RCB ಹಿಂದಿ ಹೇರಿಕೆ ಮಾಡ್ತಿದ್ಯಾ? – ಸಚಿವರ ವಾರ್ನ್.. ಪಂದ್ಯಗಳು ಬ್ಯಾನ್
ಕನ್ನಡಪರ ಹೋರಾಟಗಾರರ ಸವಾಲೇನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ಗೆ ಅಭಿಮಾನಿಗಳು ಎಷ್ಟು ಸಪೋರ್ಟ್ ಮಾಡ್ತಾರೋ ಫ್ರಾಂಚೈಸಿ ಮಾಲೀಕರನ್ನ ಅಷ್ಟೇ ಟ್ರೋಲ್ ಮಾಡ್ತಾರೆ. ಅವ್ರು ತಗೊಳ್ಳೋ ಕೆಲ ನಿರ್ಧಾರಗಳೇ ಹಾಗಿರುತ್ತೆ. ಐಪಿಎಲ್ ಆಕ್ಷನ್ನಲ್ಲಿ ಕೆಎಲ್ ರಾಹುಲ್ ಹಾಗೇ ಸ್ಟಾರ್ ಆಟಗಾರರನ್ನ ಕೈಬಿಟ್ರು ಅಂತಾ ಸಿಟ್ಟಾಗಿದ್ದ ಫ್ಯಾನ್ಸ್ ಟೀಂ ಫೈನಲ್ ಆದ್ಮೇಲೆ ಕೊಂಚ ಸಮಾಧಾನಗೊಂಡಿದ್ರು. ಬಟ್ ಈಗ ಇರಲಾರದೇ ಇರುವೆ ಬಿಟ್ಕೊಂಡ್ರು ಅನ್ನೋ ಹಾಗೇ ಹಿಂದಿ ಅಕೌಂಟ್ ಓಪನ್ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡಪರ ಸಂಘಟನೆಗಳ ಜೊತೆಗೆ ಸಚಿವರೇ ಸಿಟ್ಟಾಗಿದ್ದಾರೆ. ಆರ್ಸಿಬಿ ಮ್ಯಾನೇಜ್ಮೆಂಟ್ ಮಾಡಿಕೊಂಡ ಎಡವಟ್ಟು ಏನು? ಕನ್ನಡಿಗರು ತಿರುಗಿಬಿದ್ದಿದ್ದೇಕೆ? ಸಚಿವರು ಕೊಟ್ಟ ವಾರ್ನಿಂಗ್ ಏನು? ಈ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: RCBಗೆ ಪಂಚ ಶಕ್ತಿ.. ಸಾಲ್ಟ್ & ಸ್ಟೋನ್ ಬೆಂಕಿ ಬ್ಯಾಟಿಂಗ್ – ಬೌಲಿಂಗ್ ಅಸ್ತ್ರ ಕಪ್ ಗೆಲ್ಲಿಸುತ್ತಾ?
ಆರ್ಸಿಬಿಯಲ್ಲಿ ಕನ್ನಡಿಗರಿಗೆ ಚಾನ್ಸ್ ಕೊಡಲ್ಲ ಅನ್ನೋ ಅಪವಾದ ಮೊದ್ಲಿಂದಲೂ ಇದೆ. ಇದೀಗ ಕನ್ನಡವನ್ನೇ ಕಡೆಗಣಿಸ್ತಿದೆ ಅನ್ನೋ ಗಂಭೀರ ಆರೋಪವನ್ನ ಹೊತ್ಕೊಂಡಿದೆ. ಅದಕ್ಕೆ ಕಾರಣ ಟ್ವಿಟ್ಟರ್ ಅಕೌಂಟ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಹಿಂದಿ ಭಾಷೆಯಲ್ಲಿ ಎಕ್ಸ್ ಖಾತೆ ಓಪನ್ ಮಾಡಿದೆ. 2025ರ ಮೆಗಾ ಆಕ್ಷನ್ನಲ್ಲಿ ಆರ್ಸಿಬಿ ಫ್ರಾಂಚೈಸಿಯು 19 ಆಟಗಾರರನ್ನು ಖರೀದಿ ಮಾಡಿತ್ತು. ಈ ಸಂಬಂಧ ಹೊಸ ಆಟಗಾರರು ಇರುವ ಫೋಟೋವನ್ನು ಹಿಂದಿಯಲ್ಲಿರುವ ಹೊಸ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಬಟ್ ಹಿಂದಿಯಲ್ಲಿ ಖಾತೆ ತೆರೆದಿರೋದಕ್ಕೆ ಅಭಿಮಾನಿಗಳು ಹಾಗೇ ಕೆಲ ಕನ್ನಡ ಪರ ಹೋರಾಟಗಾರರು ತಿರುಗಿ ಬಿದ್ದಿದ್ದಾರೆ. ಹಿಂದಿ ಪೇಜ್ ಡಿಲೀಟ್ ಮಾಡಬೇಕು ಅಂತಾ ಪಟ್ಟು ಹಿಡ್ದಿದ್ದಾರೆ.
