17 ಸೀಸನ್ ಗಳಲ್ಲಿ RCB ಕಂಡ ಸ್ಟಾರ್ ಆಟಗಾರರು.. – ಯಾರು ಬೆಸ್ಟ್?

17 ಸೀಸನ್ ಗಳಲ್ಲಿ RCB ಕಂಡ ಸ್ಟಾರ್ ಆಟಗಾರರು.. – ಯಾರು ಬೆಸ್ಟ್?

ಇಡೀ ಐಪಿಎಲ್​ ತಂಡಗಳಲ್ಲೇ ಆರ್​ಸಿಬಿ ಅಂದ್ರೆ ಒಂದು ಗತ್ತು ಒಂದು ಗಮ್ಮತ್ತು. ಅದು ಪ್ಲೇಯರ್ಸೇ ಆಗಿರ್ಲಿ ಅಥವಾ ಫ್ಯಾನ್ಸೇ ಆಗಿರ್ಲಿ. ಅದ್ರಲ್ಲೂ ಬೆಂಗಳೂರಲ್ಲಿ ಮ್ಯಾಚ್ ನಡೀತಿದೆ ಅಂದ್ರೆ ಮುಗೀತು ಹಬ್ಬನೇ ಮಾಡಿ ಬಿಡ್ತಾರೆ. ಸ್ಟೇಡಿಯಂ ತುಂಬಾ ಆರ್​ಸಿಬಿ, ಆರ್​ಸಿಬಿ ಘೋಷಣೆಗಳೇ ಮೊಳಗಿರುತ್ತವೆ. ನಿಷ್ಠಾವಂತ ಅಭಿಮಾನಿಗಳನ್ನ ಹೊಂದಿರೋ ಆರ್​ಸಿಬಿ ಒಂದು ಸಲವೂ ಟ್ರೋಫಿ ಗೆದ್ದಿಲ್ಲ ಅನ್ನೋದನ್ನ ಬಿಟ್ರೆ ಅಭಿಮಾನಿಗಳ ಸಂಪಾದನೆಯಲ್ಲಿ ಚಾಂಪಿಯನ್​ ತಂಡಗಳನ್ನೂ ಹಿಂದಿಕ್ಕಿದೆ. ಆರ್​ಸಿಬಿಯ ಈ ಕ್ರೇಜ್ ಹೆಚ್ಚಾಗೋಕೆ ಕಾರಣ ಸ್ಟಾರ್ ಆಟಗಾರರೂ ಇದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯುತ್ತಮ ಆಟಗಾರರನ್ನ ಖರೀದಿಸಿದೆ. ಅದ್ರಲ್ಲಿ ಮೊದಲನೆಯದಾಗಿ ಟಾಪ್ 3ಯಲ್ಲಿ ನಿಲ್ಲೋದು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್​​ಗೇಲ್.

ಇದನ್ನೂ ಓದಿ: 1 WIN.. 3 ಟೀಂ ಹಿಂದಿಕ್ಕಿದ RCB – ಪ್ಲೇ ಆಫ್ ಗೇರಲು 3 ದಾರಿಗಳೇನು?

