RCBಗಾಗಿ ಕೋರ್ಟ್ ಗೆ ಹೋದ ತುಷಾರ – ಫಿಟ್ ಇದ್ರೂ NOC ಕೊಡ್ಲಿಲ್ವಾ ಲಂಕಾ?
ಕ್ರಿಕೆಟ್ ಕೆರಿಯರ್ ನೇ ಪಣಕ್ಕಿಟ್ಟ ನುವಾನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಇದು ಬರೀ ಟೀಂ ಅಲ್ಲ ಎಮೋಷನ್. ಆರ್ಸಿಬಿ ಅಂದ್ರೆ ಫ್ಯಾನ್ಸ್ ಅಷ್ಟೇ ಅಲ್ಲ ಪ್ಲೇಯರ್ಸ್ ಕೂಡ ತುಂಬಾನೇ ಅಟ್ಯಾಚ್ಮೆಂಟ್ ಇಟ್ಕೊಂಡಿದ್ದಾರೆ. ಈಗ ಆರ್ಸಿಬಿ ಪರ ಪಂದ್ಯಗಳನ್ನ ಆಡೋಕೆ ಎನ್ಓಸಿ ಕೊಟ್ಟಿಲ್ಲ ಅಂತಾ ಶ್ರೀಲಂಕಾ ಕ್ರಿಕೆಟರ್ ನುವಾನ್ ತುಷಾರ ತಮ್ಮದೇ ಕ್ರಿಕೆಟ್ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ತುಷಾರ ಈ ನಿರ್ಧಾರ ಅತಿದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ. ಅವ್ರ ಕ್ರಿಕೆಟ್ ಕರಿಯರ್ ಬಗ್ಗೆಯೇ ಪ್ರಶ್ನೆಗಳನ್ನ ಮೂಡಿಸಿದೆ. ಕ್ರಿಕೆಟ್ ಲೋಕದಲ್ಲಿ ರಾಷ್ಟ್ರೀಯ ತಂಡಗಳ ಪರ ಆಡೋದು ಪ್ರತಿಯೊಬ್ಬ ಕ್ರಿಕೆಟಿಗರು ಕನಸು ಹಾಗೇ ಪ್ರತಿಷ್ಠೆ. ಅದಕ್ಕಾಗಿ ಎಂಥಾ ತ್ಯಾಗಕ್ಕಾದ್ರೂ ಸಿದ್ಧ ಇರ್ತಾರೆ. ಆದ್ರೆ ನುವಾನ್ ತುಷಾರ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಲು ತಮ್ಮ ರಾಷ್ಟ್ರೀಯ ತಂಡದ ವಿರುದ್ಧವೇ ನಿಂತಿದ್ದಾರೆ. ಜೊತೆಗೆ ಎನ್ಓಸಿ ನೀಡದ ಮಂಡಳಿ ನಡೆಗೆ ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ : RCB ಪಂದ್ಯ ನೋಡೋಕೆ ಬರೋ ಮೆಟ್ರೋ ಪ್ರಯಾಣಿಕರ ಗಮನಕ್ಕೆ – ಭಾನುವಾರ ಮಧ್ಯರಾತ್ರಿ 2 ಗಂಟೆವರೆಗೆ ಸಂಚರಿಸಲಿಗೆ ನಮ್ಮ ಮೆಟ್ರೋ
ಐಪಿಎಲ್ ಆಡಲು ಅನುಮತಿ ನೀಡದ ಲಂಕಾ ನಡೆಗೆ ಸಿಟ್ಟು!
ಶ್ರೀಲಂಕಾ ತಂಡದ ಆಟಗಾರ ನುವಾನ್ ತುಷಾರ ಫಾಸ್ಟ್ ಬೌಲರ್ ಆಗಿದ್ದು 2025ರ ಐಪಿಎಲ್ ಮೆಗಾ ಹರಾಜಿನಲ್ಲಿ RCB ₹1.60 ಕೋಟಿಗೆ ಖರೀದಿ ಮಾಡಿತ್ತು. 2025ರ ಸೀಸನ್ನಲ್ಲಿ ಬೆಂಗಳೂರು ಪರ ಒಂದು ಪಂದ್ಯ ಆಡಿದ್ರು. ಇದಕ್ಕೂ ಮೊದಲು 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. 7 ಪಂದ್ಯಗಳನ್ನ ಆಡಿ 8 ವಿಕೆಟ್ ಪಡೆದಿದ್ರು. ಆದ್ರೆ ಈ ಬಾರಿ ಇನ್ನೂ ಕೂಡ ಆರ್ಸಿಬಿ ಕ್ಯಾಂಪ್ಗೆ ಜಾಯ್ನ್ ಆಗಿಲ್ಲ. ಅದಕ್ಕೆ ಕಾರಣ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಅಂತಾ ನುವಾನ್ ತುಷಾರಗೆ ಎನ್‌ಒಸಿ ನೀಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. SLC ರೂಲ್ಸ್ ಪ್ರಕಾರ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ್ರೆ ಮಾತ್ರವೇ ವಿದೇಶಿ ಲೀಗ್ಗಳಲ್ಲಿ ಆಡ್ಬೋದು. ಹೀಗಾಗಿ ಎನ್ಓಸಿ ನೀಡದ ಮಂಡಳಿ ವಿರುದ್ಧ ನೇರವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೋರಿದ್ದು ಪ್ರಕರಣದ ವಿಚಾರಣೆ ಏಪ್ರಿಲ್ 9 ರಂದು ನಡೆಯಲಿದೆ. ಅಷ್ಟಕ್ಕೂ ಇಲ್ಲಿ ತುಷಾರ್ ಕೋರ್ಟ್ ಮೆಟ್ಟಿಲೇರೋಕೆ ಕಾರಣವೂ ಇದೆ.
ಕೋರ್ಟ್ ಮೆಟ್ಟಿಲೇರಿದ ತುಷಾರ!
ಶ್ರೀಲಂಕಾ ಜೊತೆಗಿನ ಕೇಂದ್ರ ಒಪ್ಪಂದ ಮಾರ್ಚ್ 31ಕ್ಕೆ ಕೊನೆ
ನಾನು ರಾಷ್ಟ್ರೀಯ ತಂಡದಲ್ಲಿ ಮುಂದುವರಿಯಲ್ಲ ಎಂದಿರುವ ತುಷಾರ
ಐಪಿಎಲ್ ಆಡಲು ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ತ್ಯಜಿಸಿಲು ರೆಡಿ
ಫಿಟ್ನೆಸ್ ಸಮಸ್ಯೆಗಳನ್ನು ಉಲ್ಲೇಖಿಸಿ ಎಸ್ ಎಲ್ ಸಿ NOC ನೀಡುತ್ತಿಲ್ಲ
ಈ ನಿರ್ಧಾರದಿಂದಾಗಿ 1.6 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಬೇಕು
ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವಾ, ಕಾರ್ಯದರ್ಶಿ ಬಂಡುಲಾ ದಿಸಾನಾಯಕೆ
ಖಜಾಂಚಿ ಸುಜೀವ ಗೋದಲಿಯಡ್ಡ ಮತ್ತು ಸಿಇಒ ಆಶ್ಲೇ ಡಿ ಸಿಲ್ವಾ ಪ್ರತಿವಾದಿಗಳು
NOC ಪಡೆಯಲು ಅರ್ಹತೆ ಇದೆ ಎಂದು ಘೋಷಿಸಬೇಕೆಂದು ಬಯಸಿರುವುದಾಗಿ ಉಲ್ಲೇಖ
ಇನ್ನು ನುವಾನ್ ತುಷಾರ ಅಷ್ಟೇ ಅಲ್ದೆ ಶ್ರೀಲಂಕಾದ ಅನೇಕ ಆಟಗಾರರು ಗಾಯದ ಸಮಸ್ಯೆಗಳು ಇರೋದ್ರಿಂದ ಎನ್‌ಒಸಿ ನಿರಾಕರಿಸಲಾಗಿದೆ. ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ₹18 ಕೋಟಿಗೆ ಖರೀದಿಸಿದ ಮಥೀಷ ಪತಿರಾನ ಮತ್ತು 2026 ರ ಟಿ20 ವಿಶ್ವಕಪ್ ಸಮಯದಲ್ಲಿ ಗಾಯಗೊಂಡಿದ್ದ ಸ್ಟಾರ್ ಸ್ಪಿನ್ನರ್ ವನಿಂದು ಹಸರಂಗಗೂ ಅನುಮತಿ ಸಿಕ್ಕಿಲ್ಲ. ಹೀಗಿದ್ರೂ ಸನ್‌ರೈಸರ್ಸ್ ಹೈದರಾಬಾದ್‌ನ ಈಶಾನ್ ಮಾಲಿಂಗ್ ಮತ್ತು ಕಮಿಂಡು ಮೆಂಡಿಸ್ ಹೊರತುಪಡಿಸಿ ಶ್ರೀಲಂಕಾದ ಯಾವುದೇ ಆಟಗಾರ ಇನ್ನೂ ತಮ್ಮ ತಂಡಗಳನ್ನು ಸೇರಿಕೊಂಡಿಲ್ಲ. ತುಷಾರ ಶ್ರೀಲಂಕಾದ ಪ್ರಮುಖ ಬೌಲರ್. ಅವರು ಶ್ರೀಲಂಕಾ ಪರ 30 ಟಿ20 ಪಂದ್ಯಗಳನ್ನು ಆಡಿದ್ದು, 36 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಎಕಾನಮಿ ದರ ಪ್ರತಿ ಓವರ್‌ಗೆ 8.1 ರನ್ ಆಗಿದೆ. ಈ ವರ್ಷ ತುಷಾರಗೆ ಎನ್‌ಒಸಿ ಸಿಗದೇ ಅವ್ರು ಆರ್ಸಿಬಿ ಕ್ಯಾಂಪ್ ಸೇರದೇ ಇದ್ರೆ ಫ್ರಾಂಚೈಸಿ ಒಪ್ಪಂದವನ್ನ ರದ್ದುಪಡಿಸೋದ್ರಿಂದ ಸಂಭಾವನೆ ಸಿಗದೆ ನಷ್ಟವಾಗಲಿದೆ. ಆದ್ರೆ ಆರ್ಸಿಬಿಗಾಗಿ ರಾಷ್ಟ್ರೀಯ ತಂಡದ ಒಪ್ಪಂದವನ್ನೇ ನಿರಾಕರಿಸುತ್ತಿರೋ ತುಷಾರ ನಿರ್ಧಾರ ಸಾಕಷ್ಟು ಚರ್ಚೆಯಾಗ್ತಿದೆ. ಕೆಲವ್ರು ಪರ ಇದ್ರೆ ಇನ್ನೂ ಕೆಲವ್ರು ವಿರೋಧ ಮಾಡ್ತಿದ್ದಾರೆ.

ನೋಡಿರಿ