ಐಪಿಎಲ್ ಸೀಸನ್ ಆರಂಭವಾಗಿ 17 ವರ್ಷ ಕಳೀತು. 2008ರಿಂದ ಈ ವರೆಗೆ ಸುಮ್ಮನಿದ್ದ ಬೆಂಗಳೂರು ಫ್ರಾಂಚೈಸಿ ಈಗ ಹೊಸ ವಿವಾದವನ್ನ ಮೈಮೇಲೆ ಎಳೆದುಕೊಂಡಿದೆ. ಹಿಂದಿಯಲ್ಲಿ ಟ್ವಿಟ್ಟರ್ ಖಾತೆ ಓಪನ್ ಮಾಡಿ ಪೋಸ್ಟ್ಗಳನ್ನ ಹಾಕಿಕೊಂಡಿದೆ. ಇದೇ ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. 2008 ರಿಂದ ಐಪಿಎಲ್ ಟ್ರೋಫಿಯನ್ನು ಗೆಲ್ಲದಿದ್ದರೂ ಫ್ಯಾನ್ಸ್ ಪ್ರಾಣ ಕೊಡೋ ಮಟ್ಟಕ್ಕೆ ಸಪೋರ್ಟ್ ಮಾಡ್ತಿದ್ದಾರೆ. ಆದ್ರೂ ತನ್ನ ನಿರ್ಧಾರಗಳಿಂದ ಪದೇಪದೆ ಟೀಕೆಗಳಿಗೆ ಗುರಿಯಾಗ್ತಿದೆ. ಮೊದಲೇ ಹರಾಜಿನಲ್ಲಿ ಆಟಗಾರರ ಆಯ್ಕೆಯ ಬಗ್ಗೆ ಸಿಟ್ಟಾಗಿದ್ದ ಫ್ಯಾನ್ಸ್ ಆರ್ಸಿಬಿ ಹಿಂದಿ ಹೇರಿಕೆಯ ವಿರುದ್ಧ ಸಿಡಿದೆದ್ದಿದ್ದಾರೆ.
ಮೂರು ಭಾಷೆಗಳ ಟ್ವಿಟ್ಟರ್ ಅಕೌಂಟ್ ಅಗತ್ಯ ಇತ್ತಾ?
ಐಪಿಎಲ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವಂತ ಆರ್ಸಿಬಿ, ಹಿಂದಿಗಿಂತ ಕನ್ನಡಕ್ಕೆ ಆದ್ಯತೆ ನೀಡಬೇಕು. ಬಟ್ ಈಗ ಹಿಂದಿಯಲ್ಲಿ ಅಕೌಂಟ್ ಓಪನ್ ಮಾಡಿರೋದ್ರಿಂದ ಹಿಂದಿ ಉತ್ತೇನಜದ ಹುನ್ನಾರ ಅಂತಾ ಅಭಿಮಾನಿಗಳು ಕಿಡಿ ಕಾರಿದ್ದಾರೆ. ಕನ್ನಡದಲ್ಲಿ ಅಕೌಂಟ್ ಇದ್ರೂ ಕೂಡ ಇದು ನೆಪಮಾತ್ರಕ್ಕೆ ಎನ್ನುವಂತಿದೆ. ಇವೆರಡಕ್ಕಿಂತ ಮೊದಲು ಇಂಗ್ಲೀಷ್ ಖಾತೆ ಇತ್ತು. ಹೀಗಾಗಿ, ಮೂರು ಪ್ರತ್ಯೇಕ ಖಾತೆ ನಿರ್ವಹಿಸುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಉಳಿದ ಐಪಿಎಲ್ ತಂಡಗಳು ಒಂದೇ ಖಾತೆಯಲ್ಲಿ ನಿರ್ವಹಿಸುತ್ತಿವೆ. ಬೆಂಗಳೂರು ಫುಟ್ಬಾಲ್ ಮತ್ತು ಬೆಂಗಳೂರು ಬುಲ್ಸ್ ಕಬಡ್ಡಿಯಂತಹ ಬೆಂಗಳೂರು ಮೂಲದ ಫ್ರಾಂಚೈಸಿಗಳನ್ನ ನೋಡಿ ಕಲಿಯಿರಿ ಎಂದು ಟಆಂಗ್ ಕೊಟ್ಟಿದ್ದಾರೆ.
