2008-2024.. RCBಗೆ 7 ಕ್ಯಾಪ್ಟನ್ಸ್ – ದ್ರಾವಿಡ್ To ಫಾಫ್.. ಬೆಸ್ಟ್ ಯಾರು?
18ನೇ ಸೀಸನ್ ನಾಯಕ ಕೊಹ್ಲಿನಾ?

2008-2024.. RCBಗೆ 7 ಕ್ಯಾಪ್ಟನ್ಸ್ – ದ್ರಾವಿಡ್ To ಫಾಫ್.. ಬೆಸ್ಟ್ ಯಾರು?18ನೇ ಸೀಸನ್ ನಾಯಕ ಕೊಹ್ಲಿನಾ?

2025ರ ಐಪಿಎಲ್​ಗೆ ರೆಡಿಯಾಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕ್ಯಾಪ್ಟನ್ ಯಾರು ಅನ್ನೋದೇ ಈಗಿರೋ ಪ್ರಶ್ನೆ. ಯಾಕಂದ್ರೆ ಐಪಿಎಲ್ ಹರಾಜಿನಲ್ಲಿ ನಾಯಕನಾಗುವಂಥ ಯಾವ ಆಟಗಾರನನ್ನೂ ಖರೀದಿ ಮಾಡಿಲ್ಲ. ಇರೋ 22 ಆಟಗಾರರಲ್ಲಿ ಯಾರಿಗೆ ಸಾರಥ್ಯ ನೀಡ್ತಾರೆ ಅನ್ನೋ ಕನ್ಫ್ಯೂಷನ್​ಗಳ ನಡುವೆ ಕಿಂಗ್ ವಿರಾಟ್ ಕೊಹ್ಲಿಗೇ ಮತ್ತೆ ಪಟ್ಟಾಭಿಷೇಕ ಮಾಡ್ಬೋದು ಅನ್ನೋ ಮಾತುಗಳು ಕೇಳಿ ಬರ್ತಿವೆ. ಹಾಗೇ ಮತ್ತೊಂದಷ್ಟು ಹೆಸರುಗಳೂ ರೇಸ್​ನಲ್ಲಿವೆ. 2008ರಲ್ಲಿ ಐಪಿಎಲ್ ಜರ್ನಿ ಆರಂಭಿಸಿದ ಆರ್​ಸಿಬಿ ಈವರೆಗೆ 7 ನಾಯಕರನ್ನ ಕಂಡಿದೆ. ಅಷ್ಟಕ್ಕೂ ಯಾರು ಆ 7 ನಾಯಕರು? ಅವ್ರ ಪರ್ಫಾಮೆನ್ಸ್ ಹೇಗಿತ್ತು..? ಯಾರು ಬೆಸ್ಟ್ ಕ್ಯಾಪ್ಟನ್ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತಲೆ ಬೋಳಿಸಿದ್ರೆ BBK ಫೈನಲ್‌.. ಹೆಡ್‌ ಶೇವ್‌ ಮಾಡಿಸಿದ್ರೆ ವಿನ್‌ ಆಗ್ತಾರಾ? – ಟಾಸ್ಕ್‌ ನೆಪ, ಫೀಲಿಂಗ್ಸ್‌ ಗೆ ಬೆಲೆ ಇಲ್ವಾ?

18ನೇ ಸೀಸನ್ ಐಪಿಎಲ್​ಗೆ ನ್ಯೂ ಲುಕ್​ನಲ್ಲಿ ಕಾಣಿಸಿಕೊಳ್ಳೋ ಆರ್​ಸಿಬಿ ಹೊಸ ಕ್ಯಾಪ್ಟನ್​ನೊಂದಿಗೆ ಕಣಕ್ಕಿಳಿಯಲಿದೆ. ಹಾಗೇ ಚೊಚ್ಚಲ ಬಾರಿಗೆ ಟ್ರೋಫಿಯನ್ನ ಗೆಲ್ಲೋ ನಿರೀಕ್ಷೆಯಲ್ಲಿದೆ. ಬಟ್ ಅದಕ್ಕೂ ಮುನ್ನ ತಂಡಕ್ಕೆ ಹೊಸ ನಾಯಕನ ನೇಮಕ ಆಗ್ಬೇಕಿದೆ. ಯಾಕಂದ್ರೆ ಕಳೆದ 3 ಸೀಸನ್​ಗಳಿಂದ ಬೆಂಗಳೂರು ತಂಡವನ್ನ ಲೀಡ್ ಮಾಡಿದ್ದ ಫಾಫ್ ಡುಪ್ಲೆಸಿಸ್​​ರನ್ನ ಹರಾಜಿಗೂ ಮುನ್ನವೇ ಕೈ ಬಿಟ್ಟಿತ್ತು. ಹಾಗೇ ಮತ್ತೆ ತಂಡಕ್ಕೆ ಸೇರಿಸಿಕೊಂಡಿಲ್ಲ. ಇನ್ನು ಕ್ಯಾಪ್ಟನ್ ಕ್ವಾಲಿಟೀಸ್ ಇದ್ದಂಥ ಆಟಗಾರನಿಗೂ ಮಣೆ ಹಾಕಿಲ್ಲ. ಕಳೆದ 17 ಸೀಸನ್​ಗಳ ಐಪಿಎಲ್​ನಲ್ಲಿ 7 ನಾಯಕರನ್ನ ಕಂಡಿರೋ ಬೆಂಗಳೂರು ತಂಡ ಇದೀಗ 8ನೇ ಸಾರಥಿಯ ಹುಡುಕಾಟದಲ್ಲಿದೆ. ಬೆಂಗಳೂರು ತಂಡವನ್ನು ಮುನ್ನಡೆಸಿದ ಮೊದಲ ನಾಯಕ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್.

