ಸತತ ನಾಲ್ಕು ಗೆಲುವು ದಾಖಲಿಸಿ ಅಗ್ರಸ್ಥಾನ ಅಲಂಕರಿಸಿದ RCB – ಸ್ಮೃತಿ ಮಂದಾನ ಶತಕ ಜಸ್ಟ್ ಮಿಸ್

ಸತತ ನಾಲ್ಕು ಗೆಲುವು ದಾಖಲಿಸಿ ಅಗ್ರಸ್ಥಾನ ಅಲಂಕರಿಸಿದ RCB – ಸ್ಮೃತಿ ಮಂದಾನ ಶತಕ ಜಸ್ಟ್ ಮಿಸ್

ಮಹಿಳಾ ಪ್ರೀಮಿಯರ್ ಲೀಗ್‌ ನಲ್ಲಿ ಆರ್‌ಸಿಬಿ ತಂಡದ ಗೆಲುವಿನ ಓಟ ಮುಂದುವರೆದಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್​​ಗಳ ಗೆಲುವು ಸಾಧಿಸಿದೆ. ಈ ಮೂಲಕ ಬೆಂಗಳೂರು ಸಿಂಹಿಣಿಯರು ಪಾಯಿಂಟ್ಸ್ ಟೇಬಲ್ಸ್ ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.

ಇದನ್ನೂ ಓದಿ:WPL ಇತಿಹಾಸದಲ್ಲಿ RCBಗೆ ಹ್ಯಾಟ್ರಿಕ್ ಗೆಲುವು – ಗುಜರಾತ್ ಜೈಂಟ್ಸ್ ವಿರುದ್ಧ 32 ರನ್‌ಗಳ ಭರ್ಜರಿ

ಆರ್​ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದೆ. ಡೆಲ್ಲಿ ತಂಡ ಮತ್ತೊಂದು ಹೀನಾಯ ಸೋಲನ್ನು ಅನುಭವಿಸಿದೆ. ಶನಿವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡವು ಶೆಫಾಲಿ ವರ್ಮಾ ಅವರ 62 ರನ್‌ಗಳ ಇನ್ನಿಂಗ್ಸ್‌ನಿಂದ 20 ಓವರ್‌ಗಳಲ್ಲಿ 10 ವಿಕೆಟ್‌ಗಳಿಗೆ 166 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ, ಸ್ಮೃತಿ ಮಂಧಾನ ಮತ್ತು ಜಾರ್ಜಿಯಾ ವಾಲ್ ಅವರ ಅರ್ಧಶತಕದ ಸಹಾಯದಿಂದ ಆರ್​​ಸಿಬಿ 18.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 169 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈ ಗೆಲುವಿನೊಂದಿಗೆ ಆರ್​ಸಿಬಿ ತಂಡವು ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಡೆಲ್ಲಿ ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಡೆಲ್ಲಿ ವಿರುದ್ಧದ ಗೆಲುವಿನಲ್ಲಿ ನಾಯಕಿ ಸ್ಮೃತಿ ಮಂಧಾನ ಪಾತ್ರ ಮಹತ್ವದ್ದಾಗಿತ್ತು. ಡೆಲ್ಲಿ ಬೌಲರ್ಸ್ ಬೆಂಡೆತ್ತಿದ್ದ ಮಂಧಾನ ಶತಕದ ಹೊಸ್ತಿಲಲ್ಲಿ ಎಡುವಿದರು. ಆದರೂ, ಸ್ಮೃತಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಸ್ಮೃತಿ 61 ಎಸೆತಗಳಲ್ಲಿ 13 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 96 ರನ್ ಚಚ್ಚಿ ಔಟಾದರು. ನಂತರ, ಸ್ಮೃತಿ ಮಂಧಾನ ಪೆವಿಲಿಯನ್ ಕಡೆಗೆ ನಡೆಯುತ್ತಿದ್ದಂತೆ, ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು.

Sulekha