ರಿಯಲ್ ಲೈಫ್ ನಲ್ಲಿ ಬರೀ ನೋವು – RCB ಕ್ವೀನ್ ಎಲ್ಲಿಸ್ ಪೆರ್ರಿ ಯಾರು?

ರಿಯಲ್ ಲೈಫ್ ನಲ್ಲಿ ಬರೀ ನೋವು – RCB ಕ್ವೀನ್ ಎಲ್ಲಿಸ್ ಪೆರ್ರಿ ಯಾರು?

ಚೆರಿ ಚೆರಿ ಲೇಡಿ, ಪೆರಿ ಪೆರಿ ಲೇಡಿ, ಆರ್ಸಿಬಿಯ ಲೇಡಿ ಎಬಿಡಿ, ನೋಡೋಕೆ ಮಸ್ತ್ ಮಸ್ತ್ ಬೆಡಗಿ, ಆಡೋಕೆ ನಿಂತ್ರೆ ಬರೀ ಹೊಡಿಬಡಿ, ಬೌಲಿಂಗ್ನಲ್ಲೂ ಎರಡು ಮಾತಿಲ್ಲ ಬಿಡಿ.. ಆರ್ಸಿಬಿ ಟೀಮ್ನ ಸ್ಟಾರ್ ಆಟಗಾರ್ತಿ ಕೂಡಾ ಇದೇ ಪೆರ್ರಿ. ಜೊತೆಗೆ ತಂಡದ ಲಕ್ಕಿಚಾರ್ಮ್ ಈ ಪೆರ್ರಿ. ಈ ಬ್ಯೂಟಿಫುಲ್ ಕ್ರಿಕೆಟ್ ಆಟಗಾರ್ತಿ ಯಾರು?,  ಪರ್ಸನಲ್ ಲೈಫ್  ಜೊತೆಗೆ ಫುಟ್ಬಾಲ್ ಕ್ರೇಜ್ ಬಗ್ಗೆ ಮಾಹಿತಿ ಇಲ್ಲಿದೆ.

16 ವರ್ಷಗಳಿಂದ ಈ ಸಲ ಕಪ್ ನಮ್ದೇ ಎಂಬ ಆರ್‌ಸಿಬಿ ಅಭಿಮಾನಿಗಳ ಆಸೆ ನೆರವೇರಿಸಿದ್ದು ವುಮೆನ್ಸ್ ಪ್ರೀಮಿಯರ್ ಲೀಗ್‌ನ 2ನೇ ಆವೃತ್ತಿ. ಇದ್ರಲ್ಲಿ ನಮ್ಮ ಆರ್‌ಸಿಬಿ ಕ್ವೀನ್ಸ್ ಕಪ್ ಗೆದ್ದು ಕೋಟಿ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ್ದಾರೆ. ಜೊತೆಗೆ ಈ ಸಲ ಕಪ್ ನಮ್ದೇ ಅಲ್ಲ, ಈ ಸಲ ಕಪ್ ನಮ್ದು ಅನ್ನೋದನ್ನು ಪ್ರೂವ್ ಮಾಡಿದ್ದಾರೆ. ಈ ಸಲ್ ಕಪ್ ನಮ್ದೇ ಆಗಲು ಕಾರಣರಾದವರಲ್ಲಿ ಎಲ್ಲಿಸ್ ಪೆರ್ರಿ ಕೂಡಾ ಒಬ್ಬರು. ಈಕೆ ಆರ್‌ಸಿಬಿ ಟೀಮ್‌ನ ಅದೃಷ್ಟವಂತೆ. ಮ್ಯಾಚ್ ಇನ್ನೇನು ಕೈ ತಪ್ಪುತ್ತೆ ಅಂತಾ ಅಭಿಮಾನಿಗಳು ತಲೆ ಮೇಲೆ ಕೈಯಿಟ್ಟುಕೊಂಡಾಗಲೆಲ್ಲಾ ಗೆಲುವಿಗೆ ದಡ ಸೇರಿಸೋದೇ ಈ ಲಕ್ಕಿ ಚಾರ್ಮ್. ಮಾರ್ಚ್ 4 ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮ್ಯಾಜಿಕ್ ಅಭಿಮಾನಿಗಳ ಮನಸಲ್ಲಿ ಶಾಶ್ವತ. ಆವತ್ತು ಪೆರ್ರಿಯ ಬ್ಯಾಟಿಂಗ್ ಕಮಾಲ್ ಗೆ ಟಾಟಾ ಕಂಪನಿಯೇ ಕ್ಲೀನ್ ಬೌಲ್ಡ್ ಆಗಿತ್ತು. ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಲೇಡಿ ಎಬಿಡಿ ಎಲ್ಲಿಸ್ ಪೆರ್ರಿ ಭರ್ಜರಿ ಸಿಕ್ಸ್ ಸಿಡಿಸಿದ್ದರು. ಲಾಂಗ್ ಆನ್ನತ್ತ ಬಾರಿಸಿದ್ದ ಈ ಚೆಂಡು ನೇರವಾಗಿ ಹೋಗಿ ಬಿದ್ದದ್ದು ಬೌಂಡರಿ ಲೈನ್ ಹತ್ತಿರ ನಿಲ್ಲಿಸಲಾಗಿದ್ದ ಟಾಟಾ ಪಂಚ್ ಕಾರಿನ ಕಿಟಕಿಗೆ. 80 ಮೀಟರ್ನ ಸಿಕ್ಸರ್ಗೆ ಟಾಟಾ ಕಾರಿನ ವಿಂಡೋ ಗ್ಲಾಸ್ ಒಡೆದು ಹೋಗಿತ್ತು. ನಂತರ ಅದೇ ಗ್ಲಾಸ್ ಅನ್ನು ಫ್ರೇಮ್ ಹಾಕಿ ಎಲ್ಲಿಸ್ ಪೆರ್ರಿಗೆ ಟಾಟಾ ಕಂಪೆನಿ ಗಿಫ್ಟ್ ನೀಡಿತ್ತು. ಈ ಮೂಲಕ ಪೆರ್ರಿಯ ಸ್ಮರಣೀಯ ಇನಿಂಗ್ಸ್ ಅನ್ನು ‘ಒಡೆದ’ ಗಾಜಿನೊಂದಿಗೆ ಟಾಟಾ ಮತ್ತಷ್ಟು ಸ್ಮರಣೀಯವಾಗಿಸಿತ್ತು.

