RCBಗೆ ಬ್ಯಾಡ್ ಲಕ್ ಬೆಂಗಳೂರು – ಟೀಂ ಸೋತರೂ ಗೆದ್ದ ಟಿಮ್ ಡೇವಿಡ್
ಟಾಸ್, ಬೌಲಿಂಗ್.. PBKS ಗೆದ್ದಿದ್ದೇಗೆ?

ಆರ್ಸಿಬಿಗೆ ಬ್ಯಾಡ್ ಲಕ್ ಅಂದ್ರೆ ಇದೇ ನೋಡಿ. ಗ್ರೌಂಡ್ ತುಂಬಾ ಅಭಿಮಾನಿಗಳು. ಎಲ್ಲೆಲ್ಲೂ ರೆಡ್ ಆರ್ಮಿ ಜೆರ್ಸಿ. ಆರ್ಸಿಬಿ ಆರ್ಸಿಬಿ ಅನ್ನೋ ಘೋಷ. ಮಳೆಯಲ್ಲೂ ಕಡಿಮೆಯಾಗದ ಜೋಶ್. ಆದ್ರೆ ದುರಾದೃಷ್ಟ ಅನ್ನೋದು ಬೆಂಬಿಡದ ಬೇತಾಳನಂತೆ ಬೆನ್ನತ್ತಿದ್ರೆ ಏನ್ ತಾನೇ ಮಾಡೋಕೆ ಆಗುತ್ತೆ ಹೇಳಿ. ಮಳೆಯಿಂದಾಗಿ ಮ್ಯಾಚ್ ಡಿಲೇ ಆಗಿ ಕೊನೆಗೆ ತವರಿನಲ್ಲೇ ಆರ್ಸಿಬಿ ಆಟಗಾರರು ಸತತ ಮೂರು ಪಂದ್ಯಗಳನ್ನ ಸೋತಿದ್ದಾರೆ.
ನಿನ್ನೆ ಸಂಜೆಯಿಂದ್ಲೇ ಬೆಂಗಳೂರಿನಲ್ಲಿ ಮಳೆಯಾಗ್ತಿದ್ದ ಕಾರಣ ಪಂದ್ಯ ಡಿಲೇ ಆಗಿದ್ದು ಹೀಗಾಗಿ ತಲಾ 14 ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಈ ವೇಳೆ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡ್ರು. ನಾಲ್ಕು ಓವರ್‌ಗಳ ಪವರ್ ಪ್ಲೇ ಬೌಲಿಂಗ್ನಲ್ಲಿ ಅಬ್ಬರಿಸಿದ ಪಂಜಾಬ್ ಬೌಲರ್ಸ್ ಫಿಲ್ ಸಾಲ್ಟ್ ಅವರನ್ನು ಮೊದಲ ಓವರ್‌ನಲ್ಲೇ ಪೆವಿಲಿಯನ್ಗೆ ಕಳಿಸಿದ್ರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡಾ ಕೇವಲ ಒಂದು ರನ್ ಗಳಿಸಿ ಅರ್ಶದೀಪ್‌ಗೆ ವಿಕೆಟ್ ಒಪ್ಪಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ 4 ರನ್‌ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ತಂಡದ ಸ್ಕೋರ್ 26 ರನ್ ಇರುವಾಗ್ಲೇ ಟಾಪ್ ಆರ್ಡರ್ನ ಮೂವರು ಬ್ಯಾಟರ್ಸ್ ಪೆವಿಲಿಯನ್ ಸೇರಿದ್ದರು. ಮಿಡಲ್ ಆರ್ಡರ್ನಲ್ಲಿ ಜಿತೇಶ್ ಶರ್ಮಾ(2), ಕೃನಾಲ್ ಪಾಂಡ್ಯ(1) ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ಕನ್ನಡಿಗ ಮನೋಜ್ ಭಾಂಡಗೆ (1) ರನ್ ಗಳಿಸಿ ಫೇಲ್ಯೂರ್ ಆದ್ರು. ನಾಯಕ ರಜತ್ ಪಾಟೀದಾರ್ 18 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಹಾಗೂ ಸಿಕ್ಸರ್ ಸಹಿತ 23 ರನ್ ಗಳಿಸಿ ಔಟಾದ್ರು. ಆರ್ಸಿಬಿ ಎಲ್ಲಿ 50 ರನ್ ಒಳಗೆ ಆಲೌಟ್ ಆಗುತ್ತೋ ಅನ್ನುವಂತಿತ್ತು. ಬಟ್ ಡೆತ್ ಓವರ್ನಲ್ಲಿ ಆರ್ಸಿಬಿ ಮಾನ ಕಾಪಾಡಿದ್ದೇ ಟಿಮ್ ಡೇವಿಡ್.
