ಕನ್ನಡ ಏಕೀಕರಣಕ್ಕೆ ಕುವೆಂಪು ಕೊಡುಗೆ – ಕನ್ನಡಿಗರನ್ನು ಬಡಿದೆಬ್ಬಿಸಿದ ರಾಷ್ಟ್ರಕವಿ ಕುವೆಂಪು ಎಂದೆಂದಿಗೂ ಸ್ಮರಣೀಯರು

ಕನ್ನಡ ಏಕೀಕರಣಕ್ಕೆ ಕುವೆಂಪು ಕೊಡುಗೆ – ಕನ್ನಡಿಗರನ್ನು ಬಡಿದೆಬ್ಬಿಸಿದ ರಾಷ್ಟ್ರಕವಿ ಕುವೆಂಪು ಎಂದೆಂದಿಗೂ ಸ್ಮರಣೀಯರು

ಎಲ್ಲಾದರು ಇರು ಎಂಥಾದರೂ ಇರು. ಎಂದಿಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಕನ್ನಡಿಗರಿಗೆ ಕನ್ನಡತನದ ಮಹತ್ವ ತಿಳಿಸಿಕೊಟ್ಟವರು ರಾಷ್ಟ್ರಕವಿ ಕುವೆಂಪು. ಕನ್ನಡ ಸಾಹಿತ್ಯವನ್ನ ವಿಶ್ವಸಾಹಿತ್ಯ ವೇದಿಕೆಗೆ ಕೊಂಡೊಯ್ದ ವಿಶ್ವಮಾನವ ಕುವೆಂಪು. ಅವರು ಕೇವಲ ಕವಿ ಮಾತ್ರವಲ್ಲ.. ಕನ್ನಡ ನಾಡು ಒಗ್ಗೂಡಬೇಕು.. ಕನ್ನಡತನ ಒಂದಾಗಬೇಕು.. ಕನ್ನಡಿಗರೆಲ್ಲಾ ಕರ್ನಾಟಕ ಎಂಬ ಒಂದೇ ಸೂರಿನಡಿ ನೆಲೆಸಬೇಕು ಎಂದು ಕನಸು ಕಂಡು, ಅದಕ್ಕೆ ತನ್ನ ಕವನಗಳ ಮೂಲಕ ಉತ್ತೇಜನ ನೀಡುತ್ತಾ ಜಾಗೃತಿ ಮೂಡಿಸುತ್ತಾ ಸಾಗಿ ಕರ್ನಾಟಕದ ಏಕೀಕರಣಕ್ಕಾಗಿ ದೊಡ್ಡ ಕೊಡುಗೆ ನೀಡಿದ ಕರ್ಮಯೋಗಿ.

ಇದನ್ನೂ ಓದಿ: ಕನ್ನಡಕ್ಕಾಗಿ ದುಡಿದ ಜಾನ್ ಫೇಥ್‌ಫುಲ್ ಫ್ಲೀಟ್ – ಚಿರಕಾಲ ಕನ್ನಡಿಗರ ಮನದಲ್ಲಿ ಉಳಿದ ಬ್ರಿಟಿಷ್ ಅಧಿಕಾರಿ

