ವಿರಾಟ್ ರೂಪ.. ಪ್ಲೇಆಫ್ ಗೆ RCB? – ALL OUT ಅಸ್ತ್ರ ವರ್ಕೌಟ್ ಆಗಿದ್ದೇಗೆ?
2 ಪಂದ್ಯ ಗೆದ್ರೆ ನಡೆಯುತ್ತಾ ಪವಾಡ?
ವಿರಾಟ ಕೊಹ್ಲಿ ವಿರಾಟ ರೂಪ.. ಪಟೀದಾರ್, ಗ್ರೀನ್ ಸಿಡಿಲಬ್ಬರ. ಬೌಲರ್ ಗಳ ಬೆಂಕಿಯಾಟ. ಆರ್ಸಿಬಿ ಆಟಗಾರರ ಅಬ್ಬರಕ್ಕೆ ಪಂಜಾಬ್ ತಂಡದ ಪ್ಲೇಯರ್ಸ್ ಅಕ್ಷರಶಃ ಥಂಡಾ ಹೊಡೆದಿದ್ರು. ನಾಲ್ಕನೇ ಮ್ಯಾಚ್ನಲ್ಲೂ ಸಿಂಹಗಳಂತೆ ಗರ್ಜಿಸಿದ ಫಾಫ್ ಬಳಗ ಸ್ಯಾಮ್ ಕರ್ರನ್ ಪಡೆಯನ್ನ ಅವ್ರದ್ದೇ ನೆಲದಲ್ಲಿ ಮಕಾಡೆ ಮಲಗಿಸಿದೆ. ಪಂಜಾಬ್ ಮತ್ತು ಆರ್ಸಿಬಿ ನಡುವಿನ ರಣರೋಚಕ ಪಂದ್ಯದಲ್ಲಿ ಬೆಂಗಳೂರು ಅತ್ಯಮೋಘ ಪ್ರದರ್ಶನದ ಮೂಲಕ ಗೆದ್ದು ಬೀಗಿದೆ. ಈ ಗೆಲುವು ಆರ್ಸಿಬಿಗೆ ಎಷ್ಟು ಇಂಪಾರ್ಟೆಂಟ್..? ಪ್ಲೇಆಫ್ ದಾರಿ ಸುಗಮವಾಯ್ತಾ..? ಕಿಂಗ್ ಕೊಹ್ಲಿ, ಪಟೀದಾರ್ಗೆ ಜೀವದಾನ ಸಿಕ್ಕಿದ್ದೇ ಮ್ಯಾಚ್ ಟರ್ನಿಂಗ್ ಪಾಯಿಂಟ್ ಆಯ್ತಾ ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಕನ್ನಡಿಗ ರಾಹುಲ್ ಗೆ ಅವಮಾನ! – ಸ್ಟಾರ್ ಕ್ರಿಕೆಟಿಗರ ಮೇಲೆ ಮಾಲೀಕರ ದರ್ಪ ಹೇಗಿರುತ್ತೆ ಗೊತ್ತಾ?
ಐಪಿಎಲ್ ಸೀಸನ್ 17ನಲ್ಲಿ ಪ್ಲೇಆಫ್ಗೆ ಹೋಗೋಕೆ ಆರ್ಸಿಬಿಗೆ ಗುರುವಾರದ ಮ್ಯಾಚ್ ತುಂಬಾನೇ ಮುಖ್ಯ ಆಗಿತ್ತು. ಅದೂ ಕೂಡ ಭಾರೀ ಅಂತರದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇತ್ತು. ಸತತ 6 ಸೋಲುಗಳಿಂದ ಕಂಗೆಟ್ಟಿದ್ದ ಆರ್ಸಿಬಿ ಸೆಕೆಂಡ್ ಆಫ್ನಲ್ಲಿ ರಾಯಲ್ ಆಗೇ ಕಮ್ಬ್ಯಾಕ್ ಮಾಡಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಯಾಕಂದ್ರೆ ವಿರಾಟ್ ಕೊಹ್ಲಿಗೆ ಎರಡೆರಡು ಜೀವದಾನಗಳು ಸಿಕ್ಕಿದ್ವು. ಮೊದಲನೆಯರು ಇನ್ನಿಂಗ್ಸ್ ಆರಂಭದಲ್ಲೇ ಕೊಹ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು. ಕನ್ನಡಿಗ ಕಾವೇರಪ್ಪ ಬೌಲಿಂಗ್ನಲ್ಲಿ ಅಶುತೋಷ್ ಕ್ಯಾಚ್ ಕೈಚೆಲ್ಲಿದ್ರು. ಆ ಬಳಿಕವೂ ಕೊಹ್ಲಿ 10 ರನ್ ಬಾರಿಸಿದ್ದಾಗ ರುಸ್ಸೋ ಮತ್ತೊಂದು ಕ್ಯಾಚ್ ಕೈಚೆಲ್ಲುವ ಮೂಲಕ ಎರಡನೇ ಜೀವದಾನ ನೀಡಿದರು. ಹೀಗೆ ಎರಡೆರಡು ಸಲ ಔಟ್ನಿಂದ ಮಿಸ್ ಆದ ಕಿಂಗ್ ಆಮೇಲೆ ಅಕ್ಷರಶಃ ಸಿಡಿಗುಂಡಿನಂತೆ ಅಬ್ಬರಿಸೋಕೆ ಶುರು ಮಾಡಿದ್ರು. ಆದ್ರೆ ಪಂಜಾಬ್ ಪರ ಮಾರಕ ಬೌಲಿಂಗ್ ಮಾಡಿದ ಕನ್ನಡಿಗ ವಿದ್ವತ್ ಕಾವೇರಪ್ಪ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ರನ್ನ ಪೆವಿಲಿಯನ್ಗೆ ಕಳಿಸಿದ್ರು. 