ಇದನ್ನೂ ಓದಿ: ಅಪ್ಪನಿಗೂ ಸ್ಥಾನಮಾನ.. ಮಕ್ಕಳಿಗೂ ಅಧಿಕಾರ – ಬಿಜೆಪಿ ಪಾಲಿಗೆ BSY ಶಕ್ತಿನಾ.. ದೌರ್ಬಲ್ಯನಾ?

ಎಲ್ಲಿಸ್ ಪೆರ್ರಿ ಬರೀ ಕ್ರಿಕೆಟರ್ ಮಾತ್ರವಲ್ಲ. ಖ್ಯಾತ್ ಫುಟ್ಬಾಲ್ ಆಟಗಾರ್ತಿ ಕೂಡಾ ಹೌದು. ಈಕೆ ಕ್ರಿಕೆಟ್ ಅಂಗಳದಲ್ಲಿ ಸ್ಟಾರ್ ಪ್ಲೇಯರ್. ಜೊತೆಗೆ ಫಿಫಾ ಫುಟ್‌ಬಾಲ್, ಫಿಫಾ ವರ್ಲ್ಡ್ ಕಪ್ ನಲ್ಲೂ ಮಿಂಚು ಹರಿಸಿದ ಆಟಗಾರ್ತಿ. ಎಲ್ಲಿಸ್ ಹುಟ್ಟಿದ್ದು 1990, ನವೆಂಬರ್ 3ರಂದು ಸಿಡ್ನಿಯಲ್ಲಿ. ತಂದೆ ಮಾರ್ಕ್ ಪೆರ್ರಿ, ಇವರು ಹೈಸ್ಕೂಲ್ ಟೀಚರ್. ತಾಯಿ ಕ್ಯಾಥಿ ಪೆರ್ರಿ ಡಾಕ್ಟರ್. ಗಂಡ ಹೆಂಡತಿ ಇಬ್ಬರಿಗೂ ಕ್ರೀಡೆ ಅಂದರೆ ಪಂಚಪ್ರಾಣ. ತಂದೆ ಕ್ರಿಕೆಟ್ ಆಟಗಾರ. ಕ್ಲಬ್‌ ಕ್ರಿಕೆಟ್‌ನಲ್ಲಿ ಆಡ್ತಿದ್ರು.  ತಾಯಿ ಕ್ಯಾಥಿ ಸ್ವಿಮ್ಮರ್ ಆಗಿದ್ದರು. ಆದರೆ, ಇಬ್ಬರಿಗೂ ಸ್ಪೋರ್ಟ್ಸ್ ನ್ನೇ ವೃತ್ತಿಯಾಗಿ ಮುಂದುವರೆಸಲು ಆಗಿರಲಿಲ್ಲ. ಹಾಗಂತಾ ತಮ್ಮ ಕನಸು, ತಮ್ಮ ಫ್ಯಾಶನ್ ನನ್ನು ಮರೆಯಲಿಲ್ಲ. ತಾವು ಸಾಧಿಸದೇ ಇರೋದನ್ನು ಮಕ್ಕಳಲ್ಲಿ ಮುಂದುವರೆಸುವಂತೆ ಮಾಡಿದ್ರು ಈ ಗ್ರೇಟ್ ಪೇರೆಂಟ್ಸ್. ಹೀಗಾಗಿ ಎಲ್ಲಿಸ್ ಪೆರ್ರಿ, ಬಾಲ್ಯದಿಂದಲೂ ಪ್ರತಿಭಾವಂತಾ ಕ್ರೀಡಾಪಟುವಾಗಿದ್ರು. 8ನೇ ವಯಸ್ಸಿನಲ್ಲಿಯೇ ಹುಡುಗ್ರ ಥರಾ ಟೀಶರ್ಟ್ ಧರಿಸಿ ಹುಡುಗರ ಜೊತೆಯಲ್ಲೇ ಕ್ರಿಕೆಟ್ ಮತ್ತು ಫುಟ್ಬಾಲ್ ಆಡ್ತಿದ್ರು. 8ನೇ ವಯಸ್ಸಿನಲ್ಲಿ ಲೋಕಲ್ ಬಾಯ್ಸ್ ಕ್ರಿಕೆಟ್ ಟೀಮ್ ಮತ್ತು ಫುಟ್ಬಾಲ್ ಟೀಮ್ ಸೇರಿಕೊಂಡಿದ್ರು. ನಂತರ ಹೈಸ್ಕೂಲ್ ಜೀವನದಲ್ಲಿ ಹೆಣ್ಣುಮಕ್ಕಳ ಥರಾ ಲೈಫ್‌ಸ್ಟೈಲ್ ಚೇಂಜ್ ಮಾಡಿಕೊಂಡ್ರಂತೆ. 16ನೇ ವಯಸ್ಸಿನಲ್ಲಿ ಕ್ರಿಕೆಟ್‌ನಲ್ಲಿ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, ಫಿಫಾ ವಿಶ್ವಕಪ್ ನಲ್ಲಿ ಆಡಿದ ಜಗತ್ತಿನ ಏಕೈಕ ಮಹಿಳೆ ಈ ಎಲ್ಲಿಸ್ ಪೆರ್ರಿ.

ಅತ್ತ ಕ್ರಿಕೆಟ್ ಅಂದರೆ ಫೆವರೇಟ್, ಇತ್ತ ಫುಟ್‌ಬಾಲ್ ಅಂದರೆ ಪ್ರಾಣ. ಆದರೆ, ಎರಡರಲ್ಲಿ ಒಂದನ್ನೇ ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಪೆರ್ರಿಗೂ ಬಂದಿತ್ತು. ಕೋಚ್‌ಗಳ ಕಠಿಣ ತೀರ್ಮಾನಕ್ಕೆ ತಲೆಬಾಗಲೇ ಬೇಕಿತ್ತು. ಹೀಗಾಗಿ ಪೆರ್ರಿ ಫುಟ್ಬಾಲ್ ಅಥವಾ ಕ್ರಿಕೆಟ್ ಎರಡರಲ್ಲಿ ಒಂದೇ ಕ್ರೀಡೆ ಆಯ್ಕೆ ಮಾಡು ಎಂದು ಫುಟ್ಬಾಲ್ ಕ್ಲಬ್ ವಾರ್ನಿಂಗ್ ಮಾಡಿದಾಗ ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟ್‌ನ್ನೇ. ಕ್ರೀಡಾ ಜಗತ್ತಿನ ಅಂಗಳದಲ್ಲಿ ಸ್ಟಾರ್ ಆಗಿ ಮೆರೆಯುತ್ತಿರುವ ಪೆರ್ರಿ ಇಲ್ಲಿ ಗೆಲುವು ಕಂಡ ಕ್ಷಣಗಳೇ ಅಧಿಕ. ಆದರೆ ವೈವಾಹಿಕ ಜೀವನದಲ್ಲಿ ಕಂಡಿದ್ದು ಸೋಲು. ಉಂಡಿದ್ದು ಬರೀ ನೋವು. ಪ್ರೀತಿಸಿದ ವ್ಯಕ್ತಿ ಜೊತೆಯಲ್ಲೇ ಹೆಜ್ಜೆ ಹಾಕಲೇ ಇಲ್ಲ. ಅಕ್ಟೋಬರ್24, 2013 ರಂದು, ಪೆರ್ರಿ ಮತ್ತು ಆಸ್ಟ್ರೇಲಿಯನ್ ರಗ್ಬಿ ಆಟಗಾರ ಮ್ಯಾಟ್ ಟೊಮುವಾ ಜಾನ್ ಈಲ್ಸ್ ಪದಕ ಸಮಾರಂಭವೊಂದ್ರಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪ್ರೀತಿಯಲ್ಲಿ ಬೀಳ್ತಾರೆ. 2014 ರ ಆಗಸ್ಟ್ 20ರಂದು ಎಂಗೇಜ್‌ ಆಗಿರುವ ಬಗ್ಗೆ ಇಬ್ಬರೂ ಘೋಷಣೆ ಕೂಡಾ ಮಾಡ್ತಾರೆ. 2015ರ ಡಿಸೆಂಬರ್ 15ರಂದು ಮದುವೆಯಾಗುತ್ತೆ. ಆದರೆ, ಈ ಮದುವೆಯ ಬಂಧ ಉಳಿದಿದ್ದು ಕೇವಲ 5 ವರ್ಷಗಳವೆರೆಗೆ ಮಾತ್ರ. 2020 ರಲ್ಲಿ ಈ ಜೋಡಿ ಡೈವೋರ್ಸ್ ಪಡೆಯುವ ಮೂಲಕ ಬೇರೆ ಬೇರೆಯಾಗ್ತಾರೆ.