ಭಾರಿಸು ಕನ್ನಡ ಡಿಂಡಿಮವ.. ಓ ಕರ್ನಾಟಕ ಹೃದಯ ಶಿವ.. ಎನ್ನುತ್ತಾ ಕನ್ನಡಿಗರನ್ನು ಬಡಿದೆಬ್ಬಿಸಿದ ರಾಷ್ಟ್ರಕವಿ ಕುವೆಂಪು ದೇಶಕ್ಕೆ ಸ್ವಾತಂತ್ರ್ಯ ಸಿಗುವ ಮೊದಲೇ ಕರ್ನಾಟಕ ಏಕೀಕರಣದ ಕನಸು ಕಂಡವರು.. 1925ರಲ್ಲಿಯೇ ತರುಣ ಕುವೆಂಪು.. ಆಗಿನ್ನೂ 21 ವರ್ಷದಲ್ಲಿದ್ದಾಗಲೇ  ರಾಷ್ಟ್ರಗೀತೆಯನ್ನು ರಚಿಸಿದ್ದರು. ಭಾರತ ಜನನಿಯ ತನುಜಾತೆ.. ಜಯಹೇ ಕರ್ನಾಟಕ ಮಾತೆ ಎಂದು ಘೋಷಿಸುವ ಮೂಲಕ ಕರ್ನಾಟಕ ಒಗ್ಗೂಡಬೇಕು ಎನ್ನುವ ಬೀಜ ಬಿತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 16 ಅಕ್ಟೋಬರ್ 1941ರಲ್ಲಿ ರಚಿಸಿದ್ದ ಏಕೈಕ ಕರ್ನಾಟಕ ಕವಿತೆಯಲ್ಲಿ

ಕನಸು ನನಸಾಯಿತಿದೋ ಏಕೈಕ ಕರ್ನಾಟಕ

ಕಣ್ ನಟ್ಟು ಬಯಸಿ ಕಾಣ್ ದಿಕ್ ತಟ ಧ್ವಜ ಪಟ!

ಎಂದು ಘೋಷಿಸಿದ್ದರು.  1942ರಲ್ಲಿ ರಚಿಸಿದ ಅಳುಕದೀ ಕನ್ನಡಂ ಕವಿತೆಯಲ್ಲಿ “ಅಳುಕದೀ ಕನ್ನಡಂ, ಅಳಿಯದೀ ಕನ್ನಡಂ, ಉಳಿವುದೀ ಕನ್ನಡಂ ” ಎಂದು ಕನ್ನಡ ಹೇಗೆ ಉಳಿಯಲಿದೆ ಎಂದು ಬೆಳೆಯಲಿದೆ ಎನ್ನುವುದನ್ನು ಘೋಷಿಸಿದ್ದರು. ಮುಂದೆ 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗ ಸುಮಾರು 9 ಜಿಲ್ಲೆಗಳಿರುವ ಪ್ರದೇಶ ಮೈಸೂರು ರಾಜ್ಯವಾಗಿತ್ತು. ಉಳಿದಂತೆ ಮದ್ರಾಸ್ ಪ್ರೆಸಿಡೆನ್ಸ್.. ಬಾಂಬೆ ಪ್ರೆಸಿಡೆನ್ಸಿ.. ಹೈದ್ರಾಬಾದ್.. ಕೊಡಗು ರಾಜ್ಯ ಹೀಗೆ ಕನ್ನಡಿಗರು ಹರಿದು ಹಂಚಿ ಹೋಗಿದ್ದರು. ಭೌಗೋಳಿಕವಾಗಿ ಬೇರೆ ಬೇರೆಯಾಗಿದ್ದು ಸಾಂಸ್ಕೃತಿಕವಾಗಿ ಒಂದಾಗಿದ್ದ ಕನ್ನಡಿಗರನ್ನು ಒಂದು ರಾಜ್ಯ ಎಂಬ ಗಡಿರೇಖೆಯೊಳಗೆ ತರುವುದು ದೊಡ್ಡ ಸವಾಲಾಗಿತ್ತು. ಆಗಿನ ಮುಂಬೈ ಪ್ರೆಸಿಡೆನ್ಸಿ  ಹಾಗೂ ಹೈದ್ರಾಬಾದ್ ಭಾಗದಲ್ಲಿದ್ದ ಕನ್ನಡಿಗರು ದೊಡ್ಡ ಮಟ್ಟದಲ್ಲಿ ಏಕೀಕರಣದ ಪರವಾಗಿದ್ದರು. ಆದರೆ ಮೈಸೂರು ಮಹಾರಾಜರ ಆಡಳಿತದಲ್ಲಿ ಅಭಿವೃದ್ಧಿ ಹೊಂದಿದ್ದ ಮೈಸೂರು ರಾಜ್ಯದಲ್ಲಿ ಏಕೀಕರಣಕ್ಕೆ ವಿರೋಧವಿತ್ತು. ಅದಕ್ಕೆ ಜಾತಿಯ ಕಾರಣವೂ ಒಂದು ಕಾರಣವಾಗಿತ್ತು ಎನ್ನುವುದು ಇತಿಹಾಸದ ವಾಸ್ತವ. ಆದರೆ ಆ ಎಲ್ಲಾ ಎಲ್ಲೆಗಳನ್ನು ಎಂದೋ ಮೀರಿದ್ದ ಕವಿ ಕುವೆಂಪು ಮತ್ತು ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಮಾತ್ರ ಅಖಂಡ ಕರ್ನಾಟಕದ ಪರವಾಗಿ ಧ್ವನಿಯೆತ್ತಿದ್ದರು. ಈ ಇಬ್ಬರೂ ಮಹನೀಯರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು ಎನ್ನುವುದು ವಿಶೇಷ.

