RCB ಗೆದ್ರೆ ಪ್ಲೇಆಫ್.. ಸೋತ್ರೆ OUT – ಕೊಹ್ಲಿ ಮ್ಯಾಜಿಕ್ ವರ್ಕೌಟ್ ಆಗುತ್ತಾ?
SRH ವಿಕ್ಟರಿ ಬೆಂಗಳೂರಿಗೆ ಪ್ಲಸ್ 

RCB ಗೆದ್ರೆ ಪ್ಲೇಆಫ್.. ಸೋತ್ರೆ OUT – ಕೊಹ್ಲಿ ಮ್ಯಾಜಿಕ್ ವರ್ಕೌಟ್ ಆಗುತ್ತಾ?SRH ವಿಕ್ಟರಿ ಬೆಂಗಳೂರಿಗೆ ಪ್ಲಸ್ 

ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿರೋ ಆರ್​ಸಿಬಿ ಪ್ಲೇ ಆಫ್ ಕನಸನ್ನ ಜೀವಂತವಾಗಿರಿಸಿಕೊಂಡಿದೆ. ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೆಣಸಾಡಲಿದ್ದು, ಇಂದಿನ ಗೆಲುವು ಎರಡೂ ತಂಡಗಳಿಗೂ ತುಂಬಾನೇ ಮಹತ್ವದ್ದಾಗಿದೆ. ಪ್ಲೇಆಫ್ ರೇಸ್​ನಲ್ಲಿರೋ ಉಭಯ ತಂಡಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮತ್ತೊಂದೆಡೆ ಬುಧವಾರ ಲಕ್ನೋ ವಿರುದ್ಧದ ಪಂದ್ಯದಲ್ಲಿ ಹೈದ್ರಾಬಾದ್ ಜಯಭೇರಿ ಬಾರಿಸಿರೋದು ಆರ್​ಸಿಬಿಗೆ ಪ್ಲಸ್ ಪಾಯಿಂಟ್ ಆಗಿದೆ. ಅಷ್ಟಕ್ಕೂ ಇಂದಿನ ಮ್ಯಾಚ್ ಕೊಹ್ಲಿ ಬಳಗಕ್ಕೆ ಎಷ್ಟು ಇಂಪಾರ್ಟೆಂಟ್..? ಪಂಜಾಬ್ ಸೋತ್ರೆ ಪ್ಲೇ ಆಫ್ ರೇಸ್ ನಿಂದ ಹೊರಬೀಳುತ್ತಾ..? ಎಲ್​ಎಸ್​ಜಿ ಸೋಲು ಬೆಂಗಳೂರು ತಂಡಕ್ಕೆ ಹೇಗೆ ಪ್ಲಸ್ ಆಯ್ತು ಅನ್ನೋ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IPLನಲ್ಲಿ ಅಬ್ಬರಿಸದ ರೋಹಿತ್ ವಿಶ್ವಕಪ್ ಗೆಲ್ತಾರಾ? – ಫ್ಯಾನ್ಸ್ ಕೆರಳಿದ್ದು ಯಾಕೆ?  

