RCB ಕ್ಯಾಪ್ಟನ್ಸಿಗೆ ಫಾಫ್ ಗುಡ್ ಬೈ? – ಕೊಹ್ಲಿ ನಕಾರ.. ಯಾರಿಗೆ ನಾಯಕತ್ವ?
2025ಕ್ಕೆ ಬೆಂಗಳೂರು ಅಧಿಪತಿ ಇವ್ರೇ?
ಐಪಿಎಲ್ ಸೀಸನ್ 17ನಲ್ಲಿ ಆರ್ಸಿಬಿಯದ್ದು ಮುಗಿದ ಅಧ್ಯಾಯ. ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸೋತು ಟೂರ್ನಿಗೆ ವಿದಾಯ ಹೇಳಿದೆ. ಇನ್ನೇನಿದ್ರೂ 2025ರ ಐಪಿಎಲ್ನತ್ತ ಅಭಿಮಾನಿಗಳ ಚಿತ್ತ ನೆಟ್ಟಿದೆ. ಈ ಸಲ ಅಲ್ದಿದ್ರೆ ಮುಂದಿನ ಸಲ ಕಪ್ ನಮ್ದು ಅಂತಾ ಫ್ಯಾನ್ಸ್ ಈಗಾಗ್ಲೇ ಸ್ಲೋಗನ್ ಶುರು ಮಾಡಿದ್ದಾರೆ. ಆದ್ರೆ 2025ರ ಟೂರ್ನಿಗೂ ಮೊದ್ಲೇ ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಯಾಗೋ ಹಿಂಟ್ ಸಿಕ್ಕಿದೆ. ಅದೂ ಕೂಡ ನಾಯಕನ ಬದಲಾವಣೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಾರಥಿ ನೇಮಕ ಮಾಡೋಕೆ ಎಲ್ಲಾ ಸಿದ್ಧತೆ ನಡೀತಿದೆ. ಕ್ಯಾಪ್ಟನ್ಸಿ ರೇಸ್ನಲ್ಲಿರೋ ಆ ಆಟಗಾರ ಯಾರು? ಫಾಫ್ ಬಳಿಕ ತಂಡದ ಜವಾಬ್ದಾರಿ ಯಾರಿಗೆ ಸಿಗಲಿದೆ? ಕೊಹ್ಲಿ ಮತ್ತೊಮ್ಮೆ ಬೆಂಗಳೂರು ತಂಡದ ನಾಯಕನಾಗ್ತಾರಾ? ಈ ಬಗೆಗಿನ ಇಂಟ್ರೆಸ್ಟಿಂಗ್ ಇಲ್ಲಿದೆ.
ಇದನ್ನೂ ಓದಿ: DK ಕೂಗು.. ಕಣ್ಣಂಚಲ್ಲಿ ನೀರು – IPLಗೆ ದಿನೇಶ್ ಕಾರ್ತಿಕ್ ವಿದಾಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಗೆ ಒಂಥರಾ ಬೂಸ್ಟರ್ ಡೋಸ್ ಇದ್ದಂಗೆ. ಕಪ್ ಗೆಲ್ಲದೇ ಇದ್ರೂ ಕ್ರಿಕೆಟ್ ಲೀಗ್ ಇಷ್ಟೊಂದು ರಂಗು ಪಡೆದುಕೊಳ್ಳೋಕೆ ಮೇನ್ ರೀಸನ್ ಇದೇ ಆರ್‌ಸಿಬಿ. ಅದು ಆಟಗಾರರೇ ಆಗಿರ್ಲಿ ಅಥವಾ ಫ್ಯಾನ್ಸ್ ವಿಚಾರದಲ್ಲೇ ಇರ್ಲಿ. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಮ್ಯಾಕ್ಸ್ ವೆಲ್, ದಿನೇಶ್ ಕಾರ್ತಿಕ್ ಹೀಗೆ ಸಾಕಷ್ಟು ಆಟಗಾರರು ಆಟದ ಜೊತೆ ಜೊತೆಗೆ ಕೋಟ್ಯಂತರ ಫ್ಯಾನ್ಸ್ ಗೆ ಮಸ್ತ್ ಮನರಂಜನೆ ನೀಡಿದ್ದಾರೆ. ನೀಡ್ತಾನೇ ಇದ್ದಾರೆ. ಇದೀಗ ಆರ್‌ಸಿಬಿ ಪಾಲಿಗೆ 17ನೇ ಸೀಸನ್ ಮುಗಿದಿದ್ದು, 2025ರ ಟೂರ್ನಿಗೆ ಕ್ಯಾಪ್ಟನ್ಸಿ ಬದಲಾವಣೆಯ ವಿಚಾರ ಚರ್ಚೆಗೆ ಬಂದಿದೆ. ಪ್ರಸ್ತುತ ಕ್ಯಾಪ್ಟನ್ ಆಗಿರುವ ಫಾಫ್ ಡು ಪ್ಲೆಸಿಸ್‌ಗೆ ಈಗ 39 ವರ್ಷ. ಮುಂದಿನ ವರ್ಷ 40 ವರ್ಷ ಆಗುತ್ತೆ. ಹೀಗಾಗಿ ಎಲ್ಲ ಫಾರ್ಮೆಟ್‌ನ ಕ್ರಿಕೆಟ್‌ಗೆ ಫಾಫ್ ವಿದಾಯ ಹೇಳುವ ನಿರೀಕ್ಷೆ ಇದೆ. ಅಲ್ದೇ ಈ ಸೀಸನ್ನಲ್ಲಿ ಆರ್‌ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ಆಡಿರೋ 15 ಪಂದ್ಯಗಳಲ್ಲಿ ಫಾಫ್ ಕೇವಲ 438 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಆವರೇಜ್ 29 ಇದ್ದು, ಸ್ಟ್ರೈಕ್ ರೇಟ್ 160 ಇದೆ. ತಮ್ಮ ಬ್ಯಾಟಿಂಗ್ 47 ಫೋರ್, 21 ಸಿಕ್ಸರ್ ಸಿಡಿಸಿದ್ದಾರೆ ಅಷ್ಟೇ. 4 ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಸಿಡಿಸಿದ್ದು, ಒಂದು ಪಂದ್ಯವೂ ಗೆಲ್ಲಿಸಿಲ್ಲ. ಕೇವಲ ಬ್ಯಾಟಿಂಗ್ ಮಾತ್ರವಲ್ಲ ಆನ್ಫೀಲ್ಡ್ ಡಿಸಿಷನ್ ತೆಗೆದುಕೊಳ್ಳುವುದರಲ್ಲೂ ಎಡವಿದ್ದು, ಇವರನ್ನ ಆರ್‌ಸಿಬಿ ನಾಯಕತ್ವ ಸ್ಥಾನದಿಂದ ಕೆಳಗಿಳಿಸಿ ಎಂದು ಒತ್ತಡ ಹಾಕಲಾಗುತ್ತಿದೆ.
ಮತ್ತೊಂದೆಡೆ ಬೆಂಗಳೂರು ತಂಡದ ಬೆಸ್ಟ್ ಮ್ಯಾಚ್ ಫಿನಿಶರ್ ಡಿಕೆ ಬಾಸ್ ಕೂಡ ನಿವೃತ್ತಿಯಾಗಲಿದ್ದಾರೆ. ಐಪಿಎಲ್ 2024ರ ಆರಂಭಕ್ಕೂ ಮುನ್ನವೇ ಇದು ನನ್ನ ವೃತ್ತಿಜೀವನದ ಕೊನೆಯ ಸೀಸನ್ ಎಂದು ಘೋಷಿಸಿದ್ದರು. ಅಲ್ದೇ ರಾಜಸ್ಥಾನ ವಿರುದ್ಧದ ಪಂದ್ಯದಲ್ಲೂ ಅವ್ರ ನಿರ್ಗಮನ ಇದು ನನ್ನ ಕೊನೇ ಪಂದ್ಯ ಎನ್ನುವಂತೆಯೇ ಇತ್ತು. ಡಿಕೆ ಅಧಿಕೃತವಾಗಿ ಇನ್ನೂ ನಿವೃತ್ತಿ ಘೋಷಣೆ ಮಾಡಿಲ್ಲವಾದ್ರೂ ಈಗಾಗ್ಲೇ ಸಾಕಷ್ಟು ಕ್ರಿಕೆಟರ್ಸ್ ದಿನೇಶ್ ಕಾರ್ತಿಕ್ ನಿವೃತ್ತಿ ಜೀವನ ಚೆನ್ನಾಗಿರಲಿ ಅಂತಾ ವಿಶ್ ಮಾಡ್ತಿದ್ದಾರೆ. ಹೀಗಾಗಿ ಡಿಕೆ ಅಂತೂ ನೆಕ್ಸ್ಟ್ ಸೀಸನ್ನಿಂದ ಮೈದಾನಕ್ಕೆ ಇಳಿಯೋದಿಲ್ಲ. ಅತ್ತ ಓಪನರ್ ಫಾಫ್ ಇತ್ತ ಫಿನಿಶರ್ ಡಿಕೆ ಇಬ್ಬರೂ ಕೂಡ ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ ಬೆಂಗಳೂರು ನಾಯಕನ ಪಟ್ಟ ಯಾರಿಗೆ ಕಟ್ಟೋದು ಅನ್ನೋ ಚರ್ಚೆ ನಡೀತಿದೆ. ಅಭಿಮಾನಿಗಳೆಲ್ಲಾ ನಮ್ಮ ಕಿಂಗ್ ವಿರಾಟ್ ಕೊಹ್ಲಿಯವ್ರನ್ನೇ ನಾಯಕನನ್ನಾಗಿ ಮಾಡಿ ಅಂತಾ ಒತ್ತಾಯ ಮಾಡ್ತಿದ್ದಾರೆ. ಆದ್ರೆ ಇದು ಸಾಧ್ಯವಾಗದೆ ಇರೋ ಮಾತು. ಯಾಕಂದ್ರೆ ಕಿಂಗ್ ಕೊಹ್ಲಿಯೇ ಆ ಪಟ್ಟಕ್ಕೇರೋಕೆ ತಯಾರಿಲ್ಲ. 9 ವರ್ಷಗಳ ಕಾಲ ಬೆಂಗಳೂರು ತಂಡವನ್ನ ಮುನ್ನಡೆಸಿದ್ದ ಕೊಹ್ಲಿ ತಾವಾಗಿಯೇ ಆ ಸ್ಥಾನವನ್ನ ತ್ಯಜಿಸಿದ್ದರು. ಅಂಡರ್ 19 ತಂಡದ ಕ್ಯಾಪ್ಟನ್ ಆಗಿ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ರೂ ಕೊಹ್ಲಿಯವ್ರನ್ನ 2008ರಲ್ಲಿ ಯಾವ ಫ್ರಾಂಚೈಸಿಯೂ ಖರೀದಿ ಮಾಡಿರಲಿಲ್ಲ. ಕೊನೆಗೆ ವಿಜಯ್ ಮಲ್ಯ ಒಡೆತನದ ಬೆಂಗಳೂರು ಫ್ರಾಂಚೈಸಿ 12 ಲಕ್ಷ ರೂಪಾಯಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿತ್ತು. ಇದೇ ಕಾರಣಕ್ಕೆ ಅಂದಿನಿಂದ್ಲೂ ಕೊಹ್ಲಿ ಇದೇ ಫ್ರಾಂಚೈಸಿಯಲ್ಲಿ ಆಡ್ತಿದ್ದಾರೆ. ಯಾರೂ ಕೂಡ ತಂಡಕ್ಕೆ ಸೇರಿಸಿಕೊಳ್ಳದ ಸಮಯದಲ್ಲಿ ವಿರಾಟ್ ಕೊಹ್ಲಿಗೆ ಮಣೆ ಹಾಕಿ ಗೌರವ ತೋರಿಸಿದ್ದ ಆರ್‌ಸಿಬಿ ತಂಡವನ್ನು ಈ ಕಾರಣಕ್ಕೆ ವಿರಾಟ್ ಕೊಹ್ಲಿ ಬಿಟ್ಟು ಹೋಗಿಲ್ಲ. 2011-2012ರವರೆಗೆ ಕೊಹ್ಲಿ ಉಪನಾಯಕನಾಗಿದ್ದರು. ಬಳಿಕ ವಿರಾಟ್ಗೆ 2013 ರಲ್ಲಿ ಬೆಂಗಳೂರು ತಂಡದ ನಾಯಕನ ಪಟ್ಟ ಕಟ್ಟಲಾಗಿತ್ತು. 2021 ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು ಕೊಹ್ಲಿ. 2013ರಲ್ಲಿ ನಾಯಕನಾಗಿ ನೇಮಕಗೊಂಡು 2016ರಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದರು. 