1 ರನ್.. 1 ಸೋಲು.. RCBಗೆ ಕಪ್ – WPLನಂತೆಯೇ ನಡೀತಿದ್ಯಾ IPL?
ಸ್ಮೃತಿಯಂತೆ ಟ್ರೋಫಿಗೆ ಕೊಹ್ಲಿ ಮುತ್ತು?

1 ರನ್.. 1 ಸೋಲು.. RCBಗೆ ಕಪ್ – WPLನಂತೆಯೇ ನಡೀತಿದ್ಯಾ IPL?ಸ್ಮೃತಿಯಂತೆ ಟ್ರೋಫಿಗೆ ಕೊಹ್ಲಿ ಮುತ್ತು?

ಪ್ರತೀ ಸಲ ಐಪಿಎಲ್ ಆರಂಭ ಆದಾಗ್ಲೂ ಈ ಸಲ ಕಪ್ ನಮ್ದೇ ಅನ್ನೋ ಟ್ರೆಂಡ್ ಶುರುವಾಗುತ್ತೆ. ಸೋಶಿಯಲ್ ಮೀಡಿಯಾದಲ್ಲೂ ಆರ್​ಸಿಬಿ ಅಭಿಮಾನಿಗಳದ್ದೇ ಹಾವಳಿ. ಐಪಿಎಲ್ ಫ್ರಾಂಚೈಸಿಗಳ ಪೈಕಿ ಅತೀ ಹೆಚ್ಚು ಫ್ಯಾನ್ಸ್ ಹೊಂದಿರೋ ತಂಡ ಆಗಿದ್ರೂ ಒಮ್ಮೆಯೂ ಕಪ್ ಗೆದ್ದಿಲ್ಲ ಅನ್ನೋ ನೋವು ಇದೆ. ಆದ್ರೆ 16 ವರ್ಷಗಳ ಅಭಿಮಾನಿಗಳ ಕೊರಗನ್ನ ನೀಗಿಸಿದ್ದು ಮಹಿಳಾ ಆಟಗಾರರು. ಡಬ್ಲ್ಯೂಪಿಎಲ್ ಟೂರ್ನಿಯ 2ನೇ ಆವೃತ್ತಿಯಲ್ಲೇ ಆರ್​ಸಿಬಿ ಮಹಿಳಾ ಹುಲಿಗಳು ಟ್ರೋಫಿಯನ್ನ ಬೇಟೆಯಾಡಿದ್ರು. ಇದೀಗ ಇದೇ ವರ್ಷವೇ ಆರ್​ಸಿಬಿ ಹುಡುಗ್ರೂ ಕಪ್ ಗೆದ್ದೇ ಗೆಲ್ತಾರೆ ಅನ್ನೋ ಲೆಕ್ಕಾಚಾರ ನಡೀತಿದೆ. ಕಾಕತಾಳಿಯ ಎಂಬಂತೆ ಕೆಲ ಅಂಕಿ ಅಂಶಗಳೂ ಅದನ್ನೇ ಹೇಳ್ತಿವೆ. ಹಾಗಾದ್ರೆ ಆರ್​ಸಿಬಿ ಚೆನ್ನೈ ವಿರುದ್ಧ ಗೆಲ್ಲೋದು ಪಕ್ಕನಾ? ಅದೊಂದು ಮೆಟ್ಟಿಲು ಹತ್ತಿದ್ರೆ ಟ್ರೋಫಿ ನಮ್ಮದಾಗುತ್ತಾ? ಅದೊಂದು ಪಂದ್ಯದ ಸೋಲು ಟರ್ನಿಂಗ್ ಪಾಯಿಂಟ್ ಆಗಿದ್ದೇಗೆ? ಈ ಕುರಿತ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:   ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ಗೆ ಅರ್ಹತೆ ಪಡೆದ ಸನ್ ರೈಸರ್ಸ್ ಹೈದರಾಬಾದ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್​ಗೇರಲು ಕೊನೇ ಅವಕಾಶ ಇದೆ. ಮೇ 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ಚೆನ್ನೈ ವಿರುದ್ಧದ ಕೊನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ರೆ ಆರ್​ಸಿಬಿ ಟಾಪ್ 4ಗೆ ಕ್ವಾಲಿಫೈ ಆಗ್ಬೋದು. ಸತತ 5 ಪಂದ್ಯಗಳಿಂದ ಸಿಂಹಗಳಂತೆ ಗರ್ಜಿಸುತ್ತಿರೋ ಆರ್​ಸಿಬಿ ಪ್ಲೇಯರ್ಸ್ ಚೆನ್ನೈ ವಿರುದ್ಧವೂ ಗೆದ್ದು ಬೀಗುವ ಕಾನ್ಫಿಡೆನ್ಸ್​ನಲ್ಲಿದ್ದಾರೆ. ಅಭಿಮಾನಿಗಳ ಮನದಲ್ಲೂ ಈ ಸಲ ಆರ್​ಸಿಬಿ ಪುರುಷ ತಂಡ ಕೂಡ ಕಪ್ ಗೆಲ್ಲಲಿದೆ ಎಂಬ ಭರವಸೆ ಮೂಡಿದೆ. ಯಾಕಂದ್ರೆ ಈ ಬಾರಿ ಡಬ್ಲ್ಯುಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ ಆರ್​ಸಿಬಿ ಮಹಿಳಾ ತಂಡ ಹಾಗೂ ಪುರುಷ ತಂಡಗಳ ಲೀಗ್ ಜರ್ನಿಯ ನಡುವೆ ವಿಶೇಷ ಕಾಕತಾಳೀಯ ಘಟನೆಗಳು ನಡೆದಿವೆ.