ಕನ್ನಡಿಗರ ಪ್ರೀತಿಗೆ ಬೆಲೆ ಕೊಡಿ ಎಂದ ಎಂದ ರೂಪೇಶ್ ರಾಜಣ್ಣ!
ಆರ್ಸಿಬಿ ಹಿಂದಿ ಹೇರಿಕೆಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿದ್ದು, ನಿಮಗೆ ಬೆಂಬಲ ಕೊಡುತ್ತಿರುವುದು ಬೆಂಗಳೂರು ಎನ್ನುವ ಹೆಸರಿಗೆ. ನಮ್ಮ ತಂಡ ಎಂದು ಪ್ರಾಣ ಕೊಟ್ಟು ಪ್ರೀತಿಸೋ ಕನ್ನಡಿಗರ ಪ್ರೀತಿಯನ್ನು ದುರುಪಯೋಗ ಪಡಿಸಿಕೊಳ್ಳಬೇಡಿ. ನಿಮ್ಮ ಐಪಿಎಲ್ ಕಪ್ ಹಾಗೂ ಆರ್ಸಿಬಿಗಿಂತಲೂ ನಮಗೆ, ನಮ್ಮ ಕನ್ನಡ, ಕನ್ನಡ ನೆಲದ ಸ್ವಾಭಿಮಾನವೇ ಹೆಚ್ಚು. ತಕ್ಷಣ ಅದನ್ನು ತೆಗೆದು ಹಾಕಿ ಎಂದು ಬರೆದುಕೊಂಡಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ ಆಟಗಾರರನ್ನು ಖರೀದಿಸಲು ಮುಂದಾಗದ ಆರ್ಸಿಬಿ ಫ್ರಾಂಚೈಸಿಗೆ ಕನ್ನಡಿಗರು ಹಿಡಿ ಶಾಪ ಹಾಕುತ್ತಿದ್ದಾರೆ. ಮೊದಲೇ ಕನ್ನಡಿಗರನ್ನು ಖರೀದಿಸದಿದ್ದಕ್ಕೆ ಸಿಟ್ಟಾಗಿದ್ದ ಕನ್ನಡಿಗರು ಇದೀಗ ಹಿಂದಿ ಎಕ್ಸ್ ಖಾತೆಯನ್ನು ಡಿಲೀಟ್ ಮಾಡದಿದ್ದರೆ, ಬೆಂಗಳೂರಿನಲ್ಲಿ ಆರ್ಸಿಬಿ ಪಂದ್ಯಗಳು ನಡೆಯುವುದಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕರವೇ ಬಣ!
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಕೂಡ ಹಿಂದಿ ಖಾತೆ ತೆರೆದಿರೋ ಮ್ಯಾನೇಜ್ಮೆಂಟ್ ನಡೆಯನ್ನ ಖಂಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ನಾರಾಯಣ ಗೌಡ, ” ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗಿಲ್ಲ ಎಂದಿದ್ದಾರೆ. ಹಾಗೇ ತಂಡದಲ್ಲಿ ಇತರ ರಾಜ್ಯಗಳ ಆಟಗಾರರಿದ್ದಾರೆ ಎಂಬ ಕಾರಣಕ್ಕೆ, ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ ಎಂಬ ಕಾರಣಕ್ಕೆ ಹಿಂದಿಯಲ್ಲಿ ಪುಟ ತೆರೆದಿರುವುದಾದರೆ, ದೇಶದ ಎಲ್ಲ ಭಾಷೆಗಳಲ್ಲೂ ಪುಟ ತೆರೆಯಬೇಕಿತ್ತು. ಹಿಂದಿಯಲ್ಲಿ ಮಾತ್ರ ಯಾಕೆ ತೆರೆದರು ಎಂದು ಪ್ರಶ್ನೆ ಮಾಡಿದ್ದಾರೆ. ಈ ಕೂಡಲೇ ಪೇಜ್ ಡಿಲೀಟ್ ಮಾಡದಿದ್ದಕ್ಕೆ ಉಗ್ರ ಹೋರಾಟ ನಡೆಸೋದಾಗಿ ಎಚ್ಚರಿಕೆ ನಿಡಿದ್ದಾರೆ.
