ಭರ್ಜರಿಯಾಗಿ ಗೆದ್ದಿರೋ ಆರ್ಸಿಬಿ ತಂಡಕ್ಕೆ ಪ್ಲೇಆಫ್ಗೇರಲು ಲಾಸ್ಟ್ ಚಾನ್ಸ್ ಇದು. 13 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು 12 ಅಂಕದೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿದೆ. ಆರ್ಸಿಬಿಗಿಂತ ಡೆಲ್ಲಿ ಕ್ಯಾಪಿಟಲ್ಸ್ ಒಂದು ಸ್ಥಾನ ಮೇಲಿದ್ರೂ ಕೂಡ ನೆಟ್ ರನ್ ರೇಟ್ ಕಡಿಮೆ ಇರೋದ್ರಿಂದ ಟೂರ್ನಿಯಿಂದ ಹೊರ ಬಿದ್ದಿದೆ. ಹೀಗಾಗಿ ಆರ್ಸಿಬಿಗೆ ಟಾಪ್ ಫೋರ್ಗೆ ಹೋಗಲು ಮುಂದಿನ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಬೇಕಿದೆ. ಆದ್ರೆ ಬೆಂಗಳೂರು ಟೀಂ ಅಭಿಮಾನಿಗಳಿಗೆ ತಂಡ ಗೆಲ್ಲುತ್ತೋ ಇಲ್ವೋ ಅನ್ನೋದಕ್ಕಿಂತ ಮಳೆ ಬಂದ್ರೆ ಹೆಂಗಪ್ಪ ಅನ್ನೋ ಭೀತಿ ಕಾಡ್ತಿದೆ. ಹೀಗಾಗಿ ಮಳೆ ಬರೋದು ಬೇಡ ಅಂತಾ ದೇವರಲ್ಲಿ ಬೇಡಿಕೊಳ್ತಿದ್ದಾರೆ. ಆರ್ಸಿಬಿ ಫ್ಯಾನ್ಸ್ ಮಾತ್ರ ಅಲ್ಲ ಆರ್ಸಿಬಿ ಟೀಂ ಕೂಡ ಇದನ್ನೇ ಕೇಳಿಕೊಳ್ತಿದೆ. ರೇನ್ ರೇನ್ ಗೋ ಅವೇ ಅಂತಾ ಪ್ಲೇಯರ್ಸ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಮೇ 18ರಂದು ಚೆನ್ನೈ ಮತ್ತು ಬೆಂಗಳೂರು ಟೀಮ್ಗಳ ನಡುವೆ ಮಾಡು ಇಲ್ಲವೇ ಮಡಿ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎರಡೂ ತಂಡಗಳಿಗಿದೆ. ಈ ಮ್ಯಾಚ್ನಲ್ಲಿ ಯಾರು ಗೆಲ್ತಾರೋ ಅವ್ರಿಗೆ ಪ್ಲೇಆಫ್ಗೇರುವ ಅವಕಾಶ ಸಿಗ್ಲಿದೆ. ಇಲ್ಲದಿದ್ರೆ ಮತ್ತೊಮ್ಮೆ ಈ ಸಲ ಕಪ್ ನಮ್ದಲ್ಲ ಅಂತಾ ಅಭಿಮಾನಿಗಳು ಮತ್ತೊಂದು ವರ್ಷಕ್ಕಾಗಿ ಕಾಯ್ಬೇಕು. ಅಷ್ಟಕ್ಕೂ ಮಳೆ ಬಂದ್ರೆ ಏನಾಗುತ್ತೆ ಅನ್ನೋದನ್ನ ಹೇಳ್ತೇನೆ ನೋಡಿ.
ಮಳೆ ಬಂದ್ರೆ ಆರ್ ಸಿಬಿ ಔಟ್!
ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೂ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಇದೇ ದಿನ ಬೆಂಗಳೂರಲ್ಲಿ 90 ಪ್ರತಿಶತ ಮಳೆ ಬೀಳುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಮಳೆಯಿಂದಾಗಿ ಅವತ್ತಿನ ಪಂದ್ಯ ವಾಶ್ ಔಟ್ ಆದರೆ ಆರ್ಸಿಬಿ, ಈ ಬಾರಿಯ ಟೂರ್ನಿಯಿಂದ ಹೊರ ಬೀಳಲಿದೆ. ಮಳೆ ಬಂದು ರದ್ದಾದರೆ ಎರಡು ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಈಗಾಗಲೇ 14 ಅಂಕಗಳಿಸಿರುವ ಸಿಎಸ್ಕೆ 15 ಪಾಯಿಂಟ್ಸ್ನೊಂದಿಗೆ ಪ್ಲೇ-ಆಫ್ರ ಪ್ರವೇಶ ಮಾಡಲಿದೆ. ನಮ್ಮ ಆರ್ಸಿಬಿಗೆ ಪ್ರಸ್ತುತ 12 ಅಂಕ ಇರೋದ್ರಿಂದ 13 ಅಂಕಗಳೊಂದಿಗೆ ಟೂರ್ನಿಯಿಂದ ಹೊರ ಬೀಳಲಿದೆ. ಆರ್ಸಿಬಿ ಮತ್ತು ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾದರೆ KKR, RR, CSK, SRH ಪ್ಲೇ-ಆಫ್ಗೆ ಅರ್ಹತೆ ಪಡೆಯುತ್ತವೆ. ಕೆಕೆಆರ್ ಮತ್ತು ಆರ್ಆರ್ ಕ್ವಾಲಿಫೈಯರ್ನ ಮೊದಲ ಪಂದ್ಯವನ್ನು ಆಡಲಿವೆ. ಸಿಎಸ್ಕೆ ಮತ್ತು ಎಸ್ಆರ್ಹೆಚ್ ಎಲಿಮಿನೇಟರ್ ಪಂದ್ಯದಲ್ಲಿ ಆಡಲಿವೆ. ಆರ್ಆರ್ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ ಪ್ರವೇಶ ಮಾಡುತ್ತದೆ.
