ಕಳೆದ 6 ತಿಂಗಳಿಂದ ಪಡಿತರ ತೆಗೆದುಕೊಳ್ಳದ ರೇಷನ್‌ ಕಾರ್ಡ್‌ಗಳು ರದ್ದು!

ಕಳೆದ 6 ತಿಂಗಳಿಂದ ಪಡಿತರ ತೆಗೆದುಕೊಳ್ಳದ ರೇಷನ್‌ ಕಾರ್ಡ್‌ಗಳು ರದ್ದು!

ಬೆಂಗಳೂರು: ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿಯೊಂದಿದೆ. ಕಳೆದ 6 ತಿಂಗಳಿಂದ ಪಡಿತರ ತೆಗೆದುಕೊಳ್ಳದವರ ಪಡಿತರ ಚೀಟಿಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಆದ್ಯತಾ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಪಡಿತರ ಚೀಟಿ ನೀಡಲು ಈಗ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಲು ಸರಕಾರ ನಾನಾ ಸರ್ಕಸ್‌ ನಡೆಸುತ್ತಿದೆ. ಈಗಾಗಲೇ ಪಡಿತರ ಚೀಟಿಗಳಲ್ಲಿದ್ದ ಮೃತಪಟ್ಟವರ ಹೆಸರನ್ನು ಡಿಲೀಟ್‌ ಮಾಡಲಾಗುತ್ತಿದೆ.  ಈ ಬೆನ್ನಲ್ಲೇ 6 ತಿಂಗಳಿಂದ ಪಡಿತರ ತೆಗೆದುಕೊಳ್ಳದವರ ಪಡಿತರ ಚೀಟಿಗಳನ್ನು ರದ್ದು ಮಾಡಲು ಸರ್ಕಾರ ಮಂದಾಗಿದೆ. ಮೊದಲ ಹಂತದಲ್ಲಿಈಗಾಗಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಪಡಿತರ ಚೀಟಿಗಳಲ್ಲಿದ ಮೃತಪಟ್ಟವರ ಸುಮಾರು 13,915 ಹೆಸರನ್ನು ತೆಗೆದು ಹಾಕಲಾಗಿದೆ. ಈ ಮೂಲಕ ಹೊಸಬರಿಗೆ ಪಡಿತರ ಕಾರ್ಡ್‌ ನೀಡಲು ಅವಕಾಶ ಮಾಡಿಕೊಂಡಿದೆ. ಇದರ ಜೊತೆಗೆ ಈಗ ರೇಷನ್‌ ಪಡೆಯದೇ ಇರುವವರ ಕಾರ್ಡ್‌ಗಳನ್ನು ರದ್ದು ಪಡಿಸಿದರೆ ಅವಶ್ಯಕತೆ ಇರುವ ಸಾಕಷ್ಟು ಮಂದಿ ಅರ್ಜಿದಾರರಿಗೆ ಪಡಿತರ ಕಾರ್ಡ್‌ ಕೊಡಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ:  ಸಿ.ಎಂ ಇಬ್ರಾಹಿಂ ಉಚ್ಛಾಟನೆ ಹಿಂದಿದೆ ‘ರೆಬೆಲ್’ ರಾಜಕೀಯ – ಪುತ್ರನಿಗೆ ದೊಡ್ಡಗೌಡ್ರು ರಾಜ್ಯಾಧ್ಯಕ್ಷ ಪಟ್ಟ ಕಟ್ಟಿದ್ದರ ಗುಟ್ಟೇನು?

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಒಟ್ಟು 3,27,109 ಕುಟುಂಬಗಳು ಪಡಿತರ ಚೀಟಿ ಹೊಂದಿದ್ದು, 10.90 ಲಕ್ಷಕ್ಕೂ ಹೆಚ್ಚು ಮಂದಿ ಫಲಾನುಭವಿಗಳಿದ್ದಾರೆ. ಸದ್ಯ ಜಿಲ್ಲೆಯಲ್ಲಿ6992 ಮಂದಿ ಪಡಿತರ ಚೀಟಿದಾರರು ಕಳೆದ 6 ತಿಂಗಳಿಂದ ರೇಷನ್‌ ಪಡೆದಿಲ್ಲ. ಸದ್ಯ ಇಷ್ಟು ಜನರ ಪಡಿತರ ಕಾರ್ಡ್‌ನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದ್ದು, ಎಲ್ಲ ಜಿಲ್ಲೆಗಳ ಆಹಾರ ಇಲಾಖೆ ಸುತ್ತೊಲೆಯನ್ನು ಕಳುಹಿಸಿದೆ.

ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ940 ಮಂದಿ, ಬಾಗೇಪಲ್ಲಿಯಲ್ಲಿ1209, ಚಿಂತಾಮಣಿ ತಾಲೂಕಿನಲ್ಲಿ1598, ಗೌರಿಬಿದನೂರು ತಾಲೂಕಿನಲ್ಲಿ1895, ಗುಡಿಬಂಡೆ ತಾಲೂಕಿನಲ್ಲಿ299 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ1051 ಒಟ್ಟು ಜಿಲ್ಲಾದ್ಯಂತ 6992 ಮಂದಿ ಪಡಿತರ ಚೀಟಿದಾರರು ಕಳೆದ 6 ತಿಂಗಳಿಂದ ಪಡಿತರ ಅಂಗಡಿಗಳಿಂದ ರೇಷನ್‌ ಪಡೆದಿಲ್ಲ. ಹೀಗಾಗಿ ಅವರಿಗೆ ಪಡಿತರ ಚೀಟಿಯ ಅವಶ್ಯಕತೆ ಇಲ್ಲ ಎಂದು ಭಾವಿಸಿ ರದ್ದು ಒಡಿಸುವ ನಿರ್ಧಾರಕ್ಕೆ ಬರಲಾಗಿದೆ.

ಹೊಸದಾಗಿ ಆದ್ಯತಾ ಪಡಿತರ ಚೀಟಿ ಅರ್ಜಿಗಳ ವಿಲೇವಾರಿ ಮಾಡುವಾಗ 2023ರ ಜುಲೈ ತಿಂಗಳ ಅಂತ್ಯಕ್ಕೆ ಜಿಲ್ಲೆಯಲ್ಲಿ ಚಾಲ್ತಿಯಲ್ಲಿದ್ದ ಆದ್ಯತಾ ಪಡಿತರ ಚೀಟಿಗಳ ಸಂಖ್ಯೆಯನ್ನು ಮೀರುವಂತಿಲ್ಲ. ಈಗಾಗಲೇ ಸಲ್ಲಿಸಲಾಗಿರುವ ಅರ್ಜಿಗಳ ಸ್ಥಳ ಪರಿಶೀಲನೆಯನ್ನು ಕಟ್ಟು ನಿಟ್ಟಾಗಿ ಮಾಡಿ ಸರಕಾರದ ಮಾನದಂಡಗಳನ್ವಯ ಅರ್ಹ ಅರ್ಜಿದಾರರಿಗೆ ಮಾತ್ರ ಆದ್ಯತಾ ಪಡಿತರ ಚೀಟಿ ವಿತರಿಸಲು ಸೂಚನೆ ನೀಡಲಾಗಿದೆ.

Shwetha M