RCB ವಿಕ್ಟರಿ ಓಟಕ್ಕೆ ಮಣಿಯುತ್ತಾ RR? – ಎಲಿಮಿನೇಟರ್ ಆಟಕ್ಕೆ ಕೊಹ್ಲಿ ಅಸ್ತ್ರವೇನು?
ಕಪ್ ಗೆಲ್ಲಲು ಯಾವ ಟೀಮ್ ​ಗೆ ಚಾನ್ಸ್?

RCB ವಿಕ್ಟರಿ ಓಟಕ್ಕೆ ಮಣಿಯುತ್ತಾ RR? – ಎಲಿಮಿನೇಟರ್ ಆಟಕ್ಕೆ ಕೊಹ್ಲಿ ಅಸ್ತ್ರವೇನು?ಕಪ್ ಗೆಲ್ಲಲು ಯಾವ ಟೀಮ್ ​ಗೆ ಚಾನ್ಸ್?

ಅಸಾಧ್ಯ ಎಂಬುದನ್ನ ಸಾಧಿಸಿ ತೋರಿಸಿದ ಆರ್​ಸಿಬಿ ಪ್ಲೇಆಫ್​ಗೆ ಕ್ವಾಲಿಫೈ ಆಗಿದೆ. ಜೀರೋದಿಂದ ಶುರುವಾದ ಐಪಿಎಲ್ ಅಭಿಯಾನ ಈಗ 100 ಪರ್ಸೆಂಟ್ ಕಾನ್ಫಿಡೆನ್ಸ್ ತಂದಿದೆ. ಮೇ 18ರಂದು ಚೆನ್ನೈ ತಂಡವನ್ನ ಮಣಿಸಿ ಫ್ಲೇಆಫ್​ಗೆ ಎಂಟ್ರಿ ಆಗಿದ್ದ ಆರ್​ಸಿಬಿ ಐಪಿಎಲ್ ಸೀಸನ್ 17 ಟ್ರೋಫಿ ಗೆಲ್ಲೋಕೆ ಇರೋದೇ ಇನ್ನು ಮೂರು ಮೆಟ್ಟಿಲು. ಇದೀಗ ಮೇ 22ರಂದು ರಾಜಸ್ತಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯ ಆಡ್ಬೇಕಿದೆ. ಅಷ್ಟಕ್ಕೂ ಈ ಪಂದ್ಯ ಆರ್​ಸಿಬಿಗೆ ಎಷ್ಟು ಇಂಪಾರ್ಟೆಂಟ್..? ಫಾಫ್ ಪಡೆಯ ಪ್ಲಸ್ ಏನು ಮೈನಸ್ ಏನು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  6 ಸೋಲು.. 6 ಗೆಲುವು.. ಪ್ಲೇಆಫ್! – RCB ಅದೃಷ್ಟ ಬದಲಿಸಿದ್ದೇ ಈ ಪಂದ್ಯ!

ಐಪಿಎಲ್ 2024ರ ಪ್ಲೇ ಆಫ್ ಪಂದ್ಯಗಳಿಗೆ ಕೌಂಟ್​ಡೌನ್ ಶುರುವಾಗಿದೆ. ಕೊಲ್ಕತ್ತಾ, ಹೈದ್ರಾಬಾದ್, ರಾಜಸ್ತಾನ ಮತ್ತು ಬೆಂಗಳೂರು ನಡುವಿನ ಹಣಾಹಣಿಯಲ್ಲಿ ಯಾರಿಗೆ ಟ್ರೋಫಿ ಅನ್ನೋ ಮಿಲಿಯನ್ ಡಾಲರ್ ಪ್ರಶ್ನೆಗೆ ಇನ್ನೊಂದೇ ವಾರದಲ್ಲಿ ಉತ್ತರ ಸಿಗಲಿದೆ. 10 ವರ್ಷಗಳ ನಂತರ ಕೋಲ್ಕತ್ತಾ ಮೂರನೇ ಬಾರಿಗೆ ಚಾಂಪಿಯನ್ ಆಗುತ್ತದೆಯೋ ಇಲ್ಲ  ಸನ್ ರೈಸರ್ಸ್ ಎರಡನೇ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗುತ್ತೋ ಅಥವಾ ಚೊಚ್ಚಲ ಸೀಸನ್​ನ ಚಾಂಪಿಯನ್ ರಾಜಸ್ಥಾನಕ್ಕೆ 2008 ರ ಬಳಿಕ ಕಪ್ ಸಿಗುತ್ತಾ? ಅಥವಾ 2008ರಿಂದ ಒಮ್ಮೆಯೂ ಕಪ್ ಗೆಲ್ಲದ ಬೆಂಗಳೂರು ತಂಡ 17 ವರ್ಷಗಳ ನಂತರ ಮೊದಲ ಬಾರಿಗೆ ಚಾಂಪಿಯನ್ ಆಗುತ್ತಾ ಅನ್ನೋದಕ್ಕೆ ಮಾರ್ಚ್ 26ರಂದು ಉತ್ತರ ಸಿಗಲಿದೆ.