ಭಾರತ ಸ್ವಾತಂತ್ರ್ಯಾನಂತರ ಮೈಸೂರು ಸಂಸ್ಥಾನದ ಭಾರತ ಸರ್ಕಾರದಲ್ಲಿ ವಿಲೀನವಾಗಿ ಮೈಸೂರು ರಾಜ್ಯಕ್ಕೆ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. ಆಗಲೇ ಏಕೀಕರಣದ ಧ್ವನಿಯೂ ಬಲಪಡೆಯತೊಡಗಿತ್ತು. ಮೈಸೂರು ವಿಶ್ವವಿದ್ಯಾಲಯದಲ್ಲಿ ಆಗ ಕಾರ್ಯನಿರ್ವಹಿಸುತ್ತಿದ್ದ ಬಿಎಂಶ್ರೀ ಮತ್ತು ಕುವೆಂಪು ನೇತೃತ್ವದಲ್ಲಿ ಏಕೀಕರಣ ಪರ ಎತ್ತಿದ್ದ ಧ್ವನಿ ವಿರೋಧಿ ಬಣದವರನ್ನ ಕಂಗೆಡಿಸಿತ್ತು. 1949ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುವೆಂಪು ಕರ್ನಾಟಕ ಏಕೀಕರಣದ ಪರವಾಗಿ ಪ್ರಖರ ಭಾಷಣ ಮಾಡಿದ್ದರು.

