ಚೆಪಾಕ್ ನಲ್ಲೇ ಚೆನ್ನೈ ಚೆಂಡಾಡಿದ RCB – ಟೇಬಲ್ ಟಾಪರ್ಸ್ ನಾವೇ.. ಕಪ್ ನಮ್ದೇ!

ನೀವು ಕ್ಯಾಚ್ ಬಿಟ್ರೂ ನಾನು ಬೀಸೋದನ್ನ ಬಿಡಲ್ಲ ಅಂತಾ ಕ್ಯಾಪ್ಟನ್ ರಜತ್ ಪಾಟಿದಾರ್. ನಾನು ಲೇಟಾಗ್ ಬಂದ್ರೂ ಲೇಟೆಸ್ಟ್ ಆಗ್ ಬರ್ತೀನಿ ಅಂತಾ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್. ಹಾಲಿವುಡ್ ಬ್ಲಾಕ್ ಬಸ್ಟರ್ ಮೂವಿ ಥರ ಜೋಶ್ ಹ್ಯಾಜಲ್ವುಡ್ ಬೌಲಿಂಗ್. ಆಸ್ ಯೂಸುಯಲ್ ಧೋನಿ ಫಿನಿಶಿಂಗ್ ಟಚ್. ಅಬ್ಬಬ್ಬಾ. ಆರ್ಸಿಬಿ ಆಟಗಾರರ ಅಬ್ಬರ ನೋಡೋದೇ ಮಜಾ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರನ್ನ ಮಕಾಡೆ ಮಲಗಿಸಿದ ಬೆಂಗಳೂರು ಹುಡುಗ್ರು ಚೆಪಾಕ್ ಮೈದಾನದಲ್ಲಿ ರೆಡ್ ಆರ್ಮಿ ಪವರ್ ತೋರಿಸಿದ್ರು.
ಇದನ್ನೂ ಓದಿ : ಚೆನ್ನೈ ವಿರುದ್ಧ ಆರ್‌ಸಿಬಿಗೆ ರೋಚಕ ಜಯ – ಐಪಿಎಲ್‌ನಲ್ಲಿಆರ್‌ಸಿಬಿ ಹೊಸ ಇತಿಹಾಸ
18ನೇ ಸೀಸನ್ ಐಪಿಎಲ್ನ 8ನೇ ಪಂದ್ಯದಲ್ಲಿ ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ ಟಾಸ್ ಗೆದ್ದು ಆರ್ಸಿಬಿ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ದರು. ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಪರ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅದ್ಭುತ ಪ್ರದರ್ಶನ ನೀಡಿದ್ರು. ಸಾಲ್ಟ್ 32 ರನ್ ಗಳಿಸಿದ್ರೆ ಕೊಹ್ಲಿ 31 ರನ್ ಬಾರಿಸಿದ್ರು. 3ನೇ ಕ್ರಮಾಂಕದಲ್ಲಿ ಬಂದ ದೇವದತ್ ಪಡಿಕ್ಕಲ್ 14 ಎಸೆತಗಳಲ್ಲಿ 27 ರನ್ ಬಾರಿಸಿದ್ರು. ರಜತ್ ಪಾಟಿದಾರ್ ಅಂತೂ ಮೂರು ಜೀವದಾನ ಪಡೆದು 32 ಎಸೆತಗಳಲ್ಲಿ 51 ರನ್ ಬಾರಿಸಿದರು. ಅದ್ರಲ್ಲೂ 7ನೇ ಕ್ರಮಾಂಕದಲ್ಲಿ ಬಂದ ಟಿಮ್ ಡೇವಿಡ್ ಅಂತೂ ಕೊನೇ ಓವರ್‌ನಲ್ಲಿ ಸ್ಯಾಮ್ ಕರ್ರನ್ಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದ್ರು. ಈ ಮೂಲಕ ಆರ್ಸಿಬಿ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 196 ರನ್ ಕಲೆಹಾಕಿತು.
