ರಾಜಸ್ತಾನ ಪಾಲಾದ RAHUL – RCBಗೆ ಕನ್ನಡಿಗ ಬೇಡವಾಗಿದ್ದೇಕೆ? 
ವಿಶ್ವಕಪ್ ಗೆದ್ದ ದ್ರಾವಿಡ್ ಸೂತ್ರವೇನು?

ರಾಜಸ್ತಾನ ಪಾಲಾದ RAHUL – RCBಗೆ ಕನ್ನಡಿಗ ಬೇಡವಾಗಿದ್ದೇಕೆ? ವಿಶ್ವಕಪ್ ಗೆದ್ದ ದ್ರಾವಿಡ್ ಸೂತ್ರವೇನು?

ಟೀಂ ಇಂಡಿಯಾಗೆ ಟಿ-20 ವಿಶ್ವಕಪ್ ಗೆಲ್ಲಿಸಿಕೊಟ್ಟು ಹೆಡ್​ಕೋಚ್ ಹುದ್ದೆಯಿಂದ ಕನ್ನಡಿಗ ರಾಹುಲ್ ದ್ರಾವಿಡ್ ಕೆಳಗಿಳಿದಿದ್ರು. ಅದಾದ ಬಳಿಕ ರಾಹುಲ್ ವಾಟ್ ನೆಕ್ಸ್​​ಟ್ ಅನ್ನೋದು ಎಲ್ಲರನ್ನೂ ಕಾಡ್ತಿತ್ತು. ಫೈನಲಿ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಂತೆ ಕಂತೆಗಳಿಗೆಲ್ಲಾ ಬ್ರೇಕ್ ಬಿದ್ದಿದೆ. 2025ರ ಐಪಿಎಲ್​ನಲ್ಲಿ ದ್ರಾವಿಡ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಹಳೇ ತಂಡದ ಜೊತೆಗೆ ಹೊಸ ನಂಟಿನೊಂದಿಗೆ ಎಂಟ್ರಿ ಕೊಡ್ತಿದ್ದಾರೆ. ಯಾವ ತಂಡ? ಯಾವ ಪೋಸ್ಟ್? ಆರ್​ಸಿಬಿ ಫ್ಯಾನ್ಸ್ ಸಿಟ್ಟಾಗಿರೋದ್ಯಾಕೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಡಾರ್ಲಿಂಗ್ ಕೃಷ್ಣ ಮನೆಗೆ ಬಂದ ಪುಟ್ಟ ಗೌರಿ.. – ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್

ಟೀಂ ಇಂಡಿಯಾದಲ್ಲಿ ಕೋಚಿಂಗ್ ಪಯಣ ಮುಗಿಸಿದ ರಾಹುಲ್ ದ್ರಾವಿಡ್ ಫ್ಯಾಮಿಲಿ ಜೊತೆ ಟೈಂ ಸ್ಪೆಂಡ್ ಮಾಡ್ತಿದ್ರು. ಇದೀಗ 2025ರ ಐಪಿಎಲ್ ಮೂಲಕ ಕ್ರಿಕೆಟ್ ಕರಿಯರ್​ ಮತ್ತೆ ಆರಂಭಿಸಲಿದ್ದಾರೆ. ಐಪಿಎಲ್ ಸೀಸನ್ 18ಗೆ ಹರಾಜು ಪ್ರಕ್ರಿಯೆ ನಿಯಮಗಳು ಫೈನಲ್ ಆಗ್ತಿರುವ ಹೊತ್ತಲ್ಲೇ ಫ್ರಾಂಚೈಸಿಗಳಲ್ಲಿ ಬದಲಾವಣೆ ಪರ್ವ ನಡೀತಿದೆ. ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕವಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ಕೋಚ್ ಹೊಸ ಇನ್ನಿಂಗ್ಸ್​ಗೆ ವೇದಿಕೆ ಸಿದ್ಧವಾಗಿದೆ. ಕಳೆದ ಸೀಸನ್​ನಲ್ಲಿ ಆರ್​ಆರ್ ತಂಡದ ಕೋಚ್ ಆಗಿ ಕುಮಾರ ಸಂಗಾಕ್ಕರ ಕಾರ್ಯ ನಿರ್ವಹಿಸಿದ್ದರು. ಇದೀಗ ಈ ಸ್ಥಾನಕ್ಕೆ ಟೀಮ್ ಇಂಡಿಯಾದ ಮಾಜಿ ಕೋಚ್ ದ್ರಾವಿಡ್ ಅವರನ್ನು ಆಯ್ಕೆ ಮಾಡಲಾಗಿದೆ. ಐಪಿಎಲ್​ 2025 ರಲ್ಲಿ ಆರ್​ಆರ್ ತಂಡದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಕಾಣಿಸಿಕೊಳ್ಳಲಿದ್ದಾರೆ. ಹಾಗಂತ ರಾಹುಲ್​ಗೆ ರಾಜಸ್ತಾನ ಜೊತೆಗಿನ ನಂಟೇನು ಹೊಸದಲ್ಲ.

ರಾಜಸ್ಥಾನಕ್ಕೆ ರಾಹುಲ್ ಕೋಚ್!