ನಮ್ಮ ಕರ್ಣಾಟಕ ಬರಿಯ ದೇಶವಿಸ್ತೀರ್ಣಕ್ಕೆ ಮಾತ್ರ ಸಂಬಂಧಪಟ್ಟುದಲ್ಲ; ಕಾಲವಿಸ್ತೀರ್ಣವನ್ನೂ ನಾವು ಪ್ರಮುಖವಾಗಿ ಭಾವಿಸುತ್ತೇವೆ. ಅದನ್ನು ಚದರಮೈಲಿಗಳಿಂದ ಅಳೆದರೆ ಸಾಲದು; ಚದರವರ್ಷಗಳಿಂದಲೂ ಗುರುತಿಸಬೇಕು ಎಂದು ಅಂದಿನ ಭಾಷಣದಲ್ಲಿ ಕುವೆಂಪು ವಿವರಿಸುತ್ತಾ ಹೋಗಿದ್ದರು. ಅಲ್ಲದೆ ಕರ್ಣಾಟಕದ ಕಾವ್ಯ ಸಂಸ್ಕೃತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಳಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ? ಕನ್ನಡ ಕಾವ್ಯಗಳನ್ನೋದುವಾತನು ಅಮೆರಿಕೆಯಲ್ಲಿದ್ದರೂ ಅದು ‘ಕರ್ಣಾಟಕವೆ’ ‘ಪಂಪನನೋದುವ ನಾಲಗೆ’ ಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೆ. ‘ಕುಮಾರವ್ಯಾಸನನಾಲಿಪ ಕಿವಿ’ ಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೆ. ‘ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡು’ ಎಂದು ನೃಪತುಂಗನು ಬಣ್ಣಿಸಿದ ಕರ್ನಾಟಕದ ನೆಲದ ಎಲ್ಲೆ ಇಂದು ಭೌಗೋಳಿಕವಾಗಿ ವ್ಯತ್ಯಸ್ತವಾಗಿರುವುದಕ್ಕಾಗಿ ನಾವು ಪರಿತಪಿಸುವುದು ಅನಾವಶ್ಯಕ. ಹೀಗೆ ಹೇಳುತ್ತಾ ಹೋಗಿದ್ದ ಕುವೆಂಪು ಅಂದೇ ಇನ್ನೂ ಒಂದು ಮಾತು ಹೇಳಿದ್ದರು.  ಭೌಗೋಳಿಕವಾಗಿ ಕರ್ಣಾಟಕ ರಾಜ್ಯಸ್ಥಾಪನೆಯಾಯಿತು ಎಂದು ನಾವು ಸಡಿಲ ಬಾಳಿಗರಾಗಿ ಸುಮ್ಮನಾದರೆ ರಾಜ್ಯ ಸ್ಥಾಪನೆಯ ಮೂಲೋದ್ದೇಶವೆ ವಿಫಲವಾಗುತ್ತದೆ ಎಂದು ಎಚ್ಚರಿಸಿದ್ದರು.  ಕುವೆಂಪು ಅವರ ಇಂತಹ ತೀಕ್ಷ್ಣ ಮಾತು ಮೈಸೂರು ರಾಜ್ಯದಲ್ಲಿದ್ದ ಏಕೀಕರಣ ವಿರೋಧಿ ಬಣದವರನ್ನು ಕಂಗೆಡೆಸಿದ್ದವು. ಆಗ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿಯವರ ಬಳಿಗೆ ಹೋಗಿ, ಮೈಸೂರು ವಿಶ್ವವಿದ್ಯಾಲಯದ ಉಪನ್ಯಾಸಕರು ಈ ರೀತಿಯಾಗಿ ಮಾತಾಡಿದರೆ ಹೇಗೆ ಎಂದು ಏಕೀಕರಣ ವಿರೋಧಿ ನಾಯಕರು ಪ್ರಶ್ನಿಸಿದ್ದರು. ಅಲ್ಲಿಗೆ ಕೆ.ಸಿ.ರೆಡ್ಡಿಯವರ ನೇತೃತ್ವದ ಮೈಸೂರು ಸರ್ಕಾರ ಕುವೆಂಪು ಅವರ ಧ್ವನಿಯನ್ನು ಅಡಗಿಸುವ ದುಸ್ಸಾಹಸಕ್ಕೆ ಕೈ ಹಾಕಿತು. ಕುವೆಂಪು ಅವರಿಗೆ ಎಚ್ಚರಿಕೆಯ ನೋಟೀಸೊಂದನ್ನು ನೀಡಿ ’ಕರ್ನಾಟಕ ಏಕೀಕರಣದ ಪರವಾಗಿ ಯಾವುದೇ ಹೇಳಿಕೆ ನೀಡಬಾರದು’ ಎಂದು ಎಚ್ಚರಿಕೆ ನೀಡಿತ್ತು. ಸರ್ಕಾರದ ನೊಟೀಸು ಕೈ ಸೇರುತ್ತಿದ್ದಂತೆ ಕೆರಳಿದ ಕುವೆಂಪು ಆ ನೊಟೀಸಿಗೆ ಉತ್ತರ ಕೊಟ್ಟರೋ ಇಲ್ಲವೋ ಗೊತ್ತಿಲ್ಲ. ಯಾಕೆಂದ್ರೆ ಮುಂದೆ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾದಾಗ ಆ ನೊಟೀಸ್ ಹಿಂಪಡೆದಿದ್ದರು. ನೊಟೀಸಿಗೆ ಸರ್ಕಾರಿ ಭಾಷೆಯಲ್ಲಿ ಉತ್ತರ ಕೊಡುವ ಮೊದಲು ಸಾಹಿತಿ ಕುವೆಂಪು ಕಾವ್ಯದ ದಾರಿಯಲ್ಲಿ ಉತ್ತರಿಸಿದ್ದರು.. ಅಷ್ಟೇ ಅಲ್ಲದೆ ಸರ್ಕಾರವನ್ನು ಎಚ್ಚಿರಿಸಿದ್ದರು. ಆಗಲೇ ಕುವೆಂಪು ಸರ್ಕಾರಕ್ಕೆ ಉತ್ತರ ರೂಪದಲ್ಲಿ ಬರೆದಿದ್ದು ಅಖಂಡ ಕರ್ನಾಟಕ ಪದ್ಯವನ್ನು. ೨.೫.೧೯೪೯ರಂದು ಬರೆದ ಪದ್ಯದಲ್ಲಿ ಸರ್ಕಾರದ ನೊಟೀಸಿಗೂ ಉತ್ತರವಿತ್ತು.. ಕರ್ನಾಟಕದ ಅಖಂಡತೆಯ ಕನಸು ನನಸಾಗಿಸುವ ಬದ್ಧತೆಯೂ ಇತ್ತು.