ಒಂದ್ವೇಳೆ ಅಭಿಮಾನಿಗಳ ಆಸೆಯಂತೆ ಮಳೆ ಬರ್ಲಿಲ್ಲ ಅಂತಾನೇ ಇಟ್ಕೊಳ್ಳೋಣ. ಚೆನ್ನೈ ಮತ್ತು ಬೆಂಗಳೂರು ಪಂದ್ಯನೂ ನಡೀತು. ಆದ್ರೆ ಆರ್ಸಿಬಿಗೆ ಇಲ್ಲೂ ಬಿಗ್ ಟಾಸ್ಕ್ ಇದೆ. ಬರೀ ಗೆಲ್ಲೋದಷ್ಟೇ ಅಲ್ಲ ಇಂತಿಷ್ಟೇ ರನ್ಗಳ ಅಂತರ, ಇಂಥದ್ದೇ ಓವರ್ನಲ್ಲಿ ಗೆಲ್ಲಬೇಕು ಅನ್ನೋ ಲೆಕ್ಕಾಚಾರ ಇದೆ. ಅದ್ರಲ್ಲೂ ಆರ್ಸಿಬಿ ಪಾಲಿಗೆ 18ರ ಆಟ ಅದೃಷ್ಟವೋ ಕಂಟಕವೋ ಅನ್ನೋ ಆತಂಕವೂ ಇದೆ. ಹಿಂದಿನ ಸೀಸನ್ಗಳಲ್ಲಿ ಇದೇ ದಿನಾಂಕದಂದು ನಡೆದಿರೋ ಪಂದ್ಯಗಳನ್ನೂ ತಾಳೆ ಹಾಕಲಾಗ್ತಿದೆ. ಈ ಮೂಲಕ ಆರ್ಸಿಬಿ ಅಭಿಮಾನಿಗಳು ಚೆನ್ನೈ ವಿರುದ್ಧದ ಪಂದ್ಯದಲ್ಲಿ ನಮ್ಮದೇ ಗೆಲುವು ಎಂಬ ವಿಶ್ವಾಸದಲ್ಲಿದ್ದಾರೆ. ಅದಕ್ಕಾಗಿ ಕೆಲ ಸಾಕ್ಷಿಗಳನ್ನು ಮುಂದಿಟ್ಟು ಸಮರ್ಥನೆಯನ್ನೂ ಮಾಡಿಕೊಳ್ತಿದ್ದಾರೆ.
ಆರ್ ಸಿಬಿಗೆ 18 ಲಕ್ಕಿನಾ?
ಮೇ 18 ಆರ್ಸಿಬಿ ಪಾಲಿಗೆ ಲಕ್ಕಿ ದಿನ ಆಗುತ್ತೆ ಅಂತಾ ಫ್ಯಾನ್ಸ್ ವಿಶ್ವಾದಲ್ಲಿದ್ದಾರೆ. ಯಾಕಂದ್ರೆ ಮೇ 18 ರಂದು ಇದುವರೆಗೂ ಆರ್ಸಿಬಿ ನಾಲ್ಕು ಪಂದ್ಯಗಳನ್ನು ಆಡಿದ್ದು, ನಾಲ್ಕು ಪಂದ್ಯಗಳಲ್ಲೂ ಬೆಂಗಳೂರು ಸಾಧಿಸಿದೆ. ಈ ಪೈಕಿ ಸಿಎಸ್ಕೆ ವಿರುದ್ಧದ ಪಂದ್ಯವೂ ಇದೆ. 2013 ರಲ್ಲಿ ಆರ್ಸಿಬಿ ಮೇ 18 ರಂದು CSK ವಿರುದ್ಧ ಆಡಿದ ಪಂದ್ಯದಲ್ಲಿ ಗೆದ್ದಿತ್ತು. 2014ರ ಇದೇ ದಿನಾಂಕದಂದು ಸಿಎಸ್ಕೆಯನ್ನು ಸೋಲಿಸಿದ್ದರು. ಮತ್ತು 2016 ರಲ್ಲಿ ಮೇ 18 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಆರ್ಸಿಬಿ ಗೆಲುವು ಪಡೆದಿತ್ತು. ಇನ್ನು ಕಳೆದ ವರ್ಷ ಇದೇ ದಿನಾಂಕದಂದು ಆರ್ಸಿಬಿ ತಂಡ ಎಸ್ಆರ್ಎಚ್ ತಂಡವನ್ನು ಸೋಲಿಸಿತ್ತು. ಆರ್ಸಿಬಿ ಈಗ ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ. ಹೀಗಾಗಿ ಈ ಬಾರಿಯೂ ಗೆಲುವು ಆರ್ ಸಿಬಿ ತಂಡದ್ದು ಎಂಬ ವಾದ ಅಭಿಮಾನಿಗಳದ್ದು. ಇದ್ರ ಜೊತೆಗೆ ಮೇ 18 ರಂದು ನಡೆದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಮೇ 18 ರಂದು ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ 4 ಪಂದ್ಯಗಳನ್ನು