ಐಪಿಎಲ್ ಸೀಸನ್ 17 ಲೀಗ್ ಹಂತ ಇನ್ನೇನು ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಎಲ್ಲಾ ತಂಡಗಳಿಗೂ ಜಸ್ಟ್ ಎರಡು, ಮೂರು ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಈಗಾಗ್ಲೇ ರಾಜಸ್ತಾನ ಮತ್ತು ಕೆಕೆಆರ್ ತಂಡಗಳು ಪ್ಲೇಆಫ್​ಗೆ ಸೆಲೆಕ್ಟ್ ಆಗಿವೆ. ಎಸ್​ಆರ್​ಹೆಚ್ ತಂಡ ಬುಧವಾರ ಎಲ್​ಎಸ್​​ಜಿಯನ್ನ ಸೋಲಿಸುವ ಮೂಲಕ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಸಿಎಸ್​ಕೆ, ಡಿಸಿ, ಮತ್ತು ಎಲ್​ಎಸ್​ಜಿ ತಲಾ ಹನ್ನೆರಡು ಅಂಕಗಳೊಂದಿಗೆ ಟಾಪ್ 4ಗೆ ಹೋಗಲು ಪೈಪೋಟಿ ನಡೆಸುತ್ತಿದೆ. ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ತಂಡಗಳ ನಡುವೆ ಮ್ಯಾಚ್ ನಡೆಯಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಈ ಪಂದ್ಯದ ಗೆಲುವು ಎರಡೂ ತಂಡಗಳಿಗೆ ಬಹಳ ಅವಶ್ಯಕವಾಗಿದೆ. ಈ ಸೀಸನ್​ನಲ್ಲಿ ಎರಡೂ ತಂಡಗಳ ಪ್ರದರ್ಶನ ಅಷ್ಟೇನು ಚೆನ್ನಾಗಿಲ್ಲ. ಸ್ಯಾಮ್ ಕರನ್ ನೇತೃತ್ವದ ಪಂಜಾಬ್ ಪಡೆ ಇದುವರೆಗೆ ಆಡಿರುವ ಹನ್ನೊಂದು ಪಂದ್ಯಗಳಲ್ಲಿ 4 ರಲ್ಲಿ ಗೆದ್ದಿದ್ದು 8 ನೇ ಸ್ಥಾನದಲ್ಲಿದೆ. ಇತ್ತ ಆರ್​ಸಿಬಿ ಕೂಡ ಹನ್ನೊಂದು ಪಂದ್ಯಗಳನ್ನು ಆಡಿದ್ದು, 4 ಗೆಲುವಿನೊಂದಿಗೆ 7 ನೇ ಸ್ಥಾನದಲ್ಲಿದೆ. ಫಸ್ಟ್ ಆಫ್​ನಲ್ಲಿ ಸತತ ಸೋಲು ಕಂಡಿದ್ದ ಫಾಫ್ ಟೀಂ ಸೆಕೆಂಡ್ ಲೀಗ್​ನಲ್ಲಿ ಕೊಂಚ ಚೇತರಿಕೆ ಕಂಡಿದೆ. ಬ್ಯಾಕ್ ಟು ಬ್ಯಾಕ್ ಮೂರು ಪಂದ್ಯಗಳನ್ನ ಗೆದ್ದಿದೆ. ಉತ್ತಮ ನೆಟ್ ರನ್ ರೇಟ್ ಇರೋದ್ರಿಂದ ಪಾಯಿಂಟ್ಸ್ ಟೇಬಲ್​ನಲ್ಲಿ 7ನೇ ಸ್ಥಾನದಲ್ಲಿದ್ರೂ ಆರ್​ಸಿಬಿಗೆ ಪ್ಲೇಆಫ್​ಗೇರಲು ಒಂದು ಸಣ್ಣ ಚಾನ್ಸ್ ಇದೆ. ಅಲ್ದೇ ಈ ಅವಕಾಶ ಪಂಜಾಬ್​ಗೂ ಇದೆ.

ಈ ಟೂರ್ನಿಯಲ್ಲಿ ಪಂಜಾಬ್ ಮತ್ತು ಬೆಂಗಳೂರು ತಂಡಗಳಿಗೆ ತಲಾ 3 ಪಂದ್ಯಗಳು ಬಾಕಿ ಇವೆ. ಅರ್ಹತೆ ಪಡೆಯಲು, ಎರಡೂ ತಂಡಗಳು ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಇತರ ತಂಡಗಳ ಸೋಲಿನ ಮೇಲೆ ಡಿಪೆಂಡ್ ಆಗಿವೆ. ಈ ಪಂದ್ಯದಲ್ಲಿ ಯಾವ ತಂಡ ಸೋತರೂ ಆ ತಂಡ ಅಧಿಕೃತವಾಗಿ ಪ್ಲೇಆಫ್​ನಿಂದ ಹೊರ ಬೀಳಲಿದೆ.  ಇನ್ನು ಬುಧವಾರ ನಡೆದ ಲಕ್ನೋ ಮತ್ತು ಹೈದ್ರಾಬಾದ್ ನಡುವಿನ ಪಂದ್ಯದ ರಿಸಲ್ಟ್ ಆರ್​ಸಿಬಿ ಪಾಲಿಗೆ ಪ್ಲಸ್ ಆಗಿದೆ. ಅದು ಹೇಗೆ ಅನ್ನೋದನ್ನ ಹೇಳೋ ಮುಂಚೆ ರಾಹುಲ್ ಪಡೆ ವಿರುದ್ಧ ಪ್ಯಾಟ್ ಕಮಿನ್ಸ್ ಸೇನೆ ಗರ್ಜಿಸಿದ ರೀತಿಯನ್ನ ಹೇಳಲೇಬೇಕು.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್‌ ಗೆದ್ದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್​ನಲ್ಲಿ ಫೇಲ್ಯೂರ್ ಆದ ಎಲ್​ಎಸ್್ಜಿ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 165 ರನ್‌ ಗಳಿಸಲಷ್ಟೇ ಶಕ್ತವಾಯ್ತು. 3 ಸಲ 250 ಪ್ಲಸ್ ರನ್ ಬಾರಿಸಿದ್ದ ಕಮಿನ್ಸ್ ಪಡೆಗೆ ಈ ಟಾರ್ಗೆಟ್ ದೊಡ್ಡ ಮೊತ್ತ ಅನ್ನಿಸ್ಲೇ ಇಲ್ಲ. ಚೇಸಿಂಗ್​ಗೆ ಬಂದ ಟ್ರಾವಿಸ್ ಹೆಡ್ ಮತ್ತು ಅಭಿಶೇಕ್ ಶರ್ಮಾ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಮ್ಯಾಚ್ ಮುಗಿಸೋ ಹುಮ್ಮಸ್ಸಿನಲ್ಲಿದ್ರು. ಹೈದ್ರಾಬಾದ್ ತಂಡದ ಬೇರೆ ಬ್ಯಾಟ್ಸ್​​ಮನ್​ಗಳು ಕ್ರಿಸ್​ಗೆ ಬರೋಕೆ ಬಿಡ್ಲೇ ಇಲ್ಲ. ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ  8 ಬೌಂಡರಿ ಹಾಗೂ 8 ಸಿಕ್ಸರ್​ಗಳ ಸಹಿತ 89 ರನ್​ ಚಚ್ಚಿದ್ರು. ಮತ್ತೊಂದೆಡೆ ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್​ಗಳ ಸಹಿತ ಅಜೇಯ 75 ರನ್​ಗಳಿಸಿದರು. ಇವರಿಬ್ಬರು 16 ಬೌಂಡರಿ ಹಾಗೂ 14 ಸಿಕ್ಸರ್‌ಗಳನ್ನು ಬಾರಿಸಿದ್ರು. ಲಕ್ನೋ ಬೌಲರ್‌ಗಳಿಗೆ ಒಂದೇ ಒಂದು ವಿಕೆಟ್ ಕೂಡ ಕಬಳಿಸೋಕೂ ಅವಕಾಶ ಕೊಡ್ಲಿಲ್ಲ. ಹೀಗಾಗಿ ಜಸ್ಟ್ 10 ಓವರ್​ಗಳಿಗೆ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ  ಹೈದರಾಬಾದ್​ 167 ​ರನ್​ಗಳಿಸಿ ವಿಶ್ವದಾಖಲೆ ಬರೆಯಿತು.