RCBಗೆ ಸಿಗುತ್ತಾ ಡಬಲ್ ಟ್ರೋಫಿ?

2023ರಿಂದ ಶುರುವಾಗಿದ್ದ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿತ್ತು. ಎರಡನೇ ಆವೃತ್ತಿ ಅಂದ್ರೆ 2024ರ ಸೀಸನ್​ನಲ್ಲಿ ಆರ್​ಸಿಬಿ ಮಹಿಳಾ ಟೀಂ ಟೈಟಲ್ ಮುಡಿಗೇರಿಸಿಕೊಂಡಿತ್ತು. ವಿಷ್ಯ ಅಂದ್ರೆ ಎರಡನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಕೂಡ ಈಗ ನಡೆಯುತ್ತಿರುವ ಐಪಿಎಲ್​ನಂತೆ ರಣ ರೋಚಕವಾಗಿತ್ತು. ಡಬ್ಲ್ಯುಪಿಎಲ್‌ನಲ್ಲೂ, ಆರ್‌ಸಿಬಿ ಮಹಿಳಾ ತಂಡ ಕೂಡ ಲೀಗ್​ ಹಂತದಲ್ಲೇ ಹೊರಬೀಳುವ ಆತಂಕದಲ್ಲಿತ್ತು. ಆದರೆ ಆರ್‌ಸಿಬಿ ಮಹಿಳಾ ಆಟಗಾರ್ತಿಯರು ಅತ್ಯದ್ಬುತ ಕಮ್​ಬ್ಯಾಕ್ ಮಾಡಿದ್ರು. ವಾಸ್ತವವಾಗಿ ಡಬ್ಲ್ಯುಪಿಎಲ್‌ನ 17ನೇ ಪಂದ್ಯದಲ್ಲಿ ಆರ್‌ಸಿಬಿ ಮಹಿಳಾ ತಂಡ ಕೂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಂದು ರನ್‌ನಿಂದ ಸೋತಿತ್ತು. ಈ ಮ್ಯಾಚ್ ಬಳಿಕ ಸ್ಮೃತಿ ಮಂದಾನ ಪಡೆ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಿಲ್ಲ ಎಂದೇ ಹೇಳಲಾಗಿತ್ತು. ಇದಾದ ನಂತರ ಮತ್ತೆ ಗೆಲುವಿನ ಲಯಕ್ಕೆ ಮರಳಿದ ಆರ್​ಸಿಬಿ ಮಹಿಳಾ ಪಡೆ ಹಿಂತಿರುಗಿ ನೋಡಲೇ ಇಲ್ಲ. ಟ್ರೋಫಿ ಗೆಲ್ಲುವವರೆಗೂ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡಿತು.

