ಬದುಕಿನ ಪಯಣ ಮುಗಿಸಿದ ರತನ್‌ ಟಾಟಾ – ಮುಂಬೈನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ

ಬದುಕಿನ ಪಯಣ ಮುಗಿಸಿದ ರತನ್‌ ಟಾಟಾ – ಮುಂಬೈನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ

ಟಾಟಾ ಗ್ರೂಪ್‌ ಅಧ್ಯಕ್ಷ ಮತ್ತು ಹಿರಿಯ ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾಗಿದ್ದಾರೆ. ಬುಧವಾರ ತಡರಾತ್ರಿ ನಿಧನರಾಗಿದ್ದು, ಅವರ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್ ಸಮರ – ಜಗತ್ತಿನಲ್ಲಿ 3ನೇ ಮಹಾಯುದ್ಧ ಫಿಕ್ಸ್!?

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.  ರತನ್ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದು, ಭಾರತೀಯ ಕೈಗಾರಿಕೋದ್ಯಮ ವಲಯದ ಒಂದು ಯುಗ ಅಂತ್ಯವಾಗಿದೆ. ರತನ್ ಟಾಟಾ ನಿಧನಕ್ಕೆ ಮಹಾರಾಷ್ಟ್ರ ಸರ್ಕಾರ ಗುರುವಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ.

ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ

ರತನ್ ಟಾಟಾ ಅವರ ಪಾರ್ಥಿವ ಶರೀರವನ್ನು ಇಂದು ಬೆಳಗ್ಗೆ 10 ಗಂಟೆಯಿಂದ ಅಪರಾಹ್ನ 3.30ರವರೆಗೆ ಮುಂಬೈಯ ನಾರಿಮನ್ ಪಾಯಿಂಟ್ ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (NCPA) ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಎಲ್ಲಾ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮುಂಬೈ ದಕ್ಷಿಣ ವಲಯ ಹೆಚ್ಚುವರಿ ಆಯುಕ್ತ ಅಭಿನವ್ ದೇಶ್ ಮುಖ್ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರತನ್ ಟಾಟಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ಅವರು ಭಾರತ ಸರ್ಕಾರದ ಪರವಾಗಿ ಟಾಟಾ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆಸಿಯಾನ್-ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಲಾವೋಸ್‌ಗೆ ತೆರಳಿರುವ ಹಿನ್ನೆಲೆಯಲ್ಲಿ ಗೃಹ ಸಚಿವರು ಅಂತ್ಯಕ್ರಿಯೆಗಾಗಿ ಮುಂಬೈಗೆ ಆಗಮಿಸಲಿದ್ದಾರೆ.

Shwetha M