4 ತಂಡ.. ಯಾರಿಗೆ ಕಪ್?

ಐಪಿಎಲ್ ಪ್ಲೇಆಫ್ಸ್​ನಲ್ಲಿ 4 ತಂಡಗಳ ನಡುವೆ ರೇಸ್ ಸ್ಟಾರ್ಟ್ ಆಗಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯವು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ತಂಡಗಳ ನಡುವೆ ನಡೆಯಲಿದೆ. ಕೋಲ್ಕತ್ತಾ ಮತ್ತು ಹೈದ್ರಾಬಾದ್ ನಡುವಿನ ಈ ಪಂದ್ಯ ಮಂಗಳವಾರ ಅಂದ್ರೆ ಮೇ 21 ರಂದು ಆಯೋಜಿಸಲಾಗಿದೆ. ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ರಾಜಸ್ಥಾನ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಮೇ 22 ಬುಧವಾರ ನಡೆಯಲಿದೆ. ಈ ಎರಡೂ ಪಂದ್ಯಗಳೂ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ.  ಫಸ್ಟ್ ಮತ್ತು ಸೆಕೆಂಡ್ ಪ್ಲೇಸ್​​ನಲ್ಲಿರೋ ತಂಡಗಳಿಗೆ ಅಡ್ವಾಂಟೇಜ್ ಏನಂದ್ರೆ ಫೈನಲ್ ತಲುಪಲು ಎರಡು ಚಾನ್ಸ್ ಇರುತ್ತೆ. ನಿಯಮಗಳ ಪ್ರಕಾರ, ಮೊದಲ ಕ್ವಾಲಿಫೈಯರ್ ನಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ತಲುಪುತ್ತದೆ. ಅಂದರೆ ಕೋಲ್ಕತ್ತಾ ಮತ್ತು ಸನ್ ರೈಸರ್ಸ್ ನಡುವೆ ಗೆದ್ದ ತಂಡ ಫೈನಲ್ ತಲುಪುತ್ತಾರೆ. ಸೋತ ತಂಡ ಎರಡನೇ ಕ್ವಾಲಿಫೈಯರ್‌ಗೆ ಪ್ರವೇಶಿಸಲಿದೆ. ಇಲ್ಲಿ ಅವರು ಎಲಿಮಿನೇಟರ್ ವಿಜೇತರನ್ನು ಎದುರಿಸಲಿದ್ದಾರೆ. ಅಂದರೆ ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಸೋತವರು ಟೂರ್ನಿಯಿಂದ ಹೊರಬಿದ್ದರೆ ವಿಜೇತ ತಂಡ ಎರಡನೇ ಕ್ವಾಲಿಫೈಯರ್ ತಲುಪುತ್ತದೆ. ಎರಡನೇ ಕ್ವಾಲಿಫೈಯರ್ ಗೆದ್ದ ತಂಡ ಮತ್ತು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತ ತಂಡವು ಮೇ 24 ಶುಕ್ರವಾರ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮುಖಾಮುಖಿ ಆಗಲಿದೆ. ಇಲ್ಲಿ ಗೆಲ್ಲುವ ತಂಡ ಫೈನಲ್ ತಲುಪಲಿದೆ. ಅಂತಿಮ ಪಂದ್ಯವು ಮೇ 26 ರಂದು ಚೆಪಾಕ್‌ನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್ ಆಗಲಿದೆ.

