ಚೇಸಿಂಗ್‌ನಲ್ಲಿ ಸೋತ ಆರ್‌ಸಿಬಿ – ಮಾರ್ಷ್ ಶತಕ, ಪ್ರಿನ್ಸ್ ಬೌಲಿಂಗ್ ನಿಂದ ಗೆದ್ದ ಪಂತ್ ಪಡೆ

ಚೇಸಿಂಗ್‌ನಲ್ಲಿ ಸೋತ ಆರ್‌ಸಿಬಿ – ಮಾರ್ಷ್ ಶತಕ, ಪ್ರಿನ್ಸ್ ಬೌಲಿಂಗ್ ನಿಂದ ಗೆದ್ದ ಪಂತ್ ಪಡೆ

ಲಕ್ನೋ ಪಡೆ ಕೊನೇ ಹಂತದಲ್ಲಿ ಸಂಘಟಿತ ಆಟ ಆಡುವುದರ ಮೂಲಕ ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದೆ. ಲಖನೌ ಸೂಪರ್ ಜೈಂಟ್ಸ್ ತಂಡ, ಬೆಂಗಳೂರು ತಂಡದ ವಿರುದ್ಧ 9 ರನ್‌ಗಳ ರೋಚಕ ಜಯ ಸಾಧಿಸಿದೆ.

ಇದನ್ನೂ ಓದಿ:KL ಆಟ ಬದಲಿಸಿದ ಮಗಳು – ಭಾರತದ ಪರ ಟಿ-20ಗೂ ಬರ್ತಾರಾ?

ಲಕ್ನೋದ ಏಕಾನ ಮೈದಾನದಲ್ಲಿ ನಡೆದ ಐಪಿಎಲ್​​ನ 50ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡ 9 ರನ್​ಗಳ ರೋಚಕ ಜಯ ಸಾಧಿಸಿದೆ. ಮಳೆಯಿಂದಾಗಿ ಆರಂಭದಲ್ಲೇ ಪಂದ್ಯಕ್ಕೆ ಅಡಚಣೆ ಉಂಟಾಯಿತು. ಆದರೂ ಕೂಡಾ ಮೊದಲು ಬ್ಯಾಟಿಂಗ್ ಮಾಡಿದ್ದ ಲಖನೌ ಸೂಪರ್ ಜೈಂಟ್ಸ್ ತಂಡ 19 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 209 ರನ್​ಗಳಿಸಿತು. ಡಕ್ವರ್ತ್​​​​​ ಲೂಯಿಸ್ ನಿಯಮದ ಪ್ರಕಾರ ಗುರಿಯನ್ನ 213ಕ್ಕೆ ನಿಗದಿ ಮಾಡಲಾಯಿತು. ಆದರೆ ಆರ್​ಸಿಬಿ 19 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್​ಗಳಿಸಲಷ್ಟೇ ಶಕ್ತವಾಯಿತು. ಈ ಸೀಸನ್​​ನಲ್ಲಿ ಆರ್​ಸಿಬಿ ಮೊದಲ ಬಾರಿಗೆ ಚೇಸಿಂಗ್ ಮಾಡಲಾಗದೇ ಸೋಲು ಕಂಡಿದೆ.

ಟಾಸ್ ಸೋತ ಎಲ್‌ಎಸ್‌ಜಿ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್ ಅಬ್ಬರಕ್ಕೆ ತವರಿನ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಲಕ್ನೋ ತಂಡ ಉತ್ತಮ ರನ್ ಗಳಿಸುತ್ತಿರುವಾಗಲೇ ಮಳೆ ಅಡ್ಡಿಯಾಗಿತ್ತು. ನಂತರವೂ ಬ್ಯಾಟಿಂಗ್ ಮುಂದುವರೆಸಿದ ಮಾರ್ಷ್ ಶತಕ ಸಿಡಿಸುವಲ್ಲಿ ಸಕ್ಸಸ್ ಆದರು. ಮಾರ್ಷ್ 56 ಎಸೆತಗಳಲ್ಲಿ 9 ಬೌಂಡರಿ, 9 ಸಿಕ್ಸರ್​ಗಳ ಸಹಿತ 111 ರನ್​ಗಳಿಸಿದರು.  ನಿಕೋಲಸ್ ಪೂರನ್ 23 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 38 ರನ್ ಗಳಿಸಿದರು.  ರಿಷಭ್ ಪಂತ್ ಆಟವಂತೂ ಅಭಿಮಾನಿಗಳನ್ನು ರಂಜಿಸಿತು. ಕೇವಲ 10 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 32 ರನ್​ಗಳಿಸಿದರು. ಲಕ್ನೋ ತಂಡ 19 ಓವರ್​ಗಳಲ್ಲಿ 209 ರನ್​ಗಳಿಸಿತು.