ತಪ್ಪು ತಿದ್ದಿಕೊಳ್ಳದಿದ್ದರೆ ನೋಟಿಸ್ ನೀಡುತ್ತೇವೆಂದ ಸಚಿವ ತಂಗಡಗಿ!
ಆರ್ ಸಿಬಿ ಹಿಂದಿ ಖಾತೆ ತೆರೆದಿರೋ ಬಗ್ಗೆ ಸಚಿವ ಶಿವರಾಜ್ ತಂಗಡಗಿ ರಿಯಾಕ್ಟ್ ಮಾಡಿದ್ದಾರೆ. ಆರ್ಸಿಬಿ ಮೇಲೆ ಕರ್ನಾಟಕ ಜನರಿಗೆ ವಿಶೇಷ ಗೌರವ ಇದೆ. ಆರ್ಸಿಬಿ ಅಂದರೆ ಕರ್ನಾಟಕ ತಂಡ, ಬೆಂಗಳೂರು ತಂಡ ಎನ್ನುವ ಭಾವನೆ ಇದೆ. ನಿಮ್ಮಲ್ಲಿ ವಿನಂತಿಸುವುದು ಏನೆಂದರೆ, ಕನ್ನಡದ ಮನಸ್ಸುಗಳಿಗೆ ನೋವು ಮಾಡದಂತೆ ನೋಡಿಕೊಳ್ಳಿ. ಇಂಗ್ಲಿಷ್ ಪುಟದ ಹಿಂದಿ ಪೇಜ್ ತೆರೆದಿರುವುದೇಕೆ? ಕನ್ನಡದ ಮನಸ್ಸುಗಳನ್ನು ಗೆಲ್ಲಿ. ಇಲ್ಲದಿದ್ದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೋಟಿಸ್ ನೀಡುತ್ತೇನೆ ಎಂದು ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.
ಮ್ಯಾನೇಜ್ಮೆಂಟ್ ವಿರುದ್ಧ ತಿರುಗಿ ಬಿದ್ದಿರೋ ಅಭಿಮಾನಿಗಳು ಹಿಂದಿ ಪುಟವನ್ನು ಕೂಡಲೇ ಮುಚ್ಚುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ. ಹಿಂದಿ ಹೇರಿಕೆ ಸಲ್ಲದು, ಖಾತೆ ರದ್ದುಪಡಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ. ಕನ್ನಡ ಭಾಷಿಕರನ್ನು ಗೌರವಿಸುವತ್ತ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ. ಆದ್ರೆ ಫ್ರಾಂಚೈಸಿ ಕಡೆಯಿಂದ ಯಾವುದೇ ಸ್ಪಷ್ಟನೆ ಹೊರಬಂದಿಲ್ಲ. ಇದರಿಂದ ಇನ್ನಷ್ಟು ಕೆರಳಿರುವ ಕನ್ನಡ ಪರ ಸಂಘಟನೆಗಳು, ಆರ್ಸಿಬಿ ಫ್ರಾಂಚೈಸಿಯ ಈ ನಡೆಯನ್ನು ವಿರೋಧಿಸಿದ್ದು, ಕೂಡಲೇ ಆರ್ಸಿಬಿ ಹಿಂದಿ ಖಾತೆಯನ್ನು ತೆಗೆಯುವಂತೆ ಎಚ್ಚರಿಕೆ ನೀಡಿವೆ. ಒಂದು ವೇಳೆ ಆರ್ಸಿಬಿ ಹಿಂದಿ ಖಾತೆಯನ್ನು ಡಿಲೀಟ್ ಮಾಡದಿದ್ದರೆ, ಮ್ಯಾಚ್ ನಡೆಯುವ ವೇಳೆ ಆಟಕ್ಕೆ ತೊಂದರೆ ನೀಡುವುದಾಗಿ ವಾರ್ನ್ ಮಾಡಿದ್ದಾರೆ. ಕನ್ನಡಿಗರ ಒತ್ತಾಯಕ್ಕೆ ಮಣಿದು ಆರ್ಸಿಬಿ ಹಿಂದಿ ಖಾತೆಯನ್ನು ಡಿಲೀಟ್ ಮಾಡುತ್ತದಾ ಅಥವಾ ತನ್ನ ಧೋರಣೆಯನ್ನು ಹೀಗೆಯೇ ಮುಂದುವರೆಸುತ್ತಾ ಕಾದು ನೋಡಬೇಕು.