RCB ಗೆ ದುಡ್ಡಿನ ಹೊಳೆ. ಗೆದ್ದಿದ್ದು 20 Cr.. 2,200 ಕೋಟಿ ಲಾಭ! – ವಿಜಯ್ ಮಲ್ಯಗೆ ಎಷ್ಟು ಪಾಲು?

ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಪ್ರತಿ ಬಾರಿ ಕೇಳಿ ಬರುತ್ತಿದ್ದ ಈ ಸಲ ಕಪ್ ನಮ್ದೇ ಅನ್ನೋ ಘೋಷವಾಕ್ಯವನ್ನ ಈ ಬಾರಿ ಆರ್ ಸಿಬಿ ನಿಜ ಮಾಡಿದೆ. 18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಎತ್ತಿ ಹಿಡಿದು, ಈ ಸಲ ಕಪ್ ನಮ್ದು ಅಂತ ಘೋಷವಾಕ್ಯವನ್ನ ಚೇಂಜ್ ಮಾಡಿದೆ. ಕಪ್ ಗೆದ್ದು ಆರ್ ಸಿಬಿ 20 ಕೋಟಿ ಬಹುಮಾನ ಪಡ್ಕೊಂಡಿದೆ. ಇದ್ರ ಬೆನ್ನಲ್ಲೇ ಆರ್‌ಸಿಬಿ ಫ್ರಾಂಚೈಸಿ ಕೋಟಿ ಕೋಟಿ ಲಾಭ ಮಾಡ್ಕೊಂಡಿದೆ. ಅದು ಕೂಡ ಫೈನಲ್ ಮ್ಯಾಚ್ ದಿನದಂದೆ.. ಅಷ್ಟಕ್ಕೂ ಆರ್‌ಸಿಬಿ ಫ್ರಾಂಚೈಸಿಗೆ ಒಂದೇ ದಿನ ದುಡ್ಡಿನ ಹೊಳೆ ಹರಿದು ಬಂದಿದ್ದು ಹೇಗೆ? ಈ ಲಾಭದಲ್ಲಿ ಮಾಜಿ ಮಾಲೀಕ ವಿಜಯ್ ಮಲ್ಯಗೆ ಎಷ್ಟು ಪಾಲು ಸಿಗುತ್ತೆ? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: ಕೊಹ್ಲಿ ಕಣ್ಣೀರಿಗೆ ಬೆಲೆಯೇ ಇಲ್ವಾ? – ಮಾತಿಗಷ್ಟೆ ಬೆಂಗಳೂರಿನ ಮೇಲೆ ಪ್ರೀತಿನಾ?
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಆರ್‌ಸಿಬಿ ಪಂಜಾಬ್ ವಿರುದ್ಧ ರಾಯಲ್ ಆಗೇ ಗೆದ್ದು ಚಾಂಪಿಯನ್ ಆಗಿದೆ. ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಬಹುಮಾನ ಬಾಚಿಕೊಂಡಿದೆ. ರಜತ್ ಪಾಟೀದಾರ್ ಪಡೆ ಬರೋಬ್ಬರಿ 20 ಕೋಟಿ ರುಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಆದ್ರೆ ಈ ಬಹುಮಾನದ ಹಣದಲ್ಲಿ 30 ಪರ್ಸೆಂಟ್ ನಷ್ಟು ಟ್ಯಾಕ್ಸ್ ಕಟ್ ಆಗುತ್ತೆ. ಕೇವಲ 9 ಕೋಟಿ 10 ಲಕ್ಷ ರೂಪಾಯಿ ತಂಡದ ಖಾತೆಗೆ ಹೋಗುತ್ತದೆ. ಆದರೆ ಆರ್‌ಸಿಬಿ ಚಾಂಪಿಯನ್ ಆಗ್ತಿದ್ದಂತೆ ಟೀಮ್ ಮಾಲೀಕರಿಗೆ ಕೋಟಿ ಕೋಟಿ ಲಾಭ ಆಗಿದೆ. ಆರ್ ಸಿಬಿ ಮಾಲೀಕ ಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಐಪಿಎಲ್ ಫೈನಲ್ ದಿನ ಬರೋಬ್ಬರಿ 2,200 ಕೋಟಿ ರುಪಾಯಿ ಲಾಭ ಮಾಡ್ಕೊಂಡಿದ್ದಾರೆ.
ದೇಶದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಆರ್‌ಸಿಬಿ ಮಾಲೀಕತ್ವವನ್ನ ಹೊಂದಿದೆ.. ಸದ್ಯ ಈ ಕಂಪನಿಯ ಸಿಇಒ ಹಾಗೂ ಎಂಡಿ ಪ್ರವೀಣ್ ಸೋಮೇಶ್ವರ್ ಆಗಿದ್ದಾರೆ. ಇದಕ್ಕೂ ಮೊದಲು ವಿಜಯ್ ಮಲ್ಯ ಆರ್‌ಸಿಬಿ ಮಾಲೀಕರಾಗಿದ್ದರು. 2008 ರಲ್ಲಿ ಆರ್‌ಸಿಬಿಯನ್ನು ವಿಜಯ್ ಮಲ್ಯ ಖರೀದಿಸಿದ್ದರು. ಇದಾದ ನಂತರ ಈ ತಂಡವು ಡಿಯಾಜಿಯೊ ತೆಕ್ಕೆಗೆ ಹೋಯಿತು. ಯುನೈಟೆಡ್ ಸ್ಪಿರಿಟ್ಸ್ ಹೆಸರು ಈಗ ಯುನೈಟೆಡ್ ಬ್ರೆವರೀಸ್ ಎಂದಾಗಿದೆ. ಈ ಕಂಪನಿಯಲ್ಲಿ ಡಿಯಾಜಿಯೊದ ಷೇರುಪಾಲು ಶೇ. 55.88ರಷ್ಟಿದೆ. ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಗೂ ಇದೇ ಮಾಲೀಕನಾಗಿದೆ. ಇದೆಲ್ಲಾ ಒಂದು ಕಡೆಯಾದರೇ, ಆರ್‌ಸಿಬಿ ಒಂದೇ ದಿನ 2200 ಕೋಟಿ ರುಪಾಯಿ ಲಾಭ ಗಳಿಸಿದ್ದು ಹೇಗೆ? ಜಸ್ಟ್ ಒಂದು ಮ್ಯಾಚ್‌ನಿಂದ ಆರ್ ಸಿಬಿ ಮ್ಯಾನೇಜ್‌ಮೆಂಟ್ ಇಷ್ಟೊಂದು ಲಾಭ ಗಳಿಸಲು ಹೇಗೆ ಸಾಧ್ಯ ಅನ್ನೋದು ಕೂಡ ಇಲ್ಲಿದೆ.
ಆಟಗಾರರನ್ನು ಖರೀದಿಸಲು, ತಂಡ ಕಟ್ಟಲು, ಕೋಚ್‌ಗಳಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗಾಗಿ ಆರ್‌ಸಿಬಿ ಫ್ರಾಂಚೈಸಿಯು ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತದೆ. ಅದೇ ರೀತಿ ಐಪಿಎಲ್ ಓನರ್‌ಗಳು ಮ್ಯಾಚ್ ಟಿಕೆಟ್, ಸ್ಪಾನ್ಸರ್‌ಶಿಪ್ ಹಾಗೂ ಮೀಡಿಯಾ ರೈಟ್ಸ್‌ನಿಂದ ಕೋಟಿಗಟ್ಟಲೇ ಹಣವನ್ನು ಜೇಬಿಗಿಳಿಸಿಕೊಳ್ಳುತ್ತದೆ. ವರದಿಗಳ ಪ್ರಕಾರ ಐಪಿಎಲ್ ಪಂದ್ಯದ 80% ಮ್ಯಾಚ್ ಟಿಕೆಟ್‌ನ ದುಡ್ಡು ತಂಡದ ಮಾಲೀಕರಿಗೆ ಸೇರುತ್ತೆ. ಉದಾಹರಣಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1.32 ಲಕ್ಷ ಮಂದಿಯ ವೀಕ್ಷಕರ ಸಾಮರ್ಥ್ಯವನ್ನು ಹೊಂದಿತ್ತು. ಫೈನಲ್ ಪಂದ್ಯಕ್ಕೆ ಬಹುತೇಕ ಸ್ಟೇಡಿಯಂ ಹೌಸ್ ಫುಲ್ ಆಗಿತ್ತು. ಒಂದು ವೇಳೆ ಕೇವಲ ಒಂದು ಲಕ್ಷ ಮಂದಿಯೇ ಸ್ಟೇಡಿಯಂಗೆ ಬಂದಿದ್ದರೂ, ಅಂದಾಜು 3 ಸಾವಿರ ರುಪಾಯಿ ಟಿಕೆಟ್ ಬೆಲೆ ಇದ್ರೆ, ಟಿಕೆಟ್ ಮಾರಾಟದಿಂದಲೇ ಸುಮಾರು 30 ಕೋಟಿ ರುಪಾಯಿ ಕಲೆಕ್ಷನ್ ಆಗುತ್ತೆ. ಇದರಲ್ಲಿ 80% ಅಂದರೆ 24 ಕೋಟಿ ರುಪಾಯಿ ಫ್ರಾಂಚೈಸಿ ಪಾಲಾಗಲಿದೆ. ಆದರೆ 2200 ಕೋಟಿ ಲಾಭ ಹೇಗೆ ಎನ್ನುವ ಪ್ರಶ್ನೆ ನಿಮಗೆ ಮೂಡಬಹುದು.
2025ರ ಐಪಿಎಲ್ ಫೈನಲ್ ಪಂದ್ಯಕ್ಕೂ ಮುಂಚಿತವಾಗಿ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿಯ ಷೇರಿನ ಮೌಲ್ಯದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಯ್ತು. ಕಳೆದ ಮಂಗಳವಾರ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಸರಿಸುಮಾರು 2% ಏರಿಕೆ ಕಂಡಿತು. 1579.05 ರೂಪಾಯಿ ಇದ್ದ ಷೇರಿನ ಬೆಲೆ ಒಂದು ಹಂತದಲ್ಲಿ 1609.60 ರೂಪಾಯಿಗೆ ಏರಿಕೆ ಕಂಡಿತು. ಹೀಗಾಗಿ ಒಂದೇ ದಿನವೇ ಪ್ರತಿ ಷೇರಿನಲ್ಲಿ 29.75 ರುಪಾಯಿ ಏರಿಕೆ ಕಂಡಿತು. ದಿ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಮಂಗಳವಾರ ಆರಂಭದ ಮಾರ್ಕೆಟ್ ಕ್ಯಾಪ್ 1 ಲಕ್ಷದ 12 ಸಾವಿರದ 688 ಕೋಟಿ ಇತ್ತು. ಮಂಗಳವಾರದ ಷೇರು ಮಾರುಕಟ್ಟೆಯಲ್ಲಿ ಈ ಷೇರಿನ ಮಾರ್ಕೆಟ್ ಕ್ಯಾಪ್ 1 ಲಕ್ಷದ 14 ಸಾವಿರದ 852 ಕೋಟಿ ರೂಪಾಯಿಗೂ ಹೆಚ್ಚು ಏರಿಕೆಯಾಗಿದೆ. ಈ ಮೂಲಕ ಕೇವಲ 24 ಗಂಟೆಯೊಳಗೆ ಯುಎಸ್ಬಿ ಷೇರು 2,164 ಕೋಟಿ ರುಪಾಯಿ ಲಾಭ ಗಳಿಸಿತು. ಇದ್ರಲ್ಲಿ ವಿಜಯ್ ಮಲ್ಯ ಅವರು ಹೊಂದಿರುವ ಶೇರುಗಳ ಮೌಲ್ಯ ಕೂಡ ಏರಿಕೆಯಾಗಿದ್ದು. ದೊಡ್ಡ ಪ್ರಮಾಣದ ಲಾಭ ಗಳಿಸಿದ್ದಾರೆ. ಈ ಮೂಲಕ ಆರ್ ಸಿ ಬಿ ತಂಡದ ಗೆಲುವಿನ ಜೊತೆಗೆ ಫ್ರಾಂಚೈಸಿ ಹಾಗೂ ಅದ್ರ ಮಾಜಿ ಮಾಲೀಕ ಕೂಡ ಲಾಭದಲ್ಲಿದ್ದಾರೆ.