ಅಖಂಡ ಕರ್ಣಾಟಕ:

ಅಲ್ತೊ ನಮ್ಮ ಕೂಗಾಟದ ರಾಜಕೀಯ ನಾಟಕ!

ಹರುಸಿತಿಹನು ದೇವ ಗಾಂಧಿ;

ಮಂತ್ರಿಸಿಹುದು ಋಷಿಯ ನಾಂದಿ;

ಎಂದು ಕವನದ ಮೂಲಕ ಹೇಳುತ್ತಾ ಹೋದ ಕವಿ ಕುವೆಂಪು ಮುಂದುವರೆದು,

ಅಖಂಡ ಕರ್ಣಾಟಕ:

ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು

ಹೋಹ ಸಚಿವ ಮಂಡಲ

ರಚಿಸುವೊಂದು ಕೃತಕವಲ್ತೊ

ಸಿರಗನ್ನಡ ಸರಸ್ವತಿಯ

ವಜ್ರಕರ್ಣಕುಂಡಲ!

ಎಂದು ಕವನದ ಮೂಲಕವೇ ಸರ್ಕಾರವನ್ನು ಬೂಟಾಟಿಕೆಯ ರಾಜಕೀಯವನ್ನು ಝಾಡಿಸಿದ್ದರು. ಅಲ್ಲದೆ ಕರ್ನಾಟಕದ ನಿತ್ಯ ಸಚಿವಮಂಡಲವೊಂದನ್ನು ರಚಿಸಿ, ಇದು ನೋಡಿ ನಮ್ಮ ಸಾಂಸ್ಕೃತಿಕ ಸರ್ಕಾರ ಎಂದು ತೋರಿಸಿದ್ದರು.

ಅಖಂಡ ಕರ್ಣಾಟಕ:

ಅಲ್ತೊ ನಮ್ಮ ನಾಲ್ಕು ದಿನದ ರಾಜಕೀಯ ನಾಟಕ

ನೃಪತುಂಗನೆ ಚಕ್ರವರ್ತಿ!

ಪಂಪನಲ್ಲಿ ಮುಖ್ಯಮಂತ್ರಿ!

ರನ್ನ ಜನ್ನ ನಾಗವರ್ಮ

ರಾಘವಾಂಕ ಹರಿಹರ

ಬಸವೇಶ್ವರ ನಾರಣಪ್ಪ

ಸರ್ವಜ್ಞ ಷಡಕ್ಷರ:

ಸರಸ್ವತಿಯೆ ರಚಿಸಿದೊಂದು

ನಿತ್ಯ ಸಚಿವ ಮಂಡಲ,

ತನಗೆ ರುಚಿರ ಕುಂಡಲ!

ಹೀಗೆ ಹೇಳಿದ ಕವಿ, ಕರ್ನಾಟಕದ ಇತಿಹಾಸದಲ್ಲಿ ಸಂದುಹೋದ ಮಹನೀಯರನ್ನೆಲ್ಲಾ ಸೇರಿಸಿ ಆ ಮಹೋನ್ನತ ವ್ಯಕ್ತಿತ್ವಗಳಿದ್ದ ನಿತ್ಯ ಸಚಿವ ಮಂಡಲ ರಚಿಸಿ, ರಾಜ್ಯದ ಅಖಂಡತೆಯ ಉದ್ದೇಶವನ್ನು ಸಾರಿ ಹೇಳಿದ್ದರು.

ಮೆಳ್ಳಗಣ್ಣ, ಕಾಣೆ ನೀನು!

ಹೇಳು! ತಪ್ಪು ನನ್ನದೇನು?

ಕರ್ಣಾಟಕ ಎಂಬುದೇನು

ಹೆಸರೆ ಬರಿಯ ಮಣ್ಣಿಗೆ?

ಮಂತ್ರ ಕಣಾ! ಶಕ್ತಿ ಕಣಾ!

ತಾಯಿ ಕಣಾ! ದೇವಿ ಕಣಾ!

ಬೆಂಕಿ ಕಣಾ! ಸಿಡಿಲು ಕಣಾ!

ಕಾವ ಕೊಲುವ ಒಲವ ಬಲವ

ಪಡೆದ ಚಲದ ಚಂಡಿ ಕಣಾ

ಎಂದು ಕರ್ನಾಟಕದ ಸಾರ್ವಭೌಮತ್ವವನ್ನು ಸಾರಿ ಹೇಳಿದ್ದರು.. ಕರ್ನಾಟಕವೆಂದು ಕೇವಲ ಮಣ್ಣಲ್ಲ.. ರಾಜ್ಯವೆಂದರೆ ಕೇವಲ ಗಡಿಯೊಳಗೆ ಸೀಮಿತವಾದುದಲ್ಲ.. ಇಂದು ಮಂತ್ರ ಕಣಾ.. ಶಕ್ತಿ ಕಣಆ.. ತಾಯಿ ಕಣಾ.. ದೇವಿ ಕಣಾ.. ಬೆಂಕಿ ಕಣಾ.. ಸಿಡಿಲು ಕಣಾ ಎಂದು ಎಚ್ಚರಿಸಿ, ಏಕೀಕರಣ ವಿರೋಧಿಗಳಿಗೆ ಕಠಿಣ ಉತ್ತರ ಕೊಟ್ಟಿದ್ದರು. ಆದರೆ ಕುವೆಂಪು ಅವರ ಕವಿತೆ ಓದಿದ ಮೇಲೆ ಮೊದಲು ಕೆ.ಸಿ.ರೆಡ್ಡಿಯವರಿಗೆ ದೂರು ನೋಡಿದ್ದ ನಾಯಕರೊಬ್ಬರು, ನೋಡಿ ಇದೇನು ಹೀಗೆಲ್ಲಾ ಬರೆದಿದ್ದಾರೆ.. ಇನ್ನು ಅವರನ್ನು ಬಿಡಬಾರದು.. ಮತ್ತೊಂದು ನೋಟೀಸ್ ಕೊಡಿ ಅಂತೆಲ್ಲಾ ಹೇಳಿದ್ದರಂತೆ. ಆದರೆ ಆಗಿನ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಜಾಗೃತರಾಗಿ, ಮೊದಲ ನೊಟೀಸ್ ಗೆ ಒಂದು ಕವನ ಬರೆದಿದ್ದಾರೆ.. ಇನ್ನೊಂದು ಕೊಟ್ಟರೆ ಕಾವ್ಯ ರಚಿಸಿ ಬಿಟ್ಟಾರು ಸುಮ್ಮನಿರಿ ಎಂದಿದ್ದರಂತೆ..