ಇದೀಗ ಆರ್‌ಸಿಬಿ ಪುರುಷರ ತಂಡದಲ್ಲೂ ಇದೇ ರೀತಿ ಕಂಡು ಬರುತ್ತಿದೆ. ಪುರುಷರ ಟೀಮ್ ಕೂಡ ಈ ಸೀಸನ್​ನ ಎರಡನೇ ಪಂದ್ಯದಲ್ಲಿ ಗೆದ್ದಿದ್ದು ಬಿಟ್ಟರೆ, ಉಳಿದ ಆರು ಪಂದ್ಯಗಳಲ್ಲಿ ಸತತ ಸೋಲುಕಂಡಿತ್ತು. ಹಾಗೇ ಐಪಿಎಲ್​ನ 36ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕೊನೆಯ ಸೋಲು ಕಂಡಿದ್ದ ಆರ್​ಸಿಬಿ ಅಲ್ಲಿಂದ ಸತತ 5 ಪಂದ್ಯಗಳನ್ನು ಗೆದ್ದಿದೆ. ಅಚ್ಚರಿಯೆಂದರೆ ಆರ್​ಸಿಬಿ ಪುರುಷರ ತಂಡ ಕೂಡ ಮಹಿಳಾ ತಂಡದಂತೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಒಂದು ರನ್‌ನಿಂದ ಸೋತಿತ್ತು. ಆದರೆ ಆ 1 ರನ್​ಗಳ ಸೋಲಿನ ನಂತರ ಆರ್​ಸಿಬಿ ಸತತವಾಗಿ ಪಂದ್ಯಗಳನ್ನು ಗೆಲ್ಲುತ್ತಾ ಬರುತ್ತಿದೆ. ಕೆಕೆಆರ್ ವಿರುದ್ಧದ ಸೋಲಿನ ನಂತರ, ಬೆಂಗಳೂರು ಸತತ 5 ಪಂದ್ಯಗಳನ್ನು ಗೆದ್ದಿದೆ. ಈ ಕಾಕತಾಳೀಯ ಸಾಕಷ್ಟು ವಿಶೇಷವಾಗಿದೆ. ಹೀಗಾಗಿ ಆರ್‌ಸಿಬಿ ಪುರುಷರ ತಂಡ ಕೂಡ ಮಹಿಳಾ ತಂಡದಂತೆ ಟ್ರೋಫಿ ಗೆಲ್ಲುವವರೆಗೂ ತನ್ನ ಅಜೇಯ ಓಟವನ್ನು ಮುಂದುವರೆಸಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ.

ಸದ್ಯ ಆರ್​ಸಿಬಿಗೆ ಮೇ 18ರಂದು ನಡೆಯಲಿರುವ ಚೆನ್ನೈ ವಿರುದ್ಧದ ಪಂದ್ಯವೇ ನಿರ್ಣಾಯಕವಾಗಿದೆ. ಅದ್ರಲ್ಲೂ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ತವರಿನಲ್ಲೇ ಆಡುತ್ತಿದೆ. ಪ್ಲೇ ಆಫ್‌​ಆಸೆಯನ್ನು ಜೀವಂತವಾಗಿಟ್ಟುಕೊಂಡಿರುವ ಆರ್‌ಸಿಬಿ ಚೆನ್ನೈ ಎದುರು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇದ್ರ ನಡುವೆ ಆರ್‌ಸಿಬಿ ವಿಕೆಟ್‌ ಕೀಪರ್‌ ಅಂಡ್‌ ಬ್ಯಾಟರ್‌ ಅನುಜ್ ರಾವತ್, ಸ್ಪಿನ್ನರ್‌ ಕರಣ್‌ ಶರ್ಮಾ, ಆಲ್‌ರೌಂಡರ್‌ ಸ್ವಪ್ನಿಲ್ ಸಿಂಗ್ ಮತ್ತು ತಂಡದ ಸಹಾಯಕ ಸಿಬ್ಬಂದಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಒಟ್ನಲ್ಲಿ ಹೆಣ್ಮಕ್ಕಳೇನೋ ಸೀಸನ್ 2ನಲ್ಲೇ ಬೆಂಗಳೂರಿಗೆ ಕಪ್ ತಂದು ಕೊಟ್ಟಿದ್ದಾರೆ. ಹುಡುಗ್ರೂ ಕೂಡ 16 ವರ್ಷದಿಂದ ಅದೊಂದು ಕಿರೀಟಕ್ಕಾಗಿ ಪೈಪೋಟಿ ನೀಡುತ್ತಲೇ ಇದ್ದಾರೆ. ಡೇ ಒನ್​ನಿಂದ ಆರ್​ಸಿಬಿಯಲ್ಲೇ ಆಡ್ತಿರೋ ಕಿಂಗ್ ಕೊಹ್ಲಿಗಂತೂ ಚಾಂಪಿಯನ್ ಆಗಿ ಆರ್​ಸಿಬಿಯನ್ನ ನೋಡೋ ಮಹದಾಸೆ ಇದೆ. ಈ ಸಲ ಪ್ಲೇ ಆಫ್​ಗೆ ಹೋಗೋ ಚಾನ್ಸ್ ಇರೋದ್ರಿಂದ ಅದೊಂದು ಪಂದ್ಯ ಗೆದ್ದರೆ ನಮ್ಮ ತಂಡವನ್ನ ಯಾರೂ ತಡೆಯೋರೇ ಇಲ್ಲ ಅನ್ನೋ ನಿರೀಕ್ಷೆಯಲ್ಲಿದ್ದಾರೆ. ಹೆಣ್ಮಕ್ಕಳಂತೆ ಪುರುಷರ ಟೀಂ ಕೂಡ 2024ರ ಐಪಿಎಲ್ ಟ್ರೋಫಿಯನ್ನ ಗೆಲ್ಲಲಿ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ.

Shwetha M