ಕೊಹ್ಲಿಯಂತಿದ್ದ ರವಿ ಇನ್ನಿಲ್ಲ! ಮಗನ ಅಂಗಾಂಗ ದಾನದ ಮೂಲಕ ಹೆತ್ತವರ ಮಾನವೀಯತೆ!

ನೋಡಲು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯಂತೆಯೇ ಇದ್ದ ಯುವಕನೊಬ್ಬನ ಸಾವು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ದುಃಖ ಮೂಡಿಸಿದೆ. ಅಷ್ಟೇ ಅಲ್ಲ, ಮಗನ ಸಾವಿನ ನೋವಿನ ನಡುವೆಯೂ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಚಾಕೇನಹಳ್ಳಿ ಕಟ್ಟೆ ಗ್ರಾಮದ 31 ವರ್ಷದ ರವಿ ಮೃತಪಟ್ಟ ಯುವಕ. ರವಿ ವಿಪ್ರೋ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ರೂಪದಿಂದಾಗಿ ಅವರು ವಿರಾಟ್ ಕೊಹ್ಲಿಯನ್ನು ಹೋಲುತ್ತಿದ್ದರು.
ಇದನ್ನೂ ಓದಿ: ಎಕ್ಸಾಂ ಬರೆದು ಮನೆಗೆ ಬರುತ್ತಿದ್ದ ವಿದ್ಯಾರ್ಥಿಯ ಜೀವ ತೆಗೆದ ಗಾಳಿಪಟದ ದಾರ!
ಚಿಕ್ಕ ವಯಸ್ಸಿನಲ್ಲೇ ಕೈತುಂಬ ಸಂಬಳದ ಉದ್ಯೋಗದಲ್ಲಿದ್ದು, ಕುಟುಂಬದ ಭರವಸೆಯಾಗಿದ್ದ ರವಿ ಅವರ ಅಕಾಲಿಕ ಸಾವು ಮನೆಯವರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. ಮಗನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಆತನನ್ನು ನಂಬಿಕೊಂಡಿದ್ದ ಕುಟುಂಬದ ಕನಸುಗಳು ಕಮರಿರುವುದು ಮತ್ತೊಂದೆಡೆಯಾಗಿದೆ.
ಆದರೆ, ಇಂತಹ ದುಃಖದ ಸಮಯದಲ್ಲಿಯೂ ರವಿ ಅವರ ಕುಟುಂಬ ತೆಗೆದುಕೊಂಡ ನಿರ್ಧಾರ ಅನೇಕರಿಗೆ ಮಾದರಿಯಾಗಿದೆ. ರವಿ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ, ಅಗತ್ಯವಿರುವ ಇತರ ರೋಗಿಗಳಿಗೆ ಹೊಸ ಬದುಕು ನೀಡುವ ಮಹತ್ವದ ನಿರ್ಧಾರವನ್ನು ಕುಟುಂಬಸ್ಥರು ಕೈಗೊಂಡಿದ್ದಾರೆ.
ಒಬ್ಬ ವ್ಯಕ್ತಿಯ ಬದುಕು ಅಂತ್ಯಗೊಂಡರೂ, ಅವರ ಅಂಗಾಂಗಗಳ ಮೂಲಕ ಮತ್ತೊಬ್ಬರ ಬದುಕಿನಲ್ಲಿ ಬೆಳಕು ಮೂಡಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ರವಿ ಅವರ ಅಗಲಿಕೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಅವರ ಅಂಗಾಂಗ ದಾನದ ನಿರ್ಧಾರ ನಿಜಕ್ಕೂ ಸಾರ್ಥಕ ಮಾನವೀಯ ಕಾರ್ಯವಾಗಿದೆ.

ನೋಡಿರಿ