7 ಬಾಲ್ಗೆ 9 ರನ್ ಗಳಿಸಿದ್ದ ಫಾಫ್ ಶಶಾಂಕ್ ಸಿಂಗ್ಗೆ ಕ್ಯಾಚ್ ಕೊಟ್ಟು ನಿರ್ಮಿಸಿದ್ರು. ವಿಲ್ ಜಾಕ್ಸ್ ಕೂಡ ಕಾವೇರಪ್ಪಗೆ ಕ್ಲೀನ್ ಬೌಲ್ಡ್ ಆದ್ರು. ಈ ಮೂಲಕ ಆರ್ಸಿಬಿ ಪವರ್ ಪ್ಲೇನಲ್ಲೇ ಮುಗ್ಗರಿಸಿತ್ತು. ಬಳಿಕ ನಾಲ್ಕನೇ ಬ್ಯಾಟರ್ ಆಗಿ ಕ್ರಿಸ್ಗೆ ಬಂದ ರಜತ್ ಪಟೀದಾರ್ ಕಿಂಗ್ ಕೊಹ್ಲಿ ಜೊತೆ ಉತ್ತಮ ಇನ್ನಿಂಗ್ಸ್ ಕಟ್ಟಿದ್ರು. ಅಚ್ಚರಿಯ ಸಂಗತಿಯೆಂದರೆ ರಜತ್ ಪಾಟಿದರ್ ಈ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು. ಕನ್ನಡಿಗ ಕಾವೇರಪ್ಪ ಬೌಲ್ ಮಾಡಿದ 5ನೇ ಓವರ್ನಲ್ಲಿ ಪಾಟಿದರ್ ಡೀಪ್ ಫೈನ್ನಲ್ಲಿ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಚೆಂಡು ಅಲ್ಲೆ ನಿಂತಿದ್ದ ಹರ್ಷಲ್ ಪಟೇಲ್ ಕೈಸೇರುವಂತಿತ್ತು. ಆದರೆ ಇಲ್ಲಿ ಎಡವಟ್ಟು ಮಾಡಿಕೊಂಡ ಪಟೇಲ್ ಸುಲಭದ ಕ್ಯಾಚನ್ನು ಕೈಚೆಲ್ಲಿದರು. ಜೀವದಾನದ ಲಾಭ ಪಡೆದ ಪಾಟಿದರ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಒಂದ್ಕಡೆ ಕೊಹ್ಲಿ ಮತ್ತೊಂದ್ಕಡೆ ಪಟೀದಾರ್ ಸುನಾಮಿ ಎಬ್ಬಿಸಿದ್ರು. ಬೌಲರ್ಗಳನ್ನ ಹಿಗ್ಗಾಮುಗ್ಗಾ ಬೆಂಡೆತ್ತಿತ ಈ ಜೋಡಿ ಸ್ಫೋಟಕ 76 ರನ್ ಚಚ್ಚಿದ್ರು. 239.13 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಪಟೀದಾರ್ 21 ಎಸೆತಗಳಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿ ಹೊರನಡೆದ್ರು. ಮತ್ತೊಂದೆಡೆ ಕೊಹ್ಲಿ ಅಬ್ಬರ ಮಾತ್ರ ಮುಂದುವರಿದೇ ಇತ್ತು. ಆದ್ರೆ 10 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 119 ರನ್ ಸಿಡಿಸಿದ್ದ ಆರ್ಸಿಬಿಗೆ ಮಳೆ ಕಾಟ ಶುರುವಾಗಿತ್ತು. ಹೀಗಾಗಿ ಪಂದ್ಯ ರದ್ದಾಗೋ ಆತಂಕ ಶುರುವಾಗಿತ್ತು. ಆದ್ರೆ ಅರ್ಧ ಗಂಟೆ ಬಳಿಕ ಮತ್ತೆ ಮ್ಯಾಚ್ ಶುರುವಾಗಿತ್ತು. ಆಗ್ಲೇ ನೋಡಿ ವಿರಾಟ್ ಕೊಹ್ಲಿ ರೌದ್ರಾವತಾರ ತಾಳಿ ಮರಳಿದ್ರು. ಕೇವಲ 47 ಎಸೆತಗಳಲ್ಲಿ 7 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 92 