2025ಕ್ಕೆ RCBಯಲ್ಲಿ ಬಿಗ್ ಚೇಂಜ್ – ಫ್ಲಾಪ್ ಪ್ಲೇಯರ್ಸ್​​ಗೆ ಗೇಟ್​ಪಾಸ್!
3+1 ರೂಲ್ಸ್.. ಉಳಿಯೋರು ಯಾರು?

2025ಕ್ಕೆ RCBಯಲ್ಲಿ ಬಿಗ್ ಚೇಂಜ್ – ಫ್ಲಾಪ್ ಪ್ಲೇಯರ್ಸ್​​ಗೆ ಗೇಟ್​ಪಾಸ್!3+1 ರೂಲ್ಸ್.. ಉಳಿಯೋರು ಯಾರು?

ಟಿ-20 ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಭರ್ಜರಿ ಪ್ರದರ್ಶನದ ಮೂಲಕ ಸೂಪರ್ 8ಗೆ ಸೆಲೆಕ್ಟ್ ಆಗಿದೆ. ಗುರುವಾರ ಅಫ್ಘಾನಿಸ್ತಾನ ವಿರುದ್ಧ ಸೂಪರ್ 8 ಸುತ್ತಿನ ಮೊದಲ ಪಂದ್ಯ ಆಡಲು ಭರ್ಜರಿ ಪ್ರಾಕ್ಟೀಸ್​ನಲ್ಲಿ ತೊಡಗಿದೆ. ಮತ್ತೊಂದ್ಕಡೆ 2025ರ ಐಪಿಎಲ್​ಗೆ ಬಿಸಿಸಿಐ ಈಗಿನಿಂದ್ಲೇ ಯೋಜನೆ ರೂಪಿಸುತ್ತಿದೆ. ಮುಂದಿನ ಬಾರಿಯ ಟೂರ್ನಿಗೆ ಸಾಕಷ್ಟು ಬದಲಾವಣೆಗಳನ್ನ ಮಾಡೋ ನಿರೀಕ್ಷೆ ಕೂಡ ಇದೆ. ಹರಾಜು ಪ್ರಕ್ರಿಯೆಯಲ್ಲೂ ಕೆಲ ಚೇಂಜಸ್ ಮಾಡುವಂತೆ ಫ್ರಾಂಚೈಸಿಗಳೂ ಬೇಡಿಕೆ ಇಟ್ಟಿವೆ. ಅಷ್ಟಕ್ಕೂ ಏನೆಲ್ಲಾ ಬೇಡಿಕೆಗಳನ್ನ ಇಟ್ಟಿದ್ದಾರೆ? ಆಕ್ಷನ್ ಪ್ರಕ್ರಿಯೆಯಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ? ಆರ್​ಸಿಬಿಯಲ್ಲಿ ಉಳಿದುಕೊಳ್ಳೋ ಪ್ಲೇಯರ್ಸ್ ಯಾರು..? ಈ ಬಗೆಗಿನ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IND Vs AFG.. ಯಾರು ಸ್ಟ್ರಾಂಗ್? – ಸೂಪರ್ 8 ಸುತ್ತಿನಲ್ಲಿ ಗೆದ್ರೆ LUCK

ತಿಂಗಳ ಹಿಂದಷ್ಟೇ 2024ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿತ್ತು. ಆದ್ರೆ 17ನೇ ಆವೃತ್ತಿಯಲ್ಲೂ ಆರ್‌ಸಿಬಿ ಟ್ರೋಫಿ ಇಲ್ಲದೆ ಬರಿಗೈಯಲ್ಲೇ ವಾಪಸ್ ಆಗಿದೆ. ಪ್ಲೇಆಫ್​ಗೆ ಸೆಲೆಕ್ಟ್ ಆಗಿತ್ತಾದ್ರೂ ರಾಜಸ್ತಾನ ರಾಯಲ್ಸ್ ವಿರುದ್ಧ ಸೋಲುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಆದ್ರೆ 2025ರ ಐಪಿಎಲ್​ನಲ್ಲಿ ಕಪ್ ಗೆದ್ದೇ ಗೆಲ್ಲಬೇಕು ಎನ್ನುವ ಗುರಿ ಹೊಂದಿರೋ ಫ್ರಾಂಚೈಸಿ ಬೆಂಗಳೂರು ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡೋ ಪ್ಲ್ಯಾನ್​ನಲ್ಲಿದೆ. ಹಾಗೇ ಹರಾಜು ಪ್ರಕ್ರಿಯೆಯಲ್ಲೂ ಕೆಲ ನಿಯಮಗಳನ್ನ ಬದಲಾವಣೆ ಮಾಡುವಂತೆ ಎಲ್ಲಾ ತಂಡಗಳ ಫ್ರಾಂಚೈಸಿಗಳು ಕೂಡ ಆರ್ಗನೈಸರ್ಸ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದ್ರೆ ಇದಕ್ಕೆ ಬಿಸಿಸಿಐ ಸುತಾರಾಂ ಒಪ್ಪುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಬೆಂಗಳೂರು ತಂಡ ನಾಲ್ವರು ಆಟಗಾರರನ್ನ ರೀಟೇನ್ ಮಾಡಿಕೊಳ್ಳೋ ಚಿಂತನೆಯಲ್ಲಿದೆ. ಯಾರ್ಯಾರು ಮತ್ತು ಯಾಕೆ ಅನ್ನೋದನ್ನ ಹೇಳ್ತೇನೆ ನೋಡಿ.