ಐಪಿಎಲ್ ಉದ್ಘಾಟನಾ ವರ್ಷದಲ್ಲಿ ರಾಹುಲ್ ದ್ರಾವಿಡ್ ನಾಯಕ!

2008ರಲ್ಲಿ ಐಪಿಎಲ್ ಎಂಬ ಕ್ರಿಕೆಟ್ ಹಬ್ಬದ ಟೂರ್ನಿ ಆರಂಭವಾಗಿತ್ತು. ಫಸ್ಟ್ ಸೀಸನ್​ನಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿದ್ವು. ಬೆಂಗಳೂರು ತಂಡವನ್ನ ವಿಜಯ್ ಮಲ್ಯ ಖರೀದಿ ಮಾಡಿದ್ರು. ಮೊದಲ ಸೀಸನ್​ನಲ್ಲಿ ನಮ್ಮ ಕನ್ನಡಿಗ ರಾಹುಲ್ ದ್ರಾವಿಡ್ ತಂಡವನ್ನ ಲೀಡ್ ಮಾಡಿದ್ರು. ಬಟ್ ಫಸ್ಟ್ ಸೀಸನ್​ನಲ್ಲಿ ಬೆಂಗಳೂರು ಟೀಂ ಅಷ್ಟೇನು ಚೆನ್ನಾಗಿ ಪ್ರದರ್ಶನ ನೀಡಿರಲಿಲ್ಲ. 14 ಪಂದ್ಯಗಳ ಪೈಕಿ ನಾಲ್ಕರಲ್ಲಿ ಮಾತ್ರವೇ ಗೆಲುವು ಕಂಡಿತ್ತು. ಹಾಗೇ 10 ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಹೀಗಾಗಿ ಪಾಯಿಂಟ್ಸ್ ಟೇಬಲ್​ನಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು. ಬಟ್ ಇದೊಂದೇ ಸೀಸನ್ ಮಾತ್ರವೇ ದ್ರಾವಿಡ್ ಕ್ಯಾಪ್ಟನ್ ಆಗಿದ್ರು. ಬಟ್ 2009 ಮತ್ತು 2010ರಲ್ಲಿ ಬೆಂಗಳೂರು ತಂಡದ ಪರವೇ ಆಟಗಾರನಾಗಿ ಕಣಕ್ಕಿಳಿದಿದ್ರು. ಆ ನಂತ್ರ ನಂತರ RR ತಂಡವನ್ನ ಸೇರಿಕೊಂಡಿದ್ರು.

2009ರಲ್ಲಿ ಕೇವಿನ್ ಪೀಟರ್ ಸನ್ ಬಳಿಕ ಅನಿಲ್ ಕುಂಬ್ಳೆ ಕ್ಯಾಪ್ಟನ್!