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೊಹ್ಲಿ ಮತ್ತು ಆರ್ಸಿಬಿ ಫ್ಯಾನ್ಸ್ ಐಪಿಎಲ್ನಲ್ಲಿ ಕೊಹ್ಲಿಯವ್ರ 9ನೇ ಶತಕ ಕಣ್ತುಂಬಿಕೊಳ್ಳೋಕೆ ಕಾಯ್ತಿದ್ರು. ಆದ್ರೆ ಶತಕಕ್ಕೆ ಇನ್ನು 8 ರನ್ ಬಾಕಿ ಇರುವಾಗ್ಲೇ ಅರ್ಶ್ದೀಪ್ ಬೌಲಿಂಗ್ನಲ್ಲಿ ರೋಸೌವ್ಗೆ ಕ್ಯಾಚ್ ಕೊಟ್ಟು ಔಟಾದ್ರು. ಆದ್ರೂ ಕೂಡ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 1000 ರನ್ ಪೂರೈಸಿದರು. ಇದುರೊಂದಿಗೆ ಅತಿ ಹೆಚ್ಚು ಎದುರಾಳಿ ತಂಡಗಳ ವಿರುದ್ಧ 1000 ಕ್ಕೂ ಹೆಚ್ಚು ರನ್ ದಾಖಲಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಲ್ದೇ ಈ ಸೀಸನ್ನಲ್ಲಿ ಒಟ್ಟಾರೆ 634 ರನ್ ಬಾರಿಸಿದ್ದು ಆರೆಂಜ್ ಕ್ಯಾಪ್ ತಮ್ಮಲ್ಲೇ ಭದ್ರಪಡಿಸಿಕೊಂಡಿದ್ದಾರೆ. ಜೊತೆಗೆ ಐಪಿಎಲ್‌ನ ಹೆಚ್ಚಿನ ಸೀಸನ್‌ಗಳಲ್ಲಿ ಜಂಟಿಯಾಗಿ 600ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇನ್ನು ಆರ್ಸಿಬಿ ಪರ ಕ್ಯಾಮರೂನ್ ಗ್ರೀನ್ 27 ಎಸೆತಗಳಲ್ಲಿ 46 ರನ್ ಸಿಡಿಸಿದ್ರು. ಹಾಗೇ ಮತ್ತೆ ಹೊಡಿಬಡಿ ಆಟವಾಡಿದ್ದ ಫಿನಿಶರ್ ದಿನೇಶ್ ಕಾರ್ತಿಕ್ 18 ರನ್ ಗಳಿಸಿದ್ರು. ಫೈನಲಿ ಆರ್ಸಿಬಿ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಬೃಹತ್ 241 ರನ್ ಕಲೆಹಾಕಿತ್ತು. ಈ ಬಿಗ್ ಸ್ಕೋರ್ ಬೆನ್ನಟ್ಟಿದ್ದ ಪಂಜಾಬ್ಗೆ ಆರ್ಸಿಬಿ ಬೌಲರ್ಸ್ ಬೆವರಿಳಿಸಿದ್ರು. ಪಂಜಾಬ್ ಪರ ಓಪನರ್ ಆಗಿ ಬಂದ ಜಾನಿ ಬೇರ್ಸ್ಟೋ 16 ಬಾಲ್ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 27 ರನ್ ಸಿಡಿಸಿದ್ರು. ಇವರಿಗೆ ಸಾಥ್ ನೀಡಿದ ರಿಲೀ ರೋಸೋ 27 ಬಾಲ್ನಲ್ಲಿ 3 ಭರ್ಜರಿ ಸಿಕ್ಸರ್, 9 ಫೋರ್ ಸಮೇತ 61 ರನ್ ಚಚ್ಚಿದ್ರು. ಶಶಾಂಕ್ 37, ಸ್ಯಾಮ್ ಕರನ್ 22 ರನ್ ಗಳಿಸಿದ್ರು. ಪಂಜಾಬ್ 17 ಓವರ್ನಲ್ಲಿ 181 ರನ್ಗಳಿಗೆ ಆಲೌಟ್ ಆಯ್ತು. ಈ ಮೂಲಕ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ 60 ರನ್‌ಗಳ ಅಂತರದಿಂದ ಆರ್ಸಿಬಿ ಭರ್ಜರಿ ಜಯ ದಾಖಲಿಸಿತು. ಈ ಮೂಲಕ ಸತತ ನಾಲ್ಕನೇ ಗೆಲುವು ಕಂಡ ಆರ್ಸಿಬಿ ಪ್ಲೇ ಆಫ್ ಕನಸನ್ನ ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ.