ಹಾಗಿದ್ದರೂ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ರಾಜಕಾರಣಿಗಳು ಮಾತ್ರ ಸುಮ್ಮನಿರಲಿಲ್ಲ. ೧೯೪೯ರಲ್ಲಿ ’ಮೈಸೂರಿನ ಪ್ರಜಾಪ್ರತಿನಿಧಿ ಸಭೆಯಲ್ಲಿ ಏಕೀಕರಣಕ್ಕೆ ಇದು ಸಕಾಲವಲ್ಲ’ ಎಂಬ ನಿರ್ಣಯ ಅಂಗೀಕರಿಸುತ್ತಾರೆ. ರಾಜಕೀಯವಾಗಿ ನೀಡಿದ ಸರ್ಕಾರ ನೀಡಿದ್ದ ಪ್ರತಿಕ್ರಿಯೆಗೆ ಕುವೆಂಪು ಸಾಂಸ್ಕೃತಿಕವಾಗಿ ೧.೧೧.೧೯೪೯ರಂದು ’ಕರ್ಣಾಟಕ ಮಂತ್ರದೀಕ್ಷೆ’ ಎಂಬ ಕವಿತೆಯ ಮೂಲಕ ಪ್ರತಿಕ್ರಿಯಿಸುತ್ತಾರೆ.

ದೀಕ್ಷೆಯ ತೊಡು ಇಂದೇ;

ಕಂಕಣ ಕಟ್ಟಿಂದೇ!

ಕನ್ನಡ ನಾಡೊಂದೇ;

ಇನ್ನೆಂದೂ ತಾನೊಂದೇ!

ಎಂದು ಮಂತ್ರದೀಕ್ಷೆ ಬೋಧಿಸಿಯೇ ಬಿಡುತ್ತಾರೆ. ಈ ಮೂಲಕ ಕರ್ನಾಟಕ ಏಕೀಕರಣ ಆಗಲೇ ಬೇಕು ಎನ್ನುವುದನ್ನು ಸಾಹಿತ್ಯಿಕ ಚಳುವಳಿಯ ರೂಪದಲ್ಲಿಯೇ ಕುವೆಂಪು ಪಟ್ಟು ಬಿಡದೆ ಮುಂದುವರೆಸಿದ್ದರು. ಕುವೆಂಪು ಸೇರಿದಂತೆ ನಾಡಿನ ಅನೇಕ ಮಹನೀಯರ ನಿರಂತರ ಹೋರಾಟ ಮತ್ತು ನಾಡಿನ ಬಗೆಗಿದದ್ದ ಬದ್ಧತೆಯ ಪರಿಣಾಮವಾಗಿ ಕೆಂಗಲ್ ಹನುಮಂತಯ್ಯನವರು ಪೂರ್ವಾಗ್ರಹ ಪೀಡಿತರಾಗದೆ ಜನಗಳ ಭಾವನೆಗೆ ಸ್ಪಂದಿಸಿದ್ದರು. ತಾವು ಮುಖ್ಯಮಂತ್ರಿಯಾಗಿದ್ದಾಗಲೇ, ಅಂದರೆ ೧೯೫೬ರಲ್ಲೇ ಕರ್ನಾಟಕದ ಏಕೀಕರಣದ ಕನಸು ನನಸಾಗುವಂತೆ ಮಾಡಿದರು.

ಕರ್ನಾಟಕದ ಏಕೀಕರಣವಾದಾಗ, ೧.೧೧.೧೯೫೬ರಂದು ’ಕರ್ಣಾಟಕ ರಾಜ್ಯೋದಯ ಶ್ರೀಗೀತೆ’ಯನ್ನು ಬರೆದು,

ಓ ತಾಯಿ ಭಾರತಿಯೆ, ನಿನ್ನ ಮಗಳನು ಹರಸು.

