ರೇಷನ್ ಕಾರ್ಡ್ E-KYCಗೆ ಬಂತು ಆ್ಯಪ್ – ಮೊಬೈಲ್‌ನಲ್ಲೇ ಮಾಡಿ ಇ-ಕೆವೈಸಿ

ರೇಷನ್ ಕಾರ್ಡ್ ಇ-ಕೆವೈಸಿ ಮಾಡೋಕೆ ಜನ ಸಾಲಲ್ಲಿ ನಿಂತು ನಿಂತು ಸುಸ್ತು ಆಗಿದ್ರು. ಬೆಂಗಳೂರಿನಲ್ಲಿ ಕೆಲಸ ಮಾಡೋರು ರಜೆ ಹಾಕಿ ಊರಿಗೆ ಹೋಗಿ ರೇಷನ್ ಕಾರ್ಡ್ ಕೆವೈಸಿ ಮಾಡೋಕೆ ಹೆಣಗಾಡಿದ್ರು. ಆದ್ರೆ ಸರ್ವರ್ ಡೌನ್‌ನಿಂದ ಆ ಕೆಲಸ ಆಗದೇ ಜನ ಬೆಸತ್ತು ಹೋಗಿದ್ರು. ಆದ್ರೆ ಈಗ ಸರ್ಕಾರ ಜನರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಕರ್ನಾಟಕ ಆಹಾರ ಇಲಾಖೆ ಹೊಸ ಮೊಬೈಲ್ ಆ್ಯಪ್ ವ್ಯವಸ್ಥೆಯನ್ನು ಪರಿಚಯಿಸಿದೆ. ಬೆಂಗಳೂರಿನ ಶಿವಾಜಿನಗರದ ಬ್ರಾಡ್‌ವೇನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹಾರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಅವರು ಈ ಹೊಸ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ .
ಸದ್ಯಕ್ಕೆ ಈ ಅನ್ನ ಸೇವೆ ಆ್ಯಪ್ನನ್ನು ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್, ಕೊಪ್ಪಳ ಜಿಲ್ಲೆಗಳ ಜನರಿಗೆ ಆ್ಯಪ್ ಬಿಡುಗಡೆ ಮಾಡಲಾಗಿದೆ. ಈ ಎಂಟು ಜಿಲ್ಲೆಗಳ ಜನರಿಗೆ ಇ ಕೆವೈಸಿ ಮಾಡಲು ಅನುಕೂಲವಾಗಲಿದ್ದು, ಬಳಿಕ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಣೆ ಮಾಡಲಾಗುತ್ತೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಲೇಜು ವಿದ್ಯಾರ್ಥಿಗಳ ನಡುವೆ ಭೀಕರ ಫೈಟ್! – ನಾಗರಬಾವಿಯಲ್ಲಿ ವಿದ್ಯಾರ್ಥಿ ಕೊ*ಲೆ!
ಇದುವರೆಗೆ ಬಿಪಿಎಲ್ ಮತ್ತು ಎಪಿಎಲ್ ಸೇರಿದಂತೆ ಪಡಿತರ ಚೀಟಿದಾರರು ಇ-ಕೆವೈಸಿಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಬಯೋಮೆಟ್ರಿಕ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿತ್ತು. ಸರ್ವರ್ ಸಮಸ್ಯೆ, ಜನದಟ್ಟಣೆ ಹಾಗೂ ಸಮಯದ ಅಭಾವದಿಂದ ಸಾಕಷ್ಟು ಜನರಿಗೆ ತೊಂದರೆಯಾಗಿತ್ತು.ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲೇ ಮೊಬೈಲ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸುವ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿದೆ. ಅಂದರೆ, ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಕಡಿಮೆಯಾಗಲಿದೆ.
ಅನ್ನ ಸೇವೆ ಆ್ಯಪ್ ಹೇಗೆ ಕೆಲಸ ಮಾಡುತ್ತದೆ?