ಚೆನ್ನೈನ ಸ್ಪಿನ್ ಫ್ರೆಂಡ್ಲಿ ಪಿಚ್ನಲ್ಲಿ ಇಷ್ಟು ಟಾರ್ಗೆಟ್ ಬೀಟ್ ಮಾಡೋದು ಸಿಎಸ್‌ಕೆ ಕಷ್ಟವೇ ಇತ್ತು. 197 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಆರಂಭದಲ್ಲೇ ಎಡವಿತು. ಸತತ ಎರಡನೇ ಪಂದ್ಯದಲ್ಲೂ ಆರಂಭಿಕ ರಾಹುಲ್ ತ್ರಿಪಾಠಿ (5) ಬೇಗನೆ ಪೆವಿಲಿಯನ್ ಸೇರಿಕೊಂಡರು. ನಾಯಕ ರುತುರಾಜ್ ಗಾಯಕ್ವಾಡ್ ಸೊಹ್ನೆ ಸುತ್ತಿದ್ರು. 8 ರನ್ ಗಳಿಸುವಷ್ಟ್ರಲ್ಲೇ 2 ವಿಕೆಟ್ ಢಮಾರ್ ಆಗಿತ್ತು. ಪವರ್‌ಪ್ಲೇ ಮುಗಿಯೋ ವೇಳೆಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 30 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಪವರ್‌ಪ್ಲೇ ನಂತರವೂ ಕರಾರುವಕ್ಕಾದ ದಾಳಿ ಮುಂದುವರೆಸಿದ ಬೆಂಗಳೂರು ಬೌಲರ್‌ಗಳು ಸಿಎಸ್ಕೆಯನ್ನು ಪಂದ್ಯದಿಂದಲ್ಲೇ ಹೊರಹಾಕಿದರು. ರಚಿನ್ ರವೀಂದ್ರ 41 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್ ಆಯ್ತು. ಅಂತಿಮವಾಗಿ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 146 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಬೀಳ್ತಿದ್ರೂ ರಿಕ್ವ್ವೈರಡ್ ರನ್ ರೇಟ್ ಜಾಸ್ತಿ ಇದ್ರೂ ಧೋನಿ 9ನೇ ಸ್ಲಾಟ್ನಲ್ಲಿ ಬ್ಯಾಟಿಂಗ್ಗೆ ಬಂದಿದ್ರು. ರವಿಚಂದ್ರನ್ ಅಶ್ವಿನ್ ನಂತರ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂಎಸ್ ಧೋನಿ ಬ್ಯಾಟಿಂಗ್ ಮಾಡಲು ಬಂದಿದ್ದು ಎಲ್ಲರಿಗೂ ಶಾಕಿಂಗ್ ಆಗಿತ್ತು. ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಕ್ರಿಕೆಟ್ ತಜ್ಞರು ಕೂಡ ಆಶ್ಚರ್ಯಗೊಂಡಿದ್ದಾರೆ. ತಂಡಕ್ಕೆ ತುಂಬಾ ಅಗತ್ಯವಿದ್ದಾಗ ಧೋನಿ ಇಷ್ಟು ಕೆಳಮಟ್ಟದಲ್ಲಿ ಯಾಕೆ ಬ್ಯಾಟಿಂಗ್ ಮಾಡಲು ಬಂದರು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಧೋನಿ ಅಭಿಮಾನಿಗಳು, ಸೋಶಿಯಲ್ ಮೀಡಿಯಾ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿಯೂ ಟ್ರೋಲ್ ಮಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ 9 ನೇ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 6ನೇ ಕ್ರಮಾಂಕದಲ್ಲಿ ಬಂದು ಸಿಎಸ್‌ಕೆ ತಂಡಕ್ಕೆ ಭರವಸೆ ಮೂಡಿಸಬಹುದಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲ ಫ್ಯಾನ್ಸ್ ಅಂತೂ ಧೋನಿ ಎಲ್ಲರಿಗೂ ಬ್ಯಾಟಿಂಗ್ಗೆ ಅವಕಾಶ ಮಾಡಿಕೊಟ್ಟು ಕೊನೆಯಲ್ಲಿ ಬಂದ ಕರುಣಾಮಯಿ ಅಂತಾ ಕಾಲೆಳೆದಿದ್ದಾರೆ.
9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಎಂಎಸ್ ಧೋನಿ 16 ಎಸೆತಗಳಲ್ಲಿ 187.50 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 30 ರನ್ ಗಳಿಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಬಾರಿಸಿದರು. ಪವರ್‌ಪ್ಲೇ ಒಳಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಿಎಸ್‌ಕೆ ತಂಡದ ಅಗ್ರ ಕ್ರಮಾಂಕ ಬ್ಯಾಟರ್ಗಳು ಯಾರೂ ವೇಗವಾಗಿ ರನ್ ಗಳಿಸಲಿಲ್ಲ. 16 ನೇ ಓವರ್‌ನಲ್ಲಿ ಧೋನಿ ಬ್ಯಾಟಿಂಗ್ ಮಾಡಲು ಬರುವ ಹೊತ್ತಿಗೆ, ಪಂದ್ಯ ಸಿಎಸ್‌ಕೆ ಕೈಯಿಂದ ಜಾರಿಯಾಗಿತ್ತು. ಮ್ಯಾಚ್ ಸೋತ್ರೂ ಧೋನಿ ಫ್ಯಾನ್ಸ್ ಅಂತೂ 2 ಸಿಕ್ಸ್, 3 ಬೌಂಡರಿ ಸಾಕು ನಮ್ಮ ಖುಷಿಗೆ ಅಂತಾ ಸಮಾಧಾನ ಮಾಡ್ಕೊಂಡಿದ್ರು.