ಒಂದ್ಕಡೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಬೀಳ್ತಿದ್ರೂ ಜವಾಬ್ದಾರಿಯಿಂದ ಆಡಿದ್ದು ಟಿಮ್ ಡೇವಿಡ್. ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಟಿಮ್ ಡೇವಿಡ್ ಚೊಚ್ಚಲ ಅರ್ಧಶತಕ ಸಿಡಿಸುವ ಮೂಲಕ ತಂಡಕ್ಕೆ ಆಸರೆಯಾದರು. ಟಿಮ್ ಡೇವಿಡ್ ಕೇವಲ 26 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 50 ರನ್ ಸಿಡಿಸಿದರು. ಕೊನೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸೋ ಮೂಲಕ ಅಭಿಮಾನಿಗಳೂ ಚಿಲ್ ಆಗುವಂತೆ ಮಾಡಿದ್ರು. ಈ ಮೂಲಕ ಆರ್ಸಿಬಿ 95 ರನ್ಸ್ ಕಲೆ ಹಾಕಿತು. ಟಿಮ್ ಡೇವಿಡ್ ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್‌ನಲ್ಲೂ ಮಿಂಚಿದರು. ಅವರು ಎರಡು ಕ್ಯಾಚ್‌ಗಳನ್ನು ಪಡೆದರು. ಆದರೂ, ಆರ್‌ಸಿಬಿಯ ಸೋಲನ್ನು ತಡೆಯಲು ಸಾಧ್ಯವಾಗಲಿಲ್ಲ.
14 ಓವರ್ಗಳಲ್ಲಿ 96 ರನ್ಗಳ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ತಂಡಕ್ಕೂ ಒಳ್ಳೆ ಓಪನಿಂಗ್ ಸಿಗ್ಲಿಲ್ಲ. 22 ರನ್ ಗಳಿದ್ದಾಗ ಪ್ರಭ್‌ಸಿಮ್ರನ್ ಸಿಂಗ್ ವೇಗಿ ಭುವಿಗೆ ವಿಕೆಟ್ ಒಪ್ಪಿಸಿದರೆ, 32 ರನ್ ಗಳಿಸಿದ್ದಾಗ ಪ್ರಿಯಾನ್ಶ್ ಆರ್ಯಾ ಅವರನ್ನು ಜೋಶ್ ಹೇಜಲ್‌ವುಡ್ ಔಟ್ ಮಾಡಿದ್ರು. ಶ್ರೇಯಸ್ ಅಯ್ಯರ್ 7 ರನ್ ವಿಕೆಟ್ ಒಪ್ಪಿಸಿದಾಗ ಆರ್ಸಿಬಿ ಪಡೆ ಮ್ಯಾಚ್ ವಾಲಿದಂತೆ ಕಾಣಿಸ್ತು. ಇದರ ಬೆನ್ನಲ್ಲೆ ಜೋಶ್ ಇಂಗ್ಲಿಶ್ ಕೂಡಾ 14 ರನ್ ಗೆ ಔಟಾದ್ರು. ಬಟ್ ಮತ್ತೊಂದು ಬದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ನೆಹಾಲ್ ವದೇರಾ 19 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 33 ರನ್ ಸಿಡಿಸುವ ಮೂಲಕ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು. ಪಂಜಾಬ್ ಗೆದ್ರೂ ಆರ್‌ಸಿಬಿಯ ಆಟಗಾರ ಟಿಮ್ ಡೇವಿಡ್ ತಮ್ಮ ಅದ್ಭುತ ಆಟದಿಂದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು.