ಹೊಸ ಅಧ್ಯಾಯ.. ಹಳೆ ಸಂಪ್ರದಾಯ – ಮೊದಲ ಪಂದ್ಯ ದೇವರಿಗೆ ಸಮರ್ಪಣೆ – ನಮ್ಮ RCB ಎಡವಿದ್ದೆಲ್ಲಿ?
ಆರ್‌ಸಿಬಿ ಫ್ಯಾನ್ಸ್‌ಗಿದ್ದ ಕಾಲ್ ಪರ್ಸೆಂಟ್ ಜೋಷ್ ಇದ್ದಿರುತ್ತಿದ್ದರೂ ಚೆನ್ನೈ ವಿರುದ್ಧ ಇಷ್ಟು ಕೆಟ್ಟದಾಗಿ ಸೋಲೋದಿಕ್ಕೆ ಸಾಧ್ಯವೇ ಇರಲಿಲ್ಲ. ಬಿಗ್ ಬಿಗ್ ಸ್ಕೋರ್ ಅಲ್ಲದಿದ್ದರೂ ಡಿಫೆಂಡ್ ಮಾಡ್ಕೊಳ್ಳೋದಿಕ್ಕೆ ಅಗತ್ಯವಿದ್ದಷ್ಟು ಸ್ಕೋರ್, ಬೋರ್ಡ್‌ನಲ್ಲಿದ್ದರೂ ಬೌಲರ್‌ಗಳು ನಾವಿರೊದೇ ಹೊಡೆಸಿಕೊಳ್ಳೋದಿಕ್ಕೆ ಎನ್ನುವ ರೀತಿಯಲ್ಲಿ ಬೌಲಿಂಗ್ ಮಾಡಿದ್ರೆ ಸೋಲದೆ ಇನ್ನೇನಾಗುತ್ತೆ ಹೇಳಿ.. ಫ್ಯಾನ್ಸ್ ಏನೋ ಪ್ರತಿಬಾರಿ ಮೊದಲ ಪಂದ್ಯ ಸೋತಾಗ ಹೋಗ್ಲಿ ಬಿಡು ದೇವ್ರಿಗೆ ಬಿಟ್ಟು ಬಿಡೋಣ ಅಂದ್ಕೊಂಡು ತಮಗೆ ತಾವೇ ಸಮಾಧಾನ ಹೇಳ್ಕೊಳ್ತಿದ್ದಾರೆ ನಿಜ.. ಆದ್ರೆ ಟೀಂ ಕೂಡ ನಾವು ಆಡೋದೇ ಮೊದಲ ಪಂದ್ಯವನ್ನು ಸೋಲೋದಿಕ್ಕೆ ಅಂತಿದ್ರೆ ಗೆಲ್ಲೋದು ಹೇಗೆ ಎಂಬ ಪ್ರಶ್ನೆಯೇ ದೊಡ್ಡದಾಗಿ ಕಾಡುವಂತಾಗಿದೆ. ಈ ಪಂದ್ಯದಲ್ಲಿ ಚೆನ್ನೈ ಪ್ರಾಬಲ್ಯ ಅನ್ನೋದಕ್ಕಿಂತ ಹೆಚ್ಚಾಗಿ ಆರ್‌ಸಿಬಿ ಎಡವಿದ್ದೆಲ್ಲಿ ಅನ್ನೋದ್ರ ಬಗ್ಗೆಯೇ ಹೇಳೋದು ಒಳ್ಳೆಯದು ಅನ್ಸುತ್ತೆ..
ಇದನ್ನೂ ಓದಿ: ಅದೇ ರಾಗ.. ಅದೇ ಹಾಡು.. – ಮೊದಲ ಪಂದ್ಯ ದೇವರಿಗೆ ಅರ್ಪಣೆ ಎಂದ ಆರ್‌ಸಿಬಿ ಫ್ಯಾನ್ಸ್!
ಬೋರ್ಡ್‌ನಲ್ಲಿ 173 ರನ್‌ಗಳ ಟಾರ್ಗೆಟ್ ಇತ್ತು.. ತಂಡದಲ್ಲಿ ಅದ್ಭುತ ಅಲ್ಲದಿದ್ದರೂ ಸ್ವಲ್ಪ ತಲೆ ಉಪಯೋಗಿಸಿ ಬೌಲಿಂಗ್ ಮಾಡುವ ಬೌಲರ್‌ಗಳಿದ್ದರೆ ಡಿಫೆಂಡ್ ಮಾಡ್ಕೊಳ್ಳೋದಿಕ್ಕೆ ಬೇಕಷ್ಟು ಸ್ಕೋರ್ ಕೂಡ ಇತ್ತು.. ಎಲ್ಲಾ ಮ್ಯಾಚಲ್ಲೂ ಕೊಹ್ಲಿ ಸೆಂಚುರಿ ಹೊಡೀಬೇಕು.. ಮೊದ್ಲು ಬ್ಯಾಟಿಂಗ್ ಮಾಡಿದ್ರೆ 200 ರನ್ ಮೇಲೆ ಟಾರ್ಗೆಟ್ ಇರಬೇಕು ಅಂತೇನಾದ್ರೂ ಆದ್ರೆ ಮೋಸ್ಟ್ಲಿ ಆರ್‌ಸಿಬಿಗೆ ಬೌಲರ್‌ಗಳೇ ಬೇಕಿಲ್ಲವೇನೋ ಅನ್ಸಿ ಬಿಡುತ್ತೆ.. ಯಾಕೆ ಇದನ್ನು ಹೇಳ್ತಿದ್ದೀನಿ ಅಂದ್ರೆ ಆರ್‌ಸಿಬಿಲಿ ಇರೋ ಬೌಲರ್‌ಗಳು ಅಷ್ಟೇನೂ ಸ್ಟ್ರಾಂಗ್ ಅಲ್ಲ ಅಂತ ಎಷ್ಟೇ ಬೇಜಾರ್ ಇದ್ರೂ ಮೊಹಮ್ಮದ್ ಸಿರಾಜ್ ಇದ್ದಾರೆ.. ಸ್ವಲ್ಪ ತಲೆ ಉಪಯೋಗಿಸಿ ಬೌಲಿಂಗ್ ಆರಂಭಿಸಿರುತ್ತಿದ್ದರೆ ಚೆನ್ನೈ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕೋದಿಕ್ಕೆ ಸಾಧ್ಯವಿತ್ತೇನೋ.. ಇನ್ನು ಕ್ಯಾಫ್ಟನ್ ಡುಪ್ಲೆಸಿಸ್ ಅಂತೂ ಬೌಲರ್‌ಗಳನ್ನು ಚೇಂಜ್ ಮಾಡಿದ್ದೇ ಮಾಡಿದ್ದು.. ಎಷ್ಟು ಚೇಂಜ್ ಮಾಡ್ತಾ ಹೋದ್ರೂ ಅಂದ್ರೆ, 2 ಓವರ್ ಬೌಲಿಂಗ್ ಮಾಡಿ ಕೇವಲ ಆರೇ ಆರು ರನ್ ನೀಡಿದ್ದ ಮಾಯಾಂಕ್ ಡಾಗರ್ ಗೆ ಮತ್ತೊಂದು ಓವರ್ ಕೋಡೋದಿಕ್ಕೂ ಹೋಗದಷ್ಟು ಬ್ಯುಸಿಯಾಗಿ ಬೌಲಿಂಗ್ ಚೇಂಜ್ ಮಾಡ್ತಾ ಹೋದ್ರು.. ಡಾಗರ್ ಬೌಲಿಂಗ್‌ನಲ್ಲಿ ಮಾತ್ರ ಸಿಎಸ್‌ಕೆ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ತಿಣುಕಾಡುತ್ತಿದ್ದರೂ ಅದ್ಯಾಕೆ ಆ ಸ್ವರೂಪದಲ್ಲಿ ಬೌಲಿಂಗ್ ಚೇಂಜ್ ಮಾಡಿದ್ರೋ ಗೊತ್ತಿಲ್ಲ..ಆದ್ರೆ ಅಂತಿಮವಾಗಿ ಚೆನ್ನೈ ಗೆಲ್ಲೋದನ್ನು ತಪ್ಪಿಸೋದಿಕ್ಕಂತೂ ಡು ಪ್ಲೆಸಿಸ್ ಕೈಯಲ್ಲಿ ಸಾಧ್ಯವಾಗ್ಲೇ ಇಲ್ಲ.. ಹಾಗೆ ನೋಡಿದ್ರೆ ಚೈನ್ನೈ ವಿರುದ್ಧದ ಮ್ಯಾಚ್‌ನಲ್ಲಿ ಅದೃಷ್ಟ ಆರ್‌ಸಿಬಿ ಪರವಾಗಿಯೇ ಇತ್ತು.. ಯಾಕಂದ್ರೆ ಟಾಸ್ ಗೆದ್ದಿದ್ದು ಆರ್‌ಸಿಬಿ.. ಚೆನ್ನೈನ ಚೆಪಾಕ್ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದವರೇ ಗೆದ್ದಿದ್ದು ಜಾಸ್ತಿ.. ಅಂಥಾದ್ರಲ್ಲಿ ಮೊದ್ಲು ಬ್ಯಾಟಿಂಗ್ ಆಯ್ಕೆ ಕೂಡ ಮಾಡಿಕೊಂಡ ಆರ್‌ಸಿಬಿ ಸೋತಿದ್ದನ್ನು ಅಭಿಮಾನಿಗಳು ಅರಗಿಸಿಕೊಳ್ಳೋದು ಸ್ವಲ್ಪ ಕಷ್ಟ.. ಟಾಸ್ ವಿನ್ ಆಗಿದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕಿಂಗ್ ಕೊಹ್ಲಿ ಮತ್ತು ಕ್ಯಾಪ್ಟನ್ ಫಾಫ್ ಡುಪ್ಲೆಸಿಸ್ ಎಂಟ್ರಿ ಕೊಟ್ಟಾಗ ಅಭಿಮಾನಿಗಳಲ್ಲಿ ಪಂದ್ಯ ಗೆಲ್ಲೋ ವಿಶ್ವಾಸ ನೂರ್ಮಡಿಯಾಗಿತ್ತು.. ಮೊದಲ ಓವರ್‌ನಲ್ಲೇ ಬೌಂಡರಿ ಭಾರಿಸೋ ಮೂಲಕ ಆರಂಭದಿಂದಲೇ ಅಬ್ಬರಿಸಿದ್ರು ಫಾಫ್. ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದ ಕ್ಯಾಪ್ಟನ್, 23 ಎಸೆತಗಳಲ್ಲಿ 8 ಬೌಂಡರಿ ಹೊಡೆದು 35 ರನ್‌ಗೆ ಔಟ್ ಆದ್ರು. ಮುಸ್ತಾಫಿಜುರ್ ರೆಹಮಾನ್, ಡುಪ್ಲೆಸಿಸ್ ಔಟ್ ಮಾಡಿದ ನಂತರ ಅದೇ ಓವರ್‌ನಲ್ಲಿ ರಜತ್ ಪಾಟೀದಾರ್ ಗೂ ಪೆವಿಲಿಯನ್ ಹಾದಿ ತೋರಿಸಿದ್ರು. ನಂತರ ಬಂದ ಮ್ಯಾಕ್ಸಿ ಕೂಡಾ ಝೀರೋ ರನ್‌ಗೆ ವಾಪಾಸ್ಸಾದ್ರು. ಪವರ್ ಪ್ಲೇನಲ್ಲಿ ಇಂಪಾರ್ಟೆಂಟ್ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಆರ್‌ಸಿಬಿ ಸ್ಥಿತಿ ಡೇಂಜರ್ ಝೋನ್‌ನಲ್ಲಿದ್ದಂಗಿತ್ತು. ತಂಡಕ್ಕೆ ಕೊಹ್ಲಿ ಆಸರೆಯಾಗ್ತಾರೆ ಅಂತಾ ಅನ್ಕೊಂಡ್ರೆ ಕೇವಲ 21 ರನ್ ಗಳಿಸಿ ಕೊಹ್ಲಿ ಕೂಡಾ ಔಟಾದ್ರು. ಆದ್ರೆ, ಬರೋಬ್ಬರಿ 2 ತಿಂಗಳ ನಂತರ ಕ್ರಿಕೆಟ್ ಲೋಕಕ್ಕೆ ಮರಳಿದ ವಿರಾಟ್ ಕೊಹ್ಲಿ ವಿಶ್ವ ದಾಖಲೆ ನಿರ್ಮಿಸಿದ್ದರು. 