ಟಾಪ್ 3 ಸ್ಟಾರ್ಸ್

ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲದ ಬೆಂಗಳೂರು, ಈ ಬಾರಿ ಪ್ಲೇ ಆಫ್ ಕನಸನ್ನ ಇನ್ನೂ ಜೀವಂತವಾಗಿ ಇರಿಸಿಕೊಂಡಿದೆ. ಇಂತಹ ಆರ್​ಸಿಬಿಗಾಗಿ ಸತತ ಹದಿನೇಳು ವರ್ಷಗಳಿಂದ ಆಡ್ತಿರೋ ಏಕೈಕ ಪ್ಲೇಯರ್ ಅಂದ್ರೆ ಅದು ನಮ್ಮ ನಿಮ್ಮೆಲ್ಲರ ಕಿಂಗ್ ವಿರಾಟ್ ಕೊಹ್ಲಿ. ಕೊಹ್ಲಿ ಹೆಸ್ರು ಕೇಳಿದ್ರೇನೆ ಗ್ರೌಂಡ್​ನಲ್ಲಿ ಕರೆಂಟ್ ಶಾಕ್ ಪಾಸ್ ಆಗುತ್ತೆ. ಇಂತಹ ಸ್ಟಾರ್ ಬ್ಯಾಟರ್ ನಮ್ಮ ಬೆಂಗಳೂರು ತಂಡದಲ್ಲಿ ಇದ್ದಾರೆ ಅನ್ನೋದೇ ದೊಡ್ಡ ಹೆಮ್ಮೆ. 2008 ರಲ್ಲಿ ಕೊಹ್ಲಿ ಅವ್ರನ್ನ 12 ಲಕ್ಷಕ್ಕೆ ಖರೀದಿಸಲಾಗಿತ್ತು. ಐಪಿಎಲ್ ಚರಿತ್ರೆಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿರುವ ಕೊಹ್ಲಿ, ಫ್ರಾಂಚೈಸಿಯೊಂದರ ಪರ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್. ಆರ್​​ಸಿಬಿ ಆಪತ್ಬಾಂದವ ಎಂದೇ ಕರೆಸಿಕೊಂಡ ಎಬಿಡಿ ದಿ ಬೆಸ್ಟ್ ಪಿಕ್ ಎಂದರೆ ತಪ್ಪಾಗಲ್ಲ. ಬೆಂಗಳೂರಿಗೆ ಬರುವುದಕ್ಕೂ ಮುನ್ನ ಡೆಲ್ಲಿ ಡೇರ್​ಡೆವಿಲ್ಸ್ ತಂಡದಲ್ಲಿದ್ದ ಎಬಿಡಿಯನ್ನು 2011ರಲ್ಲಿ 5.6 ಕೋಟಿಗೆ ಖರೀದಿಸಲಾಗಿತ್ತು. ರೆಡ್ ಆರ್ಮಿ ಪರ 157 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 158ರ ಸ್ಟ್ರೈಕ್​ರೇಟ್​ನಲ್ಲಿ 4522 ರನ್ ಗಳಿಸಿದ್ದಾರೆ. ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಇಂದಿಗೂ ಆರ್​ಸಿಬಿಯ ಕೋಟ್ಯಂತರ ಫ್ಯಾನ್ಸ್ ಎಬಿಡಿಯನ್ನ ಆರಾಧಿಸುತ್ತಾರೆ. ಆರ್​ಸಿಬಿ ಖರೀದಿಸಿದ ಮತ್ತೊಬ್ಬ ಸ್ಟಾರ್ ಪ್ಲೇಯರ್ ಕ್ರಿಸ್​ಗೇಲ್. ಐಪಿಎಲ್ ದೃಷ್ಟಿಕೋನ ಮತ್ತು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದೇ ವಿಂಡೀಸ್ ದೈತ್ಯ, ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್. ಅವರು ಪಂಜಾಬ್, ಕೆಕೆಆರ್ ಪರ ಆಡಿದ್ದರೂ ಅದ್ಬುತ ಪ್ರದರ್ಶನ ಬಂದಿದ್ದು ಮಾತ್ರ ಆರ್​​ಸಿಬಿ ಪರ. 2011ರಲ್ಲಿ 2.9 ಕೋಟಿಗೆ ಬೆಂಗಳೂರು ಪಾಲಾಗಿದ್ದ ಗೇಲ್, ಆಡಿದ 7 ಆವೃತ್ತಿಗಳಲ್ಲಿ 154 ಸ್ಟ್ರೈಕ್ ರೇಟ್ನಲ್ಲಿ 43.29ರ ಸರಾಸರಿಯಲ್ಲಿ 3420 ರನ್ ಕಲೆ ಹಾಕಿದ್ದಾರೆ.

ವಿರಾಟ್, ಎಬಿಡಿ, ಮತ್ತು ಕ್ರಿಸ್​ಗೇಲ್.. ಮೂವರು ಕೂಡ ಬಲಿಷ್ಠ ಆಟಗಾರರು. ಕ್ರೀಸ್​​ನಲ್ಲಿ ಒಂದ್ಸಲ ಸೆಟಲ್ ಆದ್ರು ಅಂದ್ರೆ ಎದುರಾಳಿ ತಂಡದ ಬೌಲರ್​ಗಳ ಬೆವರಿಳಿಸಿ ಬಿಡ್ತಿದ್ರು. ಇವ್ರು ಮೂರೂ ಜನ ಒಟ್ಟಿಗೆ ಆಡ್ತಿದ್ದ ಸೀಸನ್​ಗಳನ್ನ ನೋಡೋದೇ ಆರ್​ಸಿಬಿ ಫ್ಯಾನ್ಸ್ಗೆ ಹಬ್ಬವಾಗಿತ್ತು. ಇವ್ರು ಮಾತ್ರವಲ್ಲದೆ ಆರ್​ಸಿಬಿ ಹಲವು ದಿಗ್ಗಜ ಆಟಗಾರರ ಅಬ್ಬರಕ್ಕೆ ವೇದಿಕೆಯಾಗಿದೆ.

ಆರ್ ಸಿಬಿಯ ಬೆಸ್ಟ್ ಪ್ಲೇಯರ್ಸ್!