RCBಯಲ್ಲಿ ನಾಲ್ವರಿಗೆ ಲಕ್!

2025ರ ಐಪಿಎಲ್ ಮೆಗಾ ಟೂರ್ನಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಮುಂದಾಗಿದೆ ಎಂದು ವರದಿಯಾಗಿದೆ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫಸ್ಟ್ ಆಫ್​ನಲ್ಲಿ ಫ್ಲಾಪ್ ಶೋ ತೋರಿದ್ದ ಆರ್​ಸಿಬಿ ಸೆಕೆಂಡ್ ಆಫ್​ನಲ್ಲಿ ಗ್ರೇಟ್ ಕಮ್ ಬ್ಯಾಕ್ ಮಾಡಿತ್ತು. ಸತತ 6 ಪಂದ್ಯಗಳನ್ನ ಗೆದ್ದು ಪ್ಲೇಆಫ್​ಗೂ ಎಂಟ್ರಿ ಕೊಟ್ಟಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ಮತ್ತೊಮ್ಮೆ ಐಪಿಎಲ್ ಟ್ರೋಫಿಯಿಂದ ವಂಚಿತವಾಗಿತ್ತು. ಆದ್ರೂ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ದ್ವಿತಿಯಾರ್ಧದಲ್ಲಿ ತೋರಿದ ಪ್ರದರ್ಶನ ಬೆಂಗಳೂರು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. 2025ರ ಐಪಿಎಲ್ ಟೂರ್ನಿಗೂ ಮುನ್ನ ಕೆಲ ಐಪಿಎಲ್‌ ಫ್ರಾಂಚೈಸಿಗಳು 8 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿವೆ. ಆದರೆ ಐಪಿಎಲ್ ಆರ್ಗನೈಸಿಂಗ್ ಕಮಿಟಿಯು 3+1 ಸೂತ್ರದ ಪ್ರಕಾರ ರೀಟೈನ್‌ಗೆ ಅವಕಾಶ ನೀಡಿದೆ. ಅಂದರೆ ಮೂವರು ನೇರ ರೀಟೈನ್ ಹಾಗೂ ಒಂದು ರೈಟ್‌ ಟು ಮ್ಯಾಚ್ ಕಾರ್ಡ್‌ ಬಳಕೆಗೆ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ. ಹೀಗಾಗಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೂರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಹಾಗೂ ಒಬ್ಬರನ್ನ ಆರ್‌ಟಿಎಂ ಮೂಲಕ ತನ್ನ ತೆಕ್ಕೆಗೆ ಸೆಳೆದುಕೊಳ್ಳಲಿದೆ ಎನ್ನಲಾಗಿದೆ.

ಆರ್​ಸಿಬಿ ತಂಡದಲ್ಲಿ ಘಟಾನುಘಟಿ ಆಟಗಾರರೇ ಇದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮರೋನ್ ಗ್ರೀನ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರ ದಂಡೇ ಇದೆ. ಹೀಗಿದ್ರೂ ಕೂಡ ರೀಟೇನ್ ಮಾಡಿಕೊಳ್ಳೋಕೆ ಇರೋದೇ ನಾಲ್ವರಿಗೆ ಮಾತ್ರ. ಹೀಗಾಗಿ ಆಕ್ಷನ್​ಗೂ ಮುನ್ನ ಯಾರಿಗೆಲ್ಲಾ ಮಣೆ ಹಾಕಬಹುದು ಅನ್ನೋದನ್ನ ನೋಡೋದಾದ್ರೆ..

ರನ್ ಮಿಷನ್ ವಿರಾಟ್ ಕೊಹ್ಲಿ

ಆರ್​ಸಿಬಿ ತಂಡದ ಬ್ರ್ಯಾಂಡೇ ಕಿಂಗ್ ವಿರಾಟ್ ಕೊಹ್ಲಿ. ಹೀಗಾಗಿ ಈ ಬಾರಿ ಕೂಡ ಕಿಂಗ್ ಕೊಹ್ಲಿಯನ್ನು ರಿಟೈನ್ ಮಾಡಿಕೊಳ್ಳುವುದು ಖಚಿತ. ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಯನ್ನು ಬೆಂಗಳೂರು ಫ್ರಾಂಚೈಸಿಯು ಯಾವುದೇ ಆಲೋಚನೆ ಮಾಡದೇ ರೀಟೈನ್ ಮಾಡಿಕೊಳ್ಳಲಿದೆ. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೊಹ್ಲಿ ಆರ್​ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ರು. 15 ಪಂದ್ಯಗಳಲ್ಲಿ 741 ರನ್​ ಬಾರಿಸಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು. ಅಲ್ದೇ ಕೊಹ್ಲಿ, ಆರ್‌ಸಿಬಿ ತಂಡದ ಆಸ್ತಿ ಎಂದರೆ ಅತಿಶಯೋಕ್ತಿಯಲ್ಲ. ಸೋ ವಿರಾಟ್ ಕೊಹ್ಲಿಯನ್ನು ಬೆಂಗಳೂರು ತಂಡದಿಂದ ಕೈ ಬಿಡುವ ಪ್ರಶ್ನೆಯೇ ಬರೋದಿಲ್ಲ

