ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ವಿಡಿಯೋ ಹಲ್‌ಚಲ್! – ದೃಶ್ಯದ ಬಗ್ಗೆ ಆಘಾತ ವ್ಯಕ್ತಪಡಿಸಿದ ಕೇಂದ್ರ ಸಚಿವ
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರದ್ದು ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗಷ್ಟೇ ಭಾರಿ ವೈರಲ್ ಆಗಿದ್ದು, ಬಿಸಿ ಬಿಸಿ ಚರ್ಚೆಯಲ್ಲಿದೆ. ವಿಡಿಯೋದಲ್ಲಿ ರಶ್ಮಿಕಾ ಅವರ ಎದೆ ಭಾಗ ಕಾಣಿಸುವಂತೆ ಬಟ್ಟೆ ಹಾಕಿರುವ ವಿಡಿಯೋವನ್ನು ಹಲವರು ಹಂಚಿಕೊಂಡಿದ್ದರು. ಆದರೀಗ ಅದು ರಶ್ಮಿಕಾ ಅವರ ವಿಡಿಯೋ ಅಲ್ಲವೆಂಬ ಸತ್ಯ ಬಯಲಾಗಿದೆ.
ಹೌದು, ನಟಿ ರಶ್ಮಿಕಾ ಮಂದಣ್ಣ ಅವರ ನಕಲಿ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಯುವತಿಯ ದೇಹಕ್ಕೆ ರಶ್ಮಿಕಾ ಅವರ ಮುಖವನ್ನು ಎಡಿಟ್ ಮಾಡಿ ಹಾಕಲಾಗಿತ್ತು. ಎಷ್ಟೋ ಜನರು ಇದು ನಿಜವಾಗಿಯೂ ರಶ್ಮಿಕಾ ಮಂದಣ್ಣ ಅವರದ್ದೇ ವಿಡಿಯೋ ಎಂದು ನಂಬಿಕೊಂಡಿದ್ದಾರೆ. ಆದರೆ ಈ ಫೇಕ್ ವಿಡಿಯೋ ವಿರುದ್ಧ ಅನೇಕರು ಕಿಡಿಕಾರಿದ್ದಾರೆ. ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಅಮಿತಾಭ್ ಬಚ್ಚನ್ ಕೂಡ ಇದಕ್ಕೆ ಸಹಮತ ಸೂಚಿಸಿದ್ದಾರೆ.
ಇದನ್ನೂ ಓದಿ: ಲವ್ ಪ್ರಪೋಸ್, ಲಿಪ್‌ಲಾಕ್… ವಾರದೊಳಗೆ ಹೆಬ್ಬುಲಿ ಚಿತ್ರದ ನಾಯಕಿ ಮದುವೆ – ಜಗತ್ ದೇಸಾಯಿ ಕೈಹಿಡಿದ ಅಮಲಾ ಪೌಲ್
ಇನ್ನು ಈ ವಿಡಿಯೋ ವಾಸ್ತವಾಂಶ ಬಯಲಾದ ಬಳಿಕ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಕೂಡ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ದೇಶದ ಐಟಿ ನಿಯಮಗಳನ್ನು ಉಲ್ಲಂಘಿಸುವ ಯಾವುದೇ ವೀಡಿಯೋ ಮತ್ತು ಇತರ ವಿಷಯಗಳನ್ನು ತೆಗೆದುಹಾಕುವಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದರೊಂದಿಗೆ ತಮ್ಮ ಪೋಸ್ಟ್‌ನಲ್ಲಿ, ಯಾವುದೇ ವೇದಿಕೆಯಲ್ಲಿ ತಪ್ಪು ಮಾಹಿತಿ ಪೋಸ್ಟ್ ಮಾಡಿದ್ರೆ, ಅದನ್ನ 36 ಗಂಟೆಗಳ ಒಳಗೆ ತೆಗೆದುಹಾಕಬೇಕು. ಇಲ್ಲದಿದ್ದರೇ ನೊಂದ ವ್ಯಕ್ತಿ ಪ್ರಕರಣವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯಬಹುದು ಎಂದು ಎಚ್ಚರಿಸಿದ್ದಾರೆ
ನಟಿ ರಶ್ಮಿಕಾ ಮಂದಣ್ಣ ಹೇಳಿದ್ದೇನು?
ಇನ್ನು ನಟಿ ರಶ್ಮಿಕಾ ಮಂದಣ್ಣ ಅವರು ಸಣ್ಣ ಪುಟ್ಟ ಟ್ರೋಲ್ ಆಗಿದ್ದರೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈ ಬಾರಿ ಅವರ ಫೇಕ್ ವಿಡಿಯೋ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವುದರಿಂದ ಪ್ರತಿಕ್ರಿಯಿಸುವ ಸಂದರ್ಭ ಎದುರಾಗಿದೆ. ಇದೀಗ ಈ ವಿಚಾರದ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.‘ಆನ್ಲೈನ್ನಲ್ಲಿ ನನ್ನ ಡೀಪ್ಫೇಕ್ ವಿಡಿಯೋ ಹರಿದಾಡಿದ ಬಗ್ಗೆ ಮಾತನಾಡಲು ನನಗೆ ನಿಜಕ್ಕೂ ನೋವಾಗುತ್ತಿದೆ. ತಂತ್ರಜ್ಞಾನದ ದುರ್ಬಳಕೆಯಿಂದಾಗಿ ನನಗೆ ಮಾತ್ರವಲ್ಲದೇ ಎಲ್ಲರಿಗೂ ಭಯವಾಗುತ್ತಿದೆ’ ಎಂದು ಹೇಳಿದ್ದಾರೆ.
‘ಇಂದು ನನಗೆ ಬೆಂಬಲ ಮತ್ತು ರಕ್ಷಣೆ ನೀಡಿರುವ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಓರ್ವ ಮಹಿಳೆಯಾಗಿ, ನಟಿಯಾಗಿ ನಾನು ಋಣಿ ಆಗಿದ್ದೇನೆ. ಆದರೆ ಇದು ಶಾಲೆ ಅಥವಾ ಕಾಲೇಜಿನಲ್ಲಿ ಇದ್ದಾಗ ಆಗಿದ್ದರೆ ಇದನ್ನು ನಾನು ಹೇಗೆ ಸರಿಪಡಿಸುತ್ತಿದ್ದೆನೋ ಗೊತ್ತಿಲ್ಲ. ಇಂಥ ಘಟನೆಗಳಿಂದ ನಮ್ಮಂತಹ ಹೆಚ್ಚಿನ ಜನರು ತೊಂದರೆಗೆ ಒಳಗಾಗುವುದಕ್ಕೂ ಮುನ್ನವೇ ಈ ಸಮಸ್ಯೆಯ ಬಗ್ಗೆ ನಾವು ಗಮನ ಹರಿಸಬೇಕಿದೆ’ ಎಂದು ರಶ್ಮಿಕಾ ಮಂದಣ್ಣ ಅವರು ಬರೆದುಕೊಂಡಿದ್ದಾರೆ. ‘ಅನಿಮಲ್’ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿರುವ ಅವರಿಗೆ ಡೀಪ್ಫೇಕ್ ವಿಡಿಯೋ ತಲೆನೋವು ತಂದಿದೆ.
ವಿಡಿಯೋ ಹಿಂದಿನ ಅಸಲಿಯತ್ತೇನು?
ರಶ್ಮಿಕಾ ಮಂದಣ್ಣ ಅವರು ತುಂಬ ಗ್ಲಾಮರಸ್ ಆದಂತಹ ಅವತಾರದಲ್ಲಿ ಲಿಫ್ಟ್ ಪ್ರವೇಶಿಸುತ್ತಿರುವ ಕೆಲವೇ ಸೆಕೆಂಡ್ಗಳ ವಿಡಿಯೋ ಇದಾಗಿದೆ. ಆದರಲ್ಲಿ ರಶ್ಮಿಕಾ ಅವರ ಡ್ರೆಸ್ ಸರಿಯಿಲ್ಲ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಅಸಲಿಗೆ ಇದರಲ್ಲಿ ಇರುವುದು ರಶ್ಮಿಕಾ ಅಲ್ಲವೇ ಅಲ್ಲ. ಜರಾ ಪಟೇಲ್ ಎಂಬ ಯುವತಿಯ ವಿಡಿಯೋ ಇದಾಗಿದ್ದು, ಇದಕ್ಕೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.