ಇನ್ನೊಂದು ವಿಶೇಷ ಅಂದ್ರೆ ಎಸ್​ಆರ್​​ಹೆಚ್ 10 ಓವರ್​ಗಳಲ್ಲಿ ಹೆಚ್ಚು ರನ್​ಗಳಿಸಿದ ಮೊದಲ ಮೂರು ದಾಖಲೆಯನ್ನು ತನ್ನ ಹೆಸರಲ್ಲೇ ಬರೆದುಕೊಂಡಿದೆ. ಅಲ್ದೇ  2024ರ ಆವೃತ್ತಿಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದೆ. ಇದೇ ಆವೃತ್ತಿಯಲ್ಲಿ ಹೈದರಾಬಾದ್​ ತಂಡ 287ರನ್​ ಸಿಡಿಸುವ ಮೂಲಕ ಐಪಿಎಲ್​ನ ಗರಿಷ್ಠ ಮೊತ್ತ ದಾಖಲಿಸಿದೆ. ಐಪಿಎಲ್​ನಲ್ಲಿ ಮಾತ್ರವಲ್ಲಿ ಟಿ20 ಕ್ರಿಕೆಟ್​ನಲ್ಲೇ ಇದು ವಿಶ್ವದಾಖಲೆಯಾಗಿದೆ. 2ನೇ ಗರಿಷ್ಠ ಮೊತ್ತ 277 ಕೂಡ ಹೈದರಾಬಾದ್​ ಹೆಸರಿನಲ್ಲಿದೆ.

ಈ ಗೆಲುವಿನೊಂದಿಗೆ ಸನ್ ರೈಸರ್ಸ್‌ ಹೈದರಾಬಾದ್‌ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದರೆ, ಲಕ್ನೋ ಸೂಪರ್‌ಜೈಂಟ್ಸ್ ತಂಡ 6ನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಆದರೆ ಈ ಪಂದ್ಯದ ಫಲಿತಾಂಶದ ಬಳಿಕ ಮುಂಬೈ ಇಂಡಿಯನ್ಸ್‌ ತಂಡದ ಪ್ಲೇ ಆಫ್‌ ತಲುಪುವ ಕನಸು ಅಧಿಕೃತವಾಗಿ ಭಗ್ನಗೊಂಡಿದೆ. ಮುಂಬೈ ಇಂಡಿಯನ್ಸ್‌ ತಂಡ ಇದುವರೆಗೆ 12 ಪಂದ್ಯಗಳನ್ನಾಡಿದ್ದು 4 ಗೆಲುವು ಹಾಗೂ 8 ಸೋಲಿನೊಂದಿಗೆ ಕೇವಲ 8 ಅಂಕಗಳನ್ನು ತನ್ನ ಖಾತೆಯಲ್ಲಿ ಇಟ್ಟುಕೊಂಡಿದೆ. ಮುಂಬೈ ಉಳಿದಿರುವ ಇನ್ನೇರಡು ಪಂದ್ಯಗಳನ್ನು ಗೆದ್ದರೂ ಅದರ ಬಳಿ ಕೇವಲ 12 ಅಂಕಗಳು ಮಾತ್ರ ಇರಲಿವೆ.