ಅನ್ನ ಸೇವೆ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
ಆ್ಯಪ್‌ನಲ್ಲಿ ರೇಷನ್ ಕಾರ್ಡ್‌ಗೆ ಸಂಬಂಧಿಸಿದ ವಿವರ ಹಾಕಿ
ಫಲಾನುಭವಿಯ ಆಧಾರ್ ವಿವರಗಳನ್ನು ಪರಿಶೀಲನೆಗೆ ಬಳಸಿ
ಮೊಬೈಲ್‌ನಲ್ಲೇ ಫೇಸ್ ಆಥೆಂಟಿಕೇಷನ್ ಕೇಳುತ್ತೆ, ಅದ್ದನ್ನ ಕೊಡಿ
ಪರಿಶೀಲನೆ ಯಶಸ್ವಿಯಾದ ಬಳಿಕ E-KYC ಪ್ರಕ್ರಿಯೆ ಪೂರ್ಣಗೊಂಡಿರುವ ಮಾಹಿತಿ ಸಿಗುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ‘Mera Ration’ ಅಥವಾ ಬೇರೆ ಬೇರೆ ಆ್ಯಪ್‌ಗಳ ಮೂಲಕ ಇ-ಕೆವೈಸಿ ಮಾಡಿಕೊಳ್ಳಬಹುದು ಎಂಬ ಮಾಹಿತಿಗಳು ಹರಿದಾಡುತ್ತಿವೆ. ಕರ್ನಾಟಕದಲ್ಲಿ ಇಂತಹ ಅನಧಿಕೃತ ಆ್ಯಪ್‌ಗಳ ಮೂಲಕ ಮಾಡಿದ e-KYC ಮಾನ್ಯವಾಗುವುದಿಲ್ಲ ಎಂದು ಆಹಾರ ಇಲಾಖೆ ಈ ಹಿಂದೆ ಸ್ಪಷ್ಟಪಡಿಸಿತ್ತು. ಆದ್ದರಿಂದ ಅಧಿಕೃತ ಸರ್ಕಾರಿ ಆ್ಯಪ್ ಅಥವಾ ಇಲಾಖೆ ನೀಡುವ ಮಾರ್ಗಸೂಚಿಯನ್ನೇ ಅನುಸರಿಸಿ. ಅಲ್ಲದೆ, ಇ-ಕೆವೈಸಿ ಹೆಸರಿನಲ್ಲಿ ಅಪರಿಚಿತ ಲಿಂಕ್‌ಗಳನ್ನು ಕಳುಹಿಸಿ ಸೈಬರ್ ವಂಚನೆ ನಡೆಸುತ್ತಿರುವ ಬಗ್ಗೆ ಕೂಡ ಎಚ್ಚರಿಕೆ ನೀಡಲಾಗಿದೆ. ಯಾವುದೇ OTP, ಬ್ಯಾಂಕ್ ಮಾಹಿತಿ ಅಥವಾ ವೈಯಕ್ತಿಕ ಮಾಹಿತಿಯನ್ನು ಅಪರಿಚಿತರಿಗೆ ನೀಡಬೇಡಿ.
ಒಟ್ಟಿನಲ್ಲಿ, ರೇಷನ್ ಕಾರ್ಡ್ ಇ-ಕೆವೈಸಿಗಾಗಿ ಕ್ಯೂನಲ್ಲಿ ನಿಲ್ಲುತ್ತಿದ್ದ ಜನರಿಗೆ ಮನೆಯಲ್ಲೇ ಮೊಬೈಲ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸುವ ಹೊಸ ವ್ಯವಸ್ಥೆ ದೊಡ್ಡ ಬದಲಾವಣೆಯಾಗಲಿದೆ. ನಿಮ್ಮ ರೇಷನ್ ಕಾರ್ಡ್‌ನಲ್ಲಿ ಇ-ಕೆವೈಸಿ ಇನ್ನೂ ಆಗಿಲ್ಲ ಅಂದ್ರೆ, ಅಧಿಕೃತ ಆ್ಯಪ್ ಮತ್ತು ಸರ್ಕಾರದ ಸೂಚನೆಗಳನ್ನು ಗಮನಿಸಿ, ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸಿ.

ನೋಡಿರಿ