ವರುಷ ಒಂಬತ್ತರಾಚೆಯಲಿ ಬಂಧಮುಕ್ತಳಾದಂದು

ನೀ ಕಂಡ ಕನಸು,

ಎಂದು ಭಾರತ ಮಾತೆಯನ್ನು ಕರೆಯುತ್ತಲೇ ನಾಡಿನ ಇತಿಹಾಸವನ್ನು ಆ ಕವನದಲ್ಲಿ ಸಾರಿದ್ದರು. ಏಕೀಕರಣದ ಕನಸು ಕೇವಲ 9 ವರ್ಷದ್ದು ಮಾತ್ರವಲ್ಲದೆ ಸಾವಿರಾರು ವರ್ಷಗಳ ಕನಸೆಂದು ಉದ್ಘರಿಸಿದ್ದರು.

ಓ ಏಳು, ನೃಪತುಂಗದೇವ,

ಕೃಪೆಯಿಟ್ಟು ಕವಿರಾಜದರಮನೆಯ ಸಿಂಹಾಸನವನಿಳಿದು ಬಾ

ಕರ್ಣಾಟಕದ ನಿನ್ನ ಈ ಹೆಸರ ತಾಯ್ನೆಲಕೆ.

ನೀನಂದು ಹಾಡಿದಾ ಕನ್ನಡದ ನಾಡು

ಒಂದುಗೂಡಿದೆ ಇಂದು ಇದೊ ಬಂದು ನೋಡು.

ಎನ್ನುವ ಮೂಲಕ ಕವಿ ಕುವೆಂಪು ಹರ್ಷ ಚಿತ್ತರಾಗಿ, ಕರ್ನಾಟಕ ಏಕೀಕರಣವಾಗಿದ್ದನ್ನು ಕಂಡು ತನ್ನ ಕವನ ಮೂಲಕ ನಲಿದಿದ್ದರು.

ಹಾಗಿದ್ದರೂ ಇದು ಕೆಲವೇ ದಿನಗಳ, ತಿಂಗಳುಗಳ ಖುಷಿಯಾಗಿತ್ತು. ಕರ್ನಾಟಕ ಒಂದಾದರೂ ಮನಸುಗಳು ಒಂದಾಗುವುದು ಸುಲಭವಿರಲಿಲ್ಲ.. ಉತ್ತರ ದಕ್ಷಿಣ ಎಂಬ ಕಿತ್ತಾಟ, ರಾಜಕೀಯ ವೈಮನಸ್ಯಗಳು ಜೋರಾಗಿದ್ದವು.. ಇದೇ ಕಾರಣಕ್ಕೆ ೧೯೬೦ರಲ್ಲಿ ರಚಿಸಿದ.

ಸತ್ತಂತಿಹರನು ಬಡಿದೆಚ್ಚರಿಸು;

ಕಚ್ಚಾಡುವರನು ಕೂಡಿಸಿ ಒಲಿಸು.

ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;

ಒಟ್ಟಿಗೆ ಬಾಳುವ ತೆರದಲಿ ಹರಸು!

ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯಶಿವ!

ಎಂದು ಕನ್ನಡ ಡಿಂಡಿಮವನ್ನು ಬಾರಿಸುವ ಕೆಲಸಕ್ಕೆ ಕುವೆಂಪು ಕೈ ಹಾಕಿದ್ದರು. ಕುವೆಂಪು ಅವರ ಈ ಕವನ ಮತ್ತು ಅವರು ಕಂಡಿದ್ದ ಕನಸನ್ನು ಗಮನಿಸಿದಾಗ ಈಗಲೂ ನಡೆಯುತ್ತಿರುವ ಉತ್ತರ ದಕ್ಷಿಣ ಎಂಬ ಒಡಕು ಧ್ವನಿಗಳು ಉಡುಗಿಹೋಗಬೇಕು.. ನಾಡಿನ ಏಕೀಕರಣದ ನಿಜವಾದ ಅರ್ಥವನ್ನು ತಿಳಿದು ಸಾಗಬೇಕು.. ಒಗ್ಗೂಡಿದ ಕನ್ನಡಿಗರಿಂದ ಮಾತ್ರ ಸಮೃದ್ಧ ಕರ್ನಾಟಕ ನಿರ್ಮಾಣ ಸಾಧ್ಯ..

Sulekha