ಪಂಜಾಬ್ ವಿರುದ್ಧ ಆರ್ಸಿಬಿ ಗೆದ್ದರೂ ಪಾಯಿಂಟ್ಸ್ ಟೇಬಲ್ನ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆರ್ಸಿಬಿ ಪಾಯಿಂಟ್ಸ್ ಟೇಬಲ್ನಲ್ಲಿ 8 ಪಾಯಿಂಟ್ಸ್ನಿಂದ 10 ಪಾಯಿಂಟ್ಸ್ಗೆ ಜಿಗಿದಿದೆ. ಜೊತೆಗೆ ನೆಟ್ ರನ್ ರೇಟ್ ಕೂಡ ಹೆಚ್ಚಿಕೊಂಡಿದೆ. ಆದರೆ ಪಾಯಿಂಟ್ಸ್ ಟೇಬಲ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಐದು ಪಂದ್ಯಗಳನ್ನು ಗೆದ್ದಿರುವ ಆರ್ಸಿಬಿ ಸದ್ಯ 7ನೇ ಸ್ಥಾನದಲ್ಲಿದೆ. ಸದ್ಯ ಪಾಯಿಂಟ್ಸ್ ಟೇಬಲ್ನಲ್ಲಿ ಕೆಕೆಆರ್ ಮೊದಲ ಸ್ಥಾನದಲ್ಲಿದ್ದರೆ, ರಾಜಸ್ಥಾನ್, ಎಸ್ಆರ್ಹೆಚ್, ಸಿಎಸ್ಕೆ ನಂತರದ ಸ್ಥಾನದಲ್ಲಿವೆ. ಇನ್ನು 6 ಪಂದ್ಯಗಳನ್ನು ಗೆದ್ದುಕೊಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಎಲ್ಎಸ್ಜಿ ಐದು ಮತ್ತು ಆರನೇ ಸ್ಥಾನದಲ್ಲಿವೆ. ಇನ್ನು ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ಪ್ಲೇ-ಆಫ್ ರೇಸ್ನಿಂದ ಹೊರ ಬಿದ್ದಿವೆ. ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಕೂಡ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆಯೇ ಇದೆ. ಆದ್ರೆ ಶುಕ್ರವಾರ ಗುಜರಾತ್ ಟೈಟನ್ಸ್ ತಂಡ ಸಿಎಸ್ಕೆ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಏನಾದರೂ ಮ್ಯಾಜಿಕ್ ನಡೆದರೆ ಗುಜರಾತ್ ಪ್ಲೇ-ಆಫ್ ಕನಸು ಕಾಣಬಹುದು. ಆದರೂ, ಬೇರೆ ತಂಡಗಳ ಸೋಲು, ಗೆಲುವಿನ ಮೇಲೆ ಗುಜರಾತ್ ಟೈಟನ್ಸ್ ಭವಿಷ್ಯ ನಿಂತಿದೆ. ಒಟ್ನಲ್ಲಿ ಆರ್ಸಿಬಿ 12 ಪಂದ್ಯಗಳ ಪೈಕಿ 5 ರಲ್ಲಿ ಗೆಲುವು ಕಂಡಿದ್ದು 7ರಲ್ಲಿ ಸೋತಿದೆ. ಪ್ಲೇಆಫ್ ಕನಸು ಇನ್ನೂ ಜೀವಂತವಾಗಿದೆ ಎಂದು ಹೇಳಬಹುದಾದ್ರೂ ಅದು ಇತರೆ ತಂಡಗಳ ಸೋಲು ಗೆಲುವಿನ ಮೇಲೆ ಡಿಪೆಂಡ್ ಆಗಿದೆ. ಹೀಗಾಗಿ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ಗೆ ಸೆಲೆಕ್ಟ್ ಆದ್ರೆ ಅದು ಪವಾಡ ಅಂತಾನೇ ಹೇಳ್ಬೋದು. ಆದ್ರೆ ಪ್ಲೇಆಫ್ ರೇಸ್ ಹೊರಗಿಟ್ಟು ಪಂಜಾಬ್ ವಿರುದ್ಧದ ಮ್ಯಾಚ್ನ ಆರ್ಸಿಬಿ ಫ್ಯಾನ್ಸ್ ಎಂಜಾಯ್ ಮಾಡಿರೋದ್ರಲ್ಲಿ ಯಾವುದೇ ಡೌಟ್ ಇಲ್ಲ.