WPL ನಲ್ಲಿ RCB ಹಾವಳಿ – ಇತಿಹಾಸ ನಿರ್ಮಿಸಿದ ಬೆಂಗಳೂರು ಹುಡುಗಿಯರು

WPL ನಲ್ಲಿ RCB ಹಾವಳಿ – ಇತಿಹಾಸ ನಿರ್ಮಿಸಿದ ಬೆಂಗಳೂರು ಹುಡುಗಿಯರು

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3ರ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಇತಿಹಾಸ ನಿರ್ಮಿಸಿದೆ.  202 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತಿ ಗೆಲುವಿನ ನಗೆ ಬೀರಿದ್ದಾರೆ. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಸ್ಮತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ಪರ ಬೆತ್ ಮೂನಿ ಹಾಗೂ ಆಶ್ಲೀ ಗಾರ್ಡ್ನರ್ ಭರ್ಜರಿ ಪ್ರದರ್ಶನ ನೀಡಿದರು. ಬೆತ್ ಮೂನಿ 56 ರನ್ ಬಾರಿಸಿದರೆ, ಆಶ್ಲೀ ಗಾರ್ಡ್ನರ್ 37 ಎಸೆತಗಳಲ್ಲಿ 8 ಸಿಕ್ಸ್ಗಳೊಂದಿಗೆ ಅಜೇಯ 79 ರನ್ ಸಿಡಿಸಿದರು. ಈ ಮೂಲಕ ಗುಜರಾತ್ ಜೈಂಟ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. 202 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕಿ ಸ್ಮೃತಿ ಮಂಧಾನ (9) ರನ್ ಬಾರಿಸಿ ಔಟಾದರೆ, ಡೇನಿಯಲ್ ವ್ಯಾಟ್ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ರಾಘ್ವಿ ಬಿಸ್ತ್ 25 ರನ್‌ಗಳಿಸಿ ಔಟಾದರು. ಈ ಹಂತದಲ್ಲಿ ಕಣಕ್ಕಿಳಿದ ಎಲ್ಲಿಸ್ ಪೆರ್ರಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

34 ಎಸೆತಗಳನ್ನು ಎದುರಿಸಿದ ಪೆರ್ರಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 57 ರನ್ ಬಾರಿಸಿದರು. ಇದಾಗ್ಯೂ ಕೊನೆಯ 8 ಓವರ್ಗಳಲ್ಲಿ ಆರ್ಸಿಬಿ ತಂಡಕ್ಕೆ 93 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಕ್ರೀಸ್‌ಗೆ ಆಗಮಿಸಿದ ರಿಚಾ ಘೋಷ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್‌ಗೆ ಒತ್ತು ನೀಡಿದ ರಿಚಾ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಆರ್ಸಿಬಿ ಆಟಗಾರ್ತಿಯ ಬ್ಯಾಟ್‌ನಿಂದ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ರಿಚಾ ಘೋಷ್ಗೆ ಉತ್ತಮ ಸಾಥ್ ನೀಡಿದ ಕನಿಕಾ ಅಹುಜಾ 13 ಎಸೆತಗಳಲ್ಲಿ 30 ರನ್ ಬಾರಿಸಿದರು. ಅತ್ತ ಕಡೆ ರಿಚಾ 27 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 64 ರನ್ ಚಚ್ಚಿದರು. ಈ ಮೂಲಕ ಆರ್ಸಿಬಿ ತಂಡ 18.3 ಓವರ್ಗಳಲ್ಲಿ 202 ರನ್ ಬಾರಿಸಿ 6 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.

ಈ ಗೆಲುವಿನೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಗರಿಷ್ಠ ರನ್ ಚೇಸ್ ಮಾಡಿ ಗೆದ್ದ ದಾಖಲೆ ಆರ್‌ಸಿಬಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಮುಂಬೈ ಇಂಡಿಯನ್ಸ್ ತಂಡದ ಹೆಸರಿನಲ್ಲಿತ್ತು. 2024 ರಲ್ಲಿ ಗುಜರಾತ್ ಜೈಂಟ್ಸ್ ನೀಡಿದ 191 ರನ್‌ಗಳ ಟಾರ್ಗೆಟ್ ಅನ್ನು ಬೆನ್ನತ್ತಿ ಮುಂಬೈ ಇಂಡಿಯನ್ಸ್ ಈ ದಾಖಲೆ ನಿರ್ಮಿಸಿದ್ದರು. ಇದೀಗ 202 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಈ ದಾಖಲೆಯೊಂದಿಗೆ ಆರ್ಸಿಬಿ ಪಡೆ ಐಪಿಎಲ್ ಸೀಸನ್-3 ರಲ್ಲಿ ಶುಭಾರಂಭ ಮಾಡಿರುವುದು ವಿಶೇಷ.

Kishor KV

Leave a Reply

Your email address will not be published. Required fields are marked *