ಆಡಿದ್ದು, ಔಟಾಗದೆ ಸಿಎಸ್ಕೆ ವಿರುದ್ಧ 56 ರನ್, 27 ರನ್, ಪಂಜಾಬ್ ಕಿಂಗ್ಸ್ ವಿರುದ್ಧ 113 ರನ್ ಗಳಿಸಿದ್ದರು. ಕಳೆದ ಆವೃತ್ತಿಯಲ್ಲಿ ಎಸ್ಆರ್ಎಚ್ ವಿರುದ್ಧ 100 ರನ್ ಸಿಡಿಸಿದ್ದರು. ಹಾಗಾಗಿ ಮೇ 18 ರಂದು ಕಿಂಗ್ ಕೊಹ್ಲಿ, ಮೂರನೇ ಶತಕ ಬಾರಿಸುತ್ತಾರೆ ಎಂದು ಅಭಿಮಾನಿಗಳು ಭವಿಷ್ಯ ಹೇಳ್ತಿದ್ದಾರೆ. ಅಲ್ದೇ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಕನಿಷ್ಠ 18 ರನ್ಗಳಿಂದ ಗೆದ್ದರೆ, ಸಿಎಸ್ಕೆ ನೆಟ್ ರನ್ ರೇಟ್ ಅನ್ನು ಮೀರಿಸಿ ಪ್ಲೇ ಆಫ್ ಪ್ರವೇಶಿಸಲು ಸಾಧ್ಯವಾಗಲಿದೆ. 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟ್ ಮಾಡಿದರೆ ಆರ್ಸಿಬಿ 18.1 ಓವರ್ಗಳಲ್ಲಿ ಗುರಿ ತಲುಪ ಬೇಕಿದೆ. ಇಲ್ಲಿಯೂ ಕೂಡ 18 ಸಂಖ್ಯೆ ಆರ್ಸಿಬಿ ಪ್ಲೇ ಆಫ್ ಅವಕಾಶದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಿಂತ ಮುಖ್ಯ ವಿಚಾರ ಎಂದರೇ ವಿರಾಟ್ ಕೊಹ್ಲಿ ಜೆರ್ಸಿ ನಂಬರ್ ಕೂಡ 18 ಆಗಿದ್ದು, ಕಿಂಗ್ ಕೊಹ್ಲಿ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡುತ್ತಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಗೆ ಗೆಲುವು ಖಚಿತ, ಪ್ಲೇ ಆಫ್ ಪ್ರವೇಶಿಸುವುದು ಉಚಿತ ಅಂತ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ಬೆಂಗಳೂರು ಚೆನ್ನೈ ಪಂದ್ಯಕ್ಕೆ ಮಳೆ ಭೀತಿ ಜೋರಾಗಿದೆ. ಒಂದ್ಕಡೆ ಫ್ಯಾನ್ಸ್ ಶನಿವಾರ ಮಳೆ ಬರೋದು ಬೇಡಪ್ಪ ಅಂತಾ ಬೇಡಿಕೊಳ್ತಿದ್ದಾರೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಇದೇ ಆತಂಕ ಕಾಡುತ್ತಿದೆ. ಶನಿವಾರ ಆರ್ಸಿಬಿಗೆ ಬೌಂಡರಿ ಮತ್ತು ವಿಕೆಟ್ಗಳ ಮಳೆಯಾಗಬೇಕೆಂದು ನಾವು ಬಯಸುತ್ತೇವೆ ಎಂದು ಆರ್ಸಿಬಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ. ಹಾಗೇ ಕರ್ಣ್ ಶರ್ಮಾ ಕೈ ಮುಗಿದು ನಿಂತಿರೋ ಫೋಟೋವನ್ನ ಪೋಸ್ಟ್ ಮಾಡಿ ರೇನ್ ರೇನ್ ಗೋ ಅವೇ ಅಂತಾ ಬೇಡಿಕೊಳ್ತಿದ್ದಾರೆ ಎನ್ನುವ ರೀತಿಯಲ್ಲಿ ಶೇರ್ ಮಾಡಿದೆ.