213 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕೇವಲ 9 ರನ್​ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಜೇಕಬ್ ಬೆಥೆಲ್ ಕೇವಲ 4 ರನ್​​​​​​​​​​​​​​​​​​ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದರೆ, ಕೊಹ್ಲಿ ಖಾತೆಯನ್ನೇ ತೆರೆಯದೇ ಔಟಾದರು. ದೇವದತ್ ಪಡಿಕ್ಕಲ್ ಹಾಗೂ ರಜತ್ ಪಾಟೀದಾರ್ 95 ರನ್​ಗಳ ಜೊತೆಯಾಟ ನೀಡಿ ಚೇತರಿಕೆ ನೀಡಿದ್ದರು. ಈ ಹಂತದಲ್ಲಿ ಆರ್​ಸಿಬಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ ಪ್ರಿನ್ಸ್​ ಯಾದವ್​ 11ನೇ ಓವರ್​ನಲ್ಲಿ ಆರ್​ಸಿಬಿಗೆ ಭಾರೀ ಆಘಾತ ನೀಡಿದರು. ಒಂದೇ ಓವರ್​​ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಉರುಳಿಸಿದರು. ಪಡಿಕ್ಕಲ್ 25 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 34 ರನ್​ಗಳಿಸಿ ಪ್ರಿನ್ಸ್​ ಬೌಲಿಂಗ್​ನಲ್ಲಿ ಅವರಿಗೆ ಕ್ಯಾಚ್ ನೀಡಿದರು. ಅದೇ ಓವರ್​ನ 5ನೇ ಎಸೆತದಲ್ಲಿ ಜಿತೇಶ್ ಶರ್ಮಾ 1 ರನ್​​​​​​​​ಗಳಿಸಿ ವಿಕೆಟ್ ಕೀಪರ್​ಗೆ ಕ್ಯಾಚ್ ನೀಡಿ ಔಟ್ ಆದರು. ನಂತರದ ಓವರ್​ನಲ್ಲಿ ರಜತ್ ಪಾಟೀದಾರ್ ಕೂಡ ಔಟ್ ಆದರು. 31 ಎಸೆತಗಳಲ್ಲಿ 3 ಬೌಂಡರಿ, 6 ಸಿಕ್ಸರ್​ಗಳ ಸಹಿತ 61 ರನ್​ಗಳಿಸಿ ಶಹ್ಬಾಜ್ ಅಹ್ಮದ್ ಬೌಲಿಂಗ್​​ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಮಾರ್ಕ್ರಮ್​ಗೆ ಕ್ಯಾಚ್ ನೀಡಿ ಔಟ್ ಆದರು. 104ಕ್ಕೆ2 ಇದ್ದ ಆರ್​ಸಿಬಿ 8 ಎಸೆತಗಳ ಅಂತರದಲ್ಲಿ 112ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಆರ್​ಸಿಬಿ ಸುಲಭವಾಗಿ ಸೋಲೊಪ್ಪಿಕೊಳ್ಳಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಟಿಮ್ ಡೇವಿಡ್ ಹಾಗೂ ಕೃನಾಲ್ ಪಾಂಡ್ಯ 24 ಎಸೆತಗಳಲ್ಲಿ 46 ರನ್​ಗಳ ಜೊತೆಯಾಟ ನೀಡಿ ಮತ್ತ ತಂಡವನ್ನ ಪಂದ್ಯಕ್ಕೆ ವಾಪಸ್ ತಂದಿದ್ದರು. ಆದರೆ 16ನೇ ಓವರ್​ನಲ್ಲಿ ಟಿಮ್ ಡೇವಿಡ್  ಅಹ್ಮದ್​​ ಬೌಲಿಂಗ್​ನಲ್ಲಿ ದಿಗ್ವೇಶ್ ರಾಠಿಗೆ ಕ್ಯಾಚ್ ನೀಡಿ ಔಟ್ ಆದರು. ಡೇವಿಡ್ 17 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ 40 ರನ್​ಗಳಿಸಿದರು. ಡೇವಿಡ್ ವಿಕೆಟ್ ನಂತರ ಮತ್ತೆ ಆರ್​ಸಿಬಿ ಸುಲಭವಾಗಿ ಸೋಲಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಕೃನಾಲ್ ಪಾಂಡ್ಯ ಹಾಗೂ ಶೆಫರ್ಡ್ ಕೊನೆಯ ಎಸೆತದವರೆಗೂ ಕೊಂಡೊಯ್ದರು. ಈ ಜೋಡಿ 21 ಎಸೆತಗಳಲ್ಲಿ 45 ರನ್​ಗಳಿಸಿದರಾದರೂ ತಂಡವನ್ನ ಗೆಲುವಿನ ಗಡಿ ದಾಟಿಸಲು ವಿಫಲರಾದರು. ಕೊನೆಯ ಓವರ್​​ನಲ್ಲಿ ಆರ್​ಸಿಬಿ ಗೆಲ್ಲಲು 20 ರನ್​ಗಳ ಅಗತ್ಯವಿತ್ತು. ಆದರೆ ಶೆಫರ್ಡ್ ಹಾಗೂ ಪಾಂಡ್ಯ ರಾಠಿ ಬೌಲಿಂಗ್​​ನಲ್ಲಿ ಕೇವಲ 11 ರನ್​ಗಳಿಸಲಷ್ಟೇ ಶಕ್ತವಾದರು.

Sulekha