6 ರನ್ ಕಲೆಹಾಕಿದ ಕೂಡಲೇ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್ ಪೂರೈಸಿದರು. ಈ ಮೂಲಕ ಟಿ20 ಕ್ರಿಕೆಟ್ನಲ್ಲಿ 12 ಸಾವಿರ ರನ್‌ಗಳ ಗಡಿ ದಾಟಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಇದಲ್ಲದೆ ಕೊಹ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಒಂದು ಸಾವಿರ ರನ್ ಕೂಡ ಪೂರೈಸಿದ್ದಾರೆ. ಈ ಮೂಲಕ ಸಿಎಸ್‌ಕೆ ವಿರುದ್ಧ ಸಾವಿರ ರನ್‌ಗಳ ಗಡಿ ದಾಟಿದ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೊಹ್ಲಿಗಿಂತ ಮೊದಲು ಪಂಜಾಬ್ ನಾಯಕ ಶಿಖರ್ ಧವನ್ ಈ ಸಾಧನೆ ಮಾಡಿದ್ದರು. ವಿರಾಟ್ ಕೊಹ್ಲಿ ಬಳಿಕ ಆರ್‌ಸಿಬಿಯ ದುಬಾರಿ ಆಟಗಾರ ಕ್ಯಾಮರೂನ್ ಗ್ರೀನ್ ಕೂಡ ಪೆವಿಲಿಯನ್‌ಗೆ ಮರಳಿದ್ರು.. ಗ್ರೀನ್ ಕೂಡ ಮುಸ್ತಾಫಿಜೂರ್ಗೆ ವಿಕೆಟ್ ಒಪ್ಪಿಸಿದ್ರು. ಹೀಗೆ ಒಂದ್ಕಡೆ ದೇವ್ರಿಗೆ ಪಂದ್ಯ ಒಪ್ಪಿಸುವ ಕಾರ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಭಾರೀ ಅರ್ಜೆಂಟಲ್ಲಿದ್ದಾರೆ ಅಂದ್ಕೊಳ್ತಾ ಇದ್ದಾಗಲೇ ಅನುಜ್ ರಾವತ್ ಹಾಗೂ ದಿನೇಶ್ ಕಾರ್ತಿಕ್ ಜೋಡಿ ನಿಜಕ್ಕೂ ಅಭಿಮಾನಿಗಳ ಪಾಲಿಗೆ ಆಸರೆಯಾದ್ರು.. ಈ ಇಬ್ಬರು ಸೇರಿ ಬೌಂಡರಿ ಸಿಕ್ಸರ್‌ಗಳು ಸುರಿಮಳೆ ಸುರಿಸಿದ್ರಿಂದ ಚೆನ್ನೈ ಬೌಲರ್‌ಗಳು ಬೆವರಿಳಿಸಿಕೊಳ್ಳುವಂತಾಗಿತ್ತು.. ರಾವತ್ 25 ಎಸೆತಗಳಲ್ಲಿ 3 ಸಿಕ್ಸರ್‌ಗಳೊಂದಿಗೆ 48 ರನ್ ಹೊಡೆದ್ರೆ ದಿನೇಶ್ ಕಾರ್ತಿಕ್ 26 ಎಸೆತೆಗಳಲ್ಲಿ ಎರಡು ಸಿಕ್ಸರ್‌ಗಳೊಂದಿಗೆ 38 ರನ್ ಕಲೆಹಾಕಿ ತಂಡ 173ರನ್‌ಗಳ ಗೌರವಯುತ ಮೊತ್ತ ತಲುಪುವಂತೆ ಮಾಡಿದ್ದರು.. ಇಷ್ಟೆಲ್ಲಾ ಬ್ಯಾಟ್ಸ್‌ಮನ್‌ಗಳು ಹೊಡೆದು ಕೊಟ್ರೂ ಬೌಲರ್‌ಗಳು ಮಾತ್ರ ನಾವಿರೋದೇ ಹೊಡೆಿಸಿಕೊಳ್ಳೋದಿಕ್ಕೆ ಅಂತ ತಿಳ್ಕೊಂಡಿದ್ದರಿಂದ ಆರ್‌ಸಿಬಿ ಸೋತಿದೆ.. ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿದ ದಿನೇಶ್ ಕಾರ್ತಿಕ್ ಹಾಗೂ ಯಶ್ ದಯಾಳ್ ಆರ್‌ಸಿಬಿ ಪಾಲಿಗೆ ನಿಜಕ್ಕೂ ಒಂದಿಷ್ಟು ಇಂಪಾಕ್ಟ್ ಆಗುವಂತಹ ಕಾಣಿಕೆ ನೀಡಿದ್ರು.. ಆರ್‌ಸಿಬಿಗೆ ಹೋಲಿಸಿದ್ರೆ ಚೆನ್ನೈನ ಇಂಪ್ಯಾಕ್ಟ್ ಪ್ಲೇಯರ್‌ಗಳ ಕೊಡುಗೆ ದೊಡ್ಡದಿತ್ತು.. ಮೊದಲು ಹೆಚ್ಚುವರಿಯಾಗಿ ಬೌಲಿಂಗ್ ಮಾಡಿದ ಮುಸ್ತಫಿಜುರ್ ರೆಹಮಾನ್ ನಾಲ್ಕು ವಿಕೆಟ್ ಕೀಳುವ ಮೂಲಕ ಆರ್‌ಸಿಬಿಯ ಬ್ಯಾಟಿಂಗ್‌ಗೆ ದೊಡ್ಡ ಹೊಡೆತ ಕೊಟ್ಟಿದ್ದರು.. ನಂತರ ಬ್ಯಾಟಿಂಗ್ ವೇಳೆ ಸಬ್‌ಸ್ಟಿಟ್ಯೂಟ್ ಇನ್ ಆದ ಶಿವಂ ದುಬೆ, ಸಿಎಸ್‌ಕೆಯ ವಿನ್ನಿಂಗ್ ಶಾಟ್ ಹೊಡೆಯುವವರೆಗೂ ಬ್ಯಾಟ್ ಬೀಸಿದ್ದರು.. ಇಲ್ಲಿ ಚೆನ್ನೈ ಸಂಘಟಿತವಾಗಿ ಆಡಿದ್ದು ಸ್ವಷ್ಟವಾಗಿ ಗೋಚರಿಸುತ್ತಿತ್ತು.. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಬದಲು ತಂಡವನ್ನು ಲೀಡ್ ಮಾಡಿದ ರುತುರಾಜ್ ಗಾಯಕ್ವಾಡ್, ತಾನೇ ಹೆಚ್ಚು ಆಸಕ್ತಿಯಿಂದ ತಂಡವನ್ನು ಮುನ್ನಡೆಸಿದ್ದು ವಿಶೇಷವಾಗಿತ್ತು.. ಧೋನಿ ಮಾತ್ರ ತಾನು ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಾಗ ಇದ್ದಂತ ಸ್ವರೂಪಕ್ಕೆ ಹೇರ್ ಸ್ಟೈಲ್ ಬದಲಿಸಿದ್ದರಿಂದ ಮತ್ತಷ್ಟು ಯಂಗ್ ಅಂಡ್ ಎನೆರ್ಜೆಟಿಕ್ ಆಗಿ ಕಾಣಿಸ್ತಾ ಇದ್ರು.. ಆದ್ರೆ ಆರ್‌ಸಿಬಿ ಸೋಲಿನೊಂದಿಗೆ ಮತ್ತೆ ಐಪಿಎಲ್‌ನ ಅಭಿಯಾನ ಆರಂಭಿಸಿದ್ದರಿಂದ ಅಭಿಮಾನಿಗಳು ಹೊಸ ಅಧ್ಯಾಯ.. ಹಳೆ ಸಂಪ್ರದಾಯ ಅಂತ ಪ್ರಾಸಬದ್ಧವಾಗಿ ಎರಡು ಲೈನ್ ಬರೆದು ತಮಗೇ ತಾವೇ ಸಮಾಧಾನ ಹೇಳಿಕೊಳ್ಳುವಂತಾಗಿದೆ.. ಮುಂದಿನ ಮ್ಯಾಚ್‌ನಿಂದಲೇ ಆರ್‌ಸಿಬಿ ವಿನ್ನಿಂಗ್ ಟ್ರ್ಯಾಕ್‌ಗೆ ಬರಲಿ ಅನ್ನೋದಷ್ಟೇ ಈಗ ಆರ್‌ಸಿಬಿ ಅಭಿಮಾನಿಗಳ ಆಶಯ..