ರಾಹುಲ್ ದ್ರಾವಿಡ್ ಬಳಿಕ 2009ರಲ್ಲಿ ಕೇವಿನ್ ಪೀಟರ್ ಸನ್ ಕ್ಯಾಪ್ಟನ್ಸಿಯನ್ನ ವಹಿಸಿಕೊಂಡಿದ್ರು. 6 ಪಂದ್ಯಗಳಲ್ಲಿ ಟೀಂ ಲೀಡ್ ಮಾಡಿದ್ರು. ಬಳಿಕ ಉಳಿದ ಪಂದ್ಯಗಳಿಗೆ ಅನಿಲ್ ಕುಂಬ್ಳೆ ಸಾತೈ್ ವಹಿಸಿಕೊಂಡ್ರು.  2009 ಮತ್ತು 2010 ರ ಸೀಸನ್​ನಳಲ್ಲಿ ಫ್ರಾಂಚೈಸಿಯನ್ನು ಮುನ್ನಡೆಸಿದರು. ಮೊದಲ ಬಾರಿಯೇ ಅಂದ್ರೆ  2009 ರಲ್ಲಿ ಬೆಂಗಳೂರು ತಂಡವನ್ನು ಫೈನಲ್‌ಗೆ ತಲುಪಿಸಿದ್ರು. ಬಟ್ ಟ್ರೋಫಿ ಗೆಲ್ಲೋಕೆ ಆಗ್ಲಿಲ್ಲ. ಆನಂತ್ರ 2010 ರ ಸೀಸನ್​ನಲ್ಲಿ ಪ್ಲೇ ಆಫ್‌ಗೆ ಮುನ್ನಡೆಸಿದರು. ಕುಂಬ್ಳೆ ನಾಯಕತ್ವದಲ್ಲಿ ಬೆಂಗಳೂರು 35 ಪಂದ್ಯಗಳನ್ನು ಆಡಿದ್ದು, 19 ರಲ್ಲಿ ಗೆದ್ದಿದೆ ಮತ್ತು 16 ಪಂದ್ಯಗಳನ್ನು ಸೋತಿದೆ. RCB ಪರ 53 ವಿಕೆಟ್ ಗಳನ್ನ ಕುಂಬ್ಳೆ ಬೇಟೆಯಾಡಿದ್ರು.

2 ವರ್ಷ ಟೀಂ ನಡೆಸಿದ್ದ ಡೇನಿಯಲ್ ವೆಟ್ಟೋರಿ 

ಅನಿಲ್ ಕುಂಬ್ಳೆ ಬಳಿಕ 2011 ಮತ್ತು 2012ರಲ್ಲಿ ಡೇನಿಯಲ್ ವೆಟ್ಟೋರಿ ಬೆಂಗಳೂರು ತಂಡದ ಕ್ಯಾಪ್ಟನ್ಸಿ ವಹಿಸಿಕೊಂಡಿದ್ರು. ಬೆಂಗಳೂರು ಪರ 28 ಪಂದ್ಯಗಳನ್ನ ಆಡಿದ್ದ ವೆಟ್ಟೋರಿ 15 ಪಂದ್ಯ ಗೆದ್ರೆ 13ರಲ್ಲಿ ಸೋಲು ಕಂಡಿದ್ರು.

2013ರಲ್ಲಿ ಕ್ಯಾಪ್ಟನ್ಸಿ ವಹಿಸಿಕೊಂಡ ಕಿಂಗ್ ವಿರಾಟ್ ಕೊಹ್ಲಿ!

ಡೇನಿಯಲ್ ವೆಟ್ಟೋರಿ ಬಳಿಕ ಬೆಂಗಳೂರು ತಂಡಕ್ಕೆ ನಾಯಕನಾದ ವಿರಾಟ್ ಕೊಹ್ಲಿ ಸತತ 9 ವರ್ಷಗಳ ಕಾಲ ಅಂದ್ರೆ 2013ರಿಂದ 2021ರವರೆಗೆ ತಂಡವನ್ನ ಲೀಡ್ ಮಾಡಿದ್ರು. ಈ 9 ವರ್ಷಗಳಲ್ಲಿ ಬೆಂಗಳೂರು ತಂಡ ಒಂದು ಸಲ ಫಿನಾಲೆ ತಲುಪಿತ್ತು. 2016ರಲ್ಲಿ ಫೈನಲ್​ಗೆ ಹೋದ್ರೂ ಕಪ್ ಗೆಲ್ಲೋಕೆ ಆಗಲಿಲ್ಲ. ಸನ್ ರೈಸರ್ಸ್ ಹೈದ್ರಾಬಾದ್ ಚಾಂಪಿಯನ್ ಆಗಿತ್ತು. ಆರ್​ಸಿಬಿಯ ಕ್ಯಾಪ್ಟನ್ ಆಗಿ 140 ಪಂದ್ಯಗಳನ್ನು ಮುನ್ನಡೆಸಿರುವ ಕೊಹ್ಲಿ 66 ರಲ್ಲಿ ಗೆಲುವು ಕಂಡಿದ್ದಾರೆ. 70ಕ್ಕೂ ಹೆಚ್ಚು ಪಂದ್ಯಗಳನ್ನ ಸೋತಿದ್ದಾರೆ. ಆ ಬಳಿಕ 2021ರ ಸೀಸನ್ ಬಳಿಕ ವಿರಾಟ್ ಕೊಹ್ಲಿಯೇ ನಾಯಕತ್ವದಿಂದ ಕೆಳಗಿಳಿದಿದ್ರು. ಇನ್ನು ಕೊಹ್ಲಿ ನಾಯಕನಾಗಿ ಇದ್ದಾಗಲೇ 2017 ರ ಆವೃತ್ತಿಯಲ್ಲಿ ಭುಜದ ಗಾಯದಿಂದಾಗಿ ಕೊಹ್ಲಿ ಹೊರಗುಳಿದಿದ್ದಾಗ ವ್ಯಾಟ್ಸನ್ ಮೂರು ಪಂದ್ಯಗಳಲ್ಲಿ RCB ಅನ್ನು ಮುನ್ನಡೆಸಿದರು.