ಚೆಪಾಕ್ ಮೈದಾನದಲ್ಲಿ ಧೋನಿ ಬಾಯ್ಸ್ ಅಷ್ಟೊಂದು ರನ್ ಕೊಡೋಕೆ ಕಾರಣನೇ ಕಳಪೆ ಫೀಲ್ಡಿಂಗ್. ಸಿಎಸ್‌ಕೆ ಫಿಲ್ಡರ್ಗಳ ಕಳಪೆ ಫಿಲ್ಡಿಂಗ್ ಮತ್ತು ಬ್ಯಾಟಿಂಗ್ ಆರ್ಸಿಬಿ ಗೆಲುವಿಗೆ ಕಾರಣವಾಯಿತು. ಅದ್ರಲ್ಲೂ ರಜತ್ ಪಾಟಿದಾರ್ ಅವ್ರ ಮೂರು ಕ್ಯಾಚ್ಗಳನ್ನ ಮಿಸ್ ಮಾಡಿದ್ರು. ಚೆನ್ನೈನ ಮೂವರು ಆಟಗಾರರು ಕೇವಲ 4 ರನ್‌ಗಳ ಅಂತರದಲ್ಲಿ ಪಟಿದಾರ್ ಅವರ 3 ಕ್ಯಾಚ್‌ಗಳನ್ನು ಕೈಬಿಟ್ಟರು. 12ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ರಜತ್ ಪಾಟಿದಾರ್ ಅವರ ಮೊದಲ ಕ್ಯಾಚ್ ಮಿಸ್ ಆಯಿತು. ದೀಪಕ್ ಹೂಡಾ ಸುಲಭ ಕ್ಯಾಚ್ ಕೈಚೆಲ್ಲಿದರು. ಆ ಬಳಿಕ 13ನೇ ಓವರ್‌ನಲ್ಲಿ ನೂರ್ ಅಹ್ಮದ್ ಎಸೆತದಲ್ಲಿ ರಜತ್ ಪಾಟಿದಾರ್ ಅವರ ಎರನೇ ಕ್ಯಾಚ್ ಮಿಸ್ ಆಯಿತು. ಈ ಬಾರಿ ರಾಹುಲ್ ತ್ರಿಪಾಠಿ ಈ ಕ್ಯಾಚ್ ಅನ್ನು ಕೈಬಿಟ್ಟರು. ಇದಾದ ಬಳಿಕ ನೂರ್ ಅಹ್ಮದ್ ಅವರ ಅದೇ ಓವರ್‌ನಲ್ಲಿ ಖಲೀಲ್ ಅಹ್ಮದ್ ಕ್ಯಾಚ್ ಬಿಟ್ಟರು. ಫಸ್ಟ್ ಕ್ಯಾಚ್ ಮಿಸ್ ಆದ ವೇಳೆ 17 ರನ್ ಗಳಿಸಿದ್ದ ಪಟೀದಾರ್ ಮೂರು ಜೀವದಾನ ಪಡೆದು 51 ರನ್ ಚಚ್ಚಿದ್ರು.
ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಿಎಸ್‌ಕೆ ವಿರುದ್ಧ ಒಮ್ಮೆಯೂ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರಲಿಲ್ಲ. ಅಂದರೆ ಕಳೆದ 17 ವರ್ಷಗಳಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಂತಹ ಇತಿಹಾಸವೇ ಇರಲಿಲ್ಲ. ಬಟ್ ಈಗ ಅದು ಸಾಧ್ಯವಾಗಿದೆ. ಕಳೆದ ಸೀಸನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್ಸಿಬಿ 27 ರನ್ಗಳಿಂದ ಮಣಿಸಿತ್ತು. ಇದೀಗ ಈ ಬಾರಿಯ ಮೊದಲ ಪಂದ್ಯದಲ್ಲೇ ಸಿಎಸ್‌ಕೆ ಪಡೆಯನ್ನು 50 ರನ್ಗಳಿಂದ ಬಗ್ಗು ಬಡಿದಿದೆ. ಈ ಸೀಸನ್ನಲ್ಲಿ ಮೇ 3 ರಂದು ಮತ್ತೊಮ್ಮೆ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲೂ ಆರ್ಸಿಬಿ ಜಯ ಸಾಧಿಸಿದರೆ, ಅದು ಸಹ ಇತಿಹಾಸ ಪುಟಕ್ಕೆ ಸೇರ್ಪಡೆಯಾಗಲಿದೆ. ಹಾಗೇ ಚೆನ್ನೈ ವಿರುದ್ಧ ಇದೇ ಮೊದಲ ಬಾರಿಗೆ ಬೃಹತ್ ಅಂತರದಿಂದ ಗೆಲುವು ದಾಖಲಿಸಿದೆ.