ಐಪಿಎಲ್ ಹರಾಜಿನಲ್ಲಿ ಆರ್​​ಸಿಬಿ ಬೆಸ್ಟ್ ಆಯ್ಕೆಗಳಲ್ಲಿ ಯುಜ್ವೇಂದ್ರ ಚಹಲ್ ಕೂಡ ಒಬ್ಬರು. 10 ಲಕ್ಷಕ್ಕೆ 2014ರಲ್ಲಿ‌ ತನ್ನ ತೆಕ್ಕೆಗೆ ಹಾಕಿಕೊಂಡಿತು. ಇದು ಚಹಲ್ ಭವಿಷ್ಯವನ್ನೇ ಬದಲಿಸಿತು. 2014 ರಿಂದ 2021ರವರೆಗೂ ಆರ್​​ಸಿಬಿ ಪರ 113 ಪಂದ್ಯಗಳನ್ನಾಡಿದ ಚಹಲ್, 139 ವಿಕೆಟ್ ಉರುಳಿಸಿದ್ದಾರೆ. ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಚಹಲ್ ರನ್ನು ಬೆಂಗಳೂರು ಉಳಿಸಿಕೊಳ್ಳದೆ ಬಿಟ್ಟು ಕೊಟ್ಟಿತು. ಸದ್ಯ ಆರ್​ಆರ್​ ಪರ ಆಡ್ತಿರೋ ಚಹಾಲ್ ಐಪಿಎಲ್ ಟೂರ್ನಿಯಲ್ಲಿ 200 ವಿಕೆಟ್ ಪಡೆದ ಏಕೈಕ ಬೌಲರ್ ಆಗಿದ್ದಾರೆ. ಇನ್ನು ಗ್ಲೆನ್ ಮ್ಯಾಕ್ಸ್​​ವೆಲ್ ಬಗ್ಗೆ ಹೇಳಲೇಬೇಕು. ಆರ್​​ಸಿಬಿಯ ಅತ್ಯುತ್ತಮ ಆಯ್ಕೆಗಳಲ್ಲಿ ಮ್ಯಾಕ್ಸಿ ಕೂಡ ಒಬ್ಬರು. 2021ರಲ್ಲಿ 14.25 ಕೋಟಿ ನೀಡಿ ತಂಡಕ್ಕೆ ಕರೆಸಿಕೊಳ್ಳಲಾಗಿತ್ತು. ಆರ್​​ಸಿಬಿ ಪರ ಹಲವು ಅದ್ಬುತ ಇನ್ನಿಂಗ್ಸ್‌ಗಳನ್ನು ಕಟ್ಟಿರುವ ಮ್ಯಾಕ್ಸಿ, ರೆಡ್ ಆರ್ಮಿ ಪರ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರನಾಗಿದ್ದಾರೆ. ಆದ್ರೆ ಈ ಸಲ ಮಾತ್ರ ಯಾರೋ ಅವ್ರ ಬ್ಯಾಟ್ ಸದ್ದು ಮಾಡ್ತಿಲ್ಲ ಅನ್ನೋದೇ ಬೇಸರದ ಸಂಗತಿ. ಇನ್ನು ಆರ್​ಸಿಬಿ ಪರ ಅನಿಲ್ ಕುಂಬ್ಳೆ, ಯುವರಾಜ್ ಸಿಂಗ್ ಸೇರಿದಂತೆ ಹಲವು ಆಟಗಾರರು ಆಡಿದ್ದು, ಆರ್​ಸಿಬಿ ಇಷ್ಟೊಂದು ಜನಪ್ರಿಯತೆ ಗಳಿಸಲು ಈ ಆಟಗಾರರು ಸಹ ಕಾರಣರಾಗಿದ್ದಾರೆ.

ಇನ್ನು ಈ ಬಾರಿಯ ಐಪಿಎಲ್​ನಲ್ಲೂ ಅನುಜ್ ರಾವತ್, ದಿನೇಶ್ ಕಾರ್ತಿಕ್, ಫಾಫ್ ಡು ಪ್ಲೆಸಿಸ್,  ಮೊಹಮ್ಮದ್ ಸಿರಾಜ್, ರಜತ್ ಪಾಟಿದಾರ್ ಸೇರಿದಂತೆ ಯಶಸ್ವಿ ಆಟಗಾರರಿದ್ದಾರೆ. ಒಟ್ನಲ್ಲಿ ಆರ್​ಸಿಬಿ ಕಳೆದ 17 ಸೀಸನ್​ಗಳಲ್ಲಿ ಆರ್​ಸಿಬಿ 2009, 2011, ಮತ್ತು 2016ರಲ್ಲಿ ಐಪಿಎಲ್‌ನ ಫೈನಲ್‌ಗೆ ತಲುಪಿದೆ. ಆದರೆ ಇನ್ನೂ ಟ್ರೋಫಿಗೆ ಮುತ್ತಿಡೋಕೆ ಸಾಧ್ಯವಾಗಿಲ್ಲ. ಆದ್ರೆ ಕಪ್ ಗೆಲ್ಲದೇ ಇದ್ರೂ ಅಭಿಮಾನಿಗಳ ಬಲಿಷ್ಠ ಸೇನೆಯನ್ನೇ ಹೊಂದಿದೆ. ಆಟಗಾರರನ್ನ ದೇವರಂತೆ ಪೂಜಿಸೋ ಫ್ಯಾನ್ಸ್ ಇದ್ದಾರೆ.

Shwetha M