2021ರಲ್ಲಿ ಕೆಳಗಿಳಿದ ಕಾರಣ 2022ರಲ್ಲಿ ಫಾಫ್ ಡು ಪ್ಲೆಸಿಸ್ ತಂಡಕ್ಕೆ ನೂತನ ಕ್ಯಾಪ್ಟನ್ ಆಗಿ ನೇಮಕಗೊಂಡರು. ಅವರ ಅನುಪಸ್ಥಿತಿಯಲ್ಲಿ 2023ರಲ್ಲಿ ಮತ್ತೆ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದರು ಕೊಹ್ಲಿ. ಒಟ್ಟಾರೆಯಾಗಿ, ಕೊಹ್ಲಿ 143 ಪಂದ್ಯಗಳಲ್ಲಿ ಆರ್‌ಸಿಬಿ ನಾಯಕತ್ವ ವಹಿಸಿದ್ದಾರೆ. 66 ಗೆಲುವು, 70ರಲ್ಲಿ ಸೋತಿದ್ದಾರೆ. ವಿರಾಟ್ ಕೊಹ್ಲಿ ಅಂದ್ರೆ ಆರ್‌ಸಿಬಿ ಫ್ಯಾನ್ಸ್‌ಗೆ ಮಾತ್ರವಲ್ಲ ಇಡೀ ಜಗತ್ತಿನೆಲ್ಲೆಡೆ ಕ್ರಿಕೆಟ್ ಅಭಿಮಾನಿಗಳಿಗೆ ಫೇವರೆಟ್. ಹೀಗಾಗೇ ಭಾರತ ಕ್ರಿಕೆಟ್ ತಂಡದ ರನ್ ಮಷಿನ್ ಅಂತ ವಿರಾಟ್ ಕೊಹ್ಲಿ ಅವ್ರನ್ನು ಕರೆಯುತ್ತಾರೆ. ಹೀಗಿದ್ದರೂ ವಿರಾಟ್ ಕೊಹ್ಲಿ ಅವರ ಬಗ್ಗೆ ಟೀಕೆ ಮಾಡುವವರಿಗೆ ಕಡಿಮೆ ಏನೂ ಇಲ್ಲ. ಅವ್ರ ಕ್ಯಾಪ್ಟನ್ಸಿಯಲ್ಲಿ ಒಮ್ಮೆಯೂ ಆರ್‌ಸಿಬಿ ಕಪ್ ಗೆಲ್ಲದಿದ್ದಕ್ಕೆ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ವು. ಇದೇ ಕಾರಣಕ್ಕೆ ವಿರಾಟ್ ಕೊಹ್ಲಿ ನಾಯಕತ್ವ ಸ್ಥಾನ ತ್ಯಜಿಸಿದ್ದರು. ಮತ್ತೆ ಕ್ಯಾಪ್ಟನ್ ಆಗೋಕೆ ಆಫರ್ ಇದ್ರೂ ಅದನ್ನ ಒಪ್ಪಿಕೊಂಡಿಲ್ಲ. ಹೀಗಾಗಿ ಆರ್ಸಿಬಿಗೆ ಯಾರಾಗ್ತಾರೇ ಅಧಿಪತಿ ಅಂದ್ರೆ ಅಲ್ಲಿ ಕೇಳಿ ಬರ್ತಿರೋ ಹೆಸ್ರೇ ರಜತ್ ಪಟೀದಾರ್. ವಿರಾಟ್ ಕೊಹ್ಲಿ ಬಿಟ್ರೆ ತಂಡದಲ್ಲಿ ಸದಾ ಆಸರೆಯಾಗ್ತಿರೋದು ಇದೇ ಪಟೀದಾರ್. ಈ ಸಲ ಕೂಡ ಪಟಿದಾರ್ ಆರ್‌ಸಿಬಿ ಪರ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಅವಕಾಶ ಸಿಕ್ಕಾಗೆಲ್ಲ ಚೆನ್ನಾಗಿ ಆಡಿದ್ದಾರೆ. ಪಟೀದಾರ್ ಬ್ಯಾಟಿಂಗ್ ಸ್ಟೈಲ್, ಸ್ಕ್ರೈಕ್ ರೇಟ್ ನೋಡಿದ ಫ್ಯಾನ್ಸ್ ಹಳೆ ಕೊಹ್ಲಿಯೇ ನೆನಪಾಗ್ತಾರೆ ಅಂತಿದ್ದಾರೆ ಫ್ಯಾನ್ಸ್. ಅಲ್ದೇ ಲಾಂಗ್ ಟರ್ಮ್ ದೃಷ್ಟಿಯಿಂದ ರಜತ್ ಪಾಟಿದಾರ್ಗೆ ಕ್ಯಾಪ್ಟನ್ಸಿ ಪಟ್ಟ ನೀಡಲಾಗುವುದು ಎಂದು ವರದಿಯಾಗಿದೆ. ವಿದೇಶಿಗರಿಗೆ ಕ್ಯಾಪ್ಟನ್ಸಿ ನೀಡೋ ಬದಲು ಭಾರತದ ಯಂಗ್ ಕ್ರಿಕೆಟರ್ ರಜತ್ ಪಾಟಿದಾರ್ಗೆ ಬೆಂಗಳೂರು ಕ್ಯಾಪ್ಟನ್ಸಿ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ಸೀಸನ್ನಲ್ಲೂ ಕೂಡ ಪಟೀದಾರ್ ಸ್ಕೋರ್ ಚೆನ್ನಾಗೇ ಇದೆ. 