ಮತ್ತೊಂದೆಡೆ ಸಿಎಸ್​ಕೆ, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ತಂಡಗಳು ಈಗಾಗಲೇ 12 ಅಂಕ ಕಲೆಹಾಕಿ ಪ್ಲೇಆಫ್‌ ರೇಸ್​ನಲ್ಲಿ ಪೈಪೋಟಿಯಲ್ಲಿವೆ. ಚೆನ್ನೈ ತಂಡಕ್ಕೆ ಇನ್ನು 3 ಪಂದ್ಯ ಬಾಕಿ ಇದ್ದು, ಡೆಲ್ಲಿ ಹಾಗೂ ಲಕ್ನೋಗೆ ಇನ್ನು 2 ಪಂದ್ಯಗಳು ಬಾಕಿ ಇವೆ. ಇದರಲ್ಲಿ ಈ ಮೂರು ತಂಡಗಳು ಒಂದೇ ಒಂದು ಗೆಲುವು ದಾಖಲಿಸಿದರೆ 14 ಅಂಕ ಸಂಪಾದಿಸಿದಂತೆ ಆಗುತ್ತೆ. ಆರ್​ಸಿಬಿ, ಪಂಜಾಬ್, ಗುಜರಾತ್ ಪ್ಲೇಆಫ್‌ ಹಾದಿ ಸುಗಮವಲ್ಲದಿದ್ದರೂ ಈ ಮೂರು ತಂಡಗಳು ಪ್ಲೇಆಫ್‌ ರೇಸ್​ನಿಂದ ಇನ್ನು ಅಧಿಕೃತವಾಗಿ ಹೊರಬಿದ್ದಿಲ್ಲ. ಆರ್​ಸಿಬಿ ಮುಂದಿನ ಮೂರು ಮ್ಯಾಚ್​ಗಳನ್ನ ಉತ್ತಮ ರನ್​ರೇಟ್​ನೊಂದಿಗೆ ಆಡಿದ್ರೆ ಒಂದು ಚಾನ್ಸ್ ಇರಲಿದೆ. ಹಾಗೇ ಈಗಾಗಲೇ 12 ಅಂಕ ಸಂಪಾದಿಸಿರುವ ಚೆನ್ನೈ, ಡೆಲ್ಲಿ, ಲಕ್ನೋ ಉಳಿದ ಪಂದ್ಯಗಳನ್ನ ಸೋತ್ರೆ ಮಾತ್ರ ಅದು ಬೆಂಗಳೂರು ಟೀಂ ಹಾದಿಯನ್ನ ಸುಗಮಗೊಳಿಸಲಿದೆ. ಸದ್ಯ ಕಳೆದ ಮೂರು ಪಂದ್ಯಗಳಿಂದ ಬ್ಯಾಟಿಂಗ್​ ಮತ್ತು ಬೌಲಿಂಗ್ ಎರಡರಲ್ಲೂ ಆರ್​​ಸಿಬಿ ಪರಾಕ್ರಮ ತೋರುತ್ತಿದೆ. ಬ್ಯಾಟಿಂಗ್​ನಲ್ಲಿ ವಿರಾಟ್ ಕೊಹ್ಲಿ, ಡು ಪ್ಲೆಸಿಸ್, ವಿಲ್ ಜಾಕ್ಸ್, ರಜತ್ ಪಾಟೀದಾರ್ ಮತ್ತು ಬೌಲಿಂಗ್​​ನಲ್ಲಿ ಸಿರಾಜ್, ಯಶ್ ದಯಾಳ್, ವಿಜಯ್​ಕುಮಾರ್​ ಫಾರ್ಮ್​ ಮುಂದುವರೆಸಿದರೆ, ಪಂಜಾಬ್ ವಿರುದ್ಧವೂ ಜಯ ಸಾಧಿಸುವುದು ಪಕ್ಕಾ. ಹ್ಯಾಟ್ರಿಕ್ ಜಯ ಸಾಧಿಸಿರುವ ಆರ್​ಸಿಬಿ, ಸತತ 4ನೇ ಗೆಲುವಿನ ಕಣ್ಣಿಟ್ಟಿದೆ. ಅಭಿಮಾನಿಗಳು ಸಹ ಗೆಲುವನ್ನ ಎದುರು ನೋಡುತ್ತಿದ್ದಾರೆ.

Shwetha M