ಪರ್ಸನಲ್ ಲೈಫ್‌ನಲ್ಲಿ ಅದೆಷ್ಟೇ ನೋವಿರಲಿ, ಒಮ್ಮೆ ಕ್ರಿಕೆಟ್ ಗ್ರೌಂಡ್‌ಗೆ ಈ ಲೇಡಿ ಎಬಿಡಿ ಎಂಟ್ರಿಯಾದರೆ ಸಾಕು ಅಲ್ಲೊಂದು ಜೋಶ್ ಇರುತ್ತದೆ. ಈ ಸ್ಟಾರ್ ಕ್ರಿಕೆಟ್ ಆಟಗಾರ್ತಿ ಬಗ್ಗೆ ಫ್ಯಾನ್ಸ್‌ಗೂ ಸಿಕ್ಕಾಪಟ್ಟೆ ಕ್ರೇಜ್ ಇದೆ. ಇನ್ನು ಆರ್‌ಸಿಬಿ ಟೀಮ್ ನ ಕ್ಯಾಪ್ಟನ್ ಸ್ಮೃತಿ ಮಂದಾನ ಆಗಿದ್ದರೂ ಪ್ರತಿಯೊಂದು ಡಿಸಿಷನ್ ತೆಗೆದುಕೊಳ್ಳುವಾಗಲೂ ಕೇಳೋದು ಪೆರ್ರಿ ಸಲಹೆಯನ್ನು. ಯಾಕೆಂದ್ರೆ ಆಸ್ಟ್ರೇಲಿಯಾದ ಈ ಕ್ರಿಕೆಟರ್ ಅನೇಕ ಪಂದ್ಯಗಳ ಗೆಲುವಿನ ರೂವಾರಿಯೂ ಹೌದು. ಜೊತೆಗೆ ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟರ್ ಎಂಬ ಹೆಮ್ಮೆಗೆ ಪಾತ್ರವಾಗಿದ್ದರು ಎಲ್ಲಿಸ್ ಪೆರ್ರಿ.

ಈ ಕಾಲದಲ್ಲಿ ಒಂದೇ ಸ್ಪೋರ್ಟ್ಸ್‌ಗೆ ಕಾನ್ಸಂಟ್ರೇಷನ್ ಮಾಡೋದೇ ಕಷ್ಟ. ಅಂಥದ್ರಲ್ಲಿ ಎರಡೆರೆಡು ಸ್ಪೋರ್ಟ್ಸ್‌ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಆಡೋದು ಅಂದ್ರೆ ಸಾಮಾನ್ಯಾನಾ. ಇದನ್ನು ಮಾಡಿ ತೋರಿಸಿದ್ದಾರೆ ಎಲ್ಲಿಸ್ ಪೆರ್ರಿ. ಒಂದು ಹೆಣ್ಣು ಮನಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲಳು ಎಂಬುದನ್ನು ತನ್ನ ಆಟದ ಮೂಲಕ ತೋರಿಸಿಕೊಟ್ಟಿದ್ದಾರೆ ಎಲ್ಲಿಸ್ ಪೆರ್ರಿ.

Shwetha M