ಸೆಂಚುರಿ ಸ್ಟಾರ್ ವಿಲ್ ಜಾಕ್ಸ್ 

ಇಂಗ್ಲೆಂಡ್ ಮೂಲದ ಸ್ಪೋಟಕ ಬ್ಯಾಟರ್ ವಿಲ್ ಜಾಕ್ಸ್​ರನ್ನ ಆರ್‌ಸಿಬಿ ತಂಡವು ಐಪಿಎಲ್ ಹರಾಜಿಗೂ ಮುನ್ನ ರೀಟೈನ್ ಮಾಡಿಕೊಳ್ಳಲು ನಿರ್ಧರಿಸಿದೆ. 25 ವರ್ಷದ ಬ್ಯಾಟಿಂಗ್ ಆಲ್ರೌಂಡರ್ ವಿಲ್‌ ಜ್ಯಾಕ್ಸ್‌ ಆರ್‌ಸಿಬಿ ಪರ ಕೇವಲ 8 ಪಂದ್ಯಗಳನ್ನಾಡಿ 175ರ ಸ್ಟ್ರೈಕ್‌ರೇಟ್‌ನಲ್ಲಿ 230 ರನ್ ಸಿಡಿಸಿದ್ದಾರೆ. ಅಲ್ದೇ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಕೂಡ ಸಿಡಿಸಿದ್ದರು. ಹೀಗಾಗಿ ಬೆಂಗಳೂರು ತಂಡವು ರೀಟೈನ್‌ ಮಾಡಿಕೊಂಡರೆ ಒಳ್ಳೆಯ ಆಯ್ಕೆ ಎನಿಸಿಕೊಳ್ಳಲಿದ್ದಾರೆ.

ತಂಡದ ಆಪತ್ಬಾಂಧವ ರಜತ್ ಪಾಟೀದಾರ್

ಆರ್‌ಸಿಬಿ ತಂಡದ ಪರ ಸ್ಥಿರ ಪ್ರದರ್ಶನದ ಜತೆಗೆ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಆಟಗಾರನೆಂದರೆ ಅದು ರಜತ್ ಪಾಟೀದಾರ್. 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಪಾಟೀದಾರ್ 15 ಪಂದ್ಯಗಳನ್ನಾಡಿ 177.13 ರ ಸ್ಟ್ರೈಕ್‌ರೇಟ್‌ನಲ್ಲಿ 395 ರನ್ ಸಿಡಿಸಿದ್ದಾರೆ. ಹೀಗಾಗಿ ಆರ್‌ಸಿಬಿ ತಂಡವು ಪಾಟೀದಾರ್ ಅವರನ್ನು ರೀಟೈನ್ ಮಾಡಿಕೊಳ್ಳೋದ್ರಲ್ಲಿ ಅನುಮಾನ ಇಲ್ಲ ಎನ್ನಲಾಗಿದೆ.

ಬೌಲಿಂಗ್ ಸ್ಟ್ರೆಂಥ್ ಮೊಹಮ್ಮದ್ ಸಿರಾಜ್

2018ರಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ RTM ಕಾರ್ಡ್ ಬಳಸಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಸಿರಾಜ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ 14 ಪಂದ್ಯಗಳನ್ನಾಡಿ 15 ವಿಕೆಟ್ ಕಬಳಿಸಿದ್ದರು. ಬೌಲಿಂಗ್‌ನಲ್ಲಿ ಕೊಂಚ ದುಬಾರಿಯಾಗಿದ್ದರೂ, ಯಾವುದೇ ಕ್ಷಣದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ದಾಳಿಯನ್ನು ಸಿರಾಜ್ ನಡೆಸಬಲ್ಲರು.

ಒಟ್ನಲ್ಲಿ ಆರ್​ಸಿಬಿ ಅನ್ನೋದು ಒಂದು ತಂಡ ಅಲ್ಲ ಎಮೋಷನ್ ಅನ್ನೋದನ್ನ 17 ಸೀಸನ್​ಗಳಿಂದಲೂ ಫ್ಯಾನ್ಸ್ ಹೇಳ್ತಾನೇ ಇದ್ದಾರೆ. ಸೋ ಇಂಥಾ ನಿಷ್ಠಾವಂತ ಅಭಿಮಾನಿಗಳಿಗೋಸ್ಕರನಾದ್ರೂ ಬೆಂಗಳೂರು ಫ್ರಾಂಚೈಸಿ ಮುಂದಿನ ಸಲ ಟ್ರೋಫಿ ಗೆಲ್ಲೋ ಪ್ಲ್ಯಾನ್ ಮಾಡ್ತಿದೆ.

Shwetha M