ಕಳೆದ ಮೂರು ಸೀಸನ್ ಗಳಿಂದ ಬೆಂಗಳೂರು ತಂಡವನ್ನ ಫಾಫ್ ಡುಪ್ಲೆಸಿಸ್ ಮುನ್ನಡೆಸಿದ್ರು. 2022 ರಿಂದ ಬೆಂಗಳೂರು ತಂಡದ ನಾಯಕರಾಗಿದ್ದ ಫಾಫ್ ಡು ಪ್ಲೆಸಿಸ್, ಪ್ರತಿ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು. 2022 ರಲ್ಲಿ, ಡು ಪ್ಲೆಸಿಸ್ 31 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 468 ರನ್ ಗಳಿಸಿದ್ದರು. ಹಾಗೆಯೇ 2023 ರಲ್ಲಿ, ಡು ಪ್ಲೆಸಿಸ್ 56 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 730 ರನ್ ಗಳಿಸಿದ್ದರು. ಇದರಲ್ಲಿ 8 ಅರ್ಧ ಶತಕಗಳು ಸೇರಿದ್ದವು. ಕಳೆದ ಋತುವಿನಲ್ಲಿಯೂ ಡುಪ್ಲೆಸಿಸ್ 438 ರನ್ ಗಳಿಸಿದ್ದರು. ಆದರೆ ಅಂತಹ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ, ಈ ಸಲ ಫಾಫ್ ರನ್ನ ಉಳಿಸಿಕೊಳ್ಳೋಕೆ ಆರ್​ಸಿಬಿ ಮನಸು ಮಾಡಲಿಲ್ಲ. ಫಾಫ್ ಡು ಪ್ಲೆಸಿಸ್‌ಗೆ 40 ವರ್ಷ ವಯಸ್ಸಾಗಿರುವ ಕಾರಣ ಅವರನ್ನು ತಂಡದಿಂದ ರಿಲೀಸ್ ಮಾಡಲಾಯ್ತು. ಡೆಲ್ಲಿ ತಂಡ 2 ಕೋಟಿ ರೂಪಾಯಿ ಮೂಲ ಬೆಲೆಗೆ ಖರೀದಿ ಮಾಡಿದೆ. ಇನ್ನು ಡು ಪ್ಲೆಸಿಸ್ ಐಪಿಎಲ್‌ನಲ್ಲಿ ಇದುವರೆಗೆ 145 ಪಂದ್ಯಗಳಲ್ಲಿ ಸುಮಾರು 36 ಸರಾಸರಿಯಲ್ಲಿ 4571 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಡು ಪ್ಲೆಸಿಸ್ 37 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಒಟ್ನಲ್ಲಿ ವಿಶ್ವದ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿರುವ ಐಪಿಎಲ್‌ನ ಶ್ರೀಮಂತ ತಂಡಗಳಲ್ಲಿ ಆರ್‌ಸಿಬಿ ಸಹ ಒಂದು. ಅಪಾರ ಅಭಿಮಾನಿಗಳ ಬಳಗವೂ ಇದೆ. ಬೆಂಗಳೂರು ಪರ ಹಲವು ಸ್ಟಾರ್ ಆಟಗಾರರು ಆಟವಾಡಿ ಸೈ ಎನಿಸಿಕೊಂಡಿದ್ದಾರೆ. ಆರ್‌ಸಿಬಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ರೂ ಕೂಡ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿದೆ. ಬೆಂಗಳೂರು ತಂಡ ಐಪಿಎಲ್‌ನಲ್ಲಿ ಐದು ಬಾರಿ ಪ್ಲೇ ಆಫ್‌, ಮೂರು ಬಾರಿ ರನ್ನರ್‌ ಅಪ್‌, ಒಂದು ಬಾರಿ ಮೂರನೇ ಸ್ಥಾನವನ್ನು ಪಡೆದಿದೆ.

Shwetha M

Leave a Reply

Your email address will not be published. Required fields are marked *