ಅಷ್ಟಕ್ಕೂ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗ್ತಿರೋ ರಾಜಸ್ತಾನ ಮತ್ತು ಬೆಂಗಳೂರು ತಂಡಗಳ ಜರ್ನಿಯೇ ವಿಭಿನ್ನವಾಗಿದೆ. ಐಪಿಎಲ್ 2024ರ ಮೊದಲಾರ್ಧದಲ್ಲಿ ಆರ್​ಸಿಬಿ ಆಡಿದ 8 ಪಂದ್ಯಗಳ ಪೈಕಿ ಗೆದ್ದಿದ್ದು ಒಂದೇ ಒಂದೇ ಮ್ಯಾಚ್ ಮಾತ್ರ. ಬಳಿಕ 6 ಪಂದ್ಯಗಳನ್ನ ಬ್ಯಾಕ್ ಟು ಬ್ಯಾಕ್ ಕೈಚೆಲ್ಲಿಕೊಂಡಿತ್ತು. ಆದ್ರೆ ರಾಜಸ್ತಾನ ರಾಯಲ್ಸ್ ಮಾತ್ರ ಡೇ ಒನ್ ನಿಂದಲೇ ಭರ್ಜರಿ ಫಾರ್ಮ್​ನಲ್ಲಿತ್ತು. ಆರಂಭದ 7 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಈ ವೇಳೆ ಆರ್​ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿತ್ತು. ಆದರೆ ದ್ವಿತೀಯಾರ್ಧದಲ್ಲಿ ಸತತ ಸೋಲುಗಳನ್ನು ಎದುರಿಸಿರುವ ರಾಜಸ್ಥಾನ ತಂಡ ಸದ್ಯ ಎಲಿಮಿನೇಟರ್​​ಗೆ ಎಂಟ್ರಿ ಕೊಟ್ಟಿದೆ. ಆ ಆವೃತ್ತಿಯ ಮೊದಲಾರ್ಧದ ನಂತರ ಉಭಯ ತಂಡಗಳ ಆಟದ ಶೈಲಿ ಸಂಪೂರ್ಣ ಬದಲಾಗಿದೆ. ಸತತ ಗೆಲುವುಗಳೊಂದಿಗೆ ಗೆದ್ದು ಬೀಗಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಒಂದೊಂದು ಸ್ಥಾನ ಕುಸಿಯುತ್ತಾ ಅಂತಿಮವಾಗಿ ಮೂರನೇ ಸ್ಥಾನ ಪಡೆದುಕೊಂಡಿದೆ.

ಇತ್ತ ಆರ್​ಸಿಬಿ ಸತತ ಆರು ಪಂದ್ಯಗಳನ್ನು ಗೆದ್ದು, ಒಂದು ಸ್ಥಾನವನ್ನು ಸುಧಾರಿಸಿಕೊಂಡು ಅಗ್ರ-4ರಲ್ಲಿ ಸ್ಥಾನ ಪಡೆದಿದೆ. ಒಂದು ಹಂತದಲ್ಲಿ ಕ್ವಾಲಿಫೈಯರ್-1ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎಂದುಕೊಂಡಿದ್ದ ತಂಡ ಅನಿರೀಕ್ಷಿತವಾಗಿ ಎಲಿಮಿನೇಟರ್ ಆಡಲು ಸಿದ್ಧವಾಗಿದೆ. ಪ್ಲೇ-ಆಫ್ ರೇಸ್‌ನಿಂದ ಬಹುತೇಕ ನಿರ್ಗಮಿಸುವ ಸ್ಥಿತಿಯಿಂದ ಆರು ತಂಡಗಳನ್ನು ಹಿಂದಿಕ್ಕಿ ಆರ್ಸಿಬಿ ತಂಡ ಎಲಿಮಿನೇಟರ್ ಪಂದ್ಯಕ್ಕೆ ಎಂಟ್ರಿ ಕೊಟ್ಟಿದೆ. ಒಟ್ನಲ್ಲಿ ರಾಜಸ್ಥಾನ ರಾಯಲ್ಸ್ ಹಾಗೂ ಬೆಂಗಳೂರು ನಡುವಿನ ಪಂದ್ಯ ಅಹಮದಾಬಾದ್ ನಲ್ಲಿ ನಡೆಯಲಿದೆ.

Shwetha M