ಪ್ರಸ್ತುತ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿ ಕಾಣಿಸಿಕೊಂಡಿದ್ದ ಕುಮಾರ ಸಂಗಾಕ್ಕರ RR ಫ್ರಾಂಚೈಸಿಯ ಡೈರೆಕ್ಟರ್ ಹುದ್ದೆಯಲ್ಲಿ ಮುಂದುವರೆಯುವ ಸಾಧ್ಯತೆಯಿದೆ. IPL 2021 ರವರೆಗೆ ಸಂಗಾಕ್ಕರ ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಅದೇ ಹುದ್ದೆಗೆ ಅವರನ್ನು ಪುನರ್ ನೇಮಕ ಮಾಡುವ ಸಾಧ್ಯತೆಯಿದೆ. ಇನ್ನು ಈ ಹಿಂದೆಯೇ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದರು. 2011 ರಿಂದ 2013ರವರೆಗೆ ಅವರು ಆರ್​ಆರ್ ತಂಡವನ್ನು ಮುನ್ನಡೆಸಿದ್ದಾರೆ. ಈ ವೇಳೆ 46 ಪಂದ್ಯಗಳನ್ನಾಡಿರುವ ದ್ರಾವಿಡ್ 7 ಅರ್ಧಶತಕಗಳೊಂದಿಗೆ 1276 ರನ್ ಕಲೆಹಾಕಿದ್ದಾರೆ. ಇದಾದ ಬಳಿಕ 2014 ಮತ್ತು 2015 ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಮೆಂಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ತನ್ನ ಮಾಜಿ ಆಟಗಾರರನ್ನೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಮುಖ್ಯ ಕೋಚ್ ಆಗಿ ನೇಮಿಸಿಕೊಂಡಿರುವುದು ವಿಶೇಷ. ಅಷ್ಟಕ್ಕೂ ರಾಹುಲ್ ದ್ರಾವಿಡ್ ಅವರನ್ನು ಹೆಡ್ ಕೋಚ್ ಆಗಿ ನೇಮಿಸಿಕೊಳ್ಳಲು ಮುಖ್ಯ ಕಾರಣ 2024ರ ಟಿ20 ವಿಶ್ವಕಪ್​ನಲ್ಲಿನ ಭಾರತ ತಂಡದ ಪ್ರದರ್ಶನ. ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಸೋಲಿಲ್ಲದ ಸರದಾರನಾಗಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಭಾರತ ತಂಡದ ಕೋಚ್ ಹುದ್ದೆಯಿಂದ ನಿವೃತ್ತರಾಗಿರುವ ದ್ರಾವಿಡ್ ಅವರನ್ನು ಮುಖ್ಯ ತರಬೇತುದಾರನಾಗಿ ನೇಮಿಸಿಕೊಳ್ಳುವಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ. ಆದ್ರೆ ರಾಹುಲ್ ರಾಜಸ್ತಾನ ಟೀಂ ಸೇರಿಕೊಂಡಿರೋದು ಆರ್​ಸಿಬಿ ಫ್ಯಾನ್ಸ್​ಗೆ ಇಷ್ಟ ಇಲ್ಲ. ಕನ್ನಡಿಗನನ್ನ ಬೆಂಗಳೂರು ತಂಡಕ್ಕೆ ಕೋಚ್ ಮಾಡಿಕೊಳ್ಳುವಂತೆ ಮನವಿ ಮಾಡಿದ್ರು. ಆದ್ರೆ ಅದು ಸಾಧ್ಯವಾಗಲೇ ಇಲ್ಲ.

ಟೀಂ ಇಂಡಿಯಾದಲ್ಲಿ ಆಟಗಾರನಾಗಿ ಆಟ ಮುಗಿಸಿದ ದ್ರಾವಿಡ್ ನಂತರ ಐಪಿಎಲ್ ಕೋಚ್ ಆಗಿ, ಆ ಬಳಿಕ ಅಂಡರ್ 19 ತಂಡದ ಕೋಚ್, ಎನ್​ಸಿಎ ಅಧ್ಯಕ್ಷರಾಗಿದ್ದ ರಾಹುಲ್ ದ್ರಾವಿಡ್ 2021ರಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಪಟ್ಟಕ್ಕೇರಿದ್ರು. ಏಕದಿನ ವಿಶ್ವಕಪ್ 2023 ರ ನಂತರ ಇವರ ಅವಧಿ ಕೊನೆಗೊಂಡಿತ್ತು. ಆದರೆ ಟೀಮ್ ಇಂಡಿಯಾದ ಪ್ರದರ್ಶನವನ್ನು ಪರಿಗಣಿಸಿ, ಮಂಡಳಿಯು ಅವರಿಗೆ ವಿಸ್ತರಣೆಯನ್ನು ನೀಡಲು ನಿರ್ಧರಿಸಿತು. ಭಾರತ ತಂಡದ ಹೆಡ್​ಕೋಚ್​ ಆಗಿ ನೇಮಕಗೊಂಡ ರಾಹುಲ್​ ದ್ರಾವಿಡ್, ಒಟ್ಟು 4 ಐಸಿಸಿ ಟೂರ್ನಮೆಂಟ್​ಗಳಲ್ಲಿ ಮಾರ್ಗದರ್ಶಕರಾಗಿದ್ರು. 2022ರ ಟಿ20 ವಿಶ್ವಕಪ್, ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಮತ್ತು ಏಕದಿನ ವಿಶ್ವಕಪ್​​ನಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಿರಲಿಲ್ಲ. ಆದ್ರೆ 2024ರ ಟಿ-20 ವಿಶ್ವಕಪ್ ಗೆದ್ದು ಬೀಗಿತ್ತು. ಈ ಮೂಲಕ ಚಾಂಪಿಯನ್ ಪಟ್ಟದೊಂದಿಗೆ ರಾಹುಲ್ ದ್ರಾವಿಡ್​ಗೆ ಬೀಳ್ಕೊಡುಗೆ ನೀಡಿದ್ರು.

Shwetha M