15 ಪಂದ್ಯಗಳನ್ನ ಆಡಿರುವ ಪಟೀದಾರ್ 398 ರನ್ಗಳನ್ನ ಸಿಡಿಸಿದ್ದಾರೆ. ಈ ಪೈಕಿ 5 ಅರ್ಧ ಶತಕಗಳಿವೆ. ಅದೂ ಕೂಡ 177.13 ಸ್ಟ್ರೈಕ್ ರೇಟ್ ನಲ್ಲಿ ಅನ್ನೋದೇ ವಿಶೇಷ. 2021ರಿಂದ ಐಪಿಎಲ್ ನಲ್ಲಿ ಆಡ್ತಿರುವ ಪಟೀದಾರ್ ಈವರೆಗೂ 27 ಮ್ಯಾಚ್ಗಳನ್ನ ಆಡಿದ್ದು ಒಟ್ಟಾರೆ 799 ರನ್ ಕಲೆ ಹಾಕಿದ್ದಾರ. ಈ ಪೈಕಿ 112 ಅವ್ರ ಹೈಯೆಸ್ಟ್ ಸ್ಕೋರ್ ಆಗಿದೆ.
ಪಟೀದಾರ್ ಕ್ರಿಕೆಟ್‌ಗೆ ಅದೆಷ್ಟು ಇಂಪಾರ್ಟೆನ್ಸ್ ಕೊಡ್ತಾರೆ ಅನ್ನೋದಕ್ಕೆ ಒಂದು ಬೆಸ್ಟ್ ಎಕ್ಸಾಂಪಲ್ ಅವ್ರ ಮದುವೆ ಮುಂದೂಡಿಕೆ. ಆರ್‌ಸಿಬಿಗಾಗಿ ಆಡಲು ತಮ್ಮ ಮದುವೆಯನ್ನೇ ಮುಂದೂಡಿದ್ದು ಬಹುತೇಕ ಜನ್ರಿಗೆ ಗೊತ್ತಿಲ್ಲ. ರಜತ್ ಪಾಟೀದಾರ್ ಜೂನ್ 01, 1993ರಲ್ಲಿ ಮಧ್ಯಪ್ರದೇಶದಲ್ಲಿ ಜನಿಸಿದರು. ಬಲಗೈ ಬ್ಯಾಟರ್ ಆಗಿರುವ ರಜತ್, ದೇಶಿ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. ಆಫ್‌ಸ್ಪಿನ್ ಬೌಲರ್ ಆಗಿ ಕ್ರಿಕೆಟ್ ಜರ್ನಿ ಆರಂಭಿಸಿದ ಪಾಟೀದಾರ್, ಇಂದು ಸ್ಪೋಟಕ ಬ್ಯಾಟರ್ ಆಗಿ ಬೆಳೆದು ನಿಂತಿದ್ದಾರೆ. 2021ರ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 20 ಲಕ್ಷ ರುಪಾಯಿ ನೀಡಿ ಪಾಟೀದಾರ್ ಅವರನ್ನು ಖರೀದಿಸಿತ್ತು. ತಮ್ಮ ಚೊಚ್ಚಲ ಆವೃತ್ತಿಯಲ್ಲಿ ಪಾಟೀದಾರ್ 4 ಪಂದ್ಯಗಳನ್ನಾಡಿ ಕೇವಲ 71 ರನ್ ಗಳಿಸಿದರು. ಪರಿಣಾಮ ಆರ್‌ಸಿಬಿ ಫ್ರಾಂಚೈಸಿಯು ಮರು ವರ್ಷದ ಹರಾಜಿಗೂ ಮುನ್ನ ಪಟೀದಾರ್ ಅವರನ್ನು ತಂಡದಿಂದ ಕೈಬಿಟ್ಟಿತ್ತು. ಬಳಿಕ 2022ರ ಐಪಿಎಲ್ ಆಟಗಾರರ ಹರಾಜಿನಲ್ಲಿ 20 ಲಕ್ಷ ರುಪಾಯಿ ಮೂಲ ಬೆಲೆ ಹೊಂದಿದ್ದ ಪಟೀದಾರ್ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿ ಮಾಡ್ಲೇ ಇಲ್ಲ. ಪರಿಣಾಮ ಪಾಟೀದಾರ್ ಅನ್‌ಸೋಲ್ಡ್ ಆದರು. ಇದ್ರ ನಡುವೆ 2022ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಲವ್ನಿತ್ ಸಿಸೋಡಿಯಾ ಗಾಯಗೊಂಡಿದ್ದರಿಂದ ಆರ್‌ಸಿಬಿ ಫ್ರಾಂಚೈಸಿಯು 20 ಲಕ್ಷ ರುಪಾಯಿ ಮೂಲ ಬೆಲೆಗೆ ಪಾಟೀದಾರ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿತು. ಸಿಕ್ಕ ಈ ಅವಕಾಶವನ್ನ ಎರಡೂ ಕೈಗಳಿಂದ ಬಾಚಿಕೊಂಡ ಪಟೀದಾರ್, 2022ರ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಕೇವಲ 54 ಎಸೆತಗಳಲ್ಲಿ ಅಜೇಯ 112 ರನ್ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು. ಈ ಮೂಲಕ ಐಪಿಎಲ್ ಪ್ಲೇ ಆಫ್‌ನಲ್ಲಿ ಶತಕ ಸಿಡಿಸಿದ ಭಾರತದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎನ್ನುವ ದಾಖಲೆ ನಿರ್ಮಿಸಿದರು. 2022ರ ಐಪಿಎಲ್‌ನಲ್ಲಿ ಪಾಟೀದಾರ್ ಕೇವಲ 8 ಪಂದ್ಯಗಳನ್ನಾಡಿ ಒಂದು ಶತಕ ಹಾಗೂ ಎರಡು ಅರ್ಧಶತಕ ಸಹಿತ 333 ರನ್ ಸಿಡಿಸಿದರು. 2022ರ ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ರಜತ್ ಪಾಟೀದಾರ್ 2022ರ ಮೇ 09ರಂದು ರತ್ನಮ್ ಎನ್ನುವ ಗೆಳತಿಯನ್ನು ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ ಆರ್‌ಸಿಬಿ ತಂಡಕ್ಕೆ ದಿಢೀರ್ ಬುಲಾವ್ ಬಂದಿದ್ದರಿಂದ ತಮ್ಮ ಮದುವೆಯನ್ನೇ ಮುಂದೂಡಿದ್ದರು. ಬಳಿಕ 2023ರ ಐಪಿಎಲ್ ಟೂರ್ನಿಗೂ ಮುನ್ನ ಗಾಯಗೊಂಡು ಸಂಪೂರ್ಣ ಟೂರ್ನಿಯಿಂದಲೇ ಹೊರಬಿದ್ದಿದ್ದ ಪಟೀದಾರ್, ಇದೀಗ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಆರ್‌ಸಿಬಿ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿ ಆಪತ್ಬಾಂಧವ ಎನಿಸಿಕೊಂಡಿದ್ರು. ಹೀಗಾಗಿ 2025ರ ಟೂರ್ನಿಗೆ ಪಟೀದಾರ್ ಕ್ಯಾಪ್ಟನ್ ಆಗ್ತಾರೆ ಎನ್ನಲಾಗ್ತಿದೆ.